ಕ್ರೀಡೆ

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಾತನಾಡುವಾಗ ಕಣ್ಣೀರಿಟ್ಟ ಭಾರತೀಯ ಮಹಿಳಾ ಹಾಕಿ ತಂಡ- ವಿಡಿಯೋ

Nagaraja AB

ನವದೆಹಲಿ: ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕದಿಂದ ವಂಚಿತರಾದ ಭಾರತೀಯ ಮಹಿಳಾ ಹಾಕಿ ತಂಡ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗ ಕಣ್ಣೀರಿಟ್ಟಿದ್ದಾರೆ. ಸ್ಫೂರ್ತಿದಾಯಕ ಪ್ರದರ್ಶನಕ್ಕಾಗಿ ತಂಡವನ್ನು ಶ್ಲಾಘಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಆಟಗಾರ್ತಿಯರನ್ನು ಪ್ರೋತ್ಸಾಹಿಸಿದರು.

ಟೋಕಿಯೊದಲ್ಲಿ ಶುಕ್ರವಾರ ನಡೆದ ಕಂಚಿನ ಪದಕದ ಪ್ಲೇ-ಆಫ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-4 ಅಂತರದಲ್ಲಿ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಫೋನ್ ಮೂಲಕ ತಂಡದೊಂದಿಗೆ ಮಾತನಾಡಿದರು. ನಿಜವಾಗಿಯೂ ಎಲ್ಲರೂ ಚೆನ್ನಾಗಿ ಆಡಿದ್ದೀರಿ.  ಕಳೆದ ಐದು ವರ್ಷಗಳಲ್ಲಿ  ಎಲ್ಲವನ್ನೂ ಬಿಟ್ಟು, ಕ್ರೀಡೆಗಾಗಿ ಬೆವರು ಸುರಿಸಿದ್ದೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಬೆವರಿನಿಂದ ಪದಕ ಪಡೆಯಲು ಆಗಲಿಲ್ಲ  ಆದರೆ ಇದು ದೇಶದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದೀರಿ. ತರಬೇತುದಾರ ಹಾಗೂ ಎಲ್ಲರನ್ನು ಅಭಿನಂದಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.

ತಂಡದ ಪ್ರಯತ್ನವನ್ನು ಮೋದಿ ಶ್ಲಾಘಿಸಿದ್ದರಿಂದ ಆಟಗಾರರು ಕಣ್ಣೀರನ್ನು ತಡೆಯಲು ಆಗಲಿಲ್ಲ. ವಂದನಾ ಕಟಾರಿಯಾ ಮತ್ತು ಸಲೀಮಾ ಟೆಟೆ ಅವರ ಕಾರ್ಯಕ್ಷಮತೆಯನ್ನು ಮೋದಿ ಕೊಂಡಾಡಿದರು. ವಂದನಾ ಸೇರಿದಂತೆ ಪ್ರತಿಯೊಬ್ಬರು ಉತ್ತಮ ಪ್ರದರ್ಶನ ತೋರಿದ್ದೀರಿ. ಸಲೀಮಾ ಸೇರಿದಂತೆ ಪ್ರತಿಯೊಬ್ಬರು ಬ್ರಿಲಿಯಂಟ್ ಎಂದು ಹೇಳಿದ ಮೋದಿ, ಧೀರ್ಘ ಮೌನದ ನಂತರ ಅಳದಂತೆ ಆಟಗಾರರಿಗೆ ಹೇಳಿದರು.  ನಿಮ್ಮ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತಿದೆ. ಅಳುವುದನ್ನು ನಿಲ್ಲಿಸಿ, ನಿಮ್ಮ ಪ್ರಯತ್ನದಿಂದ ಹಲವು ವರ್ಷಗಳ ನಂತರ ಭಾರತದ ಹಾಕಿಗೆ ಮಾನ್ಯತೆ ಸಿಕ್ಕಿದೆ ಎಂದು ಹೇಳುವ ಮೂಲಕ ಪ್ರಧಾನಿ ಆತ್ಮಸ್ಥೈರ್ಯ ಮೂಡಿಸಿದರು.

ಪಂದ್ಯದ ವೇಳೆ ಗಾಯಗೊಂಡಿದ್ದ ನವ್ ನೀತ್ ಕೌರ್ ಬಗ್ಗೆಯೂ ಪ್ರಧಾನಿ ವಿಚಾರಿಸಿದರು. ಪ್ರೋತ್ಸಾಹಕ್ಕಾಗಿ ಪ್ರಧಾನಿ ಮೋದಿಗೆ ನಾಯಕಿ ರಾಣಿ ರಾಂಪಲ್ ಧನ್ಯವಾದ ಸಲ್ಲಿಸಿದರು. ಮುಖ್ಯ ತರಬೇತುದಾರ ಸ್ಜೊರ್ಡ್ ಮರಿಜ್ನೆ ಅವರ ಪ್ರಯತ್ನಗಳನ್ನು ಸಹ ಪ್ರಧಾನಿ ಮೋದಿ ಶ್ಲಾಘಿಸಿದರು.

SCROLL FOR NEXT