ಕ್ರೀಡೆ

ಎಎಫ್ ಸಿ ಏಷ್ಯನ್ ಕಪ್: ಥಾಯ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು

Lingaraj Badiger
ಅಬುಧಾಬಿ: ಎಎಫ್ ಸಿ ಏಷ್ಯನ್ ಕಪ್ ನಲ್ಲಿ ಭಾರತೀಯ ಗೋಲ್ ಮಷಿನ್ ಸುನೀಲ್ ಛೆಟ್ರಿ ಅವರ ಭರ್ಜರಿ ಆಟದ ನೆರವಿನೊಂದಿಗೆ ಭಾರತ, ಥಾಯ್ಲೆಂಡ್ ವಿರುದ್ಧ 4-1 ಗೋಲುಗಳಿಂದ ಜಯಗಳಿಸಿದೆ. 
ಇಂದು ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್​ಸಿ ಆಟಗಾರ ಸುನೀಲ್ ಛೆಟ್ರಿ ಅವರು ಎರಡು ಗೋಲು ಗಳಿಸಿದರು. ಭವಿಷ್ಯದ ಉಜ್ವಲ ಪ್ರತಿಭೆ ಎನ್ನಲಾದ ಅನಿರುದ್ಧ್ ಥಾಪಾ ಹಾಗೂ ಜೇಜೇ ಲಾಲ್​ ಪೆಖ್ಲುವಾ ಅವರು ಮತ್ತೆರಡು ಗೋಲು ಗಳಿಸಿ ತಂಡಕ್ಕೆ ಗೆಲುವು ತಂದಿತ್ತರು.
ಜಿದ್ದಾಜಿದ್ದಿನ ಪಂದ್ಯದಲ್ಲಿ ಛೆಟ್ರಿ 27ನೇ ನಿಮಿಷದಲ್ಲಿ ಪಡೆದ ಪೆನಾಲ್ಟಿ ಅವಕಾಶದಿಂದ ಗೋಲುಗಳಿಸುವ ಮೂಲಕ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಆದರೆ ಆ ಖುಷಿ ಉಳಿದದ್ದು ಕೇವಲ 6 ನಿಮಿಷ ಮಾತ್ರ. ಥಾಯ್ಲೆಂಡ್ ತಂಡ 33ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲ ಸಾಧಿಸಿತು. ಆದರೆ, ದ್ವಿತೀಯಾರ್ಧದಲ್ಲಿ ಭಾರತೀಯರು ಹೆಚ್ಚು ಆಕ್ರಮಣಕಾರಿಯಾಗಿ ಆಡಿದರು. ಎರಡನೇ ಅವಧಿಯ ಎರಡನೇ ನಿಮಿಷದಲ್ಲೇ ಸುನೀಲ್ ಛೆಟ್ರಿ ಗೋಲು ಗಳಿಸಿದರು. 
ಭಾರತ ಇರುವ ಎ ಗುಂಪಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಯುಎಇ ಮತ್ತು ಬಹ್ರೇನ್ ತಂಡಗಳು 1-1ರಿಂದ ಸಮಬಲ ಸಾಧಿಸಿದವು. ಜನವರಿ 10ರಂದು ನಡೆಯುವ ಎರಡನೇ ಸುತ್ತಿನಲ್ಲಿ ಪ್ರಬಲ ಯುಎಇ ತಂಡವನ್ನು ಭಾರತ ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತವೇನಾದರೂ ಗೆಲುವು ಸಾಧಿಸಿದರೆ ನಾಕೌಟ್ ಪ್ರವೇಶ ಖಚಿತವಾಗಲಿದೆ. ಮೂರನೇ ಸುತ್ತಿನ ಪಂದ್ಯವು ಜನವರಿ 14ರಂದು ನಡೆಯಲಿದೆ.
SCROLL FOR NEXT