ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್ 2022ಗೆ ಅದ್ಧೂರಿ ಚಾಲನೆ: ಭಾರತ ತಂಡವನ್ನು ಮುನ್ನಡೆಸಿದ ಪಿ.ವಿ. ಸಿಂಧು, ಮನ್ ಪ್ರೀತ್ ಸಿಂಗ್

Lingaraj Badiger

ಬರ್ಮಿಂಗ್ ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಗುರುವಾರ ಕಾಮನ್‌ವೆಲ್ತ್ ಗೇಮ್ಸ್ 2022ಗೆ ಅದ್ಧೂರಿ ಚಾಲನೆ ನೀಡಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಭಾರತ ತಂಡವನ್ನು ಮುನ್ನಡೆಸಿದರು.

ಈ ಮುಂಚೆ ನೀರಜ್ ಚೋಪ್ರಾ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿದ್ದರು. ಆದರೆ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್  2022 ರಿಂದ ಹೊರಗುಳಿದಿದ್ದಾರೆ.

ಒಲಂಪಿಕ್ ಪದಕ ವಿಜೇತರಾದ ಪಿ.ವಿ ಸಿಂಧು, ಮೀರಾಬಾಯಿ ಚಾನು, ಲೊವ್ಲಿನಾ ಬೊರ್ಗೊಹೈನ್, ಬಜರಂಗ್ ಪುನಿಯಾ ಮತ್ತು ರವಿ ಕುಮಾರ್ ದಹಿಯಾ ಅವರಲ್ಲದೆ ಹಾಲಿ CWG ಚಾಂಪಿಯನ್‌ಗಳಾದ ಮನಿಕಾ ಬಾತ್ರಾ, ಮತ್ತು ವಿನೇಶ್ ಫೋಗಟ್ ಹಾಗೂ 2018 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾದ ತಜಿಂದರ್‌ಪಾಲ್ ಸಿಂಗ್ ತೂರ್, ಹಿಮಾ ದಾಸ್ ಮತ್ತು ಅಮಿತ್ ಪಂಗಲ್ ಅವರು ತಂಡದಲ್ಲಿರುವ ಕೆಲವು ಪ್ರಮುಖ ಕ್ರೀಡಾಪಟುಗಳಾಗಿದ್ದಾರೆ.

ಭಾರತವನ್ನು ಪ್ರತಿನಿಧಿಸುವ 215 ಕ್ರೀಡಾಪಟುಗಳು 19 ಕ್ರೀಡಾ ವಿಭಾಗಗಳಲ್ಲಿ 141 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಟಿ 20 ಕ್ರಿಕೆಟ್ ತಂಡ ಪದಾರ್ಪಣೆ ಮಾಡಲಿದ್ದು, ಅಗ್ರ ಎಂಟು ತಂಡಗಳು ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸುತ್ತಿವೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ CWG ಚೊಚ್ಚಲ ಪಂದ್ಯವನ್ನು ಆಡಲಿದೆ. ಮಹಿಳಾ ಹಾಕಿ ತಂಡವು ಘಾನಾವನ್ನು ಎದುರಿಸಲಿದೆ.

ಎಲ್ಲಾ ಕ್ರೀಡಾಕೂಟಗಳಲ್ಲಿ ಗೆಲ್ಲಲು 1,875 ಪದಕಗಳು ಇರುತ್ತವೆ ಮತ್ತು ಜಾಗತಿಕ, ಬಹು-ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಪುರುಷರಿಗಿಂತ ಹೆಚ್ಚು ಮಹಿಳೆಯರ ಸ್ಪರ್ಧೆಗಳಿವೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಅಥ್ಲೀಟ್‌ಗಳಿಗೆ 136 ಚಿನ್ನದ ಪದಕಗಳಿದ್ದರೆ, ಪುರುಷರ ಅಥ್ಲೀಟ್‌ಗಳಿಗೆ 134 ಚಿನ್ನದ ಪದಕಗಳಿವೆ.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 66 ಪದಕಗಳನ್ನು ಗೆದ್ದುಕೊಂಡಿತ್ತು. 2010ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್ ನಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿತ್ತು. 2010ರಲ್ಲಿ ಭಾರತ 38 ಚಿನ್ನದ ಪದಕ ಸೇರಿದಂತೆ 101 ಪದಕಗಳನ್ನು ಗೆದ್ದಿತ್ತು.

SCROLL FOR NEXT