ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಪ್ರದರ್ಶನ: ಪದಕ ವಿಜೇತರೊಂದಿಗೆ ಪ್ರಧಾನಿ ಮೋದಿ ಸಂವಾದ

Lingaraj Badiger

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾಗವಹಿಸಿ ಭಾರತಕ್ಕೆ ಹಿಂದಿರುಗಿದ ಆಟಗಾರರನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಪ್ರಧಾನಿ ಮೋದಿ ಅಭಿನಂದಿಸಿದರು.

ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ಕಳೆದ ಕೆಲವು ವಾರಗಳಲ್ಲಿ ದೇಶವು ಆಟದ ಕ್ಷೇತ್ರದಲ್ಲಿ ಎರಡು ದೊಡ್ಡ ಸಾಧನೆಗಳನ್ನು ಮಾಡಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಐತಿಹಾಸಿಕ ಪ್ರದರ್ಶನದ ಜೊತೆಗೆ, ದೇಶವು ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಿದೆ. ಚೆಸ್‌ನಲ್ಲಿ ನಮ್ಮ ಅತ್ಯುತ್ತಮ ಸಂಪ್ರದಾಯವನ್ನು ಉತ್ತಮವಾಗಿ ನಿರ್ವಹಿಸಿದ್ದೇವೆ. ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಒಲಿಂಪಿಯಾಡ್‌ಗಳಲ್ಲಿ ಪದಕ ಗೆದ್ದವರನ್ನು ಅಭಿನಂದಿಸುತ್ತೇನೆ. ಪದಕ ಗೆದ್ದವರು, ಪದಕ ಗೆಲ್ಲಲು ಹೊರಟವರು ಕೂಡ ಇಂದು ಪ್ರಶಂಸೆಗೆ ಅರ್ಹರು ಎಂದು ಪ್ರಧಾನಿ ಹೇಳಿದರು.

ಕಾಮನ್‌ವೆಲ್ತ್ ಗೇಮ್ಸ್ ನಡೆದ ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ ಪ್ರದೇಶದ ಬರ್ಮಿಂಗ್ಹ್ಯಾಮ್ ನಗರ ಹಾಗೂ ಭಾರತಕ್ಕೆ ನಾಲ್ಕು ಗಂಟೆಗಳಿಗೂ ಹೆಚ್ಚು ವ್ಯತ್ಯಾಸವಿದೆ. ಭಾರತೀಯ ಕಾಲಮಾನದ ಪ್ರಕಾರ ಸ್ಪರ್ಧೆಗಳು ತಡರಾತ್ರಿಯವರೆಗೂ ನಡೆದವು. ನೀವೆಲ್ಲರೂ ಅಲ್ಲಿ ಸ್ಪರ್ಧಿಸುತ್ತಿದ್ದಾಗ ಕೋಟಿಗಟ್ಟಲೆ ದೇಶವಾಸಿಗಳು ಭಾರತದಲ್ಲಿ ಕಾಯುತ್ತಿದ್ದರು. ತಡರಾತ್ರಿಯವರೆಗೂ ನಿಮ್ಮ ಪ್ರತಿಯೊಂದು ಕ್ರಿಯೆಯ ಮೇಲೂ ದೇಶವಾಸಿಗಳ ಕಣ್ಣು ಇತ್ತು. ಎಷ್ಟೋ ಅಭಿಮಾನಿಗಳು ಮತ್ತೆ ಮತ್ತೆ ಅಂಕಗಳನ್ನು ಚೆಕ್ ಮಾಡುತ್ತಿದ್ದರು. ಕ್ರೀಡೆಯತ್ತ ಆಕರ್ಷಣೆಯನ್ನು ಹೆಚ್ಚಿಸುವಲ್ಲಿ ನಿಮ್ಮೆಲ್ಲರ ಪಾತ್ರವಿದೆ. ನೀವೆಲ್ಲರೂ ಅಭಿನಂದನೆಗೆ ಅರ್ಹರು ಎಂದರು.

ಕೇವಲ ಪದಕಗಳ ಸಂಖ್ಯೆಯಿಂದ ನಮ್ಮ ಸಾಧನೆಯನ್ನು ನಿರ್ಣಯಿಸುವುದು ಸರಿಯಲ್ಲ. ನಮ್ಮ ಅನೇಕ ಆಟಗಾರರು ಕಠಿಣ ಸ್ಪರ್ಧೆಯೊಡ್ಡಿದ್ದಾರೆ. ಅದು ಪದಕಕ್ಕಿಂತ ಕಡಿಮೆಯಿಲ್ಲ. ಪದಕ ಗೆಲ್ಲುವಲ್ಲಿ ನಾವು 0.1 ಸೆಂಟಿ ಮೀಟರ್ ನಿಂದ 0.1 ಸೆಕೆಂಡ್ ಅಂತರವಿದ್ದು, ಅದನ್ನು ಸರಿಪಡಿಸುತ್ತೇವೆ. ಇದು ನಿಮ್ಮ ಮೇಲಿನ ನನ್ನ ನಂಬಿಕೆ” ಎಂದು ಪ್ರಧಾನಿ ತಿಳಿಸಿದರು.

ಬರ್ಮಿಂಗ್ಹ್ಯಾಮ್ 2022 ರಲ್ಲಿ ಭಾರತೀಯ ಆಟಗಾರರು ಪ್ರಬಲ ಕ್ಷೇತ್ರಗಳಲ್ಲಿ ಪೈಪೋಟಿ ನೀಡಿದ್ದಾರೆ. ಭಾರತದ ಪುರುಷ ಮತ್ತು ಮಹಿಳೆಯರ ಹಾಕಿ ತಂಡಗಳು ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರೆ, ಭಾರತವು ಲಾನ್ ಬಾಲ್‌ನಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆದ್ದಿದೆ. ಹಾಕಿಯಲ್ಲಿ ನಮ್ಮ ಹಳೆಯ ವೈಭವವನ್ನು ಮರಳಿ ಪಡೆಯಲಿದ್ದೇವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನಾಲ್ಕು ಹೊಸ ಗೇಮ್ಸ್ ಗಳಲ್ಲಿ ಗೆಲುವು ಸಾಧಿಸುವ ಹಾದಿ ತುಳಿದಿದ್ದೇವೆ. ಲಾನ್ ಬಾಲ್‌ನಿಂದ ಟೇಬಲ್ ಟೆನ್ನಿಸ್‌ವರೆಗೆ ನಾವು ಗೆದ್ದಿದ್ದೇವೆ. ಇದರಿಂದ ಕ್ರೀಡೆಯಲ್ಲಿ ಯುವಕರ ಆಸಕ್ತಿ ಹೆಚ್ಚಲಿದೆ’ ಎಂದರು.

ಅನೇಕ ಸ್ವಾತಂತ್ರ್ಯ ಹೋರಾಟಗಾರರ ಉದಾಹರಣೆಯನ್ನು ನೀಡಿದ ಪ್ರಧಾನಿ, ಭಾರತೀಯ ಕ್ರೀಡಾಪಟುಗಳು ಕೂಡ ಅದೇ ಸ್ಪೂರ್ತಿಯೊಂದಿಗೆ ಸ್ಪರ್ಧೆಗೆ ಇಳಿಯುತ್ತಾರೆ. ತಮ್ಮ ಗ್ರಾಮ, ಜಿಲ್ಲೆ, ಭಾಷೆ ಎನ್ನದೆ ಭಾರತದ ಗೌರವ, ಅಭಿಮಾನ, ಪ್ರತಿಷ್ಠೆಗಾಗಿ ತಮ್ಮ ಕೈಲಾದ ಕೆಲಸವನ್ನು ಮಾಡುತ್ತಾರೆ ಎಂದು ಪ್ರಧಾನಿ ಮೋದಿ ಬರ್ಮಿಂಗ್ ಹ್ಯಾಮ್ ನಿಂದ ಹಿಂದಿರುಗಿದ ಆಟಗಾರರನ್ನು ಪ್ರಶಂಸಿದರು.

ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಸ್ಪರ್ಧಾಳುಗಳು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಗೆದ್ದು ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತವು ಕುಸ್ತಿಯೊಂದರಲ್ಲಿ ಬರೋಬ್ಬರಿ 12 ಪದಕಗಳನ್ನು ಗೆದ್ದಿದೆ.

SCROLL FOR NEXT