ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಭಾರತದ ನೀರಜ್ ಚೋಪ್ರಾ ತಮ್ಮ ಪ್ರದರ್ಶನವನ್ನು ಉತ್ತಮ ಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ಲೂಸಾನ್ ಡೈಮಂಡ್ ಲೀಗ್‌ನಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ತಮ್ಮ ದಾಖಲೆಯ 90 ಮೀಟರ್ ಎಸೆತವನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ.
ಹೌದು.. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಚಿನ್ನದ ಪದಕ ವಂಚಿತರಾಗಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಭಾರತದ ಸ್ಟಾರ್ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ, ಇದೀಗ ಮತ್ತೊಮ್ಮೆ ಎರಡನೇ ಸ್ಥಾನ ಪಡೆದಿದ್ದಾರೆ. ಗುರುವಾರ ತಡರಾತ್ರಿ ನಡೆದ ಫೈನಲ್ ಈವೆಂಟ್‌ನಲ್ಲಿ, ಕೊನೆಯ ಪ್ರಯತ್ನದಲ್ಲಿ ನೀರಜ್ ಭರ್ಜಿಯನ್ನು 89.49 ಮೀಟರ್ ದೂರ ಎಸೆಯುವ ಮೂಲಕ ಈ ಋತುವಿನ ಅತ್ಯುತ್ತಮ ಎಸೆತವನ್ನು ದಾಖಲಿಸಿದರು. ಇದು ಅವರ ಪ್ಯಾರಿಸ್ ಒಲಿಂಪಿಕ್ಸ್ ಎಸೆತಕ್ಕಿಂತಲೂ ಉತ್ತಮ ಪ್ರಯತ್ನವಾಗಿದೆ.
ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ಎಸೆದು ಎರಡನೇ ಸುತ್ತಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು. ಅತ್ತ ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ದೂರ ಎಸೆದು ಮೂರನೇ ಸ್ಥಾನ ಪಡೆದರು.
ಲೂಸಾನ್‌ನಲ್ಲಿ ನಾಲ್ಕನೇ ಸುತ್ತಿನವರೆಗೂ ನೀರಜ್ ನಾಲ್ಕನೇ ಸ್ಥಾನದಲ್ಲಿದ್ದರು. ಇದು ಅವರ ನೀರಸ ಪ್ರದರ್ಶನ ಎಂದು ಹೇಳಲಾಗಿತ್ತು. ಆದರೆ ಐದನೇ ಪ್ರಯತ್ನದಲ್ಲಿ 85.58 ಮೀಟರ್ ದೂರವನ್ನು ಎಸೆದು ಮುನ್ನಡೆ ಸಾಧಿಸಿದರು. ಅವರು ತಮ್ಮ ಆರನೇ ಮತ್ತು ಅಂತಿಮ ಪ್ರಯತ್ನದಲ್ಲಿ ಅತ್ಯುತ್ತಮ ಎಸೆತವನ್ನು ದಾಖಲಿಸಿ 89.49 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ, ಪ್ಯಾರಿಸ್ ಒಲಿಂಪಿಕ್ಸ್ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡಿ ಸಂತಸ ಪಟ್ಟರು.
ಮತ್ತೆ ಫೌಲ್ ಭೀತಿಯಲ್ಲಿದ್ದ ನೀರಜ್
ಇನ್ನು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸತತ ಫೌಲ್ ಎಸೆತಗಳನ್ನು ದಾಖಲಿಸಿದ್ದ ನೀರಜ್, ಈ ಬಾರಿಯೂ ಲೂಸಾನ್ ನಲ್ಲಿಯೂ ಆರನೇ ಎಸೆತವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದರು. ಆದರೆ ಅವರ ಐದನೇ ಸುತ್ತಿನ ಪ್ರಯತ್ನ 85.58 ಮೀಟರ್ ಅವರನ್ನು ಉಳಿಸಿತು. ಏಕೆಂದರೆ ಐದು ಸುತ್ತುಗಳ ನಂತರ ಅಗ್ರ ಮೂರು ಸ್ಥಾನ ಪಡೆದವರಿಗೆ ಮಾತ್ರವೇ ಅಂತಿಮ ಮತ್ತು ಆರನೇ ಎಸೆತಕ್ಕೆ ಅವಕಾಶ ನೀಡಲಾಗುತ್ತದೆ.