ಬೈಟುಕಾಫಿ

ಹೀಗೊಬ್ಬಳು ಶಬರಿ

ಅವರು ಕಳೆದ ಒಂದು ದಶಕದಿಂದ ಆತ ಬರುತ್ತಾನೆಂದು ಕಾಯುತ್ತಲೇ ಇದ್ದಾರೆ.

ಅವನ ಬರವಿಗಾಗಿ ಕಾಯುತ್ತಲೇ ಇದ್ದಾಳೆ!

ರಾಮಾಯಣದ ಶಬರಿ ಗೊತ್ತಲ್ಲ, ಅದೇ ರಾಮ ಬರುವನೆಂದು ಕಾದು ಕಾದು ಕೊನೆಗೂ ರಾಮನ ದರ್ಶನ ಪಡೆದ ಮಹಾನ್ ಸಾಧ್ವಿ. ಅದು ಈಗ ಏಕೆ ಅಂತೀರಾ? ಕಾರಣ ಇದೆ ಸ್ವಾಮಿ. ಕಲಿಯುಗದಲ್ಲಿಯೂ ಇಂತಹ ಒಬ್ಬ ಶಬರಿ ಇದ್ದಾರೆ. ಅವರು ಕಳೆದ ಒಂದು ದಶಕದಿಂದ ಆತ ಬರುತ್ತಾನೆಂದು ಕಾಯುತ್ತಲೇ ಇದ್ದಾರೆ. ಆದರೆ ಆತ ಬಂದಿಲ್ಲ. ಆಕೆಯ ಆಸೆಯೂ ಬತ್ತಿಲ್ಲ.
ಆಂಧ್ರಪ್ರದೇಶದ ಪೆನುಗೊಂಡ ತಾಲೂಕಿನ ಧರ್ಮಾವರಂ ಗ್ರಾಮದ ಲಕ್ಕಮ್ಮ ನಾರಪ್ಪ ದಂಪತಿಗಳಿಗೆ ಒಂದು ಗಂಡು ಮಗು. ಹುಟ್ಟಿದ ಊರಿನಲ್ಲಿ ತಮ್ಮದು ಎಂಬ ಅಂಗೈ ಅಗಲದ ಭೂಮಿಯೂ ಇಲ್ಲ. ಕೂಲಿ ಮಾಡಿ ಜೀವನ ನಡೆಸುವುದು ಅವರ ನಿತ್ಯ ಕಾಯಕ. ಆಂಧ್ರದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಅಧಿಕಾರದಲ್ಲಿದ್ದರಲ್ಲ, ಅದೇ ಸಮಯದಲ್ಲಿ ಆಂಧ್ರದಲ್ಲಿ ತೀವ್ರ ಸ್ವರೂಪದ ಬರಗಾಲ ಆವರಿಸಿತ್ತು. ನಗರಗಳ ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಕೇಂದ್ರೀಕರಿಸಿದ ಮುಖ್ಯಮಂತ್ರಿ ನಾಯ್ಡು ಹಳ್ಳಿಗಳನ್ನು ಮರೆತರು. ಪರಿಣಾಮ ಕೂಲಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ವಲಸೆ ಹೊರಟರು.
ಹಾಗೆ ವಲಸೆ ಹೊರಟವರಲ್ಲಿ ಲಕ್ಕಮ್ಮ ನಾರಪ್ಪ ಕುಟುಂಬವೂ ಇತ್ತು. ತಮ್ಮ ಮೂರು ವರ್ಷದ ಮಗುವನ್ನು ಎತ್ತಿಕೊಂಡು ಅವರು ವಲಸೆ ಬಂದಿದ್ದು ಕರ್ನಾಟಕಕ್ಕೆ. ಬಸ್ಸಿನಲ್ಲಿ ಬರಲು ಅವರ ಬಳಿ ಸಾಕಷ್ಟು ಹಣವಿಲ್ಲದ ಕಾರಣ ಲಗ್ಗೇಜ್ ತುಂಬಿಕೊಂಡು ಹೋಗುತ್ತಿದ್ದ ಯಾವುದೋ ಒಂದು ಲಾರಿ ಹಿಡಿದು, ಕೂಲಿ ಕೆಲಸ ಹುಡುಕಿಕೊಂಡು ಹೊರಟರು. ಹಾಗೆ ಅವರು ಬಂದ ಲಾರಿ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮೂಲಕ ಹಾದು ಬರುತ್ತಿತ್ತು. ತುರುವೇಕೆರೆ ತಾಲೂಕಿನ ದಂಡಿನಶಿವರ ಗ್ರಾಮದ ಹೊರವಲಯದಲ್ಲಿದ್ದ ಒಂದು ಕೆರೆಯ ಬಳಿ ಬಳಿ ಬರುವಷ್ಟರಲ್ಲಿ ಲಾರಿ ಪಂಕ್ಚರ್ ಆಯಿತು.
ಹೆಚ್ಚುವರಿ ಟೈರ್ ಇಲ್ಲದ ಕಾರಣ ದಾರಿಯಲ್ಲಿ ಬರುತ್ತಿದ್ದ ಯಾವುದೋ ಒಂದು ವಾಹನ ಹಿಡಿದು ಅದರಲ್ಲಿ ಪಂಕ್ಚರ್ ಆದ ಟೈರ್ ಹಾಕಿಕೊಂಡು ತುರುವೇಕೆರೆಗೆ ಹೊರಟ ಲಾರಿ ಚಾಲಕ ಸಹಾಯಕ್ಕೆ ಇರಲಿ ಎಂದು ನಾರಪ್ಪನನ್ನೂ ಕರೆದುಕೊಂಡು ಹೋದ. ಹೆಂಡತಿ ಮತ್ತು ಮಗುವನ್ನು ಕೆರೆಯ ಏರಿಯ ಮೇಲೆ ಟೈರ್ ಇಲ್ಲದೆ ನಿಂತಿದ್ದ ಲಾರಿಯ ಬಳಿಯೇ ಬಿಟ್ಟು ನಾರಪ್ಪ ತುರುವೇಕೆರೆಗೆ ಹೊರಟ. ಹಾಗೆ ಅವರಿಬ್ಬರೂ ಹೋದ ಸ್ವಲ್ಪ ಸಮಯದಲ್ಲಿ ಪಂಕ್ಚರ್ ಹಾಕಿಸಿಕೊಂಡು ಲಾರಿ ಚಾಲಕ ಟೈರ್ ಜೊತೆ ಬಂದ. ಆದರೆ ನಾರಪ್ಪ ಬರಲಿಲ್ಲ. ಚಾಲಕನನ್ನು ಕೇಳಿದರೆ ತನಗೆ ಗೊತ್ತಿಲ್ಲ ಎಂದು ಹೇಳಿದ.

ಬೇರೆ ಕೆಲಸದ ಮೇಲೆ ತಡವಾಗಿರಬಹುದು, ಬರುತ್ತಾನೆ ಎಂದು ಸಂಜೆಯವರೆಗೆ ಕಾದ ಲಕ್ಕಮ್ಮನಿಗೆ ನಿರಾಸೆ ಎದುರಾಯಿತೇ ಹೊರತು ನಾರಪ್ಪ ಮಾತ್ರ ಬರಲಿಲ್ಲ. ಸಂಜೆ ವೇಳೆ ಎಳೆಯ ಮಗುವಿನೊಂದಿಗೆ ಹೆಂಗಸು ಒಬ್ಬರೇ ಕೆರೆಯ ಏರಿಯ ಮೇಲೆ ಇರುವುದನ್ನು ಕಂಡ ಗ್ರಾಮಸ್ಥರು ರಾತ್ರಿ ಗ್ರಾಮಕ್ಕೆ ಬಂದು ಇರುವಂತೆ ಕೋರಿದರು. ಆದರೆ ತಾನು ಇಲ್ಲಿಂದ ಹೋದರೆ, ಗಂಡ ವಾಪಸ್ ಬಂದು ತಾನು ಇಲ್ಲಿ ಇಲ್ಲದಿರುವುದನ್ನು ಕಂಡು ದಿಗಿಲುಗೊಳ್ಳುತ್ತಾನೆ. ಆತ ಬರುವ ವರೆಗೆ ತಾನು ಇಲ್ಲಿಂದ ಕದಲುವುದಿಲ್ಲ ಎಂದು ಹಟ ಹಿಡಿದು ಆಕೆ ಅಲ್ಲಿಯೇ ಕೂತಳು.
ರಾತ್ರಿ ವೇಳೆ ಮಗುವಿನೊಂದಿಗೆ ಹೆಂಗಸು ಒಬ್ಬಳೇ ಇರುವುದನ್ನು ಕಂಡ ಗ್ರಾಮಸ್ಥರು ಅಲ್ಲಿಗೆ ಊಟ ತಂದುಕೊಟ್ಟರು. ಅವರು ನೀಡಿದ ಊಟದಲ್ಲಿ ತಾನು ಸ್ವಲ್ಪ ತನ್ನ ಮುಗುವಿಗೆ ಸ್ವಲ್ಪ ತಿನ್ನಿಸಿದ ಲಕ್ಕಮ್ಮ ಅಲ್ಲಿಯೇ ಮುದುರಿಕೊಂಡು ಮಲಗಿದಳು. ಮಾರನೇ ದಿನವೂ ಗಂಡನ ಸುಳಿವಿಲ್ಲ. ಹೀಗೆ ಒಂದು ವಾರ ಲಕ್ಕಮ್ಮ ಕಾದಿದ್ದೇ ಆಯಿತು. ಆದರೆ ನಾರಪ್ಪ ಮಾತ್ರ ನಾಪತ್ತೆ. ಇವಳ ದೀನ ಸ್ಥಿತಿಯನ್ನು ಕಂಡ ಗ್ರಾಮಸ್ಥರು ವಾಪಸ್ ಊರಿಗೆ ಹೋಗುವಂತೆ ಸೂಚಿಸಿದರು. ಆದರೆ ಊರಿನಲ್ಲಿ ಮನೆ, ಆಸ್ತಿ ಏನೂ ಇಲ್ಲ. ಮಾಡಲು ಕೆಲಸವೂ ಇಲ್ಲ. ಹೋಗಿ ಮಾಡುವುದಾದರೂ ಏನು ಎಂದು ಗೋಗೆರೆಯತೊಡಗಿದಳು.
ಲಕ್ಕಮ್ಮನ ಹೀನಾಯ ಸ್ಥಿತಿ ಕಂಡ ಗ್ರಾಮಸ್ಥರಿಗೆ ಸಿಂಪತಿ ವ್ಯಕ್ತಪಡಿಸುವುದಲ್ಲದೆ ಬೇರೇನೂ ಮಾಡಲು ಸಾಧ್ಯವಿರಲಿಲ್ಲ. ಗ್ರಾಮದ ಹೊರಗಿನ ಕೆರೆಯ ಏರಿಯ ಮೇಲೆ ಚಿಕ್ಕದಾಗಿ ನಿರ್ಮಿಸಿದ್ದ ಗಂಗಮ್ಮ ಗುಡಿಯಲ್ಲಿ ಮಲಗುವುದು, ಊರಿನವರು ತಂದುಕೊಟ್ಟ ಊಟ ಮಾಡಿ ಗಂಡನಿಗಾಗಿ ಕಾಯುವುದು ಹೀಗೆ ಒಂದು ವಾರ ಕಳೆಯಿತು.

ಅದೇ ಸಮಯಕ್ಕೆ ಆ ಕೆರೆಯ ನೀರು ಮುಗಿಯುತ್ತಾ ಬಂದಿತ್ತು. ಕೆರೆಯಲ್ಲಿದ್ದ ಮೀನುಗಳ ಹರಾಜು ನಡೆದು ತುರುವೇಕೆರೆಯ ವ್ಯಕ್ತಿಯೊಬ್ಬ ಅದರ ಗುತ್ತಿಗೆ ಪಡೆದಿದ್ದ. ಕೆರೆಯಲ್ಲಿ ನೀರು ಕಡಿಮೆ ಆಗಿದ್ದರೂ, ಆಳವಾಗಿದ್ದ ಗುಂಡಿಗಳಿಂದ ದೊಡ್ಡ ಬಲೆಗಳನ್ನು ಬೀಸಿ ಮೀನುಗಳನ್ನು ಹಿಡಿಯಲು ಅನುಭವಸ್ಥ ಮೀನುಗಾರರ ಅವಶ್ಯಕತೆ ಇತ್ತು. ಹಾಗೆ ಅನುಭವವಿದ್ದ ಮೀನುಗಾರರ ತಂಡವೊಂದನ್ನು ಸುಮಾರು ದುಡ್ಡು ಮುಂಗಡವಾಗಿ ಕೊಟ್ಟು ಗುತ್ತಿಗೆದಾರ ಕರೆತಂದಿದ್ದ. ಆದರೆ ಅವರು ರಾತ್ರೋರಾತ್ರಿ ನಾಪತ್ತೆಯಾಗಿದ್ದರು. ನೀರು ಕಡಿಮೆಯಾಗಿ ಹದ್ದುಗಳು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಕಳ್ಳತನದಿಂದ ಮೀನುಗಳನ್ನು ಹಿಡಿದು ಸಾಗಿಸುತ್ತಿದ್ದರು. ಇದರಿಂದ ಗುತ್ತಿಗೆದಾರನಿಗೆ ತೀವ್ರ ತೆರನಾದ ಸಮಸ್ಯೆ ಉದ್ಭವಿಸಿತ್ತು.
ಕೆರೆಯ ಬಳಿ ಗುತ್ತಿಗೆದಾರ ಪಡುತ್ತಿರುವ ಸಮಸ್ಯೆ ಕಂಡ ಲಕ್ಕಮ್ಮ ಕೂಡಲೇ ಆತನನ್ನು ಸಂಪರ್ಕಿಸಿದಳು. ಕೆರೆಯಲ್ಲಿರುವ ಮೀನುಗಳನ್ನು ತಾನೇ ಹಿಡಿಯುವುದಾಗಿ, ಅದಕ್ಕೆ ಅಗತ್ಯವಿರುವ ಪರಿಕರಗಳನ್ನು ತಂದುಕೊಡುವಂತೆ ಕೋರಿದಳು. ಗಟ್ಟಿಮುಟ್ಟಾದ ಗಂಡಾಳುಗಳಿಂದಲೇ ಸಾಧ್ಯವಾಗದ ಈ ಕೆಲಸ ಹೆಂಗಸಿನಿಂದ ಸಾಧ್ಯವೇ ಎಂಬ ಸಂಶಯ ಆತನಲ್ಲೂ ಮೂಡಿತ್ತು. ಆದರೆ ವಿಧಿಯಿಲ್ಲದೆ ಆಕೆಯನ್ನು ಪರೀಕ್ಷಿಸಿ ನೋಡುವ ಧೈರ್ಯ ಮಾಡಿ ಬಲೆ, ಪುಟ್ಟ ದೋಣಿಯನ್ನು ತಂದುಕೊಟ್ಟ. ಹಾಗೆ ಮೀನು ಹಿಡಿಯಲು ಅಗತ್ಯವಿರುವ ವಸ್ತುಗಳು ಸಿಕ್ಕ ಕೂಡಲೇ ಕೆರೆಗೆ ಇಳಿದ ಲಕ್ಕಮ್ಮ ಯಾವುದೇ ಗಂಡಸಿಗೆ ಕಡಿಮೆ ಇಲ್ಲದಂತೆ ಮೀನುಗಳನ್ನು ಹಿಡಿದು ತಂದು ರಾಶಿ ಹಾಕಿದಳು.

ಇದನ್ನು ಕಂಡ ಗುತ್ತಿಗೆದಾರ ಮತ್ತು ಗ್ರಾಮಸ್ಥರು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಒಂದು ಹೆಂಗಸು ಇಷ್ಟು ಶ್ರಮದ ಕೆಲಸ ಮಾಡುತ್ತಿರುವುದಾದರೂ ಹೇಗೆ ಎಂದು ಅವಳನ್ನೇ ಕೇಳಿದರು. ಮೂಲತಃ ಆಕೆ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯವಳು. ಅದು ಕರಾವಳಿ ಪ್ರದೇಶ. ಸಮುದ್ರದ ಮೀನುಗಳ ಜೊತೆಗೆ ತಮ್ಮ ಭೂಮಿಯಲ್ಲಿಯೇ ಕೃತಕ ಕೆರೆಗಳ ನಿರ್ಮಾಣ ಮಾಡಿ, ಮೀನು ಮತ್ತು ಸಿಗಡಿಗಳನ್ನು ಸಾಕುವುದು ಈ ಜಿಲ್ಲೆಯ ಪ್ರಮುಖ ಉದ್ಯಮ. ಹಾಗೆ ಸಾಕಿದ ಕೆರೆಗಳಲ್ಲಿರುವ ಬೆಳೆದ ಮೀನುಗಳನ್ನು ಹಿಡಿಯಲೆಂದೇ ಕೆಲ ಅನುಭವಸ್ಥ ಕುಟುಂಬಗಳಿರುತ್ತವೆ. ಅಂತಹ ಕುಟುಂಬದ ಲಕ್ಕಮ್ಮ ಬಯಲು ಸೀಮೆಯ ನಾರಪ್ಪನನ್ನು ಮದುವೆ ಆಗಿದ್ದಳು.
ಮೂಲತಃ ತನ್ನ ವೃತ್ತಿಯಾದ ಮೀನು ಹಿಡಿಯುವ ಕಾಯಕ ಅವಳಿಗೆ ಕಷ್ಟದ ಕಾಲದಲ್ಲಿ ನೆರವಾಗಿತ್ತು. ಅವಳ ಮನೋಧೈರ್ಯ ಮತ್ತು ಗಂಡನಿಗಾಗಿ ಕಾಯುತ್ತಿರುವುದನ್ನು ಕಂಡ ಗುತ್ತಿಗೆದಾರ ಮೀನು ಹಿಡಿಯುವ ಕಾಯಕಕ್ಕೆ ಲಕ್ಕಮ್ಮನನ್ನೇ ನೇಮಿಸಿದ.
ಆ ವರ್ಷ ಕೆರೆಯಲ್ಲಿದ್ದ ಮೀನುಗಳು ಮುಗಿಯಿತು. ಆದರೂ ನಾರಪ್ಪನ ಸುಳಿವಿಲ್ಲ. ಮರುವರ್ಷವೂ ಕೆರೆಯ ಮೀನು ಹಿಡಿಯುವ ಕಾಯಕ ಮುಂದುವರೆಯಿತು. ಹೀಗೆ ಕಳೆದ 10 ವರ್ಷಗಳಿಂದ ಮೀನು ಹಿಡಿದು ಲಕ್ಕಮ್ಮ ಜೀವನ ಸಾಗಿಸುತ್ತಿದ್ದಾಳೆ. ಆಕೆಯ ಬಗ್ಗೆ ಇಡೀ ಗ್ರಾಮ ಪ್ರೀತಿ ವಿಶ್ವಾಸ ಬೆಳೆಸಿಕೊಂಡಿದೆ. ಮಗುವನ್ನು ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾಳೆ.
ಕಾರಣ ಇಲ್ಲದೆ ನಾಪತ್ತೆಯಾದ ಗಂಡ ಇದ್ದಾನೋ ಇಲ್ಲವೋ ತಿಳಿಯದೆ ಇನ್ನೂ ಕಾಯುತ್ತಲೇ ಇದ್ದಾಳೆ. ಇದರಿಂದಲೇ ಆಕೆಯನ್ನು ಆಧುನಿಕ ಶಬರಿ ಎಂದು ಕರೆದಿದ್ದು. ಕೇವಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂಬ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣು ಮಕ್ಕಳು, ಗಂಡ ಬೈದ ಎಂಬ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೇಳುವ ಹೆಂಗಸರಿರುವ ಪ್ರಸ್ತುತ ಸಮಯದಲ್ಲಿ ಲಕ್ಕಮ್ಮ ಒಬ್ಬ ಧೀರ ಮಹಿಳೆ ಎಂದರೆ ತಪ್ಪಾಗದು.
ಪ್ರತಿ ವಾರ ಕೊಲೆ, ಸಾವು ನೋವಿನ ಕತೆಗಳೇ ಕೇಳಿ ಬೇಸರವಾಗದಿರಲಿ ಎಂಬ ಕಾರಣಕ್ಕೆ ಧೀಮಂತ ಮಹಿಳೆಯೊಬ್ಬರ ಕತೆ ಈ ವಾರ ನಿಮಗಾಗಿ, ಇಷ್ಟವಾಯಿತಲ್ಲವೆ?

-ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT