ಕ್ರೀಡೆ

ಹಿಜಾಬ್ ತ್ಯಜಿಸಿದ್ದ ಇರಾನ್ ಚೆಸ್ ಆಟಗಾರ್ತಿಗೆ ಸ್ಪೇನ್ ನಿಂದ ಪೌರತ್ವ!

Srinivasamurthy VN

ನವದೆಹಲಿ: ಹಿಜಾಬ್ ತ್ಯಜಿಸಿ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿ ಮೂಲಭೂತವಾದಿಗಳ ಕೆಂಗಣ್ಣಿಗೆ ತುತ್ತಾಗಿದ್ದ ಇರಾನ್ ಆಟಗಾರ್ತಿ ಸಾರಾ ಖಡೆಮ್ ಅವರಿಗೆ ಸ್ಪೇನ್ ದೇಶ ತನ್ನ ಪೌರತ್ವ (Citizenship) ನೀಡಿದೆ.

2019ರ ಡಿಸೆಂಬರ್ ನಲ್ಲಿ ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದಿದ್ದ  FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಇರಾನ್ ಚೆಸ್ ಆಟಗಾರ್ತಿ ಸಾರಾ ಖಡೆಮ್ ಹಿಜಾಬ್ ಇಲ್ಲದೆ ಸ್ಪರ್ಧಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಸರಸದತ್ ಖಡೆಮಲಶರೀಃ ಅವರು ಸಾರಾ ಖಾಡೆಂ ಎಂದು ಪ್ರಸಿದ್ಧವಾಗಿದ್ದರು. 

ಈ ಘಟನೆ ಬಳಿಕ ಇರಾನ್ ನಲ್ಲಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದ ಸಾರಾ ಖಡೆಮ್ ಜೀವ ಬೆದರಿಕೆಗಳೂ ಬಂದಿತ್ತು. ಸಾರಾ ಖಡೆಮ್ ಅವರಿಗೆ 'ಇರಾನ್‌ಗೆ ಹಿಂತಿರುಗಬೇಡ' ಎಂದು ಅಲ್ಲಿನ ಮೂಲಭೂತವಾದಿ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಮಾತ್ರವಲ್ಲದೇ ಇರಾನ್‌ನಲ್ಲಿರುವ ಖಾಡೆಂ ಅವರ ಸಂಬಂಧಿಕರು ಮತ್ತು ಪೋಷಕರಿಗೆ ಬೆದರಿಕೆಗಳು ಬಂದಿವೆ ಎನ್ನಲಾಗಿದೆ.

ಇರಾನ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳ ಅಡಿಯಲ್ಲಿ ಹೆಡ್ ಸ್ಕಾರ್ಫ್ ಕಡ್ಡಾಯವಾಗಿರುವ ಹಿಜಾಬ್ ಇಲ್ಲದೆ ಸ್ಪರ್ಧಿಸಿದ ಹಿನ್ನಲೆಯಲ್ಲಿ ಇರಾನ್‌ಗೆ ಚೆಸ್ ಆಟಗಾರ್ತಿ ಸಾರಾ ಖಡೆಮ್ ಅವರಿಗೆ ಬೆದರಿಕೆ ಹಾಕಲಾಗಿತ್ತು. ಇದರ ಬೆನ್ನಲ್ಲೇ ಜೀವ ಭಯದಿಂದ ಮತ್ತು ಇರಾನ್ ಮೂಲಭೂತವಾದಿಗಳ ಎಚ್ಚರಿಕೆಯಿಂದಾಗಿ  25 ವರ್ಷದ ಚೆಸ್ ಆಟಗಾರ್ತಿ ಸಾರಾ ಖಡೆಮ್ ಸ್ಪೇನ್‌ಗೆ ತೆರಳಿದ್ದರು. ಇದೀಗ ಸ್ಪೇನ್ ದೇಶ ಸಾರಾ ಖಡೆಮ್ ಅವರಿಗೆ ಪೌರತ್ವ ನೀಡಿದೆ.

ಖಡೆಮ್ ಅವರ ಪ್ರಕರಣವನ್ನು ತಮ್ಮ ಸರ್ಕಾರ "ವಿಶೇಷ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು" ಮಂಗಳವಾರದಂದು ಖಡೆಮ್ ಗೆ ಪೌರತ್ವವನ್ನು ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಸ್ಪೇನ್‌ನ ಅಧಿಕೃತ ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.

ಇರಾನ್ ನಲ್ಲಿ ಹಿಜಾಬ್ ಧರಿಸದೇ ಬಂದಿದ್ದ 22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿಯನ್ನು ಬಂಧಿಸಿದ್ದ ಪೊಲೀಸರು ಅವರ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಇರಾನ್ ನಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಹಿಂಸಾಚಾರ ನಡೆದಿತ್ತು. ಈ ವೇಳೆ ಇರಾನ್ ಮಹಿಳೆಯರು ಬಹಿರಂಗವಾಗಿಯೇ ಹಿಜಾಬ್ ತೆಗೆದು ಪ್ರತಿಭಟಿಸಿದ್ದರು.

ಇದೇ ಪ್ರತಿಭಟನೆಯ ಹಂತವಾಗಿ ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದಿದ್ದ  FIDE ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಇರಾನ್ ಚೆಸ್ ಆಟಗಾರ್ತಿ ಸಾರಾ ಖಡೆಮ್ ಹಿಜಾಬ್ ಇಲ್ಲದೆ ಸ್ಪರ್ಧಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು.
 

SCROLL FOR NEXT