ಕ್ರೀಡೆ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡು ಚಿನ್ನ

Raghavendra Adiga

ಪೋಖರಾ (ನೇಪಾಳ): 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಪ್ರಾಬಲ್ಯವನ್ನು ಮುಂದುವರಿಸಿದ್ದು, ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದೆ. 

ಭಾರತೀಯ ಪುರುಷರ ತಂಡವು ಸೋಮವಾರ ಶ್ರೀಲಂಕಾವನ್ನು 3–1ರಿಂದ ಮತ್ತು ಮಹಿಳಾ ತಂಡವು ಶ್ರೀಲಂಕಾವನ್ನು 3–0ರಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಟ್ಟರು.

ಪುರುಷರ ತಂಡ ವಿಭಾಗದಲ್ಲಿ ದೇಶದ ಅಗ್ರ ಆಟಗಾರ ಕಿಡಂಬಿ ಶ್ರೀಕಾಂತ್, ದಿನುಕಾ ಕರುಣರತ್ನ ವಿರುದ್ಧದ ಮೊದಲ ಪಂದ್ಯವನ್ನು ಸೋತರೂ, ಭರ್ಜರಿಯಾಗಿ ಪುಟಿದೆದ್ದರು. ಎರಡನೇ ಹಾಗೂ ಮೂರನೇ ಗೇಮ್ ನಲ್ಲಿ ಅಮೋಘ ಆಟವಾಡಿದ ಶ್ರೀಕಾಂತ್ 17-21, 21-15, 21-11ರಲ್ಲಿ 55 ನಿಮಿಷಗಳಲ್ಲಿ ಗೆದ್ದರು. ಮುಂದಿನ ಪಂದ್ಯದಲ್ಲಿ ಸಿರಿಲ್ ವರ್ಮಾ 21–17, 11–5ರಲ್ಲಿ ಸಚಿನ್ ಪ್ರೇಮಶನ್ ವಿರುದ್ಧ ಗೆದ್ದು, ಭಾರತಕ್ಕೆ 2–0 ಮುನ್ನಡೆ ದೊರಕಿಸಿಕೊಟ್ಟರು ಆದರೆ ಅರುಣ್ ಜಾರ್ಜ್ ಮತ್ತು ಸನ್ಯಾಮ್ ಶುಕ್ಲಾ ಅವರು 18-21 21-14 11-21ರಲ್ಲಿ ಸಚಿನ್ ಮತ್ತು ಬಿ ತಾರಿಂದು ಗೂನತಿಲೇಕೆ ವಿರುದ್ಧ ಸೋಲುಂ<ಡರು. ಇನ್ನ್ಯು ಕೃಷ್ಣ ಪ್ರಸಾದ್ ಗರಂಗಾ ಮತ್ತು ಧ್ರುವ್ ಕಪಿಲಾ ಅವರು ಎರಡನೇ ಡಬಲ್ಸ್ ಪಂದ್ಯದಲ್ಲಿ ಕರುಣರತ್ನೆ ಮತ್ತು ಹಸಿತಾ ಚನಕಾ ವಿರುದ್ಧ 21-14 21-18 ಅಂತರದ ಗೆಲುವು ಸಾಧಿಸಿದರು.

ಮಹಿಳಾ ಫೈನಲ್‌ನಲ್ಲಿ ಅಶ್ಮಿತಾ ಚಲಿಹಾ, ಆಕಾಶಿ ಕಶ್ಯಪ್ ಮತ್ತು ಗಾಯತ್ರಿ ಗೋಪಿಚಂದ್ ಅವರು ಮೂರು ಸಿಂಗಲ್ಸ್‌ನಲ್ಲಿ ಜಯಗಳಿಸಿ ಭಾರತಕ್ಕೆ ಶ್ರೀಲಂಕಾ ವಿರುದ್ಧ 3-0 ಅಂತರದ ಜಯ ತಂದುಕೊಟ್ಟರು.

ಸೋಮವಾರದಂದು ನಡೆದಿದ್ದ ಟ್ರಯಥ್ಲಾನ್ ಪಂದ್ಯಾವಳಿಯಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಒಂದು ಕಂಚಿನ ಪದಕ ಗಳಿಸಿತ್ತು.ಅಲ್ಲದೆ ಟೇಕ್ವಾಂಡೋದಲ್ಲಿ ಎರಡು ಚಿನ್ನದ ಪದಕ ತನ್ನದಾಗಿಸಿಕೊಂಡಿತ್ತು. ಇದೀಗ ಭಾರತ ಒಟ್ಟಾರೆ ಐದು ಚಿನ್ನ, ಎಂಟು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಸೇರಿದಂತೆ 16 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

SCROLL FOR NEXT