ಅಂತಾರಾಷ್ಟ್ರೀಯ ಖ್ಯಾತಿಯ ಬಾನ್ಸುರಿ ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಪ್ರೀತಿಯ ಶಿಷ್ಯ ಬಾಪು ಪದ್ಮನಾಭ್ ಕೂಡ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ ಬಾನ್ಸುರಿ ವಾದಕರು.
ಮನಸ್ಸಿನಲ್ಲುಂಟಾಗುವ ಭಾವವನ್ನು ಬಾನ್ಸುರಿಯಲ್ಲಿ ನುಡಿಸುವ ವಾದನ ಗಂಧರ್ವ ಬಾಪು ಪದ್ಮನಾಭ! ಇವರನ್ನು ಬಾನ್ಸುರಿ ವಾದಕ, ತತ್ವಜ್ಞಾನಿ, ದಾರ್ಶನಿಕ, ಪರಿಸರಪ್ರೇಮಿ, ವಿಜ್ಞಾನಿ, ಸಂಶೋಧಕ, ಧ್ಯಾನಯೋಗಿ ಏನು ಬೇಕಾದರೂ ಕರೆಯಬಹುದು.
ಅಂತಾರಾಷ್ಟ್ರೀಯ ಖ್ಯಾತಿಯ ಬಾನ್ಸುರಿ ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಪ್ರೀತಿಯ ಶಿಷ್ಯ ಬಾಪು ಪದ್ಮನಾಭ್ ಕೂಡ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ ಬಾನ್ಸುರಿ ವಾದಕರು. ಚೌರಾಸಿಯಾ ಅವರ ಭೇಟಿಯಾಗುವುದಕ್ಕೂ ತುಂಬಾ ಮೊದಲೇ ಅವರ ಧ್ವನಿಸುರುಳಿಗಳನ್ನು ಕೇಳುತ್ತಾ 'ಏಕಲವ್ಯನ' ರೀತಿ ಬಾನ್ಸುರಿ ಅಭ್ಯಾಸ ಮಾಡಿದ ಬಾಪು ಈಗ ಆಸ್ಟ್ರೇಲಿಯಾ, ಅರ್ಜೆಂಟೀನಾ, ಅಮೆರಿಕಗಳಲ್ಲಿ ಕಛೇರಿ ನೀಡುವ, ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ!
'ಆಂತರ್ಧ್ವನಿ' ಎಂಬ ತಮ್ಮದೇ ಸಂಗೀತ ತಂಡವನ್ನು ಹೊಂದಿರುವ ಬಾಪು ಪದ್ಮನಾಭ್ ಕಳೆದ ಐದು ವರ್ಷಗಳಿಂದ ಕರ್ನಾಟಕದ ಸಿಂಧನೂರಿನಲ್ಲಿ 'ಸೌಂಡ್ ಆ್ಯಂಡ್ ಎಮೋಷನ್' ಎಂಬ ಸಂಗೀತ ಪ್ರಯೋಗಾಲಯ ನಡೆಸುತ್ತಿದ್ದಾರೆ. ಈ ಪ್ರಯೋಗಾಲಯದಲ್ಲಿ ಶಬ್ದ ನಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ! ಶಬ್ದವೆಂದರೆ- ಗಾಳಿ ಬೀಸುವ ಶಬ್ದ, ಮಳೆಹನಿ ಶಬ್ದ, ಗಾಳಿಗೆ ಮರದ ಎಲೆಗಳು ಅಲ್ಲಾಡುವ ಶಬ್ದ, ಹಕ್ಕಿಗಳ ಕಲರವ, ಹಸಿರು ಚಿಮ್ಮುವ ಅರಣ್ಯ, ಜುಳುಜುಳು ಹರಿಯುವ ನದಿ, ಸುರಿಯುವ ಮಳೆ, ಬಿಸಿಲು ಮೂಡಿಸಿದ ಮರೀಚಿಕೆ, ನಕ್ಷತ್ರಗಳು ನಗುವ ನಟ್ಟಿರುಳ ಆಕಾಶ, ತಾಯಿಯ ಮಮತೆ, ಮಗುವಿನ ಮುಗ್ಧತೆ... ಹೀಗೆ ಒಟ್ಟು ಬದುಕಿನ ಶಬ್ದಗಳ ಭಾವಗಳನ್ನು ಸಂಗೀತದಲ್ಲಿ ಹಿಡಿದಿಡುವ ಕೆಲಸ ಮಾಡುತ್ತಿದ್ದಾರೆ.
ಬಾಪು ಪದ್ಮನಾಭ (9901770171) ಅವರು ತಮ್ಮ ಸಂಗೀತ ಪಯಣದ ಕುರಿತು ಬೈಟು ಕಾಫಿಯೊಂದಿಗೆ ವಿಸ್ತೃತವಾಗಿ ಮಾತನಾಡಿದ್ದು ಹೀಗೆ:
ನಿಮ್ಮ ಸಂಗೀತ ಯಾತ್ರೆಯ ಬಗ್ಗೆ ಹೇಳಿ?
ಜಾತ್ರೆಯಲ್ಲಿ ಅಕ್ಕ ಕೊಡಿಸಿದ ಕೊಳಲನ್ನ ನುಡಿಸಿದಾಗ 'ಇದರಲ್ಲೇನೋ ಇದೆ' ಅಂತ ಅನಿಸಲು ಪ್ರಾರಂಭವಾಯಿತು. ಅದು ನನ್ನ ಕೊಳಲಿನ ಬಯಕೆಗೆ ನಾಂದಿಯಾಯಿತು. ನಾನು ಎಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ, ಮನೆಯವರಿಗೂ ಹೇಳದೆ, ಯಾರಿಂದಲೋ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಅಡ್ರೆಸ್ ಪಡೆದು ಮುಂಬೈಗೆ ಹೊರಟೆ. ಅವರನ್ನು ಭೇಟಿಯಾಗಿ ನನ್ನ ಬಯಕೆ ಹೇಳಿಕೊಂಡೆ. ನನ್ನ ಬಳಿಯಿದ್ದ ಸಾಮಾನ್ಯ ಕೊಳಲಿನಿಂದ ಹರೀಜಿಯವರ ಎದುರು ನುಡಿಸಿದೆ. ಮಾರನೇ ದಿನ ಬರಲು ಹೇಳಿದರು. ನನಗೋ ಒಳಗೊಳಗೇ ಅಳುಕು. ಕಲಿಯಬೇಕೆಂಬ ಹಂಬಲ ಆ ಅಳುಕನ್ನು ಮೆಟ್ಟಿನಿಂತಿತ್ತು. ಕೈಯಲ್ಲಿ ಕಾಸಿಲ್ಲ, ಜೀವನ ನಿರ್ವಹಣೆ ಹೇಗೆ ಎಂಬ ಯೋಚನೆಯೆಲ್ಲ ಗೌಣವಾಗಿತ್ತು. ಮರುದಿನ ಹರೀಜಿ ಕಾರಿನಿಂದ ಇಳಿದವರೇ ನನಗೊಂದು ಕೊಳಲು ಕೊಟ್ಟು 'ಇದರಿಂದ ನುಡಿಸು' ಎಂದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ.
ಮೊದಲ ಸಾರಿ ಗುರುವಿನ ಪಕ್ಕ ಕುಳಿತಾಗ ಹೇಗನ್ನಿಸಿತು?
ಗುರೂಜಿ ಒಬ್ಬ ವಿಶಿಷ್ಟ ವ್ಯಕ್ತಿ. ಅವರ ಹತ್ತಿರ ಕೂತರೆ ಸಾಕು ನಮಗೆ ಅದೇನೋ ಒಂಥರ ಕಂಫರ್ಟ್ ಫೀಲಿಂಗ್. ಅವರೂ ಅಷ್ಟೇ ಶಿಷ್ಯನನ್ನು ನೋಡಿದ ತಕ್ಷಣ, ಆತ ಯಾವ ಮಟ್ಟದಲ್ಲಿದ್ದಾನೆ, ಅವನ ಸಾಮರ್ಥ್ಯ ಎಂಥದ್ದು ಎಂಬುದನ್ನು ತಿಳಿದುಕೊಂಡುಬಿಡುತ್ತಾರೆ. ನಾನೇನೂ ದೊಡ್ಡ ಸಂಗೀತಗಾರನಾಗಬೇಕೆಂದು ಅಲ್ಲಿಗೆ ಹೋಗಿರಲಿಲ್ಲ. ನನಗೆ ಅವರ ಸಾಮೀಪ್ಯ ಬೇಕಾಗಿತ್ತು. ಅದು ನನಗೆ ಸಿಕ್ಕಿತ್ತು.
ನಿಮ್ಮ ಮತ್ತು ಚೌರಾಸಿಯಾ ನಡುವಿನ ಸಂಬಂಧ ಹೇಗಿತ್ತು?
ಹರೀಜಿಯವರ ಸಾಮಿಪ್ಯದಲ್ಲೇ ಎಷ್ಟೊಂದು ಹಿತಾನುಭವ ಇರುತ್ತೆ. ಅವರು ನುಡಿಸುತ್ತಿರುವಾಗ ನಾವು ಸುಮ್ಮನೇ ಕೇಳುತ್ತಿದ್ದರೆ ಸಾಕು ಉಳಿದದ್ದು ತಾನಾಗೇ ಸಿದ್ಧಿಸುತ್ತದೆ. ಯಾವಾಗ ನಮ್ಮಲ್ಲಿ ಸಮರ್ಪಣಾಭಾವ ಬರುತ್ತೋ ಆಗ ಕಲೆ ತಾನಾಗೇ ಬರುತ್ತೆ. ಹರೀಜಿಯವರ ಒಡನಾಟ ಅಂಥದೊಂದು ಅದ್ಭುತ ಅನುಭವವನ್ನು ನೀಡುತ್ತದೆ. ಹರೀಜಿ ತಾವು ಸ್ಪರ್ಶಿಸಿದ ಕೊಳಲನ್ನು ಕೊಟ್ಟಾಗ ನನಗೆ ರೋಮಾಂಚನವಾಯಿತು. ಆ ಭಾವವನ್ನು ನನ್ನ ಕೊಳಲಿನಲ್ಲಿ ಕೇಳಬಹುದು! ನನ್ನ ಜೀವನದ ಸರ್ವಸ್ವವೂ ಹರೀಜಿ. ಅವರ ಒಡನಾಟ, ಸಂಗೀತವನ್ನೇ ಜೀವಿಸುವ ಅವರ ಜತೆಗಿನ ನನ್ನ ಸಂಬಂಧವನ್ನು ವ್ಯಕ್ತಪಡಿಸುವುದು ಅಸಾಧ್ಯ.
ಸಂಗೀತದಲ್ಲಿ ಹೊಸತನ ತರುವ ವಿಚಾರವೇನಾದರೂ ಇದೆಯೇ?
ಪ್ರತಿಯೊಬ್ಬ ಸಂಗೀತಗಾರನಲ್ಲೂ ಏನಾದರೂ ಹೊಸತನ್ನು ಮಾಡಬೇಕೆಂಬ ತುಡಿತ ಇದ್ದೇ ಇರುತ್ತದೆ. ಆದರೆ ಹೊಸತನ್ನು ನಾವು ನಿರ್ಮಿಸುವುದಲ್ಲ. ಅದು ಆಗಲೇ ಇರುವಂಥದ್ದು. ಅದನ್ನು ಹುಡುಕಬೇಕು. ಇದನ್ನು ಬಹುಶಃ ಎಲ್ಲ ಕಲಾವಿದರೂ ಮಾಡುತ್ತಿರುತ್ತಾರೆ. ಆದರೆ ಬಾನ್ಸುರಿಯಲ್ಲಿ ಹೊಸತನ ತರಲಿಕ್ಕೆ ಹರೀಜಿ ಏನನ್ನೂ ಬಿಟ್ಟಿಲ್ಲ. ನಮ್ಮದೇನಿದ್ದರೂ 'ರೀ ಡಿಸ್ಕವರ್' ಅಷ್ಟೆ.
ಜನರಲ್ಲಿ ಸಂಗೀತದ ಬಗೆಗಿನ ಆಸಕ್ತಿ ಕಡಿಮೆಯಾಗಿದೆ ಅನಿಸ್ತಿದೆಯಾ?
ಖಂಡಿತ ಇಲ್ಲ. ಆದರೆ ಒಬ್ಬೊಬ್ಬರಿಗೆ ಒಂದೊಂದು ಪ್ರಕಾರಗಳಲ್ಲಿ ಆಸಕ್ತಿ ಇರಬಹುದು ಅಷ್ಟೆ. ಯಾವುದೇ ಒಂದು ಸಂಗೀತ ಪದ್ಧತಿ ಅಥವಾ ಒಂದು ಘರಾಣ ಪ್ರಚಾರ ಮಾಡುವುದಕ್ಕಿಂತ ಮುಖ್ಯವಾಗಿ ಉತ್ತಮ ಸಂಗೀತವನ್ನು ಪ್ರಚಾರ ಮಾಡಬೇಕು. ಅದು ಮನರಂಜನೆಯಿಂದ, ಶಾಸ್ತ್ರಗಳಿಂದ ಆಚೆ ಬರಬೇಕು. ಹರಿದಾಸರು, ಕನಕದಾಸರು, ಪುರಂದರದಾಸರ ಸಂಗೀತವೆಲ್ಲ ಯಾವ ಘರಾಣಕ್ಕೆ ಸೇರಿದ್ದು? ಆಸಕ್ತಿ ಯಾವತ್ತೂ ಕಡಿಮೆಯಾಗುವುದೇ ಇಲ್ಲ. ಹಾಗೆ ನೋಡಿದರೆ ಆಸಕ್ತಿ ಅದ್ಭುತವಾಗಿದೆ.
ಎಂಥ ಶ್ರೋತೃ ಬೇಕೆಂದು ಬಯಸುತ್ತೀರಿ?
ಸಂಗೀತಗಾರ ತಪ್ಪು ಜಾಗದಲ್ಲಿ ಪ್ರಸ್ತುತಪಡಿಸಿದಾಗ ಆಸಕ್ತಿ ಇಲ್ಲ ಎಂಬ ಭಾವನೆ ಬರುತ್ತೆ. ನಿಜವಾಗಿ ಹೇಳಬೇಕೆಂದರೆ ಶಾಸ್ತ್ರೀಯ ಸಂಗೀತ ಗುಂಪಿಗೆ ಅಲ್ಲವೇ ಅಲ್ಲ, it is always for class.. ಭಾರತೀಯ ಸಂಗೀತ ಧ್ಯಾನದ ಸ್ಥಿತಿಯಲ್ಲಿ ಕಲಾವಿದನಿಂದ ಹೊರಹೊಮ್ಮುತ್ತದೆ. ಧ್ಯಾನ ಗುಂಪಿನಲ್ಲಿ ಸಾಧ್ಯವೇ ಇಲ್ಲ. ಹಾಗಾಗಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಕೇಳಲು ಪರಿಪಕ್ವ, ಪ್ರಬುದ್ಧ ಮನಸ್ಥಿತಿಯ ಶ್ರೋತೃ ಬೇಕು.
ಇಂದಿನ ಮಕ್ಕಳಿಗೆ ಏನು ಹೇಳಲು ಇಷ್ಟಪಡ್ತೀರಿ?
ಮಕ್ಕಳಿಗೆ ಹೇಳುವಂಥದ್ದೇನಿಲ್ಲ, ಹೇಳಬೇಕಾಗಿರುವುದು ತಂದೆ ತಾಯಿಗಳಿಗೆ. ಹಿಂದೆಂದೂ ಇರದಂಥ, ಆಧ್ಯಾತ್ಮಕ್ಕೆ ಹತ್ತಿರವಾದಂಥ ಜನರೇಷನ್ ಈಗ ಇದೆ. ಇಂದಿನ ಮಕ್ಕಳನ್ನು ನಾವು ಶಾಸ್ತ್ರದ ಆಚೆ ಬಿಡಬೇಕಾಗುತ್ತದೆ. ಅವರಲ್ಲಿರುವ ಅದ್ಭುತ ಟ್ಯಾಲೆಂಟ್ ಹಿಂದಿನ ಜನರೇಶನ್ ಏಕೆ, ನಮ್ಮಲ್ಲೇ ಇಲ್ಲ. ನಾವು ಐದು ವರ್ಷಗಳಲ್ಲಿ ಕಲಿಯುವ ರಾಗವನ್ನು ಇಂದಿನ ಮಕ್ಕಳು ವರ್ಷದಲ್ಲಿ ಕಲಿಯುತ್ತಾರೆ. ನಾವು ಸ್ವಲ್ಪ ಗೈಡ್ ಮಾಡಿದರೆ ಸಾಕು.ಅವರ ಭಾವ ಶರೀರ ಅಷ್ಟು ಬೆಳೆದಿದೆ. ನಾನು ಪಾಲಕರಲ್ಲಿ ಕೇಳಿಕೊಳ್ಳುವುದಿಷ್ಟೆ, ರಿಯಾಲಿಟಿ ಷೋಗಳನ್ನು ಟಾರ್ಗೆಟ್ ಮಾಡಿ ಮಕ್ಕಳಿಗೆ ಸಂಗೀತ ಕಲಿಸಬೇಡಿ. ಸಣ್ಣ ವಯಸ್ಸಿನಲ್ಲಿ ಮಕ್ಕಳಿಂದ ಪರ್‌ಫಾರ್ಮೆನ್ಸ್ ಮಾಡಿಸಬೇಡಿ. ಇದರಿಂದ ಅವರ ಬಾಲ್ಯವನ್ನು ಕಿತ್ತುಕೊಂಡಂತಾಗುತ್ತದೆ. ಮಕ್ಕಳನ್ನು ಶಾಸ್ತ್ರದ ಆಚೆ ಬಿಡಿ. ಚೌಕಟ್ಟನ್ನು ಹಾಕುವುದರಿಂದ ಕಲಿಯುವವರ ಸೃಜನಶೀಲತೆಯನ್ನು ನಾಶ ಮಾಡಿದಂತಾಗುತ್ತದೆ.
ನಿಮ್ಮ ಮುಂದಿನ ಯೋಜನೆ?
ಸಂಗೀತ ಕೇವಲ ಮನರಂಜನೆಗೆ ಅಲ್ಲ, ಇದು ನನ್ನ ದಾರಿ ಎಂಬುದನ್ನು ಓಶೋ ಸಮಾಧಿಯಲ್ಲಿ ಕುಳಿತು ಕೊಳಲು ನುಡಿಸಿದ ಮೇಲೆ ನನಗೆ ಜ್ಞಾನೋದಯವಾದದ್ದು. ಹೃದಯ ಭಾವವನ್ನು ಜಾಗೃತಗೊಳಿಸುವುದಕ್ಕಾಗಿಯೇ ಕಲೆಯನ್ನು ಅಭಿವೃದ್ಧಿಪಡಿಸಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಭಾವನೆಗಳನ್ನು ಹೊರಗೆಡವಲಾರದೇ ಮನಸ್ಸಿನಲ್ಲೇ ಹಿಡಿದಿಟ್ಟುಕೊಳ್ಳುತ್ತೇವೆ. ಅದನ್ನು ಮುಕ್ತವಾಗಿ ಹೊರಹಾಕಬೇಕು. ಆಗಲೇ ಮನಸ್ಸು ನಿರಾಳವಾಗುವುದು. ಭಾವವಿರೇಚನೆಗೆ ಈ ಸೌಂಡ್(ಶಬ್ದ) ಸಹಾಯಕ. ಪ್ರಕೃತಿಯಲ್ಲಿ ತುಂಬಿಕೊಂಡಿರುವ ಶಬ್ದಗಳಲ್ಲಿ ಯಾವ ಘರಾಣ ಇದೆ ಎಂಬುದು ಗೊತ್ತಿಲ್ಲ. ಆದರೆ ಇವುಗಳಿಂದ ಏನೋ ಘಟಿಸುತ್ತದೆ. ಅದನ್ನು ನಾವು ಹೇಗೆ ಉಪಯೋಗಿಸಿಕೊಳ್ಳಬಹುದು. ನಮ್ಮ ಆಲೋಚನೆಗೂ, ಶಬ್ದಕ್ಕೂ ಏನು ಸಂಬಂಧವಿದೆ? ಶಬ್ದಗಳ ಮೂಲಕ ಮೆಡಿಟೇಶನ್. ಅಂದರೆ, ಇಲ್ಲಿ ಸಂಗೀತವೇ ಮೆಡಿಟೇಶನ್.
ಬೇರೆ ಬೇರೆ ಧರ್ಮಗಳಲ್ಲಿ ಆಧ್ಯಾತ್ಮಿಕ ಬೆಳವಣಿಗೆಗೆ ಯಾವ ರೀತಿಯ ಸಂಗೀತವನ್ನು ಬಳಸಿದ್ದಾರೆ ಎಂಬುದರ ಬಗ್ಗೆ, ಹೀಲಿಂಗ್ ಮ್ಯೂಸಿಕ್ ಬಗ್ಗೆ, ಮೆಡಿಟೇಶನ್ ಬಗ್ಗೆ ಸಿ.ಡಿ.ಗಳನ್ನು ತರಬೇಕೆಂದಿದ್ದೇವೆ. ಈಗಾಗಲೇ ಕೆಲವು ಸಿ.ಡಿ.ಗಳು ಬಂದಿವೆ. ನಮ್ಮ ಮುಂದಿನ ಪೀಳಿಗೆಗೆ ಕಾಡು, ಪ್ರಕೃತಿಯನ್ನು ಸಂಗೀತದ ಮೂಲಕ ಫೀಲ್ ಮಾಡಿಸುವ, ಎಲ್ಲ ಧರ್ಮಗಳಲ್ಲಿನ ಮಂತ್ರಗಳನ್ನು ಸಂಗೀತದ ಮೂಲಕ ಸುಲಭವಾಗಿ ಅರ್ಥ ಮಾಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೀತಾ ಇವೆ. ರಾಗವನ್ನು ಅದರ ಶಾಸ್ತ್ರೀಯ ಚೌಕಟ್ಟಿನಿಂದ ಆಚೆ ತಂದು, ರಾಗದ ಸಂಪೂರ್ಣ ಭಾವವನ್ನು ಅನುಭವಿಸುವ ರೀತಿಯಲ್ಲಿ ಮಿಕ್ಸ್ ಮಾಡುವ ಪ್ರಯತ್ನ ಕೂಡ ನಡೀತಾ ಇದೆ.
ನಿಮ್ಮ ಇಷ್ಟದ ರಾಗ?
ನನಗೆ ಎಲ್ಲ ರಾಗಗಳೂ ಇಷ್ಟವೇ. ಆದರೆ ಮನಸ್ಸಿಗೆ ತುಂಬ ಮುದ ಕೊಡುವ ರಾಗ 'ಜೋಗ್'.
ನಿಮ್ಮ ಬೇರೆ ಆಸಕ್ತಿ (ಸಂಗೀತ ಬಿಟ್ಟು)?
ಸಂಗೀತ ಬಿಟ್ಟರೆ ಆಂತರಿಕ ಜಗತ್ತಿನ ಹುಡುಕಾಟ ನಡೆಸುವುದು ನನ್ನ ಆಸಕ್ತಿಯ ಹವ್ಯಾಸ!
ನಿಮ್ಮ ಕುಟುಂಬದ ಹಿನ್ನೆಲೆ?
ನನ್ನ ಹುಟ್ಟೂರು ಹರಿಹರ. ನನ್ನ ಕುಟುಂಬದಲ್ಲಿರುವವರು ಅಪ್ಪ, ಅಮ್ಮ, ತಂಗಿ. ನನ್ನ ಅಜ್ಜ ಹಾರ್ಮೋನಿಯಂ ನುಡಿಸುತ್ತಿದ್ದುದನ್ನು ಬಿಟ್ಟರೆ ಕುಟುಂಬದಲ್ಲಿ ಯಾರೂ ಸಂಗೀತಗಾರರಿಲ್ಲ.
ನಿಮಗೆ ವಿದೇಶಿ ಒಲವು ಹೆಚ್ಚು, ಏಕೆ?
ನನಗೆ ವಿದೇಶಿ ಒಲವು ಅನ್ನುವುದಕ್ಕಿಂತ ವಿದೇಶಿಯರಿಗೇ ನನ್ನ ಬಗ್ಗೆ ಒಲವು ಜಾಸ್ತಿ ಎನ್ನಬಹುದು. ಈಗ ಜಾಗತೀಕರಣದ ಯುಗ. ಪ್ರಪಂಚದ ಯಾವುದೋ ಭಾಗದಲ್ಲಿ ಕುಳಿತಿರುವವರು ನಮ್ಮಸಂಗೀತವನ್ನು ಮೆಚ್ಚಿಕೊಳ್ಳಬಹುದು. ಸಂಗೀತವನ್ನು ರಾಜ್ಯಕ್ಕೆ, ರಾಷ್ಟ್ರಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ.
ಕರ್ನಾಟಕದಲ್ಲಿ ಯಾಕೆ ಪ್ರಚಲಿತದಲ್ಲಿಲ್ಲ?
ನಾನು ಸಂಗೀತವನ್ನರಸಿ ಮುಂಬೈಗೆ ಹೋಗಿ ಅಲ್ಲೇ ದೀರ್ಘಕಾಲ ನೆಲೆಸಿದ್ದು, ನಂತರ ಉಪಜೀವನಕ್ಕೋಸ್ಕರ ಪುಣೆಯ TACO ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದುದರಿಂದ ಆ ದಿನಗಳಲ್ಲಿ ಕರ್ನಾಟಕದ ಜತೆ ಸಂಪರ್ಕ ಕಡಿಮೆಯಾಗಲು ಕಾರಣವಾಗಿರಬಹುದು.
ನಿಮ್ಮ ಉತ್ತರಾಧಿಕಾರಿ?
ಪೀಠವಿದ್ದರೆ ತಾನೇ ಉತ್ತರಾಧಿಕಾರಿ ಪ್ರಶ್ನೆ ಉದ್ಭವಿಸುವುದು? ಪೀಠವಿಲ್ಲದಿರುವಾಗ ಉತ್ತರಾಧಿಕಾರಿ ಪ್ರಶ್ನೆ ಎಲ್ಲಿಂದ ಬರುತ್ತದೆ? ಜೀವನವೆಲ್ಲ ಶಿಷ್ಯನಾಗೇ ಇರುವವ ಗುರು ಹೇಗಾದಾನು?
ಕೆಲವೊಮ್ಮೆ ಶಿಷ್ಯ ಗುರುವನ್ನು ಹುಡುಕುವುದಿಲ್ಲ, ಗುರುವೇ ಶಿಷ್ಯನನ್ನು ಹುಡುಕುತ್ತಾನೆ. ನನ್ನ ವಿಷಯದಲ್ಲೂ ಹಾಗೇ ಆಯಿತು. ಅದು ದೈವೇಚ್ಛೆ ಎಂದೇ ಹೇಳಬೇಕು.
-ಬಾಪು ಪದ್ಮನಾಭ
--ಶಶಿರೇಖಾ ಹೆಗಡೆ
ekhatumbe@yahoo.co.in