ಮಕರಂದ/ದೋಣಿ

ಮಳೆ... ಮನಸ್ಸು...

ಹೊರಗೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಸದ್ದು. ಮನದೊಳಗೆ ಬೆಚ್ಚನೆ ಕೂತಿದ್ದ ಭಾವಗಳ ಗುದ್ದು...

ಹೊರಗೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಸದ್ದು. ಮನದೊಳಗೆ ಬೆಚ್ಚನೆ ಕೂತಿದ್ದ ಭಾವಗಳ ಗುದ್ದು. ಕುಂತಲ್ಲೇ ಮನಸ್ಸು ಒದ್ದೆಯಾಗಿದೆ. ಕಣ್ಣಲ್ಲಿ ಕನಸು ಹೆಪ್ಪುಗಟ್ಟಿದೆ.
ಅಡ್ಡಾದಿಡ್ಡಿಯಾಗಿ ತಿರುಗುವುದನ್ನು ರೂಢಿಸಿಕೊಂಡಿರುವ ಕಾಲುಗಳಿಗೆ ಮಳೆ ಭೂಮಿಗೆ ಹೊದಿಸಿದ ಬಗ್ಗಡದ ದೆಸೆಯಿಂದ ಕಡಿವಾಣ ಬಿದ್ದಿದೆ. ಪ್ರತಿ ಹೆಜ್ಜೆ ಇಡುವ ಮುನ್ನ ಕಾಲು, ಬುದ್ಧಿಯ ಆಜ್ಞೆಗೆ ಎದುರು ನೋಡುತ್ತಿದೆ.
ಅಡೆತಡೆಗಳ ಹಾದಿಯಲ್ಲಿ ಸಾಗುವುದರಲ್ಲೂ ಒಂದು ಸುಖವಿದೆ ಎಂಬುದರ ಅರಿವಾದದ್ದು ಮಳೆಯ ಹಾವಳಿಗೆ ರೋಸಿ ಹೋಗಿ ಕೆಸರು ಗದ್ದೆಯ ರೂಪ ಧರಿಸಿದ್ದ ರಸ್ತೆಯಲ್ಲಿ ಹೆಜ್ಜೆ ಹಾಕುವಾಗಲೇ...
ಮನೆಯ ಮೂಲೆಯಲ್ಲಿ ಜಡವಾಗಿ ಬಿದ್ದಿದ್ದ ಛತ್ರಿ, ರೇನ್ಕೋಟು, ಜರ್ಕಿನ್ನುಗಳು ಮಳೆಯ ದೆಸೆಯಿಂದ ಊರೂರು ಸುತ್ತಲಾರಂಭಿಸಿವೆ. ಮನಸ್ಸು ಸೋಮಾರಿತನ ಆವಾಹಿಸಿಕೊಂಡು ಬಿದ್ದಲ್ಲೇ ಬಿದ್ದಿರಲು ಹವಣಿಸುತ್ತಿದೆ. ಯಾರನ್ನೂ ಸುಮ್ಮನಿರಲು ಬಿಡದ ಜಗದ ಹಲ್ಲಂಡೆಗಳು ಸೋಮಾರಿತನ ಹೆಚ್ಚು ಕಾಲ ಉಸಿರಾಡಿಕೊಂಡಿರಲು ಬಿಡುತ್ತಿಲ್ಲ.
ಮಳೆಗೂ ಮನಸ್ಸಿಗೂ ಕಾಣದ ಆದೆಂಥದೋ ಸಖ್ಯ. ಕೊಸರಾಡಿಕೊಂಡೇ ನಾವು ನಮಗರಿವಿಲ್ಲದಂತೆ ಮಳೆಯನ್ನು ಪ್ರೀತಿಸುತ್ತೇವೆ.
ಮಳೆ ಜೀವಂತಿಕೆಯ ಮೂರ್ತ ರೂಪ. ಅಳತೆ ಮೀರಿ ಅದು ಭೂಮಿಯೊಂದಿಗೆ ನಂಟು ಬೆಳೆಸಿಕೊಂಡರೆ ಜಗದ ಬದುಕಿನ ಆಯ ತಪ್ಪುತ್ತದೆ. ರೈತ ಕಣ್ಣೀರುಡುತ್ತಾನೆ. ಎಷ್ಟೋ ಊರುಗಳು ಇಲ್ಲವಾಗುತ್ತವೆ.
ಎಲ್ಲವನ್ನೂ ಕೃತಕವಾಗಿ ಸೃಷ್ಟಿಸಲು ಹೊರಟ ನಾವು ಮಳೆಯನ್ನೂ ಸುಮ್ಮನೆ ಬಿಟ್ಟವರಲ್ಲ. ಮೋಡ ಬಿತ್ತನೆ ಮಾಡಿದೆವು. ಮಳೆಯ ಮೇಲೆ ಹಿಡಿತ ಸಾಧಿಸಲು ಹೋದೆವು. ಆದರೆ ಮಳೆ ಅಷ್ಟು ಸುಲಭವಾಗಿ ನಮ್ಮ ತೆಕ್ಕೆಗೆ ಸರಿಯಲಿಲ್ಲ.
ನಾವೆಷ್ಟೇ ಬೈದರೂ, ಹಿಡಿಶಾಪ ಹಾಕಿದರೂ ಮಳೆ ಕ್ಯಾರೆ ಎನ್ನುವುದಿಲ್ಲ. ಮನಸ್ಸಿನ ಕೊಳೆ ತೊಳೆಯುವ ಕಾಯಕದಲ್ಲಿ ಅದು ಸದಾ ಕಾರ್ಯನಿರತ.

- ಎಚ್.ಕೆ. ಶರತ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಗೂ ಮುನ್ನ ರಷ್ಯಾದ ಸೆರ್ಗೆಯ್ ಲಾವ್ರೊವ್ ಜೊತೆ ಜೈಶಂಕರ್ ಮಹತ್ವದ ಸಭೆ!

IPL 2026: 9ನೇ ಶತಕ ಸಿಡಿಸಿದ ಕೊಹ್ಲಿ, KKR ವಿರುದ್ಧ RCB ಗೆ 6 ವಿಕೆಟ್ ರೋಚಕ ಜಯ; ಅಗ್ರಸ್ಥಾನದ ಮುಕುಟ!

ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರಕ್ಕೆ ಅವಕಾಶ: ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಆದೇಶ!

ಸೋಪಿಗೆ ಪೂಜೆ ಮಾಡಿದ Telugu ಹಾಸ್ಯನಟ ಅಲಿ; ಹಿಂದೂಗಳು ಕೆರಳುತ್ತಿದ್ದಂತೆ ಕ್ಷಮೆ ಕೇಳಿದ ಹಿರಿಯ ನಟ, Video!

BRICS ಒಮ್ಮತವನ್ನ ಒಂದು ರಾಷ್ಟ್ರ ತಡೆಯುತ್ತಿದೆ, ಅದು ಸರಿಯಲ್ಲ: ಭಾರತದ ನೆಲದಿಂದ ಅಮೆರಿಕಕ್ಕೆ Iran Dy FM ಎಚ್ಚರಿಕೆ!

SCROLL FOR NEXT