ನವದೆಹಲಿ: ಭಾರತದ ಸಾಹಿತ್ಯ ಲೋಕದ ದಿಗ್ಗಜರ ಸಾಲಿನಲ್ಲಿ ನಾನಿಲ್ಲ, ಆದರೆ ಫಿಕ್ಷನ್ ವಿಷಯಕ್ಕೆ ಬಂದರೆ ನನ್ನ ಪುಸ್ತಕಗಳೇ ಹೆಚ್ಚು ಮಾರಾಟವಾಗುತ್ತದೆ ಎಂದು ಲೇಖಕ ಚೇತನ್ ಭಗತ್ ಹೇಳಿದ್ದಾರೆ.
ಶನಿವಾರ ಸಂಜೆ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ-ದೆಹಲಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಅವರು ನಾನು ಭಾರತೀಯರಿಗಾಗಿಯೇ ಬರೆಯುತ್ತೇನೆ ಆದ್ದರಿಂದ ನನ್ನ ಪುಸ್ತಕಗಳು ಹೆಚ್ಚು ಜನಪ್ರಿಯತೆ ಗಳಿಸುತ್ತವೆ ಎಂದು ಹೇಳಿದ್ದಾರೆ.
ಸಂವಹನ ಕಾರ್ಯಕ್ರಮದಲ್ಲಿ ತಮ್ಮ ಸಾಹಿತ್ಯ ಯಾನದ ಬಗ್ಗೆ ಮಾತನಾಡಿದ ಅವರು ನನ್ನ ಮೊದಲ ಪುಸ್ತಕ 2004ರಲ್ಲಿ ಬಿಡುಗಡೆಯಾಗಿತ್ತು. ಆವಾಗ ಭಾರತದಲ್ಲಿದ್ದ ಸಾಹಿತ್ಯ ಲೋಕವೇ ಬೇರೆಯಾಗಿತ್ತು. ಹೇಗೆಂದರೆ ಆ ಕಾಲದಲ್ಲಿ ಜನರು ಉದ್ಯೋಗ ಗಳಿಸುವುದಕ್ಕಾಗಿ ಇಂಗ್ಲಿಷ್ ಕಲಿಯತೊಡಗಿದ್ದರು.
ನನಗೊತ್ತು ನಾನು ಭಾರತದ ಉತ್ತಮ ಲೇಖಕ ಅಲ್ಲ ಎಂದು. ಆದರೆ ಅತೀ ಹೆಚ್ಚು ಮಾರಾಟವಾಗುವ ಪುಸ್ತಕಗಳ ಲೇಖಕ, ನಾನು ನನ್ನ ದೇಶದ ಜನರಿಗಾಗಿ ಬರೆಯುತ್ತೇನೆ. ನಮ್ಮ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ನಾನು ಬರೆಯುತ್ತೇನೆ ಎಂದು ಚೇತನ್ ಭಗತ್ ಹೇಳಿದ್ದಾರೆ.