ಕ್ರೀಡೆ

ಐತಿಹಾಸಿಕ ಕಂಚಿನ ಪದಕ ಜಯಿಸಿದ ತೇಜಸ್ವಿನ್ ಶಂಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Ramyashree GN

ನವದೆಹಲಿ: ಬರ್ಮಿಂಗ್‌ಹ್ಯಾಮ್‌‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ತೇಜಸ್ವಿನ್ ಶಂಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಹೈಜಂಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಸಿಕ್ಕಿದೆ. ಈ ಖುಷಿಯಲ್ಲಿ ತೇಜಸ್ವಿನಿ ಶಂಕರ್ ಅವರನ್ನು ಅಭಿನಂದಿಸಿರುವ ಪ್ರಧಾನ ಮಂತ್ರಿ, 'ತೇಜಸ್ವಿನ್ ಶಂಕರ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹೈಜಂಪ್ ಸ್ಪರ್ಧೆಯಲ್ಲಿ ಮೊದಲ ಪದಕವನ್ನು ಗೆದ್ದಿದ್ದಾರೆ. ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರ ಈ ಪ್ರಯತ್ನಗಳಿಗೆ ಹೆಮ್ಮೆಯೆನಿಸುತ್ತದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು. ಅವರು ಇನ್ನಷ್ಟು ಯಶಸ್ಸನ್ನು ಪಡೆಯಲಿ' ಎಂದು ಟ್ವೀಟ್ ಮಾಡಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಬುಧವಾರ ಭಾರತದ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ಫೈನಲ್‌ನಲ್ಲಿ 2.22 ಮೀಟರ್‌‌ಗೆ ಜಿಗಿಯುವ ಮೂಲಕ ಕಂಚಿನ ಪದಕವನ್ನು ಪಡೆದರು.

ನ್ಯೂಜಿಲೆಂಡ್‌ನ ಹಮಿಶ್ ಕೇರ್ ಚಿನ್ನದ ಪದಕ ಗಳಿಸಿದರೆ, ಆಸ್ಟ್ರೇಲಿಯಾದ ಬ್ರಾಂಡನ್ ಸ್ಟಾರ್ಕ್ ಬೆಳ್ಳಿ ಗೆದ್ದುಕೊಂಡರು.

ತೇಜಸ್ವಿನ್ ಶಂಕರ್ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಐದು ಚಿನ್ನ, ಆರು ಬೆಳ್ಳಿ ಹಾಗೂ 8 ಕಂಚು ಸಹಿತ 18ಪದಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

SCROLL FOR NEXT