ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕ್ರೀಡಾಭಿಮಾನಿಗಳಿಗೆ ವಿಶ್ವದ ಶ್ರೇಷ್ಠ ಜಾವೆಲಿನ್ ಥ್ರೋಪಟುಗಳನ್ನು ಪ್ರಮುಖವಾಗಿ ಭಾರತದ ಚಿನ್ನದ ಹುಡುದ ನೀರಜ್ ಚೋಪ್ರಾ ಅವರು ಸ್ಪರ್ಧಿಸುವುದನ್ನು ನೇರವಾಗಿ ನೋಡುವ ಅವಕಾಶ ಶನಿವಾರ ಸಿಗಲಿದೆ.
2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ.1 ನೀರಜ್ ತಮ್ಮ ಹೆಸರಿನಲ್ಲಿ ಆರಂಭಿಸಿರುವ ನೀರಜ್ ಚೋಪ್ರಾ ಕ್ಲಾಸಿಕ್ ಅಂತಾರಾಷ್ಟ್ರೀಯ ಜಾವೆಲಿನ್ ಕೂಟ, ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.
ನೀರಜ್ ಸೇರಿ ಭಾರತದ ಐವರು ಹಾಗೂ ಏಳು ಮಂದಿ ವಿದೇಶಿಗರು ಸೇರಿ ಒಟ್ಟು 12 ಅಫೀಟ್‌ಗಳು ಚೊಚ್ಚಲ ಆವೃತ್ತಿಯ ಎನ್ ಕ್ಲಾಸಿಕ್ ಚಾಂಪಿಯನ್ ಶಿಪ್‌ಗಾಗಿ ಸ್ಪರ್ಧೆಗಿಳಿಯಲಿದ್ದಾರೆ.
ವಿಶ್ವ ಅಥ್ಲೆಟಿಕ್ಸ್ ಈ ಕೂಟಕ್ಕೆ 'ಎ' ದರ್ಜೆ ಮಾನ್ಯತೆ ನೀಡಿದ್ದು, ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂತರಾಷ್ಟ್ರೀಯ ಜಾವೆಲಿನ್ ಕೂಟ ನಡೆಯಲಿದೆ. ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಇದೊಂದು ಹೊಸ ಅಧ್ಯಯ ಎನಿಸಿದೆ.
ಈ ಕೂಟದಲ್ಲಿ ಸ್ಪರ್ಧಿಸಲಿರುವ 12 ಅಥ್ಲೀಟ್'ಗಳ ಪೈಕಿ ಐವರು ಈಗಾಗಲೇ ಸೆಪ್ಟೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ವಿಶ್ವಚಾಂಪಿಯನ್ ಶಿಪ್‌ಗೆ ಅರ್ಹತೆ ಪಡೆದಿದ್ದು, ಉಳಿದವರು 85.50 ಮೀ. ದೂರ ತಲುಪಿದರೆ ಅರ್ಹತೆ ಸಿಗಲಿದೆ.
ನೀರಜ್ ಚೋಪ್ರಾ ಈ ಕೂಟವನ್ನು ತಮ್ಮ ತವರು ಹರ್ಯಾಣದ ಪಂಚಕುಲಾದಲ್ಲಿ ನಡೆಸಲು ಇಚ್ಚಿಸಿದರು. ಆದರೆ, ಅಲ್ಲಿನ ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ ಸಮಸ್ಯೆಯಿಂದಾಗಿ ಕೂಟವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಮೇ 24ರಂದು ನಿಗದಿಯಾಗಿದ್ದ ಕೂಟವು, ಭಾರತ-ಪಾಕಿಸ್ತಾನ ಯುದ್ಧ ಪರಿಸ್ಥಿತಿಯಿಂದಾಗಿ ಮುಂದೂಡಲ್ಪಟ್ಟಿತ್ತು.
ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಿಗದಿಯಾಗಿರುವ ಈ ಕ್ರೀಡಾಕೂಟವನ್ನು ಚೋಪ್ರಾ ಮತ್ತು ಜೆಎಸ್'ಡಬ್ಲ್ಯೂ ಸ್ಪೋರ್ಟ್ಸ್ ಜಂಟಿಯಾಗಿ ಆಯೋಜಿಸಿದ್ದು, ವಿಶ್ವ ಅಥ್ಲೆಟಿಕ್ಸ್ ಮತ್ತು ಭಾರತ ಅಥ್ಲೆಟಿಕ್ಸ್ ಫೆಡರೇಶನ್ (AFI) ಅನುಮೋದಿಸಿದೆ. ಇದಕ್ಕೆ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್-ಲೆವೆಲ್ ಸ್ಥಾನಮಾನವನ್ನೂ ನೀಡಿದೆ, ಇದು ಕ್ರೀಡಾಕೂಟದ ಜಾಗತಿಕ ಪ್ರಸ್ತುತತೆಯನ್ನು ಗುರುತಿಸುತ್ತದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೋಪ್ರಾ, ‘ಇಂತಹದೊಂದು ದೊಡ್ಡ ಮಟ್ಟದ ಜಾವೆಲಿನ್ ಕೂಟ ನಡೆಯುತ್ತದೆ ಎಂದೂ ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಇದೀಗ ಅದು ನಡೆಯಲಿದೆ ಎಂಬುದೇ ನನಗೆ ಪುಳಕ ಮೂಡಿಸುತ್ತಿದೆ. ಇಲ್ಲಿ ಭಾಗವಹಿಸುವ ಅಥ್ಲೀಟ್‌ಗಳು ಎಷ್ಟು ದೂರ ಥ್ರೋ ಮಾಡಲಿದ್ದಾರೆ, ಯಾವ ಪದಕ ಜಯಿಸುವರು ಎಂಬಿತ್ಯಾದಿ ವಿಷಯಗಳನ್ನು ಪಕ್ಕಕ್ಕಿಟ್ಟುಬಿಡಿ. ಈ ಆಟದ ಸೊಬಗನ್ನು ಮನದುಂಬಿ ಆಸ್ವಾದಿಸಿಕೊಳ್ಳಿ. ಏಕೆಂದರೆ, ಈ ಕೂಟವು ಭಾರತದ ಕ್ರೀಡಾಕ್ಷೇತ್ರಕ್ಕೆ ಹೊಸ ದಿಕ್ಸೂಚಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಕ್ರೀಡಾಕೂಟಕ್ಕೆ ಎಲ್ಲರಿಂದಲೂ ಬೆಂಬಲ ಲಭಿಸಿದೆ. ಕರ್ನಾಟಕ ಸರ್ಕಾರ, ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ (ಕೆಒಎ), ವಿಶ್ವ ಆ್ಯತ್ಲೆಟಿಕ್ಸ್, ಪ್ರಾಯೋಜಕರು… ಹೀಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ನಾವು ಈ ಕೂಟವನ್ನು ನಿರೀಕ್ಷೆಗೂ ಮಿಗಿಲಾಗಿ ನಡೆಸಬಹುದು ಎಂದು ನನಗೆ ಅನಿಸುತ್ತದೆ’ ಎಂದು ತಿಳಿಸಿದರು.
ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ಆರಂಭ ಇದಾಗಿದೆ. ಜರ್ಮನಿ ಮೊದಲಾದ ದೇಶಗಳಲ್ಲಿ ವಾರಕ್ಕೊಂದರಂತೆ ಎ, ಬಿ, ಸಿ ವಿಭಾಗಗಳ ಇಂತಹ ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ. ಭಾರತದಲ್ಲಿ 4-5 ವಿಶ್ವ ದರ್ಜೆಯ ಕ್ರೀಡಾಕೂಟಗಳು ನಡೆಯಬೇಕು, ಕ್ರೀಡಾಪಟುಗಳಿಗೆ ಅವಕಾಶ ಸಿಗಬೇಕು. ಜನರು ಇದನ್ನು ನೋಡಬೇಕು. ನಮ್ಮ ಕ್ರೀಡೆಗೆ ಇದು ಬಹಳ ಒಳ್ಳೆಯದು ಎಂದರು.
ಭಾರತದ ಅತ್ಯಂತ ಯಶಸ್ವಿ ಒಲಿಂಪಿಕ್ ಅಥ್ಲೀಟ್ ನಮ್ಮ ದೇಶಕ್ಕೆ ವಿಶ್ವ ದರ್ಜೆಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ತರುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಈ ಕ್ರೀಡಾ ಕ್ರಾಂತಿಯನ್ನು ಬೆಂಬಲಿಸಲು ಕರ್ನಾಟಕ ಬದ್ಧವಾಗಿದೆ ಮತ್ತು ನೀರಜ್ ಅವರಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.