ಕ್ರೀಡೆ

ಬ್ರಿಜ್ ಭೂಷಣ್ ಸಿಂಗ್ ಗೆ ನಾರ್ಕೋ ಪರೀಕ್ಷೆಗೆ ಒಳಪಡಲು ಕುಸ್ತಿ ಪಟುಗಳ ಸವಾಲು

Srinivas Rao BV

ನವದೆಹಲಿ: ನಾರ್ಕೋ ಪರೀಕ್ಷೆಗೆ ಒಳಗಾಗುವಂತೆ ಡಬ್ಲ್ಯುಎಫ್ಐ ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಗೆ ಕುಸ್ತಿ ಪಟುಗಳು ಸವಾಲು ಹಾಕಿದ್ದಾರೆ. 

ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲೀಕ್ ಬ್ರಿಜ್ ಭೂಷಣ್ ಸಿಂಗ್ ಗೆ ಸವಾಲು ಹಾಕಿದ್ದು, ನೀವು ತಪ್ಪಿತಸ್ಥರಲ್ಲ ಎಂಬ ವಿಶ್ವಾಸ ನಿಮಗೆ ಇದ್ದರೆ, ನಾರ್ಕೋ ಪರೀಕ್ಷೆಗೆ ಒಳಪಡಿ ಎಂದು ಸವಾಲು ಹಾಕಿದ್ದಾರೆ. ಏಳು ಕ್ರೀಡಾಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿದ್ದರು.
    
ಸಿಂಗ್ ತಮ್ಮ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಸ್ಪರ್ಧೆಗಳನ್ನು ನಡೆಸುವುದನ್ನು ವಿರೋಧಿಸುತ್ತೇವೆ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಎಚ್ಚರಿಸಿದ್ದಾರೆ.

"ನಾರ್ಕೋ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ನಾನು ಡಬ್ಲ್ಯುಎಫ್‌ಐ ಅಧ್ಯಕ್ಷರಿಗೆ ಸವಾಲು ಹಾಕುತ್ತೇನೆ. ನಾವು ಸಹ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ. ಸತ್ಯ ಬಹಿರಂಗವಾಗಿ ಹೊರಬರಲಿ, ಯಾರು ಅಪರಾಧಿಗಳು ಮತ್ತು ಯಾರು ಅಲ್ಲ ಎಂಬುದು ತಿಳಿಯಲಿ" ಎಂದು ಮಲಿಕ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಎಲ್ಲಾ ಸ್ಪರ್ಧೆಗಳು ಐಒಎಯ ತಾತ್ಕಾಲಿಕ ಪ್ಯಾನೆಲ್ ಅಡಿಯಲ್ಲಿ ನಡೆಸಬೇಕೆಂದು ನಾವು ಬಯಸುತ್ತೇವೆ. ಡಬ್ಲ್ಯುಎಫ್‌ಐ ಮುಖ್ಯಸ್ಥರು ಯಾವುದೇ ರೀತಿಯಲ್ಲಿ ಭಾಗಿಯಾದರೆ, ನಾವು ಅದನ್ನು ವಿರೋಧಿಸುತ್ತೇವೆ" ಎಂದು ಮತ್ತೋರ್ವ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಹೇಳಿದ್ದಾರೆ.

ಸಿಂಗ್ ವಿರುದ್ಧದ ತನಿಖೆಯ ನಿಧಾನಗತಿಯನ್ನು ಪ್ರತಿಭಟಿಸಲು ಕುಸ್ತಿಪಟುಗಳು ಗುರುವಾರ ಕಪ್ಪು ಪಟ್ಟಿಗಳನ್ನು ಧರಿಸಲು ನಿರ್ಧರಿಸಿದ್ದಾರೆ. ಅಪ್ರಾಪ್ತ ವಯಸ್ಕ ಕ್ರೀಡಾಪಟು ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಹಾಕಿರುವ ಆರೋಪದಲ್ಲಿ ಸಿಂಗ್ ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಏಪ್ರಿಲ್ 28 ರಂದು WFI ಅಧ್ಯಕ್ಷರ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 

SCROLL FOR NEXT