ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 28 ಚಿನ್ನದ ಪದಕ ಸೇರಿ 107 ಪದಕ ಗೆದ್ದು, ಐತಿಹಾಸಿಕ ಸಾಧನೆಯೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಅಂತ್ಯಗೊಳಿಸಿದೆ.
ಭಾರತೀಯ ಅಥ್ಲೀಟ್‌ಗಳು ಕಳೆದ ಹದಿನೈದು ದಿನಗಳಿಂದ ತಮ್ಮ ರಕ್ತ, ಬೆವರು ಮತ್ತು ಶ್ರಮದಿಂದ ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 107 ಪದಕಗಳನ್ನು ಗೆದ್ದಿದ್ದಾರೆ ಮತ್ತು 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಭರವಸೆ ನೀಡಿದ್ದಾರೆ.
ಭಾರತ ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಪದಕ ಗೆದ್ದು ಹೊಸ ದಾಖಲೆ ಬರೆದಿದೆ. ಈ ಮುಂಚೆ ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ ಭಾರತ 70 ಪದಕಗಳನ್ನು ಗೆದ್ದಿರುವುದು ಅತಿ ದೊಡ್ಡ ಸಾಧನೆಯಾಗಿತ್ತು.
ಈ ಬಾರಿ ಬಹುತೇಕ ಎಲ್ಲಾ ವಿಭಾಗದಲ್ಲಿಯೂ ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸಿದ್ದು, 655 ಸ್ಪರ್ಧಿಗಳು ಭಾಗಿಯಾಗಿದ್ದರು. ಈ ತಂಡ ಕೊಟ್ಯಂತರ ಭಾರತೀಯ ಅಭಿಮಾನಿಗಳ ನಿರೀಕ್ಷೆಯನ್ನು ನಿಜ ಮಾಡುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಮಹಿಳೆಯರ ಕಬಡ್ಡಿಯಲ್ಲಿ ಚಿನ್ನ, ಭಾರತ 100 ಪದಕಗಳ ಸಾಧನೆ! ಪ್ರಧಾನಿ ಮೋದಿ ಅಭಿನಂದನೆ
ಏಷ್ಯನ್ ಗೇಮ್ಸ್ ಈ ಬಾರಿ ಭಾರತ 28 ಚಿನ್ನದ ಪದಕ, 38 ಬೆಳ್ಳಿ ಪದಕ ಹಾಗೂ 41 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಚೀನಾ ಇದ್ದರೆ, ಎರಡನೇ ಸ್ಥಾನವನ್ನು ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ.