ಕ್ರೀಡೆ

ಶೂಟಿಂಗ್ ವಿಶ್ವಕಪ್ 2023: ಆಡಳಿತಾಧಿಕಾರಿಯಾಗಿ ನಿವೃತ್ತ ನ್ಯಾಯಾಧೀಶ ಎಕೆ ಸಿಕ್ರಿ ನೇಮಕ

Lingaraj Badiger

ನವದೆಹಲಿ: 2023ರ ಮಾರ್ಚ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಮುಂಬರುವ ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್) ವಿಶ್ವಕಪ್‌ಗೆ ಹಣದ ಬಳಕೆಯ ಮೇಲ್ವಿಚಾರಣೆ ಮಾಡಲು ದೆಹಲಿ ಹೈಕೋರ್ಟ್ ಶುಕ್ರವಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ವಿಭಾಗೀಯ ಪೀಠ ಈ ನಿರ್ಧಾರ ತೆಗೆದುಕೊಂಡಿದೆ.

ಕ್ರೀಡಾ ನೀತಿ ಸಂಹಿತೆ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಹಿಂದಿನ ಹೈಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ಹಣ ಬಳಕೆಗೆ ನಿರ್ಬಂಧ ವಿಧಿಸಿದೆ. ಈ ಸಂಬಂಧ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ(NRAI) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಿವೃತ್ತ ನ್ಯಾಯಾಧೀಶರು ಮತ್ತು ಶೂಟಿಂಗ್‌ನಲ್ಲಿ ಮೊದಲ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಹೇಳಿದೆ. 

ಬಿಡುಗಡೆ ಮಾಡಲು ಉದ್ದೇಶಿಸಿರುವ ಹಣವನ್ನು ಸಮಿತಿಯ ಮೂಲಕ ರವಾನಿಸಬೇಕು ಮತ್ತು ವಿಶ್ವಕಪ್ ಪಂದ್ಯಾವಳಿಯ ಮುಕ್ತಾಯದ ನಂತರ ಸಮಿತಿಯು ತನ್ನ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯದ ಮುಂದೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.

SCROLL FOR NEXT