ಕ್ರೀಡೆ

ಡಬ್ಲ್ಯುಎಫ್‌ಐ ಅಧ್ಯಕ್ಷರು, ಕೋಚ್ ವಿರುದ್ಧ ಲೈಂಗಿಕ ಕಿರುಕುಳ ದೂರುಗಳು ಗಂಭೀರ: ಕಾಮನ್ ವೆಲ್ತ್ ಗೇಮ್ ಕೋಚ್ ಪ್ರವೀಣ್ ದಹಿಯಾ

Nagaraja AB

ನವದೆಹಲಿ: ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷರು ಮತ್ತು ತರಬೇತುದಾರರ ವಿರುದ್ಧ ಕುಸ್ತಿಪಟು ವಿನೇಶ್ ಫೋಗಟ್ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳು ಗಂಭೀರವಾಗಿದೆ. ಕಾರಣವಿಲ್ಲದೆ ಯಾರೂ ಅಂತಹ ವಿಷಯಗಳನ್ನು ಹೇಳುವುದಿಲ್ಲ ಎಂದು  2022 ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ರವಿ ದಹಿಯಾ ತರಬೇತಿ ನೀಡಿದ ಪ್ರವೀಣ್ ದಹಿಯಾ ಹೇಳಿದ್ದಾರೆ.

ಭಾರತ ಕುಸ್ತಿ ಫೆಡರೇಷನ್ ಮತ್ತು ಅದರ ಅಧ್ಯಕ್ಷ ಬ್ರಿಜ್ ಭೂಷಣ್ ಶರತ್ ಸಿಂಗ್ ವಿರುದ್ಧ  ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮತ್ತು ಇತರ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಎರಡನೇ ದಿನವೂ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. 

ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ನ ನೆಚ್ಚಿನ ತರಬೇತುದಾರರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಮತ್ತು ಅವರಿಗೆ ಕಿರುಕುಳ ನೀಡುತ್ತಾರೆ ಎಂದು ವಿನೇಶ್ ಫೋಗಟ್ ಬುಧವಾರ ಆರೋಪಿಸಿದ್ದಾರೆ. ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ತನ್ನ ಸೋಲಿನ ನಂತರ  'ಖೋಟಾ ಸಿಕ್ಕಾ' ಎಂದು ಕರೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಆರೋಪ ಕುರಿತು ಪ್ರತಿಕ್ರಿಯಿಸಿರುವ ಪ್ರವೀಣ್ ದಹಿಯಾ, ವಿನೇಶ್ ಫೋಗಟ್ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳು ಗಂಭೀರವಾಗಿದೆ.  ಕಾರಣವಿಲ್ಲದೆ ಯಾರೂ ಅಂತಹ ವಿಷಯಗಳನ್ನು ಹೇಳುವುದಿಲ್ಲ. ನ್ಯಾಯಯುತವಾದ ತನಿಖೆ ನಂತರ ಸತ್ಯ ಹೊರಬರಬೇಕೆಂದು ಕುಸ್ತಿಪಟುಗಳು ಬಯಸುತ್ತಾರೆ ಎಂದು ತಿಳಿಸಿದರು. 

ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ಕುಸ್ತಿಪಟುಗಳು ಅರ್ಜುನ ಪ್ರಶಸ್ತಿಯಿಂದ ಗೌರವಿಸಲಾಗಿದೆ. ಈ ಆಟಗಾರರು ಅನೇಕ ಬಾರಿ ಇಡೀ ವಿಶ್ವದಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅಂತಹ ದೊಡ್ಡ ಆಟಗಾರರು ಇಂತಹ ದೊಡ್ಡ ಆರೋಪಗಳನ್ನು ಮಾಡುತ್ತಿದ್ದರೆ ಅದರಲ್ಲಿ ಸ್ವಲ್ಪ ಸತ್ಯ ಇರಬೇಕು ಎಂದು ನನಗೆ ಅನಿಸುತ್ತದೆ. ಈ ವಿಷಯದ ಬಗ್ಗೆ ತನಿಖೆ ನಡೆಯಬೇಕು ಮತ್ತು ಸತ್ಯವು ಎಲ್ಲರ ಮುಂದೆ ಬರಬೇಕು ಮತ್ತು ಯಾರಾದರೂ ತಪ್ಪಿತಸ್ಥರಾಗಿದ್ದರೆ ಅವರಿಗೆ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದರು.

ನಿನ್ನೆ, ಎಲ್ಲಾ ಆಟಗಾರರು ಮುಕ್ತವಾಗಿ ಮಾತನಾಡಿದ್ದಾರೆ. ಕ್ಯಾಂಪ್ ನಲ್ಲಿದ್ದು, ಫೆಡರೇಶನ್‌ನೊಂದಿಗೆ ಹೆಚ್ಚು ಸಂವಾದ ಹೊಂದಿದ್ದಂತಹ ಆಟಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ  ಎಂದು ದಹಿಯಾ ಹೇಳಿದರು.

SCROLL FOR NEXT