ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್: ಸಮೀಸ್ ನಲ್ಲಿ ಸೋಲು, ಭಾರತ ಮಹಿಳಾ ಹಾಕಿ ತಂಡದ ಚಿನ್ನದ ಪದಕ ಕನಸು ನುಚ್ಚು ನೂರು ಮಾಡಿದ ಅಂಪೈರಿಂಗ್ ಎಡವಟ್ಟು?

Srinivasamurthy VN

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಯೋಜಕರು ಮತ್ತು ಅಂಪೈರ್ ಗಳು ಮಾಡಿದ ಮಹಾ ಎಡವಟ್ಟಿನ ಕಾರಣ ಭಾರತ ಮಹಿಳಾ  ಹಾಕಿ ತಂಡದ ಚಿನ್ನದ ಪದಕದ ಕನಸು ಅಕ್ಷರಶಃ ನುಚ್ಚು ನೂರಾಗಿದೆ.

ಹೌದು.. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡದ ಬಂಗಾರದ ಪದಕದ ಆಸೆ ಕಮರಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿ ಫೈನಲ್ ನಲ್ಲಿ ಭಾರತದ ವನಿತೆಯರು ಪೆನಾಲ್ಟಿ ಶೂಟೌಟ್ ನಲ್ಲಿ 0-3 ಅಂತರದಿಂದ ಸೋಲನುಭವಿಸಿದ್ದಾರೆ.

ಆದರೆ ಶೂಟೌಟ್ ಸಮಯದಲ್ಲಿ ನಡೆದ ಮಹಾ ಎಡವಟ್ಟು ಭಾರತದ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ. ಶೂಟೌಟ್ ಆರಂಭವಾದಾಗ ಆಸ್ಟ್ರೇಲಿಯಾದ ಮೊದಲ ಶೂಟ್ ಆನ್ನು ಭಾರತದ ನಾಯಕಿ ಮತ್ತು ಗೋಲ್ ಕೀಪರ್ ಸವೀತಾ ಅತ್ಯಂತ ಚಾಕಚಕ್ಯತೆಯಿಂದ ತಡೆದಿದ್ದರು. ಆದರೆ ಆಸೀಸ್ ಆಟಗಾರ್ತಿಯ ಪ್ರಯತ್ನದ ವೇಳೆ ಗಡಿಯಾರದ ಟೈಮರ್ ಆರಂಭವಾಗಿರಲಿಲ್ಲ ಎಂದು ಅಂಪೈರ್ ಗಳು ಮಧ್ಯ ಪ್ರವೇಶಿಸಿ ಆಸ್ಟ್ರೇಲಿಯಾಗೆ ಮತ್ತೊಂದು ಅವಕಾಶ ನೀಡಿದರು. ಎರಡನೇ ಅವಕಾಶದಲ್ಲಿ ಆಸೀಸ್ ಆಟಗಾರ್ತಿಯು ಗೋಲು ಬಾರಿಸಿದರು. ಬಳಿಕ ಸತತ ಎರಡು ಗೋಲು ಭಾರಿಸುವ ಮೂಲಕ ಆಸಿಸ್ ವನಿತೆಯರ ತಂಡ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. 

ಈ ಘಟೆನೆಯಿಂದ ತಂಡ ಆಘಾತಕ್ಕೆ ಒಳಗಾಯಿತು. ಟೀಂ ಇಂಡಿಯಾ ಕೋಚ್ ಜನ್ನೆಕೆ ಶಾಪ್ಮನ್ ಈ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, " ನನಗಿದು ಅರ್ಥವಾಗುತ್ತಿಲ್ಲ. ಆಸ್ಟ್ರೇಲಿಯಾ ತಂಡ ದೂರು ನೀಡಿರಲಿಲ್ಲ. ಈ ಅಧಿಕಾರಿಗಳ ನಾಟಕೀಯ ನಡೆಯ ಬಗ್ಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ.

ಇನ್ನು ಅಂಪೈರ್ ಗಳು ಮತ್ತು ಆಯೋಜಕರ ವಿರುದ್ಧ ಕ್ರೀಡಾಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಭಾರತದ ಬಂಗಾರದ ಪದಕವನ್ನು ಕಿತ್ತುಕೊಂಡಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸ್ವತಃ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಧ್ವನಿ ಎತ್ತಿದ್ದು, ' ಆಸ್ಟ್ರೇಲಿಯಾದ ಪೆನಾಲ್ಟಿ ಶೂಟೌಟ್ ಮಿಸ್ ಆಯ್ತು... ಆದರೆ ಅಂಪೈರ್ ಗಳು ಮಾತ್ರ ಕ್ಷಮಿಸಿ ಗಡಿಯಾರ ಚಾಲನೆಯಲ್ಲಿರಲಿಲ್ಲ ಎಂದು  ಹೇಳುತ್ತಾರೆ. ಇಂತಹುದೇ ಎಡವಟ್ಟುಗಳು ಕ್ರಿಕೆಟ್ ನಲ್ಲೂ ನಮಗೆ ಆಗುತ್ತಿತ್ತು. ಆದರೆ ನಾವು ಸೂಪರ್ ಅದಾಗ ಎಲ್ಲ ಗಡಿಯಾರಗಳೂ ಸಮಯಕ್ಕೆ ಸರಿಯಾಗಿ ಚಾಲನೆಯಾಗುತ್ತಿವೆ. ಹಾಕಿಯಲ್ಲೂ ಕೂಡ ನಾವು ಶೀಘ್ರದಲ್ಲೇ ಸೂಪರ್ ಪವರ್ ಆಗುತ್ತೇವೆ. ಆಗ ಎಲ್ಲ ಗಡಿಯಾರಗಳು ಸಮಯಕ್ಕೆ ಸರಿಯಾಗಿ ಚಾಲನೆಯಾಗುತ್ತವೆ. ನಮ್ಮ ವನಿತೆಯರ ಬಗ್ಗೆ ನಮಗೆ ಹೆಮ್ಮೆ ಇದೆ.. ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT