ಕ್ರೀಡೆ

 ಒಲಂಪಿಕ್ಸ್ ಹಾಕಿ: ಜರ್ಮನಿ ಎದುರು 0-2 ಅಂತರದಿಂದ ಸೋತ ಭಾರತದ ವನಿತೆಯರು

Nagaraja AB

ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನಲ್ಲಿ ಸೋಮವಾರ ನಡೆದ ಎ ಗುಂಪಿನ ಹಣಾಹಣಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸತತ ಎರಡನೇ ಬಾರಿಗೆ ಸೋಲಿಗೆ ಶರಣಾಗಿದೆ. ರಿಯೋ ಗೇಮ್ಸ್ ಕಂಚಿನ ಪದಕ ವಿಜೇತ ತಂಡ ಜರ್ಮನಿ ಎದುರು 0-2 ಅಂತರದಿಂದ ಭಾರತದ ವನಿತೆಯರು ಸೋತಿದ್ದಾರೆ.

ವಿಶ್ವದ ನಂಬರ್ 1 ತಂಡವಾದ ನೆದರ್ ಲ್ಯಾಂಡ್ಸ್ ನಿಂದ 1-5 ಅಂತರದಿಂದ ಪಂದ್ಯವನ್ನು ಕೈ ಚೆಲ್ಲಿದ್ದ ಬಳಿಕ  ಒಂದು ಹಂತದಲ್ಲಿ ಭಾರತೀಯ ಮಹಿಳೆಯರು ಪಂದ್ಯವನ್ನು ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಆದರೆ, ವಿಶ್ವದ ನಂಬರ್ 3 ತಂಡವಾದ ಜರ್ಮನಿಯಿಂದ ಸೋಲನ್ನು ತಪ್ಪಿಸಿಕೊಳ್ಳಲು ಅದು ಸಾಕಾಗಿರಲಿಲ್ಲ.

ಮೂರನೇ ಕ್ವಾರ್ಟರ್ ನಲ್ಲಿ ಗುರ್ಜಿತ್ ಕೌರ್ ನೀಡಿದ ಪೆನಾಲ್ಟಿ ಸ್ಟ್ರೋಕ್ ಸೇರಿದಂತೆ ಸಾಕಷ್ಟು ಅವಕಾಶಗಳನ್ನು ವ್ಯರ್ಥ ಮಾಡಿದ್ದಕ್ಕಾಗಿ ತಂಡ ತಪ್ಪಿಗೆ ಸಿಲುಕಿಕೊಂಡಿತು. ಅಲ್ಲದೇ, ಅದೃಷ್ಟ ಕೂಡಾ ರಾಣಿ ರಾಂಪಲ್ ಕಡೆ ಇರಲಿಲ್ಲ.

ಜರ್ಮನಿ ಪರ ನಾಯಕಿ ನೈಕ್ ಲೊರೆನ್ಜ್ (12 ನೇ ನಿಮಿಷ) ಮತ್ತು ಅನ್ನಾ ಶ್ರೋಡರ್ (35 ನೇ ನಿಮಿಷದಲ್ಲಿ) ಗೋಲು ಬಾರಿಸಿದರು.ಮೊದಲ ಪಂದ್ಯದಲ್ಲಿ  2-1 ಅಂತರದಿಂದ ಗ್ರೇಟ್ ಬ್ರಿಟನ್ ಸೋಲಿಸಿದ್ದ ಜರ್ಮನಿ ಇದೀಗ ಭಾರತದ ವಿರುದ್ಧ ಎರಡನೇ ಗೆಲುವು ಕಂಡಿದ್ದಾರೆ. ಬುಧವಾರ ನಡೆಯಲಿರುವ  ಮುಂದಿನ ಹಣಾಹಣಿಯಲ್ಲಿ ಭಾರತೀಯರು ಗ್ರೇಟ್ ಬ್ರಿಟನ್ ವಿರುದ್ಧ ಆಡಲಿದ್ದಾರೆ. 

SCROLL FOR NEXT