ಐಸ್‌ಕ್ರೀಂ ರುಚಿಯಾಗಿದೆ ಎಂದು ಒಮ್ಮೆಲೇ ಬಾಯಿಗೆ ತುರುಕಿಕೊಳ್ಳುತ್ತೀರಿ. ಅಥವಾ ಅತಿ ತಣ್ಣನೆಯ ಪೇಯವನ್ನು ಬಾಯಿ ತುಂಬುವಂತೆ ಎಳೆದುಕೊಳ್ಳುತ್ತೀರಿ. ಆ ಕ್ಷಣದಲ್ಲಿ ಏನಾಗುತ್ತದೆ? ಕಣ್ಣಿನ ಭಾಗದಲ್ಲಿ ವಿಚಿತ್ರ ಅನುಭವ ಆಗುವುದು ಸಾಮಾನ್ಯ. ಕೆಲವರಲ್ಲಿ ತೀವ್ರತರದ ತಲೆನೋವು ಕಾಣಿಸಿಕೊಳ್ಳಬಹುದು. ಇಂಥ ತಲೆನೋವಿಗೊಂದು ಹೆಸರಿದೆ, ಅದು 'ಐಸ್‌ಕ್ರೀಂ ತಲೆನೋವು'! ಅತಿತಂಪಿನಿಂದ ಆಗುವ ಕಾರಣ ಬ್ರೈನ್ ಫ್ರೀಜ್, ತಂಪಿನ ತಲೆನೋವು ಎಂದೂ ಹೇಳಲಾಗುತ್ತದೆ. ಜನಪ್ರಿಯವಾಗಿರುವುದು ಐಸ್‌ಕ್ರೀಂ ತಲೆನೋವು ಎಂದೇ. ಇದು ಜಾಸ್ತಿ ಹೊತ್ತು ಬಾಧೆ ಕೊಡುವಂಥದ್ದಲ್ಲ. ಹೆಚ್ಚೆಂದರೆ 10ರಿಂದ 20 ಸೆಕೆಂಡ್ ಅಷ್ಟೆ, ಆದರೆ ಅಷ್ಟರಲ್ಲೇ ಜೀವಹೋದ ಅನುಭವ ಆಗುತ್ತದೆ.
ಏನಾಗುತ್ತದೆ ಅಂದರೆ ಐಸ್‌ಕ್ರೀಂ, ಐಸ್ ತುಂಡು ಮೊದಲಾದ ಅತಿತಣ್ಣನೆಯ ತಿನಿಸುಗಳನ್ನು ಒಮ್ಮೆಲೇ ತುರುಕಿಕೊಂಡಾಗ ಬಾಯಿ ಮೇಲ್ಭಾಗ ಅಥವಾ ಅಂಗುಳು ಭಾಗದಲ್ಲಿ ಮರಗಟ್ಟಿದ ಅನುಭವ ಆಗುತ್ತದೆ. ಆಗ ಕಪಾಲದಿಂದ ಮೆದುಳಿಗೆ ಸಂಪರ್ಕ ಕಲ್ಪಿಸುವ ನರ ನೋವಿನ ಸಂದೇಶ ರವಾನಿಸುತ್ತದೆ. ಮೆದುಳು ಅಷ್ಟೇ ತ್ವರಿತವಾಗಿ ಪ್ರತಿಕ್ರಿಯಿಸುವುದರಿಂದ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ತಾಪಮಾನ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ನೋವು ಕಡಿಮೆಯಾಗುತ್ತದೆ. ಇವೆಲ್ಲ ಅತ್ಯಂತ ತ್ವರಿತವಾಗಿ ನಡೆಯುವ ಕ್ರಿಯೆಗಳು.
ಸೋಜಿಗ ಏನೆಂದರೆ ಎಲ್ಲರಲ್ಲಿಯೂ 'ಐಸ್‌ಕ್ರೀಂ ತಲೆನೋವು' ಕಾಣಿಸಿಕೊಳ್ಳುವುದಿಲ್ಲ. ಇದೇಕೆ ಹೀಗೆ ಎನ್ನುವುದು ಇವತ್ತಿಗೂ ಸಂಶೋಧಕರಿಗೆ ಕುತೂಹಲದ ವಿಷಯವಾಗಿಯೇ ಉಳಿದುಕೊಂಡಿದೆ. 'ಐಸ್‌ಕ್ರೀಂ ತಲೆನೋವು' ಎನ್ನುವ ಪದಬಳಕೆ ಬಂದದ್ದು ಇತ್ತೀಚಿನ ವರ್ಷಗಳಲ್ಲಿ ಅಲ್ಲ ಎಂದರೆ ಅಚ್ಚರಿ ಆಗಬಹುದು. 1937ರ ಜನವರಿಯಲ್ಲಿಯೇ ಸೋವಿಯತ್ ರಷ್ಯಾದ ವಿಜ್ಞಾನ ನಿಯತಕಾಲಿಕದಲ್ಲಿ ಈ ಪದ ಬಳಸಲಾಗಿತ್ತು!
'ಐಸ್‌ಕ್ರೀಂ ತಲೆನೋವು' ಮಂಡೆಬಿಸಿ ಮಾಡಿಕೊಳ್ಳುವ ವಿಚಾರ ಏನಲ್ಲ. ಅಥವಾ ಐಸ್‌ಕ್ರೀಂ, ತಣ್ಣನೆಯ ಪದಾರ್ಥಗಳ ಸೇವನೆ ತೊರೆಯಬೇಕು ಅಂತಲೂ ಅಲ್ಲ. ಸಮಸ್ಯೆಯ ಮೂಲವೇನು ಹೇಳಿ? ಏಕಾಏಕಿ ಬಾಯಿಯ ಮೇಲ್ಭಾಗದಲ್ಲಿ ತಣ್ಣನೆಯ ಅನುಭವ ಆಗುವುದು ಅಲ್ಲವೆ? ಪರಿಹಾರವೂ ಸುಲಭ. ಅತಿ ತಣ್ಣನೆಯ ಪದಾರ್ಥವನ್ನು ಒಮ್ಮೆಲೇ ಬಾಯಿ ತುಂಬಾ ಹಾಕಿಕೊಳ್ಳಬೇಡಿ. ಆಕಸ್ಮಾತ್ ಹಾಗೆ ಮಾಡಿದಿರಿ ಎಂದಿಟ್ಟುಕೊಳ್ಳಿ, ತಕ್ಷಣ ನಾಲಗೆಯಿಂದ ಬಾಯಿಯ ಮೇಲ್ಭಾಗವನ್ನು ಗಟ್ಟಿಯಾಗಿ ಅಮುಕಿಕೊಳ್ಳಿ. ಸಾಧ್ಯವಾದರೆ ಕೂಡಲೇ ಬಿಸಿನೀರು ಕುಡಿಯಿರಿ. ಬಾಯಿ, ಮೂಗಿನಿಂದ ಗಟ್ಟಿಯಾಗಿ ಉಸಿರಾಟ ನಡೆಸಿ ಬಿಸಿಗಾಳಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಆದೀತು. ಹೀಗೆ ಮಾಡಿದಾಗ ಕಪಾಲದ ನರಕ್ಕೆ ತೀರಾ ತಂಪಿನ ಅನುಭವ ಆಗದೇ ನೋವಿನ ಸಂದೇಶ ರವಾನೆ ಆಗುವುದಿಲ್ಲ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com