ಕ್ರೀಡೆ

ಬಾಕ್ಸಿಂಗ್: ಅರುಂಧತಿ ಚೌಧರಿ ಕ್ವಾರ್ಟರ್ ಫೈನಲ್ಸ್ ಗೆ 

Lingaraj Badiger

ನವದೆಹಲಿ: ಮೂರು ಬಾರಿ ಖೇಲೋ ಇಂಡಿಯಾ ಚಾಂಪಿಯನ್ ಅರುಂಧತಿ ಚೌಧರಿ ಅವರು ಗುರುವಾರ ಇಬಾ ಯುವ ಪುರುಷರ ಮತ್ತು ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಕೊಲಂಬಿಯಾದ ಬಾಕ್ಸರ್ ಡೆನೀರಾ ಕಾಸಾಸ್ ಅವರನ್ನು ಸೋಲಿಸಿ 69 ಕೆಜಿ ಮಹಿಳಾ ವಿಭಾಗದ ಕ್ವಾರ್ಟರ್ ಫೈನಲ್ಸ್ ಗೆ ಪ್ರವೇಶಿಸಿದ್ದಾರೆ.

ಉಳಿದಂತೆ ಮೂವರು ಭಾರತೀಯ ಬಾಕ್ಸರ್‌ಗಳು ಸಹ ಸ್ಪರ್ಧೆಯಲ್ಲಿ ಯಶಸ್ವಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದ್ದಾರೆ.  

ಇತ್ತೀಚೆಗೆ ಆಡ್ರಿಯಾಟಿಕ್ ಪರ್ಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ರಾಜಸ್ಥಾನದ ಅರುಂಧತಿ, ಮೊದಲಿನಿಂದಲೂ ಪಂದ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದರು ಮತ್ತು ಕೊಲಂಬಿಯಾದ ಡೆನೆರಾ ಕಾಸಾಸ್ ಅವರನ್ನು 5–0ರಿಂದ ಸುಲಭವಾಗಿ ಸೋಲಿಸುವ ಮೂಲಕ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.  

ಮುಂದಿನ ಪಂದ್ಯದಲ್ಲಿ ಅವರು ಉಕ್ರೇನ್ ನ ಅನ್ನಾ ಸ್ಕೊ ಅವರನ್ನು ಎದುರಿಸಲಿದ್ದಾರೆ. ಇವರಲ್ಲದೆ, ವಿಂಕಾ(60 ಕೆಜಿ) ಮತ್ತು ಪೂನಂ (57 ಕೆಜಿ) ಸಹ ಕ್ವಾರ್ಟರ್ ಫೈನಲ್ಸ್ ಗೆ ಅರ್ಹತೆ ಪಡೆದಿದ್ದಾರೆ. 

ಭಾರತದ ಗೀತಿಕಾ, ಮಹಿಳೆಯರ 48 ಕೆಜಿ ವಿಭಾಗದ ಆರಂಭಿಕ ಸುತ್ತಿನಲ್ಲಿ ಯುರೋಪಿಯನ್ ಚಾಂಪಿಯನ್ ರಷ್ಯಾದ ಡಯಾನಾ ಎರ್ಮಕೋವಾ ಅವರನ್ನು 5-0 ರಿಂದ  ಸುಲಭವಾಗಿ ಸೋಲಿಸಿದರು. ಅವರು ಎರಡನೇ ಸುತ್ತಿನಲ್ಲಿ ಕಜಕಿಸ್ತಾನದ ಅರ್ಲೀಮ್ ಮರಾಟ್ ವಿರುದ್ಧ ಸೆಣಸಲಿದ್ದಾರೆ. 

ಪುರುಷರ 69 ಕೆಜಿ ವಿಭಾಗದಲ್ಲಿ, ಸುಮಿತ್ ವೆನಿಜುವೆಲಾದ ರಾಫೆಲ್ ಪೆರೋಮೆಡೊ ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.  

2019 ರ ಏಷ್ಯನ್ ಯುವ ಚಾಂಪಿಯನ್ ನೊರೆಮ್ ಬಾಬಿರೋಜನಾ ಚಾನು (51 ಕೆಜಿ) ಮತ್ತು ಬೆಳ್ಳಿ ಪದಕ ವಿಜೇತ ಅಂಕಿತ್ ನರ್ವಾಲ್ (64 ಕೆಜಿ) ಸ್ಪರ್ಧೆಯಲ್ಲಿ ತಮ್ಮ ಪ್ರದರ್ಶನ ನೀಡುವುದು ಬಾಕಿ ಇದೆ.

SCROLL FOR NEXT