ಗುಮ್ಶುದಾ ತಲಾಶ್ ಕೇಂದ್ರ
ನಯಿ ಕೋತ್ವಾಲಿ
ದರಿಯಾಗಂಜ್
ನಯಿದಿಲ್ಲಿ -110002
ದೆಹಲಿ ದೂರದರ್ಶನದಲ್ಲಿ ನಾಪತ್ತೆಯಾದ ವ್ಯಕ್ತಿಗಳ ವಿವರಗಳನ್ನು ಹೇಳಿ, ಈ ವಿಳಾಸಕ್ಕೆ ಮಾಹಿತಿ ನೀಡುವಂತೆ ಹೇಳುತ್ತಿದ್ದದ್ದು... ನೆನಪುಂಟಾ? ಚಿಕ್ಕಂದಿನಲ್ಲಿ ಹಿಂದಿ ಅರ್ಥವಾಗದೇ ಇದ್ದರೂ ನಾಪತ್ತೆಯಾದವರ ಫೋಟೊಗಳನ್ನು ತೋರಿಸುವಾಗ ಅತೀವ ಕುತೂಹಲದಿಂದ ನೋಡುತ್ತಿದ್ದ ದಿನಗಳವು. ಹೀಗೆ ನಾಪತ್ತೆಯಾದವರು ಆಮೇಲೆ ಪತ್ತೆಯಾದರಾ? ಗೊತ್ತಿಲ್ಲ!
ಅವರೆಲ್ಲಿ ಹೋಗಿರ್ತಾರೆ? ಅವರು ಈ ಜಾಹೀರಾತುಗಳನ್ನು ಗಮನಿಸಿರ್ತಾರಾ? ಇನ್ಯಾರಾದರೂ ಅವರನ್ನು ಗುರುತು ಹಿಡಿದು ಅವರನ್ನು ಮನೆಗೆ ತಲುಪಿಸಿರ್ತಾರಾ? ಈ ರೀತಿಯ ಜಾಹೀರಾತುಗಳನ್ನು ನೋಡಿದಾಕ್ಷಣ ಇಂಥ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುವುದು ಸಹಜ.
ದಿನಪತ್ರಿಕೆಗಳನ್ನು ತೆರೆದು ನೋಡಿದರೆ ದಿನಕ್ಕೆ ಕನಿಷ್ಠ ಎರಡ್ಮೂರು ನಾಪತ್ತೆ ಪ್ರಕರಣಗಳ ಸುದ್ದಿಯಂತೂ ಇದ್ದೇ ಇರುತ್ತದೆ. ಈ ಹಿಂದೆ ಯುವತಿ ನಾಪತ್ತೆ ಎಂಬ ಸುದ್ದಿಯನ್ನು ನೋಡಿದಾಗ ಆಕೆ ಪ್ರಿಯಕರನ ಜತೆ ಓಡಿ ಹೋಗಿರ್ತಾಳೆ ಎಂದೇ ಊಹಿಸಲಾಗುತ್ತಿತ್ತು. ಆದರೆ ಈಗ ಹೆಣ್ಣೊಬ್ಬಳು ನಾಪತ್ತೆಯಾಗಿದ್ದಾಳೆ ಎಂದರೆ ಅಲ್ಲಿ ಏನೋ ಅನಾಹುತ ನಡೆದಿರುತ್ತದೆ ಎಂದೇ ಅರ್ಥ. ಪ್ರತಿ ನಿತ್ಯ ವರದಿಯಾಗುವ ಅತ್ಯಾಚಾರ ಸುದ್ದಿಗಳ ನಡುವೆ ನಾಪತ್ತೆ ಪ್ರಕರಣಗಳೂ ಹೆಚ್ಚುತ್ತಿರುವುದನ್ನು ನೋಡಿದರೆ ನಾವೆಷ್ಟು ಸುರಕ್ಷಿತರು? ಎಂಬ ಪ್ರಶ್ನೆ ನಮ್ಮನ್ನು ಕಾಡದೇ ಇರುವುದಿಲ್ಲ.
ಬಸ್ ನಿಲ್ದಾಣಗಳಲ್ಲಿ, ಜನ ಸೇರುವ ಅಡ್ಡಾದ ಗೋಡೆಗಳಲ್ಲಿಯೂ 'ನಾಪತ್ತೆ' ಜಾಹೀರಾತುಗಳನ್ನು ನೋಡಿದರೆ ಮತ್ತೆ ಅದೇ ಪ್ರಶ್ನೆ. ಅವರೆಲ್ಲಿ ಹೋದರು? ಮಸುಕು ಮಸುಕಾದ ಒಂದು ಫೋಟೊ, ಅದರ ಕೆಳಗೆ ನಾಪತ್ತೆಯಾಗಿರುವಾಗ ಅವರು ತೊಟ್ಟಿದ್ದ ಬಟ್ಟೆಯ ಬಣ್ಣ, ಮೈ ಬಣ್ಣ, ಎತ್ತರ, ಯಾವೆಲ್ಲ ಭಾಷೆಗಳಲ್ಲಿ ಮಾತನಾಡುತ್ತಾರೆ ಎಂಬ ಮಾಹಿತಿ, ಅದರ ಕೆಳಗೆ ಸಂಪರ್ಕಿಸಬೇಕಾದ ವಿಳಾಸ...
ಆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಮುದ್ದು ಮುಖದ ಬಾಲಕಿ, ಚಿಗುರು ಮೀಸೆಯ ಯುವಕ, ದೊಡ್ಡ ಬಿಂದಿಯಿರಿಸಿದ ಹೆಂಗಸು, ಸುಕ್ಕು ಮುಖದ ತಾತ... ಹೀಗೆ ಅದೆಷ್ಟೋ ಅಪರಿಚಿತ ಮುಖಗಳು. ಇವರೆಲ್ಲಿ ಹೋದರು? ಮನೆಯಿಂದ ಮುನಿಸಿಕೊಂಡು ಹೋದವರು ಕೆಲವರಾದರೆ, ಇನ್ನು ಕೆಲವರು ದಾರಿ ತಪ್ಪಿ ಹೋಗಿರಬಹುದು. ಇನ್ಯಾರೋ ಅವರನ್ನು ಅಪಹರಿಸಿರಬಹುದು. ಹಾಗೆ ಹೋದವರು ಈಗೆಲ್ಲಿದ್ದಾರೆ?
ಅವರು ಬದುಕಿದ್ದಾರಾ? ಬದುಕಿದ್ದರೆ ವಾಪಸ್ ಬರ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಅಸಾಧ್ಯವೇ.
ಕೆಲವೊಂದು ಜಾಹೀರಾತುಗಳ ಕೆಳಗೆ 'ಮಗೂ, ಬೇಗ ವಾಪಸ್ ಬಾ, ನಿನಗಾಗಿ ಅಪ್ಪ ಅಮ್ಮ ಕಾಯ್ತಾ ಇದ್ದೀವಿ' ಎಂದು ಬರೆದಿರುತ್ತಾರೆ. ಇದನ್ನು ಓದಿದಾಗ ನೀನು ಮನೆ ಬಿಟ್ಟು ಹೋಗಿರುವುದರಿಂದ ನಿನ್ನ ಅಪ್ಪ ಅಮ್ಮ ಅದೆಷ್ಟು ನೋವು ಅನುಭವಿಸುತ್ತಿದ್ದಾರೆ ಗೊತ್ತಾ? ಬೇಗ ಮನೆಗೆ ವಾಪಸ್ ಹೋಗಿ ಬಿಡು, ಯಾಕೆ ಅವರನ್ನು ಕಣ್ಣೀರು ಹಾಕಿಸ್ತೀಯಾ? ಎಂದು ಆ ಫೋಟೊ ನೋಡಿಕೊಂಡು ನಾಪತ್ತೆಯಾದ ಮಗುವಿನಲ್ಲಿ ಮಾತನಾಡಿದ್ದೂ ಇದೆ.
ವರ್ಷಗಳ ಹಿಂದೆ ನನ್ನ ಸಂಬಂಧಿಕರ ಮಗನೊಬ್ಬ ದಿಢೀರನೆ ನಾಪತ್ತೆಯಾಗಿದ್ದ. ಮೊದಲ ದಿನ ಅಲ್ಲಿ ಇಲ್ಲಿ ಹುಡುಕಿ ಸಿಗದೇ ಇದ್ದಾಗ ಪೊಲೀಸರಿಗೆ ದೂರು ಕೊಟ್ಟರು. ನಂತರ ಊರಿನ ಎಲ್ಲ ಪತ್ರಿಕೆ, ಟೀವಿಯಲ್ಲಿಯೂ ಮಗ ಕಾಣೆಯಾಗಿದ್ದಾನೆ ಎಂಬ ಜಾಹೀರಾತು ನೀಡಲಾಯಿತು. ಅವನಮ್ಮ ದೇವರ ಮೊರೆ ಹೋದರು. ಅವನು ಎಲ್ಲಿದ್ದರೂ ಹುಡುಕಿಕೊಡುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದೂ ಆಯ್ತು. ಆದರೆ ತಿಂಗಳು ಕಳೆದರೂ ಹುಡುಗ ಪತ್ತೆಯಾಗಲಿಲ್ಲ. ಕಾಣೆಯಾದ ಮಗ ಇಂದಲ್ಲ ನಾಳೆ ಬರುತ್ತಾನೆ ಎಂದು ಆ ದಂಪತಿ ಕಾಯುತ್ತಾ ಕುಳಿತಿರು. ತನ್ನ ಮಗನಂತೆ ಡ್ರೆಸ್ ಹಾಕಿಕೊಂಡಿರುವ ಯಾವುದೇ ಹುಡುಗನನ್ನು ನೋಡಿದರೂ ಅಲ್ಲಿಗೆ ಓಡೋಡಿ ಹೋಗುತ್ತಿದ್ದರು ಅಮ್ಮ. ಇನ್ಯಾವುದೋ ಅಪರಿಚಿತ ಶವ ಪತ್ತೆಯಾಗಿದೆ ಎಂಬ ಸುದ್ದಿ ಕೇಳಿದರೆ ಆ ಅಪ್ಪನ ಕಣ್ಣಲ್ಲಿ ಆತಂಕ ಕಾಣುತ್ತಿತ್ತು. ಮಗ ಬಂದೇ ಬರ್ತಾನೆ ಎಂಬ ನಿರೀಕ್ಷೆಯೊಂದಿಗೆ ಮನೆಯ ಬಾಗಿಲಲ್ಲಿ ಕುಳಿತು ದಾರಿ ನೋಡುವ, ದಿನಾ ಕಣ್ಣೀರು ಹಾಕುತ್ತಿದ್ದ ಆ ಅಮ್ಮನನ್ನು ಸಮಾಧಾನ ಮಾಡಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಮಗನಿಗೂ ನಿನ್ನದೇ ಪ್ರಾಯ. ಅವ ಇರ್ತಿದ್ರೆ ನಿನ್ನಂತೆಯೇ ಅವನು ಎಂಟನೇ ಕ್ಲಾಸಿನಲ್ಲಿರಬೇಕಿತ್ತು ಅನ್ನುತ್ತಾ, ಅವನ ವಯಸ್ಸಿನ ಯಾವುದೇ ಮಕ್ಕಳನ್ನು ನೋಡಿದರೆ, ಆ ಮಕ್ಕಳಲ್ಲಿ ತನ್ನ ಮಗನನ್ನು ಹುಡುಕುತ್ತಿದ್ದ ಅಮ್ಮ, ಆಕೆಯನ್ನು ಸಂಭಾಳಿಸಲು ಯತ್ನಿಸುವ ಅಪ್ಪ.. ಆಸರೆಯಾಗಬೇಕಾಗಿದ್ದ ಮಗನಿಗಾಗಿ ಕೊರಗುತ್ತಿರುವ ಜೀವಗಳನ್ನು ನೋಡಿದರೆ ಎಂಥವರಿಗೂ ಮರುಕ ಹುಟ್ಟುತ್ತಿತ್ತು.
ಅವನಿನ್ನು ಬರಲ್ಲ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಅವನು ಬದುಕಿದ್ದರೆ ಬಂದೇ ಬರುತ್ತಾನೆ ಎಂದು ನನ್ನ ಮನಸ್ಸು ಹೇಳಿದರೆ ಇನ್ನೊಂದೆಡೆ ಅವನು ಬದುಕಿಲ್ಲ ಎಂದು ಹೇಳುತ್ತಿದೆ. ಅವನ ನಿರೀಕ್ಷೆಯಲ್ಲಿ ದಿನಗಳು ಹೇಗೆ ಕಳೆದುಹೋದವು! ಮನುಷ್ಯ ಸತ್ತ ನಂತರ ಒಂದು ವರ್ಷದ ಅವಧಿಯಲ್ಲಿ ಅವರ ನೆನಪು, ಅಗಲಿಕೆಯ ನೋವು ತುಂಬಾ ಕಾಡುತ್ತದೆ. ವರ್ಷಗಳುರುಳುತ್ತಿದ್ದಂತೆ ಆ ನೋವಿನ ತೀವ್ರತೆ ಕಡಿಮೆಯಾಗುತ್ತಾ ಬರುತ್ತದೆ. ಆದರೆ ಬದುಕಿದ್ದೂ, ನಮ್ಮಿಂದ ದೂರ ಹೋಗಿರುವ ವ್ಯಕ್ತಿಗಳ ನೆನಪುಗಳು ನಮ್ಮನ್ನು ಬೆಂಬಿಡದೆ ಕಾಡುತ್ತಾ ಇರುತ್ತವೆ.
ಇಂದಲ್ಲ ನಾಳೆ ಅವ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ ನಮ್ಮ ಜೀವನ ಸಾಗುವಂತೆ ಮಾಡುವುದು ಕೂಡ ಇಂಥ ಘಟನೆಗಳೇ.
ಪ್ರತೀ ಹೆಜ್ಜೆಯಲ್ಲೂ, ಪ್ರತೀ ದನಿಯಲ್ಲಿಯೂ ಅವರನ್ನೇ ಹುಡುಕುವಂತೆ ಮಾಡುವ ಆ ವ್ಯಕ್ತಿಗಳು ನಮ್ಮ ಸಾವು ಬದುಕಿನ ಮಧ್ಯೆ ನಿರೀಕ್ಷೆಗಳನ್ನಿರಿಸಿ ಇನ್ನಷ್ಟು ಕಾಡಿಸುತ್ತಾರೆ.
ಇಂದು ನಮ್ಮೊಂದಿಗೆ ಇದ್ದವರು ನಾಳೆ ಇರಲ್ಲ ಎಂಬ ಸತ್ಯ ಗೊತ್ತಿದ್ದರೂ, ಜೀವನದುದ್ದಕ್ಕೂ ಅವರು ನಮ್ಮ ಜತೆ ಇರಬೇಕೆಂದು ಬಯಸುತ್ತೇವೆ. ಅವರು ನಮ್ಮಿಂದ ದೂರ ಹೋದಾಗ ಅತೀವ ನೋವನ್ನು ಅನುಭವಿಸುತ್ತೇವೆ. ಇದು ಅಗಲುವಿಕೆಯ ದುಃಖವಾದರೆ, ಅಗಲುವಿಕೆಯ ಭಯ ಇದಕ್ಕಿಂತ ನೋವು ಕೊಡುವಂಥದ್ದು. ಅವರು ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎನ್ನುವ ಭಯ ನಾವು ಸ್ಥಿಮಿತವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ನಮಗಿದ್ದ ಒಬ್ಬನೇ ಮಗ ನಮ್ಮನ್ನು ಬಿಟ್ಟು ಹೋದರೆ ಎಂಬ ಭಯ ನನ್ನನ್ನು ಕಾಡುತ್ತಲೇ ಇತ್ತು. ಈಗ ಅವನು ಬಿಟ್ಟು ಹೋಗಿದ್ದಾನೆ. ಈ ಎರಡೂ ನೋವುಗಳನ್ನು ಅನುಭವಿಸಿದರೂ ನಾಳೆ ಅವನು ಬಂದೇ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದೇನೆ. ಈ ನಿರೀಕ್ಷೆಯಿಂದಲೇ ನಾವಿಬ್ಬರೂ ಬದುಕಿದ್ದೇವೆ.
ವರ್ಷಗಳು ಕಳೆದರೂ ಮಗ ಬರಲಿಲ್ಲ, ಹೆತ್ತ ಕರುಳು ಆತನ ದಾರಿ ನೋಡುವುದನ್ನು ನಿಲ್ಲಿಸಲೂ ಇಲ್ಲ...
- ಇಬ್ಬನಿ
loveibbani@gmail.com