ನ್ಯೂಜೆರ್ಸಿ: ನಿನ್ನೆ ರಾತ್ರಿ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ಸ್ಪೇನ್ ಫಿಫಾ (FIFA) ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಫೆರಾನ್ ಟೊರೆಸ್ ಗೆಲುವಿನ ಗೋಲು ಗಳಿಸಿದರು. ತಂಡ ಮತ್ತು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಮತ್ತೊಂದು ಪ್ರಮುಖ ಅಂಶ ಎಲ್ಲರ ಗಮನ ಸೆಳೆಯಿತು. ಅದೇ ಫಿಫಾ ವಿಶ್ವಕಪ್ ಟ್ರೋಫಿಯ ಮೌಲ್ಯ ಮತ್ತು ಅದರ ಇಟಾಲಿಯನ್ ವಿನ್ಯಾಸಕರ ಕಥೆ!
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತ ತಂಡ ನಿಜವಾದ ಟ್ರೋಫಿಯನ್ನು ಎತ್ತಿಹಿಡಿದರೂ, ಅದನ್ನು ಶಾಶ್ವತವಾಗಿ ತಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕಾರಣ, ಫಿಫಾ ಮೂಲ ಟ್ರೋಫಿಯನ್ನು ಸ್ವಿಜರ್ಲ್ಯಾಂಡ್‌ನ ಜ್ಯೂರಿಚ್‌ನಲ್ಲಿರುವ 'ಫಿಫಾ ವರ್ಲ್ಡ್ ಫುಟ್‌ಬಾಲ್ ಮ್ಯೂಸಿಯಂ'ಗೆ ಹಿಂತಿರುಗಿಸುತ್ತದೆ. ಅಲ್ಲದೇ ವಿಜೇತರಿಗೆ ಅದರ ಪ್ರತಿಕೃತಿಯನ್ನು (a replica) ನೀಡಲಾಗುತ್ತದೆ.
ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯು ಅತ್ಯಂತ ಅಮೂಲ್ಯವಾದ ಟ್ರೋಫಿಗಳಲ್ಲಿ ಒಂದಾಗಿದೆ. 18-ಕ್ಯಾರೆಟ್ ಚಿನ್ನದಿಂದ ಮಾಡಲ್ಪಟ್ಟಿರುವ ಇದು 4.93 ಕೆಜಿ ತೂಕವನ್ನು ಹೊಂದಿದೆ. 1974 ರಲ್ಲಿ ಇದನ್ನು ಪರಿಚಯಿಸಿದಾಗಿನಿಂದ, ಅದರಲ್ಲಿರುವ ಚಿನ್ನದ ಅಂಶದ ಆಧಾರದ ಮೇಲೆ ಇದರ ಮೌಲ್ಯವನ್ನು ಸುಮಾರು 7,13,000 ರಿಂದ 8,00,000 ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಅದರ ಇತಿಹಾಸ ಮತ್ತು ಪ್ರತಿಷ್ಠೆಯ ಕಾರಣದಿಂದಾಗಿ ಇದರ ನೈಜ ಮೌಲ್ಯವು 20 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚು ಎಂದು ಪರಿಗಣಿಸಲಾಗಿದೆ.
ಫಿಫಾ ವಿಶ್ವಕಪ್ ಟ್ರೋಫಿಯ ವಿನ್ಯಾಸಗೊಳಿಸಿದ್ದು ಯಾರು?
ಫಿಫಾ ವಿಶ್ವಕಪ್ ಟ್ರೋಫಿಯ ವಿನ್ಯಾಸಕಾರ 'ಜಿ.ಡಿ.ಇ. ಬರ್ಟೋನಿ ಎಸ್.ಆರ್.ಎಲ್.' (G.D.E. Bertoni Srl) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಸಿದ್ಧ ಇಟಾಲಿ ಶಿಲ್ಪಿ ಸಿಲ್ವಿಯೊ ಗಜ್ಜಾನಿಗಾ. ಹೊಸ ವಿಶ್ವಕಪ್ ಟ್ರೋಫಿಗಾಗಿ ಫಿಫಾ ವಿನ್ಯಾಸ ಸ್ಪರ್ಧೆಯನ್ನು ಘೋಷಿಸಿದ ನಂತರ, ಮಿಲನ್‌ನ ಬ್ರೆರಾ ಜಿಲ್ಲೆಯಲ್ಲಿರುವ ಅವರ ಸ್ಟುಡಿಯೋದಲ್ಲಿ ಇದನ್ನು ಸಿದ್ಧಪಡಿಸಲಾಯಿತು. ಇದಕ್ಕಾಗಿ 50 ಕ್ಕೂ ಹೆಚ್ಚು ವಿನ್ಯಾಸಗಳನ್ನು ಸಲ್ಲಿಸಲಾಗಿತ್ತು. ಅವುಗಳಲ್ಲಿ ಸಿಲ್ವಿಯೊ ಗಜ್ಜಾನಿಗಾ ಅವರ ವಿನ್ಯಾಸವು ಸಂಪೂರ್ಣವಾಗಿ ಸಿದ್ಧಪಡಿಸಿದ ಏಕೈಕ ಮಾದರಿಯಾಗಿತ್ತು.
ಭೂಮಿಯನ್ನು ಇಬ್ಬರು ಕ್ರೀಡಾಪಟುಗಳು ತಮ್ಮ ಕೈಗಳಲ್ಲಿ ಮೇಲಕ್ಕೆತ್ತಿ ಹಿಡಿದಿರುವಂತೆ ಇದನ್ನು ಕೆತ್ತಲಾಗಿದೆ. ಹಲವು ವಿನ್ಯಾಸಗಳ ನಂತರ ಇದನ್ನು ಅಂತಿಮಗೊಳಿಸಲಾಗಿದೆ ಎಂದು ಅವರ ಮಗ ಜಾರ್ಜಿಯೊ ಅವರೊಂದಿಗಿನ ಸಂದರ್ಶನದಲ್ಲಿ, ಸಿಲ್ವಿಯೊ ಹೇಳಿಕೊಂಡಿದ್ದಾರೆ.
ಅಲ್ಲದೇ ಈ ಟ್ರೋಫಿ ಏನನ್ನು ಸಂಕೇತಿಸುತ್ತದೆ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದು, ಗ್ಲೋಬ್ ಜಗತ್ತನ್ನು ಸಂಕೇತಿಸುತ್ತದೆ ಮತ್ತು ಕ್ರೀಡಾಪಟುಗಳ ಒರಟು ಮೇಲ್ಮೈ ಹೋರಾಟ, ನಿರ್ಣಯ ಮತ್ತು ಯಶಸ್ವಿಯಾಗಲು ಅಗತ್ಯವಾದ ಪ್ರಯತ್ನವನ್ನು ಸೂಚಿಸುತ್ತದೆ. ಆಕೃತಿಗಳ ಎತ್ತಿದ ಕೈಗಳು ವಿಜಯದ ಸಂಕೇತ ಹಾಗೂ ಫುಟ್ಬಾಲ್ ಅಭಿಮಾನಿಗಳಲ್ಲಿ ಹಂಚಿಕೊಳ್ಳಲಾದ ಸಂತೋಷವನ್ನು ಸಹ ಸೂಚಿಸುತ್ತವೆ. ಸಿಲ್ವಿಯೋ ಗಜ್ಜಾನಿಗ FIFA ವಿಶ್ವಕಪ್ ಟ್ರೋಫಿಯ ಜೊತೆಗೆ, UEFA ಕಪ್ ಮತ್ತು ಯುರೋಪಿಯನ್ ಸೂಪರ್ ಕಪ್ ಅನ್ನು ಸಹ ವಿನ್ಯಾಸಗೊಳಿಸಿದ್ದಾರೆ.