ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಕಂಚಿನ ಪದಕ ಗೆದ್ದ ಆಸಿಸ್ ಸ್ಪರ್ಧಿ ಜೆಸ್ಸಿಕಾ ಫಾಕ್ಸ್, ಆದರೆ ಸುದ್ದಿಯಾಗಿದ್ದು ಮಾತ್ರ ಕಾಂಡೋಮ್!

Srinivasamurthy VN

ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಕೆನೋಯ್ ಸ್ಲಾಲೊಮ್‌ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಕ್ರೀಡಾಪಟು ಜೆಸ್ಸಿಕಾ ಫಾಕ್ಸ್ ಪದಕ ಗೆದ್ದಿದ್ದು, ಆದರೆ ಅವರು ತಮ್ಮ ಪದಕಕ್ಕಿಂತ ಹೆಚ್ಚಾಗಿ ಕಾಂಡೋಮ್ ನಿಂದಾಗಿ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಮಹಿಳೆಯರ ಸಿ1 ಕೆನೋಯ್ ಸ್ಲಾಲೊಮ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜೆಸಿಕಾ ಫಾಕ್ಸ್‌ ಕೆನೋಯ್‌ ಸ್ಲಾಲೊಮ್ ಕೆ1 ಫೈನಲ್‌ನಲ್ಲಿ ಕಂಚಿನ ಪದಕ ಕೂಡ ತಮ್ಮದಾಗಿಸಿಕೊಂಡಿದ್ದಾರೆ.  ಸ್ಪರ್ಧೆಗೂ ಮೊದಲು ಜೆ್ಸಿಕಾ ಅವರ ಕಯಾಕ್ ಗೆ ತುದಿಯಲ್ಲಿ ಹಾನಿಯಾಗಿತ್ತು. ಇದನ್ನು ಸರಿಪಡಿಸಲು ಜೆಸ್ಸಿಕಾ ಕಾಂಡೋಮ್ ಬಳಸಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇದನ್ನು ಜೆಸಿಕಾ ಫಾಕ್ಸ್‌ ತಮ್ಮ ಅಧಿಕೃತ ಟಿಕ್‌ಟಾಕ್‌ ಖಾತೆಯ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಜೊತೆಗೆ "ಕಾಂಡೋಮ್‌ ಬಳಕೆಯನ್ನು ಕಯಾಕ್‌ ರಿಪೇರಿ ಮಾಡಲು ಕೂಡ ಬಳಕೆ ಮಾಡಬಹುದು. ಇದು ಕಯಾಕ್‌ ಸಾಧನಕ್ಕೆ ನಯವಾದ ವಿನ್ಯಾಸ ನೀಡುತ್ತದೆ ಎಂದು ನಿಮಗೆ ಗೊತ್ತಿರಲಿಲ್ಲ ಎಂದು ನಾನು ಬೆಟ್‌ ಕಟ್ಟಬಲ್ಲೆ," ಎಂದು ಬರೆದುಕೊಂಡಿದ್ದಾರೆ.

ಹಾಳಾಗಿದ್ದ ಕಯಾಕ್ ತುದಿಗೆ ಮೊದಲು ಕಾರ್ಬನ್‌ ಮಿಕ್ಸ್‌ ಪೇಸ್ಟ್‌ ಲೇಪಿಸಿ ನಂತರದ ಅದರ ವಿನ್ಯಾಸ ಕಾಯ್ದುಕೊಳ್ಳುವ ಸಲುವಾಗಿ ಜೆಸ್ಸಿಕಾ ಅದರ ಮೇಲೆ ಕಾಂಡೋಮ್‌ ಹಾಕಿದ್ದಾರೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಜೆಸ್ಸಿಕಾ ಅವರ ಕಾರ್ಯಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆಯಲ್ಲದೇ ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.

"ಇಂಜಿನಿಯರ್‌ನ ತಲೆ ಎಂದರೆ ಇದು.. ನಿಜಕ್ಕೂ ಅದ್ಭುತ. ಪ್ರತಿದಿನ ನಿಮಗೆ ಕಲಿಯಲು ಹೊಸದೊಂದು ಸಿಕ್ಕೇ ಸಿಗುತ್ತದೆ," ಎಂದು ಅವರ ಪೋಸ್ಟ್‌ಗೆ ಅಭಿಮಾನಿಯೊಬ್ಬ ಕಾಮೆಂಟ್‌ ಮಾಡಿದ್ದಾನೆ.

ಒಲಂಪಿಕ್ಸ್ ಕ್ರೀಡಾಕೂಟದಲ್ಲಿ 60 ಸಾವಿರ ಕಾಂಡೋಮ್‌ ಬಿಡುಗಡೆ
ಇನ್ನು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಆಯೋಜಕರು ಅಥ್ಲೀಟ್‌ಗಳ ಸಲುವಾಗಿ ಈ ಬಾರಿ ಬರೋಬ್ಬರಿ 60 ಸಾವಿರ ಕಾಂಡೋಮ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಇದನ್ನು ಒಲಿಂಪಿಕ್‌ ಕ್ರೀಡಾಗ್ರಾಮದಲ್ಲಿ ಬಳಕೆ ಮಾಡುವ ಬದಲು ತಮ್ಮ ಮನೆಯಲ್ಲಿ ಬಳಕೆ ಮಾಡಿ ಎಂಬ ಸಲಹೆಯನ್ನೂ ನೀಡಿದ್ದಾರೆ. "ಎಚ್‌ಐವಿ-ಏಯ್ಡ್ಸ್‌ ಬಗ್ಗೆ ಅಥ್ಲೀಟ್‌ಗಳು ತಮ್ಮ ತಮ್ಮ ದೇಶಗಳಲ್ಲಿ ಜಾಗೃತಿ ಮೂಡಿಸಲಿ ಎಂಬುದರ ಸಲುವಾಗಿ ಒಲಿಂಪಿಕ್‌ ಕ್ರೀಡಾಗ್ರಾಮದಲ್ಲಿ ಕಾಂಡೋಮ್ ಹಂಚಿಕೆ ಮಾಡಲಾಗುತ್ತದೆ," ಎಂದು ಟೂರ್ನಿ ಸಂಘಟಕರು ಈ ಮೊದಲು ಅಧಿಕೃತ ಹೇಳಿಕೆ ನೀಡಿದ್ದಾರೆ.
 

SCROLL FOR NEXT