ಕ್ರೀಡೆ

ಮುಂದಿನ ತಿಂಗಳು ಮತ್ತೆ ಬ್ಯಾಡ್ಮಿಂಟನ್ ಸ್ಪರ್ಧಾ ಕಣಕ್ಕೆ ಸಿಂಧೂ

Raghavendra Adiga

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮುಂದಿನ ತಿಂಗಳು ಥಾಯ್ಲೆಂಡ್ ಓಪನ್ ನಲ್ಲಿ ಪಾಲ್ಗೊಳ್ಳುವುದರೊಂದಿಗೆ ಅಂತಾರಾಷ್ಟ್ರೀಯ ಸ್ಪರ್ಧಾ ಕಣಕ್ಕೆ ಮರಳಲಿದ್ದಾರೆ.

2019 ರ ವಿಶ್ವ ಚಾಂಪಿಯನ್ ಮತ್ತು 2016 ರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ ಸಿಂಧೂ ಕಳೆದ ಮಾರ್ಚ್‌ನಲ್ಲಿ ನಡೆದ ಈ ವರ್ಷದ ಆಲ್ ಇಂಗ್ಲೆಂಡ್ ಓಪನ್‌ನಲ್ಲಿ ತಮ್ಮ ಕೊನೆಯ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದರು, ಅಲ್ಲಿ ಅವರು ಕ್ವಾರ್ಟರ್ ಫೈನಲ್ ತಲುಪಿದ್ದರು.

ಸಿಂಧೂ 2021ರ ಜನವರಿಯಲ್ಲಿ ಥಾಯ್ಲೆಂಡ್ ನಲ್ಲಿ ನಡೆಯಲಿರುವ ಮೂರು ಟೂರ್ನಿಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲಿಗೆ ಜನವರಿ 12ರಿಂದ 17 ರವರೆಗೆ ನಡೆಯಲಿರುವ ಯೋನೆಕ್ಸ್ ಥಾಯ್ಲೆಂಡ್ ಓಪನ್ ನಲ್ಲಿ ಪಾಲ್ಗೊಳ್ಳಲಿರುವ ಅವರು, ನಂತರ ಜನವರಿ 19ರಿಂದ 24ರ ವರೆಗೆ ನಡೆಯಲಿರುವ ಟೊಯೋಟಾ ಥಾಯ್ಲೆಂಡ್ ಓಪನ್ ನಲ್ಲಿ ಆಡಲಿದ್ದಾರೆ. ಇದಾದ ನಂತರ ಜನವರಿ 27ರಿಂದ 31ರ ವರೆಗೆ ಅರ್ಹತೆಗೆ ಒಳಪಟ್ಟು ಬ್ಯಾಂಕಾಕ್‌ನಲ್ಲಿ ನಡೆಯುವ ವಿಶ್ವ ಪ್ರವಾಸ ಫೈನಲ್‌ನೊಂದಿಗೆ ತಿಂಗಳು ಮುಗಿಸಲಿದ್ದಾರೆ.

ಈ ಮೂರು ಪಂದ್ಯಾವಳಿಗಳಿಗೆ ತನ್ನ ಫಿಸಿಯೋ ಮತ್ತು ಫಿಟ್ನೆಸ್ ತರಬೇತುದಾರರು ತನ್ನೊಂದಿಗೆ ಇರಬೇಕೆಂದು ಸಿಂಧೂ ಮಾಡಿರುವ ಮನವಿಯನ್ನು ಸರ್ಕಾರ ಅನುಮೋದಿಸಿದೆ. ಈ ಮೂರು ಪಂದ್ಯಾವಳಿಗಳಿಗೆ ಅವರ ಫಿಸಿಯೊ ಮತ್ತು ತರಬೇತುದಾರರ ಸೇವೆಗಳನ್ನು ಅಂದಾಜು ರೂ. 8.25 ಲಕ್ಷ ಎಂದು ಟಾಪ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ಭಾರತದ ಉನ್ನತ ಕ್ರೀಡಾಪಟುಗಳಿಗೆ ನೆರವು ನೀಡುವ ಪ್ರಯತ್ನವಾಗಿದೆ.

SCROLL FOR NEXT