ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಅರ್ಜಿ ವಜಾಗೊಳಿಸಿರುವುದಕ್ಕೆ ಭಾರತೀಯ ಒಲಿಂಪಿಕ್ ಸಂಸ್ಥೆ (IOA) ತೀವ್ರ ಬೇಸರ ವ್ಯಕ್ತಪಡಿಸಿದೆ.
ತೀರ್ಪು ಪ್ರಕಟಿಸಲು ಆಗಸ್ಟ್ 16ರವರೆಗೆ ಗಡುವು ವಿಸ್ತರಣೆಯನ್ನು ಘೋಷಿಸಿದ್ದರೂ, ಇಂದು ಸಂಜೆಯೇ ತೀರ್ಪು ಹೊರಬಂದಿದೆ. ಇದು ನಿಜಕ್ಕೂ ಬೇಸರದ ಸಂಗತಿ. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ನ ತಾತ್ಕಾಲಿಕ ವಿಭಾಗವು ಈ ನಿರ್ಧಾರ ಹೇಳಿದೆ. ವಿನೇಶ್ ಫೋಗಟ್ ಅವರು 2024ರ ಆಗಸ್ಟ್ 7ರಂದು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸಿಎಎಸ್ ತೀರ್ಪು ನೀಡಿದೆ.
ತನ್ನ ಮೇಲ್ಮನವಿಯಲ್ಲಿ ವಿನೇಶ್ ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮಾನ್ ಲೋಪೆಜ್ ಅವರೊಂದಿಗೆ ಜಂಟಿ ಬೆಳ್ಳಿಯನ್ನು ನೀಡಬೇಕೆಂದು ಒತ್ತಾಯಿಸಿದರು. ಚಿನ್ನದ ಪದಕವನ್ನು ಅಮೆರಿಕದ ಸಾರಾ ಆನ್ ಹಿಲ್ಡೆಬ್ರಾಂಡ್ ಅವರು ತಮ್ಮದಾಗಿಸಿಕೊಂಡರು.
IOA ಅಧ್ಯಕ್ಷೆ ಪಿಟಿ ಉಷಾ ಅವರು, ಈ ತೀರ್ಪಿನ ಕುರಿತಂತೆ 'ಆಘಾತ ಮತ್ತು ನಿರಾಶೆ' ವ್ಯಕ್ತಪಡಿಸಿದ್ದಾರೆ. ಕ್ರೀಡಾಪಟುಗಳು ಎದುರಿಸುತ್ತಿರುವ ಶಾರೀರಿಕ ಮತ್ತು ಮಾನಸಿಕ ಒತ್ತಡಗಳನ್ನು ಪರಿಗಣಿಸಲು ವಿಫಲವಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW)ನ 'ಅಮಾನವೀಯ ನಿಯಮಗಳ' ಮೇಲೂ ಒಕ್ಕೂಟ ವಾಗ್ದಾಳಿ ನಡೆಸಿತು.
ಫೈನಲ್‌ನ ಪಂದ್ಯಕ್ಕೂ ಮುನ್ನ 100 ಗ್ರಾಂ ಅಧಿಕ ತೂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ವಿನೇಶ್ ಪೊಗಟ್ ರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ತನಗೆ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್ ಒತ್ತಾಯಿಸಿ ಮೇಲ್ಮನವಿ ಸಲ್ಲಿಸಿದ್ದರು.