ಕ್ರೀಡೆ

ಯುಎಸ್ ಓಪನ್‌: ಸೆಮಿಫೈನಲ್‌ ಗೆ ಸೆರೇನಾ ವಿಲಿಯಮ್ಸ್‌, ಫೆಡರರ್ ಗೆ ಸೋಲಿನ ಆಘಾತ

Lingaraj Badiger

ನ್ಯೂಯಾರ್ಕ್‌: ಆರು ಬಾರಿ ಚಾಂಪಿಯನ್‌ ಸೆರೇನಾ ವಿಲಿಯಮ್ಸ್‌ ಅವರು ಚೀನಾದ ಕಿಯಾಂಗ್‌ ವಾಂಗ್‌ ಅವರ ವಿರುದ್ಧ ಗೆದ್ದು ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇಶ ಮಾಡಿದ್ದಾರೆ.

ಮಂಗಳವಾರ ತಡರಾತ್ರಿ ಇಲ್ಲಿನ ಅರ್ಥರ್‌ ಆ್ಯಶ್‌ ಅಂಗಳದಲ್ಲಿ 44 ನಿಮಿಷಗಳ ಕಾಲ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ 23 ಬಾರಿ ಗ್ರ್ಯಾನ್‌ ಸ್ಲ್ಯಾಮ್‌ ವಿಜೇತೆ ಸೆರೇನಾ, 6-1, 6-0 ಅಂತರದಲ್ಲಿ ನೇರ ಸೆಟ್‌ಗಳಿಂದ ಕಿಯಾಂಗ್‌ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ವಾಂಗ್‌ ಕಿಯಾಂಗ್‌ ಅವರು ಕಳೆದ ಫ್ರೆಂಚ್ ಓಪನ್‌ನಲ್ಲಿ ಅಂತಿಮ ಎಂಟರ ಘಟ್ಟಕ್ಕೆ ತಲುಪಿದ್ದರು. ಆ ಮೂಲಕ ವೃತ್ತಿ ಜೀವನದ ಮೊದಲ ಗ್ರ್ಯಾನ್‌ ಸ್ಲ್ಯಾಮ್‌ ಕ್ವಾರ್ಟರ್‌ ಫೈನಲ್‌ ತಲುಪಿದಂತಾಯಿತು. ಆದರೆ, ಆ್ಯಶ್ಲೆ ಬಾರ್ಟಿ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. ಇದೀಗ ಯುಎಸ್‌ ಓಪನ್‌ನಲ್ಲಿಯೂ ಕ್ವಾರ್ಟರ್‌ ಫೈನಲ್‌ ಸಾಧನೆ ಮಾಡಿದ್ದಾರೆ.

24ನೇ ಗ್ರ್ಯಾನ್‌ ಸ್ಲ್ಯಾಮ್‌ ಗೆಲುವಿನ ಹಾದಿಯಲ್ಲಿರುವ ಸೆರೇನಾ ವಿಲಿಯಮ್ಸ್‌ ಅವರು, ಅಂತಿಮ ನಾಲ್ಕರ ಘಟ್ಟದಲ್ಲಿ ವಿಶ್ವದ ಐದನೇ ಶ್ರೇಯಾಂಕದ ಉಕ್ರೈನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ ನಾಳೆ ಸೆಣಸಲಿದ್ದಾರೆ.

ಉಕ್ರೈನ್ ಆಟಗಾರ್ತಿ ವಿರುದ್ಧ ವಿಲಿಯಮ್ಸ್ ಅವರೇ 4-1ಮುನ್ನಡೆ ಸಾಧಿಸಿದ್ದಾರೆ. ಕೊನೆಯ ಬಾರಿ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಸೆರೇನಾ ಅವರನ್ನು ಸ್ವಿಟೋಲಿನಾ ಅವರು ಮಣಿಸಿ ಆಘಾತ ನೀಡಿದ್ದರು.

ಇನ್ನು ಕ್ವಾರ್ಟರ್ ಫೈನಲ್ ನಲ್ಲಿ ಸ್ವಿಜರ್ಲೆಂಡ್ ಟೆನಿಸ್ ದಂತಕತೆ ರೋಜರ್ ಪೆಢರರ್ ವಿರುದ್ಧ ಬಲ್ಗೆರಿಯಾದ ಗ್ರಿಗರ್ ಡಿಮಿಟ್ರೋವ್ ಅವರು ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮೂರನೇ ಶ್ರೇಯಾಂಕದ ಆಟಗಾರ ಮಿಡಿಟ್ರೋವ್ ಅವರು ಫೆಡರರ್ ವಿರುದ್ಧ 3-6, 6-4, 3-6, 6-4, 6-2 ಅಂತರದಲ್ಲಿ ಗೆಲುವು ಸಾಧಿಸಿದರು.

SCROLL FOR NEXT