ಬೈಟುಕಾಫಿ

ಮಕ್ಕಳ ತೊದಲು ನಿವಾರಣೆಗೆ ಬಜೆ...

ಮಗು ಹುಟ್ಟಿದ ತಿಂಗಳ ನಂತರ ಪ್ರತಿದಿನ ಸ್ನಾನ ಮಾಡಿಸುವ ಮೊದಲು ಬಜೆ ಬೇರನ್ನು ನೀರಿನಲ್ಲಿ ತೇಯ್ದು ಗಂಧ ಮಾಡಿಟ್ಟುಕೊಳ್ಳುತ್ತಾರೆ.

ಮಗು ಹುಟ್ಟಿದ ತಿಂಗಳ ನಂತರ ಪ್ರತಿದಿನ ಸ್ನಾನ ಮಾಡಿಸುವ ಮೊದಲು ಬಜೆ ಬೇರನ್ನು ನೀರಿನಲ್ಲಿ ತೇಯ್ದು ಗಂಧ ಮಾಡಿಟ್ಟುಕೊಳ್ಳುತ್ತಾರೆ. ಆ ಗಂಧವನ್ನು ಸ್ವಲ್ಪವೇ ಸ್ವಲ್ಪ ಶುಚಿಯಾಗಿರುವ ಒದ್ದೆಬಟ್ಟೆಗೆ ಹಚ್ಚಿಕೊಂಡು ಮಗುವಿನ ನಾಲಿಗೆಯನ್ನು ಸ್ವಚ್ಛಗೊಳಿಸುತ್ತಾರೆ. ಇದಕ್ಕೆ ಕಾರಣಗಳಿಲ್ಲದಿಲ್ಲ. ಮಗು ಹಾಲನ್ನು ಮಾತ್ರ ಕುಡಿಯುವುದರಿಂದ ನಾಲಿಗೆಯ ಮೇಲೆ ಹಾಲು ಅಂಟಿಕೊಂಡಿರುತ್ತದೆ. ಇದಕ್ಕೆ ಆಡುಭಾಷೆಯಲ್ಲಿ ನಾಲಿಗೆ ಅಗ್ರ ಎಂತಲೂ ಕರೆಯುತ್ತಾರೆ. ಈ ಅಗ್ರವನ್ನು ತೆಗೆಯಲು ಬಜೆಯನ್ನು ಉಪಯೋಗಿಸುತ್ತಾರೆ. ಹೀಗೆ ಮಾಡುವುದರಿಂದ ನಾಲಿಗೆ ಸ್ವಚ್ಛವಾಗುವುದು. ಇದನ್ನು ಪ್ರತಿದಿನ, ಮಗು 5-6ನೇ ವಯಸ್ಸಿಗೆ ಬರುವವರೆಗೂ ಮಾಡುವುದರಿಂದ ಮಾತು ಬೇಗ ಬರುವುದೆಂದು ಅನುಭವಸ್ಥರು ಹೇಳುತ್ತಾರೆ. ಅಷ್ಟೇ ಅಲ್ಲ, ಮಕ್ಕಳು ತೊದಲು ಮಾತನಾಡುವುದಿಲ್ಲ, ಬುದ್ಧಿ ಚುರುಕಾಗುತ್ತದೆ ಎನ್ನುವುದು ನಂಬಿಕೆ.
ಬಜೆಯು ನೀರು ಹೆಚ್ಚಿರುವ ಕಡೆ ಬೆಳೆಯುವ ವರ್ಷಾವಧಿ ಮೂಲಿಕೆ. ಇದರ ಬೇರು, ಕಾಂಡವು ಸುವಾಸನೆಯಿಂದ ಕೂಡಿದ್ದು ಗಿಡ ಕವಲುಗಳಾಗಿ ಹರಡಿಕೊಂಡಿರುತ್ತದೆ. ಬೇರು ಕಾಂಡವು ಕಂದು ಅಥವಾ ಗುಲಾಬಿಕಂದು ಬಣ್ಣ ಹೊಂದಿರುತ್ತದೆ. ಒಳಗಡೆ ಬೆಣ್ಣಗೆ ಮೆದುವಾಗಿರುತ್ತದೆ. ಇದನ್ನು ನೀರಿನಿಂದ ಸ್ವಚ್ಛವಾಗಿ ತೊಳೆದು ಕಡಿಮೆ ತಾಪಮಾನದಲ್ಲಿ ಒಣಗಿಸುತ್ತಾರೆ. ಇದನ್ನು ಬೇಸಿಗೆ ಕಾಲದಲ್ಲಿ ನೆರಳಿನಲ್ಲೂ ಒಣಗಿಸಿಟ್ಟುಕೊಳ್ಳಬಹುದು. ರುಚಿಕಾರಕವಾಗಿ, ಔಷಧವಾಗಿಯೂ ಬಳಸುತ್ತಾರೆ.
ಒಂದು ಚಿಕ್ಕ ಬೇರಿನ ಚೂರಿದ್ದರೂ ಸಾಕು, ನೀರಿರುವ ಕಡೆ ನಾಟಿ ಮಾಡಿದರೆ ಆಯಿತು. 2-3 ತಿಂಗಳಲ್ಲೇ ಗಿಡ ಹಿಂಡುಹಿಂಡಾಗಿ ಬೆಳೆಯುತ್ತದೆ. ಇದು ಜೌಗು ಪ್ರದೇಶಗಳಲ್ಲಿ ತಾನೇತಾನಾಗಿ ಬೆಳೆಯುತ್ತದೆ. ಈಗೀಗ ಅದನ್ನು ಸಾಗುವಳಿ ಮಾಡಲಾಗುತ್ತದೆ. ಭಾರತ, ಶ್ರೀಲಂಕಾ, ಅಮೆರಿಕಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಒಣಗಿಸಿದ ಬಜೆ ಬೇರನ್ನು ಭಟ್ಟಿ ಇಳಿಸಿ ತೈಲ ತೆಗೆಯುತ್ತಾರೆ. ಒಳ್ಳೆಯ ಸುವಾಸನೆಯಿಂದ ಕೂಡಿರುವ ಈ ತೈಲವನ್ನು ಔಷಧಗಳಲ್ಲಿ, ಸುಗಂಧ ಮಿಶ್ರಣಗಳಲ್ಲಿ ಉಪಯೋಗಿಸುತ್ತಾರೆ. ಬಜೆ ತೈಲವು ಜಠರ ಚರ್ಮಗಳ ಊತವನ್ನು ವಾಸಿ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆಂದು ನಂಬಲಾಗಿದೆ. ಇದನ್ನು ಪ್ರಾಣಿಗಳಿಗೂ ಜಠರೋತ್ತೇಜಕವಾಗಿ ಕೊಡಲಾಗುತ್ತದೆ. ಹೊಟ್ಟೆ ಮತ್ತು ಚರ್ಮದ ಕಾಯಿಲೆಗಳಿಗೆ, ಜಂತುನಾಶಕ, ಪೂತಿನಾಶಕವಾಗಿಯೂ ಬಳಸುತ್ತಾರೆ.
ಒಣಗಿಸಿದ ಬೇರುಕಾಂಡದ ಕಷಾಯವನ್ನು ಆಯುರ್ವೇದ ವೈದ್ಯ ಚಿಕಿತ್ಸೆಯಲ್ಲಿ ನೀಡಲಾಗುತ್ತದೆ. ಕಷಾಯ ಸುವಾಸನೆಯಿಂದ ಕೂಡಿದ್ದು, ಕಹಿರುಚಿಯಿಂದ ಕೂಡಿರುತ್ತದೆ. ಇದು ವಾತಹರ ಔಷಧ. ಇದಕ್ಕೆ ವಮನಕಾರಕ ಮ್ತತು ಸೆಳವು ನಿವಾರಕ ಗುಣಗಳಿವೆ. ಅಗ್ನಿಮಾಂದ್ಯ ಮತ್ತು ದೀರ್ಘಕಾಲದ ಅತಿಸಾರಗಳನ್ನು ವಾಸಿಮಾಡುತ್ತದೆ.
ಬಜೆಬೇರಿನ ವಿಶೇಷವೆಂದರೆ, ಇದಕ್ಕೆ ಕೀಟನಾಶಕ ಗುಣವಿದೆ. ಇದನ್ನು ತಿಗಣೆ, ಚಿಟ್ಟೆ, ಹೇನು ಮುಂತಾದವುಗಳ ನಾಶಕ್ಕೆ ಉಪಯೋಗಿಸಬಹುದು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT