ಒಲೆಯ ಬೆಂಕಿಯಿಂದ ಬದುಕಾಗುತ್ತದೆ
ಒಳಗೆ ಕೆಂಡ ಮಿನು ಮಿನುಗಿ
ಒಲೆಯನ್ನೇ ಸುಡುತ್ತಿರುತ್ತದೆ
-
ಹೂ ಬಿರಿಯುತ್ತಿದೆ ಗಿಡದ ಮೇಲೆ
ದೇವರ ಕೊರಳಿನಲ್ಲಿ
ಬಾಡುವ ಅವಸರದಲ್ಲಿ
-
ನಾ ಕೊಂಡ ಚಿನ್ನದುಂಗುರದ ನಡುವೆ
ನನ್ನ ಬೆರಳು ಬಂಧಿಯಾಗಿದೆ
-
ಊರನ್ನೇ ಸುತ್ತುವ ಚಪ್ಪಲಿಗಳಿಗೆ
ಮನೆಯೊಳಗೆ ಪ್ರವೇಶವಿಲ್ಲ
-
ದೇವರ ಫೋಟೋ
ಸಿಕ್ಕಿಸಿಕೊಂಡ ಮೊಳೆಗೆ
ಇನ್ನಿಲ್ಲದ ಭಾರ
-
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ
ಗಣೇಶ ಬೀಡಿ ಮೇಲೆ
ಗಣಪತಿ ಚಿತ್ರ
ಅಮ್ಮನೆದೆ ಕಚ್ಚಿದ, ಆಗಷ್ಟೇ ಹುಟ್ಟಿದ
ನಾಯಿ ಮರಿಗಳಿಗೆ
ಅಪ್ಪನ ಚಿಂತೆಯೇ ಇಲ್ಲ!
ಹರಿಯುವ ನದಿ ಸೇರುವುದು ಕಡಲಿಗೆ
ಅಲ್ಲಲ್ಲಿ ರೈತರು ಬೆಳೆದ ಪೈರಿಗೆ
ಸಂಭ್ರಮದ ಓಲಾಟ
-
ಮಳೆಗಾಲ, ಕಪ್ಪೆ ವಟಗುಟ್ಟುತ್ತಿದೆ ಮಿಲನಕ್ಕೆ
ಅಲ್ಲೇ ಕದ್ದು ಮುಚ್ಚಿ ಸೇರಿದ್ದ
ಜೋಡಿಗೆ ಇನ್ನಿಲದ ತೊಂದರೆ
-
ಚಂದ್ರನ ಬಗ್ಗೆ ನೂರು ಕವಿತೆ ಕಟ್ಟಿದ ಕವಿಗಳಿಗೆ
ಅವನಿಗೊಂದು ಜೋಡಿ ಹುಡುಕಲಾಗಲಿಲ್ಲ
ಅವನೊಬ್ಬ ಹೊಳೆವ ಏಕಾಂಗಿ
= ಮೋಹನ ವಿ. ಕೊಳ್ಳೇಗಾಲ