ಕ್ರೀಡೆ

ಏಷ್ಯನ್ ಕುಸ್ತಿ: ಸಾಕ್ಷಿ ಮಲಿಕ್ ಫೈನಲ್ ಗೆ ಲಗ್ಗೆ, ವಿನೇಶ್ ಪೋಗಟ್ ಗೆ ಪರಾಜಯ

Raghavendra Adiga

ನವದೆಹಲಿ: ಏಷ್ಯನ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್‌ ಪೋಗಟ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ 53 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಜಪಾನ್‌ನ ಮಯು ಮುಕೈಡಾ ವಿರುದ್ಧ ಸೋಲು ಅನುಭವಿಸಿದ್ದಾರೆ.

ಶುಕ್ರವಾರ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಸೋಲು ಅನುಭವಿಸಿದ ವಿನೇಶ್‌ ಪೋಗಟ್ ಕಂಚಿನ ಪದಕಕ್ಕಾಗಿ ವಿಯಟ್ನಾಂನ ಥಿ ಲೀ ಕಿಯು ವಿರುದ್ಧ ಇಂದು ತಡವಾಗಿ ಸೆಣಸಲಿದ್ದಾರೆ.

ಮುಕೈಡಾ ವಿರುದ್ಧ ವಿನೇಶ್‌ ಪೋಗಟ್ ಸೋಲುಂಡಿರುವುದು ಇದು ಸತತ ಮೂರನೇ ಬಾರಿಯಾಗಿದೆ. 2019ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಇವರ ವಿರುದ್ಧವೇ ಸೋಲುವ ಮೂಲಕ ಬೆಳ್ಳಿ ಪದಕ ಗೆಲ್ಲುವ ಅವಕಾಶವನ್ನು ಭಾರತದ ಕುಸ್ತಿಪಟು ಕಳೆದುಕೊಂಡಿದ್ದರು.

ಇದೇ ವೇಳೆ ರಿಯೋ ಒಲಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ನಾನ್ ಒಲಿಂಪಿಕ್  65 ಕೆಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಕೆಡಿ ಜಾಧವ್ ಕುಸ್ತಿ ಸಭಾಂಗಣದಲ್ಲಿ ಶುಕ್ರವಾರ ಚಿನ್ನಕ್ಕಾಗಿ ಹೋರಾಡಲಿರುವ ಏಕೈಕ ಭಾರತೀಯಳಾಗಿ ಇವರು ಹೊರಹೊಮ್ಮಿದ್ದಾರೆ.

ಸಾಕ್ಷಿ ಜಪಾನ್‌ನ ನವೋಮಿ ರುಯೆಕ್ ಎದುರು ಸೋಲಿನೊಂದಿಗೆ ಪಂದ್ಯಾವಳಿ ಪ್ರಾರಂಭಿಸಿದ್ದರೂ ತಾಂತ್ರಿಕ  ಗುಣಮಟ್ಟದ ಆಟದಿಂದ ಕೊರಿಯಾದ ಓಹಿಯಾಂಗ್ ಹಾ ಅವರನ್ನು ಸೋಲಿಸಿದರು, ಇದು ಅವರನ್ನು ಸೆಮೀಸ್ ತಲುಪಲು ಸಹಾಯ ಮಾಡಿದೆ. ಸೆಮೀಸ್ ಹಂತದಲ್ಲಿ ಅವರು 5-4ರಿಂದ ಉಜ್ಬೇಕಿಸ್ತಾನ್ ನ ನಬೀರಾ ಎಸೆನ್ಬೈವಾ ಅವರನ್ನು ಮಣಿಸಿದ್ದರು.

57 ಕೆಜಿ ವಿಭಾಗದಲ್ಲಿ ಭಾರತದ ಅನ್ಶು ಸೆಮಿಫೈನಲ್‌ನಲ್ಲಿ ಜಪಾನ್‌ನ ರಿಸಾಕೊ ಕವಾಯಿ ಅವರಿಗೆ ಸೋತು ಉಜ್ಬೇಕಿಸ್ತಾನ್‌ನ ಸೆವರ ಎಶ್ಮುರಾಟೋವಾ ವಿರುದ್ಧ ಕಂಚುಗಾಗಿ ಹೋರಾಡಲಿದ್ದಾರೆ 62 ಕೆಜಿ ವಿಭಾಗದಲ್ಲಿ ಸೋನಮ್ ಸೆಮಿಸ್‌ನಲ್ಲಿ ಜಪಾನ್‌ನ ಯುಕೊ ಕವಾಯಿ ವಿರುದ್ಧ 5-2ರಿಂದ ಸೋತು ಹಿಮ್ಮೆಟ್ಟಿದ್ದಾರೆ.ಅವರು ಕಂಚಿನ ಪದಕ ಪಂದ್ಯದಲ್ಲಿ ಕಿರ್ಗಿಸ್ತಾನ್‌ನ ಐಸುಲು ಟೈನಿಬೆಕೊವಾ ಅವರನ್ನು ಎದುರಿಸಬೇಕಿದೆ. ಇನ್ನು ಗುರ್ಷರನ್ ಪ್ರೀತ್ ಕೌರ್ ಅವರನ್ನು  72 ಕೆಜಿ ವಿಭಾಗದ  ಸೆಮಿಫೈನಲ್‌ನಲ್ಲಿ ಜಪಾನ್‌ನ ಮೇ ಶಿಂಡೋ ಅವರು ಸೋಲಿಸಿದರು ಮತ್ತು ಈಗ ಕಂಚಿನ ಪದಕ ಪಂದ್ಯದಲ್ಲಿ ಮಂಗೋಲಿಯಾದ ತ್ಸೆವೆಗ್ಮೆಡ್ ಎನ್‌ಖ್ಬಾಯರ್ ಅವರನ್ನು.ಎದುರಿಸುತ್ತಾರೆ.

SCROLL FOR NEXT