ಕ್ರೀಡೆ

ಮಹಿಳಾ ಜ್ಯೂನಿಯರ್ ಹಾಕಿ ಏಷ್ಯಾ ಕಪ್: ಕೊರಿಯಾವನ್ನು 2-1 ಗೋಲುಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದ ಭಾರತ!

Nagaraja AB

ಜಪಾನ್: ಕಾಕಾಮಿಗಾರಾದಲ್ಲಿ ಭಾನುವಾರ ನಡೆದ 2023ರ ಕಿರಿಯ ಮಹಿಳೆಯರ ಏಷ್ಯಾಕಪ್ ಹಾಕಿಯಲ್ಲಿ ಕೊರಿಯಾ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿದ ಭಾರತ ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿದೆ.

ಇದೇ ವರ್ಷ ನಡೆಯಲಿರುವ ಎಫ್‌ಐಎಚ್ ಮಹಿಳಾ ಜೂನಿಯರ್ ವಿಶ್ವಕಪ್ 2023ರಲ್ಲಿ ಭಾರತ ಈಗಾಗಲೇ ಸ್ಥಾನ ಪಡೆದುಕೊಂಡಿದ್ದು,  ಜಪಾನ್ 2-1 ಗೋಲುಗಳಿಂದ ಚೀನಾವನ್ನು ಸೋಲಿಸಿ  ವಿಶ್ವಕಪ್‌ಗೆ ಅರ್ಹತೆ ಪಡೆದ ಮೂರನೇ ತಂಡವಾಯಿತು. ಪಂದ್ಯ ಆರಂಭಗೊಂಡ 21ನೇ ನಿಮಿಷದಲ್ಲಿ ಭಾರತದ ಪರ ಹಾಗೂ ಅನು ಹಾಗೂ 40 ನಿಮಿಷದಲ್ಲಿ ನೀಲಂ ಗೋಲು ಗಳಿಸಿದರೆ ಕೊರಿಯಾ ಪರ ಸಿಯೊಯಾನ್ ಪಾರ್ಕ್  ಮಾತ್ರ ಏಕೈಕ ಗೋಲು ದಾಖಲಿಸಿದರು.

ಎರಡೂ ತಂಡಗಳು ಆಕ್ರಮಣಕಾರಿ ಹಾಕಿ ಆಡಿದರೂ, ಮೊದಲ ಕ್ವಾರ್ಟರ್ ಗೋಲುರಹಿತವಾಗಿ ಕೊನೆಗೊಂಡಿತು. ಎರಡನೇ ಕ್ವಾರ್ಟರ್‌ನಲ್ಲಿ ಕೊರಿಯಾ ನಿದಾನಗತಿಯ ಆಟಕ್ಕೆ ಅಂಟಿಕೊಂಡಿತು  ಆದರೆ, ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲಾಗಿ ಪರಿವರ್ತಿಸಿದ ಅನು ಭಾರತಕ್ಕೆ  ಮುನ್ನಡೆ ತಂದುಕೊಟ್ಟರು. ಪಂದ್ಯದ ದ್ವಿತೀಯಾರ್ಧದಲ್ಲಿ ನೀಲಂ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದರು. ಮೂರನೇ ಕ್ವಾರ್ಟರ್ 2-1 ಸ್ಕೋರ್‌ನೊಂದಿಗೆ ಕೊನೆಗೊಂಡಿತು. 

ತಮ್ಮ ಚೊಚ್ಚಲ ಮಹಿಳಾ ಜೂನಿಯರ್ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಸಹಾಯಕ ಸಿಬ್ಬಂದಿ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ.

SCROLL FOR NEXT