ನವದೆಹಲಿ: ಟಾಟಾ ಸ್ಟೀಲ್ ತನ್ನ ಜೆಮ್ ಶೆಡ್ ಪುರ ಎಫ್‌ಸಿ (ಫುಟ್‌ಬಾಲ್ ಕ್ಲಬ್) ನಲ್ಲಿನ ಸಂಪೂರ್ಣ ಪಾಲನ್ನು ಕೇವಲ 100 ರೂಗಳ ಸಾಂಕೇತಿಕ ಮೊತ್ತಕ್ಕೆ ಚರ್ಚಿಲ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್‌ಗೆ ಮಾರಾಟ ಮಾಡಿದೆ. ಈ ಒಪ್ಪಂದದೊಂದಿಗೆ ಕಂಪನಿಯು ಇಂಡಿಯನ್ ಸೂಪರ್ ಲೀಗ್ (ISL) ಕ್ಲಬ್‌ನ ಮಾಲೀಕತ್ವದಿಂದ ಹೊರಬಂದಂತಾಗಿದೆ.
ಶುಕ್ರವಾರ ಜೆಮ್ ಶೆಡ್ ಪುರ ಎಫ್‌ಸಿಯನ್ನು ನಿರ್ವಹಿಸುವ 'ಜಮ್‌ಶೆಡ್‌ಪುರ ಫುಟ್‌ಬಾಲ್ ಅಂಡ್ ಸ್ಪೋರ್ಟಿಂಗ್ ಪ್ರೈವೇಟ್ ಲಿಮಿಟೆಡ್' (JFSPL) ನಲ್ಲಿನ ತನ್ನ ಸಂಪೂರ್ಣ ಶೇ. 100 ರಷ್ಟು ಪಾಲನ್ನು ಗೋವಾ ಮೂಲದ 'ಚರ್ಚಿಲ್ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಪ್ರೈವೇಟ್ ಲಿಮಿಟೆಡ್'ಗೆ ವರ್ಗಾಯಿಸಲು ಟಾಟಾ ಸ್ಟೀಲ್ ಅನುಮೋದನೆ ನೀಡಿತು.
ಟಾಟಾ ಸ್ಟೀಲ್ JFSPL ನಲ್ಲಿ 4.08 ಕೋಟಿ ಷೇರುಗಳನ್ನು ಹೊಂದಿತ್ತು. ಈ ವರ್ಗಾವಣೆಗಾಗಿ ಟಾಟಾ ಸ್ಟೀಲ್ ಮತ್ತು ಚರ್ಚಿಲ್ ಬ್ರದರ್ಸ್ ಷೇರು ಖರೀದಿ ಒಪ್ಪಂದಕ್ಕೂ ಸಹಿ ಹಾಕಿವೆ. ಈ ವಹಿವಾಟಿಗೆ ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಶನ್ (AIFF) ಮತ್ತು ಇತರ ಅಗತ್ಯ ಪ್ರಾಧಿಕಾರಗಳಿಂದ ಅನುಮೋದನೆಗಳು ಸಿಗಬೇಕಿದ್ದರೂ, ಆಗಸ್ಟ್ 31 ರೊಳಗೆ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ವಹಿವಾಟು ಜೆಮ್ ಶೆಡ್ ಪುರ ಎಫ್‌ಸಿಯ ಐಎಸ್‌ಎಲ್ (ISL) ಕ್ರೀಡಾ ಪರವಾನಗಿ (ಲೈಸೆನ್ಸ್) ಹಾಗೂ 12 ಆಟಗಾರರು ಮತ್ತು ಇಬ್ಬರು ತರಬೇತುದಾರರೊಂದಿಗಿನ ಒಪ್ಪಂದಗಳನ್ನು ಒಳಗೊಂಡಿದೆ. ಚರ್ಚಿಲ್ ಬ್ರದರ್ಸ್ ಸೆಪ್ಟೆಂಬರ್ 2026 ರಿಂದ ಆ ಒಪ್ಪಂದಗಳ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ಜೆಮ್‌ಶೆಡ್‌ಪುರ ಎಫ್‌ಸಿ ಮೌಲ್ಯ ಕೇವಲ 100 ರೂ. ಇರುವುದೇಕೆ? ಇದಕ್ಕೆ ಉತ್ತರ ಕ್ಲಬ್‌ನ ಹಿಂದಿರುವ ಕಂಪನಿಯ ಆರ್ಥಿಕ ಸ್ಥಿತಿಯಲ್ಲಿದೆ. JFSPL 2026 ರ ಆರ್ಥಿಕ ವರ್ಷದಲ್ಲಿ 32.23 ಕೋಟಿ ರೂ ವಹಿವಾಟನ್ನು ವರದಿ ಮಾಡಿತ್ತು. ಆದಾಗ್ಯೂ, ಮಾರ್ಚ್ 2026 ರ ವೇಳೆಗೆ ಅದರ ನಿವ್ವಳ ಮೌಲ್ಯವು ಋಣಾತ್ಮಕ (negative) 5.8 ಕೋಟಿ ರೂಪಾಯಿಗಳಷ್ಟಿತ್ತು. ಹೀಗಾಗಿ ಜೆಮ್‌ಶೆಡ್‌ಪುರ ಎಫ್‌ಸಿ ಜನಪ್ರಿಯ ಹೆಸರು, ಕ್ರೀಡಾ ಪರವಾನಗಿ ಮತ್ತು ಐಎಸ್‌ಎಲ್ ವ್ಯವಸ್ಥೆಯಲ್ಲಿ ಸ್ಥಾನವನ್ನು ಹೊಂದಿದ್ದರೂ, ಕಂಪನಿಯು ಸ್ವತಃ ದೊಡ್ಡ ಪ್ರಮಾಣದ ನಗದು ಸಂಪನ್ಮೂಲವನ್ನು ಹೊಂದಿರಲಿಲ್ಲ. ಆದ್ದರಿಂದ, 100 ರೂ. ಈ ಮೊತ್ತವನ್ನು ಲಾಭದಾಯಕ ಕ್ರೀಡಾ ಫ್ರ್ಯಾಂಚೈಸ್‌ನ ಸಾಂಪ್ರದಾಯಿಕ ಮೌಲ್ಯಮಾಪನ ಎಂದು ಪರಿಗಣಿಸುವ ಬದಲು, ಒಂದು ಸಾಂಕೇತಿಕ ವರ್ಗಾವಣೆ ಎಂದು ನೋಡುವುದೇ ಸೂಕ್ತ.
ಭಾರತೀಯ ಫುಟ್‌ಬಾಲ್ ಬಾಲ್ ಪರಿಸ್ಥಿತಿ ಸಂಕಷ್ಟದಲ್ಲಿರುವ ಸಮಯದಲ್ಲಿ ಈ ಒಪ್ಪಂದ ನಡೆದಿದೆ. ಐಎಸ್‌ಎಲ್ (ISL) ತನ್ನ ವಾಣಿಜ್ಯ ಮಾದರಿ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಕುರಿತಾದ ಪ್ರಶ್ನೆಗಳನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ಲೀಗ್‌ನ ಮಾಧ್ಯಮ ಹಕ್ಕುಗಳ ಮೌಲ್ಯವು ತೀವ್ರವಾಗಿ ಕುಸಿದಿದೆ. ಜಿಯೋಸ್ಟಾರ್ (JioStar) ವಾರ್ಷಿಕವಾಗಿ ಪಾವತಿಸುತ್ತಿದ್ದ 275 ಕೋಟಿ ರೂ.ಗಳಿಂದ, 2025-26ರ ಋತುವಿಗಾಗಿ ಫ್ಯಾನ್‌ಕೋಡ್ (FanCode) ಕೇವಲ 8.6 ಕೋಟಿ ರೂ.ಗಳ ಪ್ರಸ್ತಾಪವನ್ನು ಮುಂದಿಟ್ಟಿದೆ. ಟಾಟಾ ಸ್ಟೀಲ್ ಐಎಸ್‌ಎಲ್‌ನಿಂದ ಹೊರಬರುತ್ತಿದೆ. ಫುಟ್‌ಬಾಲ್‌ನಿಂದಲ್ಲ. ಟಾಟಾ ಸ್ಟೀಲ್ ಉನ್ನತ ಶ್ರೇಣಿಯ ಕ್ಲಬ್‌ನ ಮಾಲೀಕತ್ವದಿಂದ ಹಿಂದೆ ಸರಿಯುತ್ತಿದೆ. ಆದರೆ ಅದು ಫುಟ್‌ಬಾಲ್‌ನಿಂದ ಸಂಪೂರ್ಣವಾಗಿ ದೂರವಾಗುತ್ತಿಲ್ಲ.
ಸ್ಥಳೀಯ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ತಳಮಟ್ಟದ ಹಾಗೂ ಯುವ ಫುಟ್‌ಬಾಲ್ ಅನ್ನು ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಕಂಪನಿ ತಿಳಿಸಿದೆ. ಅಲ್ಲದೆ, ತಳಮಟ್ಟದ ಕ್ರೀಡಾ ಅಭಿವೃದ್ಧಿಗಾಗಿ ತನ್ನ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ವಹಿಸಲು ಮತ್ತು ಅವುಗಳನ್ನು ಮರುಬಳಕೆ ಮಾಡಲು ಅದು ಯೋಜಿಸಿದೆ.
ಟಾಟಾ ಕಂಪನಿ 1987ರಲ್ಲಿ ಜೆಮ್ ಶೆಡ್ ಪುರದಲ್ಲಿ ಫುಟ್‌ಬಾಲ್ ಅಕಾಡೆಮಿಯನ್ನು ಸ್ಥಾಪಿಸಿತು. ಕಂಪನಿಯ ಪ್ರಕಾರ, ಇದು 300 ಕ್ಕೂ ಹೆಚ್ಚು ಕೆಡೆಟ್‌ಗಳಿಗೆ ತರಬೇತಿ ನೀಡಿದೆ ಮತ್ತು ಅವರಲ್ಲಿ 150 ಮಂದಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2017 ರಲ್ಲಿ ಟಾಟಾ ಸ್ಟೀಲ್ ಐಎಸ್‌ಎಲ್ (ISL) ನಲ್ಲಿ ಫ್ರಾಂಚೈಸಿಗಾಗಿ ಯಶಸ್ವಿಯಾಗಿ ಬಿಡ್ ಮಾಡಿದಾಗ ಜೆಮ್ ಶೆಡ್ ಪುರ ಎಫ್‌ಸಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಈ ಕ್ಲಬ್ ಭಾರತೀಯ ಫುಟ್‌ಬಾಲ್‌ನಲ್ಲಿ ಪರಿಚಿತ ಹೆಸರಾಗಿದೆ ಮತ್ತು ತನ್ನ ತವರು ಪಂದ್ಯಗಳನ್ನು 'ದಿ ಫರ್ನೇಸ್' (The Furnace) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಆಡುತ್ತದೆ.
ಚರ್ಚಿಲ್ ಬ್ರದರ್ಸ್‌ಗೆ ಐಎಸ್‌ಎಲ್‌ನಲ್ಲಿ ಹೊಸ ಅವಕಾಶ: ಚರ್ಚಿಲ್ ಬ್ರದರ್ಸ್‌ಗೆ, ಈ ಒಪ್ಪಂದವು ದೇಶದ ಉನ್ನತ ಫುಟ್‌ಬಾಲ್ ಲೀಗ್‌ಗೆ ಮರಳುವ ಹಾದಿಯನ್ನು ತೋರಿಸಿದೆ. ಗೋವಾ ಮೂಲದ ಈ ಕ್ಲಬ್ ಸುಮಾರು ನಾಲ್ಕು ದಶಕಗಳ ಇತಿಹಾಸವನ್ನು ಹೊಂದಿದೆ ಮತ್ತು ಎರಡು ಬಾರಿ ಐ-ಲೀಗ್ (I-League) ಅನ್ನು ಗೆದ್ದಿದೆ. ಈಗ ಅದು ಜೆಮ್ ಶೆಡ್ ಪುರ ಎಫ್‌ಸಿಯ ಐಎಸ್‌ಎಲ್ ಕ್ರೀಡಾ ಪರವಾನಗಿ ಹಾಗೂ ಅದಕ್ಕೆ ಸಂಬಂಧಿಸಿದ ಆಟಗಾರರು ಮತ್ತು ತರಬೇತುದಾರರ ಒಪ್ಪಂದಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.
ಕಾಗದದ ಮೇಲೆ ನೋಡಿದರೆ, ಟಾಟಾ ಸ್ಟೀಲ್ ಒಂದು ವೃತ್ತಿಪರ ಫುಟ್‌ಬಾಲ್ ಕ್ಲಬ್ ಅನ್ನು ಒಂದು ಉತ್ತಮ ಭೋಜನದ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದೆ. ಆದರೆ ಇಲ್ಲಿನ ಮುಖ್ಯ ವಿಷಯ ಆ 100 ರೂಪಾಯಿಗಳಲ್ಲ. ಭಿಲ್ವಾರಿಯಾಫಿನ್‌ಸರ್ವ್‌ನ (BhilwariaFinserv) ಪಾಲುದಾರರಾದ ಅಭಿಷೇಕ್ ಭಿಲ್ವಾರಿಯಾ ಅವರ ಪ್ರಕಾರ, "ಕೇವಲ 100 ರೂಪಾಯಿಗಳ ಸಾಂಕೇತಿಕ ಮೊತ್ತಕ್ಕೆ ಟಾಟಾ ಸ್ಟೀಲ್ ಐಎಸ್‌ಎಲ್‌ನಿಂದ ಹೊರಬಂದಿರುವುದು, ಭಾರತೀಯ ಕ್ಲಬ್ ಫುಟ್‌ಬಾಲ್ ಎದುರಿಸುತ್ತಿರುವ ವಾಣಿಜ್ಯಿಕ ಸವಾಲುಗಳ ಸ್ಪಷ್ಟ ಪ್ರತಿಬಿಂಬವಾಗಿದೆ ಎಂದಿದ್ದಾರೆ.
ಪರವಾನಗಿ ಮತ್ತು ಒಪ್ಪಂದಗಳನ್ನು ಚರ್ಚಿಲ್ ಬ್ರದರ್ಸ್‌ಗೆ ವರ್ಗಾಯಿಸುವ ಮೂಲಕ, ಅವರು ತಮ್ಮ ಆಟಗಾರರು ಮತ್ತು ಸಿಬ್ಬಂದಿಯ ಜೀವನೋಪಾಯವನ್ನು ಜವಾಬ್ದಾರಿಯುತವಾಗಿ ರಕ್ಷಿಸಿದ್ದಾರೆ; ಜೊತೆಗೆ, ಹೆಚ್ಚಿನ ವೆಚ್ಚದ ವಾಣಿಜ್ಯ ಲೀಗ್ ರಚನೆಗಳಿಂದ ದೂರವಾಗಿ, ಶುದ್ಧ ತಳಮಟ್ಟದ ಅಭಿವೃದ್ಧಿಯತ್ತ ಮರಳುವ ಸ್ಪಷ್ಟ ಸಂಕೇತವನ್ನೂ ನೀಡಿದ್ದಾರೆ.