ಮಕರಂದ/ದೋಣಿ

ಓ ಹೈಸ್ಕೂಲೇ, ನಿನಗೆ ಶರಣು...

ಹೈಸ್ಕೂಲು ಅಂದರೇನೇ ಹಾಗೆ. ಅದೊಂದು, ಆ ಕಡೆ ದೊಡ್ಡವರೂ ಅಲ್ಲದ, ಈ ಕಡೆ ಚಿಕ್ಕವರೂ ಅಲ್ಲದ...

ಹೈಸ್ಕೂಲು ಅಂದರೇನೇ ಹಾಗೆ. ಅದೊಂದು, ಆ ಕಡೆ ದೊಡ್ಡವರೂ ಅಲ್ಲದ, ಈ ಕಡೆ ಚಿಕ್ಕವರೂ ಅಲ್ಲದ, ಬಾಲ್ಯದ ಆ ತುಂಟತನವನ್ನೂ ಇನ್ನೂ ಬಿಟ್ಟಿರದ ಒಂದು ಸುಂದರ ಗುಂಪು. ನಾವು ಕಾಲೇಜು ಜೀವನದ ಮಜಾದ ಬಗ್ಗೆ ಎಷ್ಟೇ ಬಣ್ಣಿಸಿದರೂ ಸಹ ಹೈಸ್ಕೂಲು ಜೀವನ ಕಟ್ಟಿಕೊಡುವ ನೆನಪುಗಳು, ನೂರು ಭಾವಗಳು ಎಂದಿಗೂ ಮರೆಯಲಾರದಂತವುಗಳು. ಈ ಕಾರಣಗಳಿಗಾಗಿಯೇ ಹೈಸ್ಕೂಲು ಇಷ್ಟವಾಗಿಬಿಡುತ್ತದೆ...
ಹೈಸ್ಕೂಲು ಎಂದರೆ ಥಟ್ಟನೆ ನೆನಪಾಗೋದು ಆ ತರ್ಲೆ ತುಂಟಾಟಗಳು. ಮೋಜು ಮಸ್ತಿಗಳು. ತುಂಬಿದ ಕ್ಲಾಸಲ್ಲಿ ನಿದ್ದೆಮಾಡಿ ಶಿಕ್ಷಕರ ಕೈಯಿಂದ ಹೊಡೆಸಿಕೊಂಡಿದ್ದು, ಕಾಗದದ ರಾಕೆಟ್ ಮಾಡಿ ಹುಡುಗಿಯರ ಡೆಸ್ಕಿಗೆ ಎಸೆದು ಅವರಿಂದ ಮಂಗಳಾರತಿ ಮಾಡಿಸಿಕೊಂಡಿದ್ದು, ಕ್ವಿಜ್ ಕಾಂಪಿಟೇಶನ್ನಲ್ಲಿ ಗೆದ್ದು ವಿರೋಧಿ ಗುಂಪಿನ ಮುಂದೆ ಡ್ಯಾನ್ಸ್ ಮಾಡಿ ಅವರ ಹೊಟ್ಟೆ ಉರಿಸಿದ್ದು. ಸ್ವಾತಂತ್ರ್ಯ ದಿನದಂದು ಸ್ವಲ್ಪ ಅಳುಕಿನಿಂದಲೇ ಡ್ಯಾನ್ಸ್ ಮಾಡಿದ್ದು, ಪ್ರತಿಭಾ ಕಾರಂಜಿಯಲ್ಲಿ ಹುಡುಗಿಯರ ಸೊಂಟ ಹಿಡಿದು ಡ್ಯಾನ್ಸ್ ಮಾಡಿದ್ದು, ಗೆಳೆಯರೆಲ್ಲಾ ಸೇರಿ ಹುಡುಗಿಯರ ಬ್ಯಾಗಿನಿಂದ ಕದ್ದು ಊಟ ಮಾಡಿ ಅವರಿಗೆ ಉಪವಾಸ ಕೆಡವಿದ್ದು, ಹೊಸ ವರ್ಷದ ದಿನ ಸಂಭ್ರಮದಿಂದ ಎಲ್ಲರಿಗೂ ಸಿಹಿ ಹಂಚಿದ್ದು, ಕ್ರಿಕೆಟ್ ಬ್ಯಾಟಿಗಾಗಿ ಜಗಳ ಕಾದಿದ್ದು, ಮೊದಲ ಬಾರಿ ಆ ಚಿಗುರು ಮೀಸೆಗೆ ಬ್ಲೇಡ್ ಹಾಕಿ ಗೆಳೆಯರಿಂದ ನಗೆಪಾಟಲಿಗೀಡಾಗಿದ್ದು, ಹುಡುಗಿಯರ ಫೇವರಿಟ್ ಆದ ಹುಣಸೇ ಹಣ್ಣನ್ನು ತಂದು ಅವರ ಮುಂದೇ ಅಣುಕಿಸಿ ತಿಂದಿದ್ದು, ಮೊದಲ ಬಾರಿ ಲವ್ ಲೆಟರ್ ಬರೆದು ಹೆಡ್ಮಾಸ್ಟರ್ ಕಡೆಯಿಂದ ಉಗಿಸಿಕೊಂಡಿದ್ದು... ಉಸ್ಸಪ್ಪಾ!  ಹೀಗೆ ಎಗ್ಗಿಲ್ಲದೇ ಮಗ್ಗಲು ತಿರುವುತ್ತವೆ ಆ ಹೈಸ್ಕೂಲು ಲೈಫಿನ ನೆನಪುಗಳು...
ಹಾಗಂತ ಆ ನಮ್ಮ ಹೈಸ್ಕೂಲು ಬರೀ ಮೋಜಿನ ತಾಣವಾಗಿರಲಿಲ್ಲ. ಭವಿಷ್ಯದ ಬಗೆಗಿನ ಸುಂದರ ಕನಸುಗಳಿದ್ದವು. ಆ ದಿಶೆಯಲ್ಲಿ ಎಡೆಬಿಡದ ಪ್ರಯತ್ನವಿತ್ತು. ನಿಷ್ಕಲ್ಮಶ ಸ್ನೇಹವಿತ್ತು. ನಮ್ಮಲ್ಲೇ ಆರೋಗ್ಯಕರ ಸ್ಪರ್ಧೆಯಿತ್ತು. ನಾವಿಂದು ಉನ್ನತ ಶಿಕ್ಷಣ ಕಲಿಯುತ್ತಿದ್ದರೆ, ನಾಲ್ಕು ಜನರ ಮುಂದೆ ಗೌರವದಿಂದ ತಿರುಗಾಡುತ್ತಿದ್ದರೆ, ಮುಂದೆ ನಾವು ಜೀವನದಲ್ಲಿ ಯಶಸ್ಸು ಸಾಧಿಸುವ ಆತ್ಮವಿಶ್ವಾಸವಿದ್ದರೆ ಅದಕ್ಕೆ ಆ ಹೈಸ್ಕೂಲು ಹಾಕಿದ ಭದ್ರ ಬುನಾದಿಯೇ ಕಾರಣ...
ಆದರೆ ಹೈಸ್ಕೂಲಿನಲ್ಲಿ ಜೊತೆಯಾಗಿಯೇ ಕಳೆದ, ಮೂರು ವರ್ಷ ಒಂದೇ ಬೆಂಚಿನಲ್ಲಿ ಕುಳಿತ ಗೆಳೆಯ ಗೆಳತಿಯರೆಲ್ಲರೂ ದೂರವಾಗಿದ್ದಾರೆ. ನಾವೆಲ್ಲರೂ ಆ ಸುಂದರ ಹೈಸ್ಕೂಲಿನಿಂದ ದೂರ ಸಾಗಿದ್ದೇವೆ. ಏನೋ ಒಂದಿಬ್ಬರು ಗೆಳೆಯ - ಗೆಳತಿಯರು ಯಾವಗಲೋ ಒಮ್ಮೆ ಸಿಕ್ಕರೆ ಅದೇ ಹೆಚ್ಚು. ಆದರೂ ಅವರೆಲ್ಲರ ಜೊತೆ ಕಳೆದ ಆ ಸುಮಧುರ ನೆನಪುಗಳು ಇನ್ನೂ ನೆನಪಿನಾಳದಲ್ಲಿ ಅಚ್ಚಾಗಿ ಉಳಿದಿವೆ. ನಮ್ಮ ಬಂಗಾರದಂತಹ ವಿದ್ಯಾರ್ಥಿ ಜೀವನವನ್ನು ಇನ್ನೂ ಬಂಗಾರವಾಗಿಸಿದ ಆ ನಮ್ಮ ಸುಂದರ ಹೈಸ್ಕೂಲಿಗೆ, ಹೊಡೆದರೂ, ಬಡಿದರೂ ಜೀವನದ ಹಾದಿಯನ್ನು ತೋರಿಸಿದ ನೆಚ್ಚಿನ ಗುರುಗಳಿಗೆ ಧನ್ಯವಾದ ತಿಳಿಸದಿದ್ದರೆ ಹೇಗೆ ಹೇಳಿ! ಓ ಹೈಸ್ಕೂಲೇ ನಿನಗೆ ಶರಣು...

- ಬಿ. ಸೋಮಶೇಖರ್ ಸುರಪುರ...
ಪ್ರಥಮ ಎಂ.ಸಿ.ಜೆ. ವಿದ್ಯಾರ್ಥಿ, ಗುಲ್ಬರ್ಗ ವಿವಿ, ಗುಲ್ಬರ್ಗ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT