ಕ್ರೀಡೆ

ಪದ್ಮಶ್ರೀ ಹಿಂದಿರುಗಿಸಿದ ಬಜರಂಗ್ ಪುನಿಯಾ ಬಗ್ಗೆ ಪ್ರತಿಕ್ರಿಯಿಸಲು ಕ್ರೀಡಾ ಸಚಿವ ಠಾಕೂರ್ ನಕಾರ

Lingaraj Badiger

ಬೆಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ(ಡಬ್ಲ್ಯುಎಫ್‌ಐ)ದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ವಿರೋಧಿಸಿ ಕುಸ್ತಿಪಟು ಬಜರಂಗ್ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸು ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶನಿವಾರ ನಿರಾಕರಿಸಿದ್ದಾರೆ.

ಒಲಿಂಪಿಕ್ ಪದಕ ವಿಜೇತ ಪುನಿಯಾ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಪ್ರತಿಭಟನಾ ಪತ್ರ ಮತ್ತು ಪ್ರಶಸ್ತಿ ವಾಪಸ್ ನೀಡಲು ದೆಹಲಿಯ ಕರ್ತವ್ಯ ಪಥಕ್ಕೆ ತೆರಳಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದರಿಂದ ಪದ್ಮಶ್ರೀ ಪದಕವನ್ನು ಫುಟ್‌ಪಾತ್‌ನಲ್ಲಿಟ್ಟು ಬಂದಿದ್ದಾರೆ.

ಇಂದು SAI ಕೇಂದ್ರದಲ್ಲಿ ಖ್ಯಾತ ಕ್ರೀಡಾಪಟುಗಳು ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ವರದಿಗಾರರೊಂದಿಗೆ ಮಾತನಾಡಿದ ಠಾಕೂರ್, "ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಇನ್ನು ಯಾವುದೇ ಹೇಳಿಕೆ ನೀಡುವುದಿಲ್ಲ" ಎಂದರು.

"ನಮ್ಮ ಅಥ್ಲೀಟ್‌ಗಳು ಏಷ್ಯನ್ ಗೇಮ್ಸ್(ಹಾಂಗ್‌ಝೌನಲ್ಲಿ) ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಈ ಕಥೆಗಳನ್ನು ನಾವು ಹೆಚ್ಚು ಹೈಲೈಟ್ ಮಾಡಬೇಕಾಗಿದೆ" ಎಂದು ಠಾಕೂರ್ ಹೇಳಿದರು.

SCROLL FOR NEXT