ಬದಲಾವಣೆ ರಾತ್ರೋರಾತ್ರಿ ಉಂಟಾಗುವುದಿಲ್ಲ
ನನ್ನ ದೈನಂದಿನ ಬದುಕಿ ನಲ್ಲಿನ ಬದಲಾವಣೆ ರಾತ್ರೋರಾತ್ರಿ ಉಂಟಾ ಗಲಿಲ್ಲ. ಆದರೆ ನನ್ನ ಆಲೋಚನಾ ವಿಧಾನ ದಲ್ಲಿ ಮಾರ್ಪಾಡು ಉಂಟಾಗಿದೆ..
ನನ್ನ ದೈನಂದಿನ ಬದುಕಿ ನಲ್ಲಿನ ಬದಲಾವಣೆ ರಾತ್ರೋರಾತ್ರಿ ಉಂಟಾ ಗಲಿಲ್ಲ. ಆದರೆ ನನ್ನ ಆಲೋಚನಾ ವಿಧಾನ ದಲ್ಲಿ ಮಾರ್ಪಾಡು ಉಂಟಾಗಿದೆ.. `ನಿಜವಾ ಗಿಯೂ ಇವೆಲ್ಲಾ ಹಾಳು ಮಾಡುತ್ತಿರುವುದು ನನ್ನ ಆನಂದವನ್ನೇ? ಇಲ್ಲಾ ನನ್ನ ಸೌಕರ್ಯವನ್ನೇ?' ಎಂದು ಆಲೋಚಿಸಲು ಆರಂಭಿಸಿದೆ.
THE FIVE STEPS TO SUCCESS ಎನ್ನುವ ನನ್ನ ಇಂಗ್ಲೀಷ್ ಪುಸ್ತಕಕ್ಕೆ `ಮೊದಲ ಮಾತು' ಬರೆಯುತ್ತಾ ನಿರ್ದೇಶಕ ರಾಮಗೋಪಾಲ್ ವರ್ಮ "ನಾನು ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಓದುವುದಿಲ್ಲ. ಇಂತಹ ಪುಸ್ತಕಗಳಿಂದ ಜನರಿಗೆ ಯಾವುದೇ ರೀತಿಯ ಉಪಯೋಗ ಆಗುತ್ತದೆಂದಾಗಲೀ, ಅವುಗಳಿಂದ ಜನರು ಪ್ರಭಾವಿತರಾಗುತ್ತಾರೆಂದಾಗಲೀ ನಾನು ಅಂದುಕೊಳ್ಳುವುದಿಲ್ಲ. ಆದರೆ ವೀರೇಂದ್ರನಾಥ್ ಪುಸ್ತಕಗಳು ತಮ್ಮ ಜೀವನದಲ್ಲಿ ಬದಲಾವಣೆ ತಂದಿವೆಯೆಂದು ನನಗೆ ಕೆಲವರು ಹೇಳಿದಾಗ (ಎಷ್ಟೋ ಸಲ ನನ್ನ ನಂಬಿಕೆಯೇ ತಪ್ಪಾಗುವ Áಗೆ) ಈ ಅಭಿಪ್ರಾಯವನ್ನು ಕೂಡಾ ಬಲವಂತವಾಗಿ ನಂಬಬೇಕಾಗಿ ಬಂದಿತು..' ಎಂದು ಬರೆದಿದ್ದಾರೆ.
ಆ ನಂತರ ಮತ್ತೊಮ್ಮೆ ಆತನನ್ನು ಭೇಟಿಯಾದಾಗ `ಒಂದು ಪುಸ್ತಕವನ್ನು ಕೂಡಾ ಓದದೇ, `ವ್ಯಕ್ತಿತ್ವ ವಿಕಾಸದ ಪುಸ್ತಕಗಳು ಏನೂ ಸಹಾಯ ಮಾಡುವುದಿಲ್ಲ' ಎಂಬ ಅಭಿಪ್ರಾಯಕ್ಕೆ ಹೇಗೆ ಬಂದಿರಿ?" ಎಂದು ಪ್ರಶ್ನಿಸಿದೆ.
"ನೀವು ದೇವರನ್ನು ನೋಡಿದ್ದೀರಾ?" ಎಂದು ಕೇಳಿದರಾತ. ಇಲ್ಲವೆಂದೆ.
"ದೇವರ ಬಗ್ಗೆ ಸ್ವಾಮೀಜಿಗಳು ಮಾಡುವ ಬೋಧನೆಗಳನ್ನು ಕೇಳಿದ್ದೀರಾ?" ಎಂದು ಕೇಳಿದರು.
ಇಲ್ಲವೆಂದೆ.
`ಒಂದು ಸಲ ಕೂಡಾ ನೋಡದೇ ದೇವರಿಲ್ಲವೆಂದೂ, ಒಂದು ಸಲ ಕೂಡಾ ಕೇಳದೇ ಆ ಬೋಧನೆಯಿಂದ ಉಪಯೋಗವಿಲ್ಲವೆಂದೂ ಹೇಗೆ ನಂಬುತ್ತೀರಿ?' ಎಂದು ಪ್ರಶ್ನಿಸಿದರು. ಏಟು ಬಿದ್ದಂತಾಗಿತ್ತು ನನಗೆ. ಆದರೆ ನನ್ನ ಕಡೆಯ ವಾದವನ್ನು ಸಮೀಕರಿಸುತ್ತಾ, "ಪುಸ್ತಕಗಳು ಮನುಷ್ಯರನ್ನು ಪ್ರಭಾವಿತಗೊಳಿಸವು ಎನ್ನುವ ನೀವು, ಅಯಾನ್ ರ್ಯಾಂಡ್ ಪುಸ್ತಕಗಳನ್ನು ಓದಿದ್ದರಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳುತ್ತಿರುತ್ತೀರಿ ಅಲ್ಲವಾ?" ಎಂದು ಕೇಳಿದೆ.
`ಆಕೆ ಬರೆದಿರೋದು ತಾನು ನಂಬಿದ ಫಿಲಾಸಫಿಯ ಬಗ್ಗೆ. ಪರ್ಸನಾಲಿಟಿ ಡೆವೆಲಪ್ಮೆಂಟ್ ಬಗ್ಗೆ ಅಲ್ಲ'
ವರ್ಮರನ್ನು ವಾದದಲ್ಲಿ ಗೆಲ್ಲುವುದು ಕಷ್ಟ. ಆದರೆ ವರ್ಮ ಹೇಳಿದ್ದು ಕೂಡಾ ಸರಿಯಾಗಿದೆಯಲ್ಲವೇ ಎನ್ನಿಸಿತು. ಬಹಳ ಕಾಲದವರೆಗೂ ಇದೇ ವಿಷಯ ಮೆದುಳಿನಲ್ಲಿ ಹೊರಳುತ್ತಲೇ ಇತ್ತು. ಇಬ್ಬರ ವಾದದಲ್ಲಿ ಎಲ್ಲೋ ವ್ಯತ್ಯಾಸ ಇದೆ ಎನ್ನಿಸಿತಾಗಲೀ, ಅದೇನೆಂದು ತಿಳಿಯಲಿಲ್ಲ.
ಆ ಸಮಯದಲ್ಲಿ ತನಿಕೆಳ್ಳ ಭರಣಿ (ತೆಲುಗು ನಟ, ಸಂಭಾಷಣಕಾರ) ಭೇಟಿಯಾದರು. ಆ ವಿಷಯ ನಮ್ಮ ಮಾತಿನ ನಡುವೆ ಬಂದಾಗ, `ನೀನು ಬರೆದಿದ್ದು ಕೂಡ ಫಿಲಾಸಫಿಯೇ ವೀರೇಂದ್ರಾ ! ನಿನ್ನದು ಉಳಿದವರದರ ಹಾಗೆ 'ಪರ್ಸನಾಲಿಟಿ ಡೆವೆಲಪ್ಮೆಂಟ್' ಪುಸ್ತಕಗಳಲ್ಲ. ಮುಂಗೋಪಿ ಶಿವನ ಕೋಪದಿಂದಾಗಿ ಬಂದ ಕಷ್ಟಗಳೇನೆಂದು ಸ್ವಾಮಿಗಳು ಹೇಳುತ್ತಾರೆ. ಅದು ಥಿಯರಿ. ಆ ಕೋಪವನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕೋ ಎಂದು ನೀನು ಹೇಳುತ್ತೀ. ನಿನ್ನದು ಪ್ರ್ಯಾಕ್ಟಿಕ್ಯಾಲಿಟಿ. ಅಷ್ಟೇ ವ್ಯತ್ಯಾಸ' ಎಂದರು ಆ ತ್ರಿನೇತ್ರನ ಭಕ್ತ. ಅಲ್ಲಿಯವರೆಗೂ ಇದ್ದ ಅನುಮಾನ ಮೋಡದಂತೆ ಕರಗಿಹೋಯಿತು. ಆಗಲೇ ಈ ಪುಸ್ತಕಕ್ಕೆ ಓಂ ಪ್ರಥಮ ಬರೆದೆ.
ಪುಸ್ತಕಗಳೂ, ಸಾಹಿತ್ಯವೂ ಸಮಾಜಕ್ಕೆ ಎಷ್ಟು ಉಪಯೋಗವಾಗುತ್ತವೋ ನನಗೆ ತಿಳಿಯದು. ಆದರೆ ವೈಯಕ್ತಿಕವಾಗಿ ಮಾತ್ರ ಪ್ರಭಾವಿತಗೊಳಿಸುತ್ತವೆ. "ಡಬ್ಬು ಟು ದಿ ಪವರ್ ಆಫ್ ಡಬ್ಬು (ದುಡ್ಡು ದುಡ್ಡು)' ಓದಿ ನಿಜಾಮಾಬಾದ್ ಬಳಿ ಕೆಲವು ಯುವಕರು 'ಗಾಂಧೀ ಪೇಪರ್ ಮಿಲ್ಸ್' ಸ್ಥಾಪಿಸಿದರು.
`ವಿಜಯದತ್ತ ಪಯಣ' ಪುಸ್ತಕ ಓದಿದ ನಂತರ ತಾನು ಚಿಕ್ಕ ಸಂಸ್ಥೆಯೊಂದನ್ನು ಸ್ಥಾಪಿಸಿದೆನೆಂದೂ, ಈಗ ಅದು ಬಹಳ ಚೆನ್ನಾಗಿ ನಡೆಯುತ್ತಿದೆಯೆಂದೂ ಒಬ್ಬ ಯುವಕ ನನಗೆ ಹೇಳಿದ. ಹೈದರಾಬಾದ್ನಲ್ಲಿ 81218 81218ಗೆ ಫೋನ್ ಮಾಡಿ ಯಾವ ತಿನಿಸುಗಳು ಬೇಕೆಂದು ಹೇಳಿದರೆ ಅವನ್ನು ಹೊಟೇಲ್ನಿಂದ ತಂದು ಅವನ ಕಂಪೆನಿಯವರು ರೈಲ್ವೇನಿಲ್ದಾಣಕ್ಕೆ ಸರಬರಾಜು ಮಾಡುತ್ತಾರೆ. ಅವುಗಳೊಂದಿಗೆ `ಹ್ಯಾಪ್ಪಿ ಜರ್ನಿ' ಹೇಳುತ್ತಾ ಒಂದು ಗುಲಾಬಿ ಹೂವನ್ನು ಕೂಡಾ ನಿಮಗೆ ಕೊಡುತ್ತಾರೆ. ಇದು ಆತನ ವ್ಯಾಪಾರ. 'ದಿನಕ್ಕೆ ಕನಿಷ್ಠಪಕ್ಷ 50 ಹೂಗಳನ್ನು ನೀಡುತ್ತಿರುತ್ತೇವೆ' ಎಂದು ಆತ ಹೆಮ್ಮೆಯಿಂದ ಹೇಳಿದ. `ವಿಜಯಾನಿಕಿ ಐದು ಮೆಟ್ಲು (ವಿಜಯಕ್ಕೆ ಐದು ಮೆಟ್ಟಿಲು)' ಓದಿ ಇಂತಹ ವೃತ್ತಿಗಳನ್ನು ಆರಂಭಿಸಿದವರ ಕಥೆಗಳೆಷ್ಟೋ ಇವೆ.
ಆದರೂ ಎಲ್ಲರೂ ಬದಲಾಯಿಸುವರೆಂದಲ್ಲ.
ಈ ಸಂದರ್ಭದಲ್ಲಿ ಒಬ್ಬ ಓದುಗ ಅಭಿಮಾನಿ ಹೇಳಿದ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದು ನನ್ನ ಧರ್ಮ. `ಸರ್! ನಿಜಕ್ಕೂ ಪರ್ಸನಾಲಿಟಿ ಡೆವೆಲಪ್ಮೆಂಟ್ ಪುಸ್ತಕಗಳು ಮನುಷ್ಯರನ್ನು ಮಾರ್ಪಡಿಸಬಲ್ಲವಾದರೆ... ಇಷ್ಟೊಂದು ಜನ ಇಷ್ಟೊಂದು ಪುಸ್ತಕಗಳನ್ನು ಬರೆಯಬೇಕಾದ ಅಗತ್ಯವಿಲ್ಲವೇನೋ. ನಿಮ್ಮ ವಿಜಯಕ್ಕೆ ಐದು ಮೆಟ್ಟಿಲುವಿನಲ್ಲಿ ಮೊದಲ ಮೆಟ್ಟಿಲನ್ನು ಪೂರ್ತಿಯಾಗಿ ಅರ್ಥ ಮಾಡಿಕೊಂಡೆ. ಒಂದು ವಾಕ್ಯವನ್ನು ಸೀರಿಯಸ್ಸಾಗಿ ಫಾಲೋ ಮಾಡಿದರೆ ಬದುಕು ಬದಲಾಗುತ್ತದೆ. ಆ ಪುಸ್ತಕ ಓದಿದವರನ್ನು ಈಗ ನೀವು ಫಾಲೋ ಮಾಡುತ್ತಿರುವುದು ಏನು ಎಂದು ಕೇಳಿದರೆ ಹೆಚ್ಚುಕಡಿಮೆ ಎಲ್ಲರ ಮುಖವೂ ಬಿಳಿಚಿಕೊಳ್ಳುತ್ತದೆ. ಮನುಷ್ಯನ ಮನಸ್ಸನ್ನೂ, ಮನಸ್ತತ್ವವನ್ನೂ ಶಾಸಿಸುವ ಶಕ್ತಿ ಈ ಡೆವೆಲಪ್ಮೆಂಟ್ ಪುಸ್ತಕಗಳಿಗಿಲ್ಲ. ಅವುಗಳ ಸಾರ ಮೆದುಳಿನ ಮೇಲ್ಭಾಗದವರೆಗೆ ಮಾತ್ರವೇ ತಲುಪುತ್ತದೆ! ಸ್ವಲ್ಪ ಹೊತ್ತು ಉತ್ಸಾಹವನ್ನೂ, ಶಾಂತಿಯನ್ನೂ ನೀಡುತ್ತದೆ. ಬಿಸಿಬಿಸಿ ಕಾಫಿಗೆ, ಈ ಪುಸ್ತಕಗಳಿಗೆ ದೊಡ್ಡ ವ್ಯತ್ಯಾಸವೇನಿಲ್ಲ. ಅವುಗಳಿಂದ ಉಂಟಾಗುವುದು ತಾತ್ಕಾಲಿಕ ಉಪಶಮನ ಮಾತ್ರವೇ. ಆದ್ದರಿಂದ ನೀವು ಪುಸ್ತಕದ ನಂತರ ಪುಸ್ತಕ ಬರೆಯುತ್ತಲೇ ಇರಬೇಕಾಗುತ್ತದೆ. ಓದುವವರು ಮಾತ್ರ ದಿನಕ್ಕೊಂದು ಸಲ ಊಟ ಮಾಡಿ, ಅಡಿಕೆಪುಡಿ ಬಾಯಿಗೆ ಹಾಕಿಕೊಳ್ಳುವಂತೆ ಪುಸ್ತಕಗಳನ್ನು ಓದುತ್ತಾರೆ'
ನಿಜವೇ. ಆದರೆ ಯಾರೇನು ಮಾಡಲು ಸಾಧ್ಯ? ಬುದ್ಧ ಹೇಳಿದರೂ ಅಷ್ಟೇ, ಕೃಷ್ಣ ಹೇಳಿದರೂ ಅಷ್ಟೇ. ಅವರು ಹೇಳುವವರೆಗೇ ಅಲ್ಲವೇ ಇವರು ಮಾಡಬಲ್ಲವರಾಗುವುದು. ಕೇಳಿಸಿಕೊಳ್ಳುವುದು ಧರ್ಮ. ಆಚರಿಸದಿದ್ದರೆ ಖರ್ಮ. ಕೆಲವರನ್ನು ನೋಡಿ. ಸಂಜೆ ಆಗುತ್ತಿದ್ದಂತೆ ಆಧ್ಯಾತ್ಮಿಕ ಸಭೆ ಎಲ್ಲಿದೆಯೋ ಎಂದು ಹುಡುಕಿಕೊಂಡು ಅಲ್ಲಿಗೆ ಹೋಗುತ್ತಾರೆ. ಸಮಸ್ಯೆಗಳಿಗೆ ಪರಿಹಾರಕ್ಕೋಸ್ಕರ ಅಂತಹ ಭಾಷಣಗಳನ್ನು ಕೇಳುತ್ತಲೇ ಇರುತ್ತಾರೆ. ಕೇಳಿ ಬದಲಾಗುತ್ತಾರೆಂದಲ್ಲ. ಮನಸ್ಸಿಗೆ ಪ್ರಶಾಂತತೆ, ಒಳ್ಳೆಯ ಟೈಮ್ ಪಾಸ್, ವೃದ್ಧಾಪ್ಯದಲ್ಲಿ ನೆಮ್ಮದಿ.
ಈ ಪುಸ್ತಕದ ಬಗ್ಗೆ ವಿಜಯ ಎನ್ನುವ ಯುವತಿ ಬ್ಲಾಗ್ನಲ್ಲಿ ಬರೆದ ಕೆಲವು ಅಂಶಗಳನ್ನು ಆಕೆಯ ಅನುಮತಿಯೊಂದಿಗೆ ಇಲ್ಲಿ ಪ್ರಸ್ತಾಪ ಮಾಡುತ್ತೇನೆ:
`ಫಿóಲಾಸಫಿಗೆ, ಸ್ಪಿರಿಚ್ಯುಯಾಲಿಟಿಗೆ ಇರುವ ವ್ಯತ್ಯಾಸ ನನಗೆ ತಿಳಿಯದಾದರೂ, ಈ ಪುಸ್ತಕಗಳನ್ನು ಓದುತ್ತಿರುವೆನೆಂದಾಗ ನನ್ನ ಕೆಲವು ಸ್ನೇಹಿತರು, `ನಿನಗೆ ಈ ವಯಸ್ಸಿನಲ್ಲಿ ಈ ವೈರಾಗ್ಯ ಏಕೆ' ಎಂದರು. ಫಿಲಾಸಫಿಯನ್ನು ಹೆಚ್ಚಿಗೆ ಓದಿದರೆ ಬೇರೆ ಯಾವುದರ ಮೇಲೂ ಆಸಕ್ತಿ ಇರುವುದಿಲ್ಲವೇನೋ ಎಂದು ಇಲ್ಲಿಯವರೆಗೆ ಅಂದುಕೊಂಡಿದ್ದವಳು ನಾನು. ಆದರೆ ಮನುಷ್ಯನಿಗೆ ಜ್ಞಾನ ಬರುವುದೆಂದರೆ ಎಲ್ಲದರ ಮೇಲಿನ, ಎಲ್ಲರ ಮೇಲಿನ ಪ್ರೇಮವನ್ನು ಬಿಡುವುದಲ್ಲ. ಎಲ್ಲವನ್ನೂ, ಎಲ್ಲರನ್ನೂ ಪ್ರೇಮಿಸಬಲ್ಲವರಾಗುವುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಪ್ರಪಂಚವನ್ನು ಮೊದಲಿಗಿಂತ ಹೆಚ್ಚಿಗೆ ಪ್ರೇಮಿಸಬಲ್ಲವರಾಗುವುದು...! ಈ ದೃಷ್ಟಿಕೋನದಲ್ಲಿ ನೋಡಲು ಆರಂಭಿಸಿದರೆ ದಿನವೂ ನೋಡುವ ಪ್ರಪಂಚವೂ, ಮನುಷ್ಯರೂ ಬಹಳವೇ ಇಷ್ಟವಾಗಿ ಕಾಣಿಸುವರೇನೋ..!
ಹೀಗೆ ಪ್ರತೀ ಸ್ಥಳದಲ್ಲಿ ಮತ್ತೊಬ್ಬ ಮನುಷ್ಯನ ಬುದ್ಧಿಮತ್ತೆಗೆ, ಕಲೆಗೆ ಸಂತೋಷ-ಆಶ್ಚರ್ಯ ಪಡುವುದನ್ನು ಆರಂಭಿಸಿದರೆ ನಮಗೆ ಇತರರನ್ನು ನೋಡಿ ಅಸೂಯೆ ಪಡಬೇಕಾದ ಅಗತ್ಯವೇ ಬರುವುದಿಲ್ಲ. ಆಫೀಸಿನಲ್ಲಿ ಯಾರಾದರೂ ಒಳ್ಳೆಯ ಐಡಿಯಾ ಕೊಟ್ಟರೆ ಮನ:ಪೂರ್ವಕವಾಗಿ ಅಭಿನಂದಿಸುವುದು, ನಮ್ಮ ಹುಡುಗನಿಗಿಂತ ಮತ್ತೊಬ್ಬ ಹುಡುಗ ಒಳ್ಳೆಯ ಅಂಕಗಳನ್ನು ಪಡೆದರಾಗಲೀ, ಒಳ್ಳೆಯ ನೈಪುಣ್ಯವನ್ನು ಪ್ರದರ್ಶಿಸಿದರಾಗಲೀ ಅಸೂಯೆ ಪಡದೇ ಇರುವುದು ಅಭ್ಯಾಸವಾಯಿತು. ಶಾಲೆಯ ಫಂಕ್ಷನ್ಗಳಲ್ಲಿ ನಮ್ಮ ಹುಡುಗ ಇಪ್ಪತ್ತು ಜನ ಹುಡುಗರೊಂದಿಗೆ ಸೇರಿ ಒಟ್ಟಿಗೆ ನೃತ್ಯ ಮಾಡುತ್ತಿದ್ದರೆ, ಆ ಹತ್ತುನಿಮಿಷಗಳಲ್ಲಿ ಅವನನ್ನು ಮಾತ್ರವಲ್ಲದೇ ಪೂರ್ತಿ ನೃತ್ಯವನ್ನು ನೋಡಿ ಆನಂದಿಸುವುದನ್ನು ಕಲಿತುಕೊಂಡೆ.
ನಮಗೆ ದು:ಖ ಏಕೆ ಉಂಟಾಗುತ್ತದೆ? `ನಮ್ಮ' ಆನಂದವನ್ನು ಯಾರೋ ಹಾಳು ಮಾಡುತ್ತಿದ್ದಾಗ..! ಇಲ್ಲಿ `ಆನಂದ'ಕ್ಕಿಂತ `ಸೌಕರ್ಯ' ಎನ್ನುವ ಶಬ್ದ ಬಳಸಿದರೆ ಇನ್ನೂ ಸ್ಪಷ್ಟವಾಗಿ ಇರುತ್ತದೆ. ಸಿನಿಮಾಗೆ ಟಿಕೆಟ್ಟುಗಳು ಸಿಗದಿರುವುದು, ಹೋಗಬೇಕೆಂದುಕೊಂಡ ಟ್ರಿಪ್ಗೆ ಪ್ಲ್ಯಾನ್ ಮಾಡಿದ ಹಾಗೆ ಹೋಗಲಾಗದಿರುವುದು, ಏಕಾಂತ ಸಿಗದಿರುವುದು, ಕರೆಂಟು ಹೋಗಿ ಸೊಳ್ಳೆಗಳು ಕಚ್ಚುವುದು, ಮಗನಿಗೆ ಆ ದಿನ ಹೋಂವರ್ಕ್ಗೆ ಸಹಾಯ ಮಾಡಬೇಕೆಂದು ಅನಿಸದಿರುವುದು, ಬಂಧುಗಳ ಆಗಮನದಿಂದ ವಿಶ್ರಾಂತಿ ಸಿಗದೇ ಹೋಗುವುದು, ಆಫೀಸಿನಲ್ಲಿ ಪ್ರಮೋಷನ್ ಆಗಲೀ, ಸಂಬಳದಲ್ಲಿ ಬಡ್ತಿ ಆಗಲೀ ಬರದೇ, ಕೊಳ್ಳಬೇಕೆಂದಿದ್ದ ಕಾರನ್ನು ಕೊಳ್ಳಲಾಗದಿರುವುದು, ಕೆಲಸದವರು ಬರದಿದ್ದರೆ ಮನೆಯನ್ನು ಗುಡಿಸಬೇಕಾಗಿ ಬರುವುದು... ನಮ್ಮ ದೈನಂದಿನ ಬದುಕಿನಲ್ಲಿ ಹೀಗೆ ಆನಂದವನ್ನು ದೋಚಿ, ದು:ಖವನ್ನು ತರುವ ಕಾರಣಗಳು ಎಷ್ಟೊಂದಿವೆ ಅಲ್ಲವೇ?
ಹಾಗೆಂದು ನನ್ನ ದೈನಂದಿನ ಬದುಕಿನಲ್ಲಿನ ಬದಲಾವಣೆ ರಾತ್ರೋರಾತ್ರಿ ಉಂಟಾಗಲಿಲ್ಲ. ಆದರೆ ನನ್ನ ಆಲೋಚನಾವಿಧಾನದಲ್ಲಿ ಮಾರ್ಪಾಡು ಉಂಟಾಗಿದೆ.. 'ನಿಜವಾಗಿಯೂ ಇವೆಲ್ಲಾ ಹಾಳು ಮಾಡುತ್ತಿರುವುದು ನನ್ನ ಆನಂದವನ್ನೇ? ಇಲ್ಲಾ ನನ್ನ ಸೌಕರ್ಯವನ್ನೇ?' ಎಂದು ಆಲೋಚಿಸಲು ಆರಂಭಿಸಿದೆ. ಕೊನೆಗೆ ಅರ್ಥವಾಗಿದ್ದೇನೆಂದರೆ ನಿಜವಾದ ಆನಂದ ಎನ್ನುವುದು ನನ್ನ ಆಲೋಚನಾವಿಧಾನದಲ್ಲಿದೆಯೇ ಹೊರತು ಒಂದು ವಸ್ತು, ಒಬ್ಬ ವ್ಯಕ್ತಿ ಅಥವಾ ಒಂದು ಘಟನೆಯಲ್ಲಿಲ್ಲ. ಇದುವರೆಗೆ ಶಾರೀರಿಕ, ಮಾನಸಿಕ ಶ್ರಮ ಎನ್ನುವುದು `ದು:ಖ' ಎಂದು ಭ್ರಮೆ ಪಡುತ್ತಿದ್ದೆ. ಆದರೆ ಅದು ದು:ಖವಲ್ಲ. `ಸೌಕರ್ಯ ಇಲ್ಲದಿರುವುದು' ಮಾತ್ರವೇ. ಸೌಕರ್ಯದೊಂದಿಗೆ ಇಲ್ಲದಿರುವುದರಿಂದ ದು:ಖ ಉಂಟಾಗಬೇಕೇ ಇಲ್ಲವೇ ಎನ್ನುವುದು ನನ್ನ ಆಯ್ಕೆಯೇ ಅಲ್ಲವೇ?
ಕರೆಂಟ್ ಇಲ್ಲ. ಅದನ್ನು ಬರಿಸುವುದು ನನ್ನ ಕೈಯಲ್ಲಿಲ್ಲ. ಆದರೆ ಅಕಾರಣವಾಗಿ ಆನಂದವನ್ನು ಕಳೆದುಕೊಳ್ಳುವುದೂ, ಕಳೆದುಕೊಳ್ಳದೇ ಇರುವುದೂ ನನ್ನ ಕೈಗಳಲ್ಲಿಯೇ ಇದೆ ಅಲ್ಲವೇ? ಈ ಪುಸ್ತಕವನ್ನು ಓದಿದ್ದರಿಂದ, ಅನುಭವಕ್ಕೆ ಬಂದ ಮತ್ತೊಂದು ಸತ್ಯವೆಂದರೆ, ಆನಂದವೆನ್ನುವುದು ತೆಗೆದುಕೊಳ್ಳುವುದರಲ್ಲಿ ಇಲ್ಲ, ಕೊಡುವುದರಲ್ಲಿ ಇದೆ. ವಾರಾಂತ್ಯದಲ್ಲಿ ಒಂದು ರೆಸ್ಟೋರೆಂಟ್ಗೆ ಹೋಗಿ ತಿನ್ನುವುದು ಆನಂದವೋ, ಇಲ್ಲ ಒಳ್ಳೆಯ ತಿನಿಸನ್ನು ಮನೆಯಲ್ಲಿಯೇ ಸಿದ್ಧಮಾಡಿ, ಎಲ್ಲರೂ ತೃಪ್ತಿಯಿಂದ ತಿನ್ನುತ್ತಿದ್ದರೆ ಆಗುವುದು ಆನಂದವೋ ಎಂಬುದು ನನಗೆ ಚೆನ್ನಾಗಿ ಅರ್ಥವಾಗುವುದಕ್ಕೆ ಪ್ರಾರಂಭವಾಗಿದೆ.
ಇದನ್ನು ತಿಳಿದುಕೊಂಡರೆ ನಮ್ಮ ಸುತ್ತಲೂ ಎಷ್ಟು ಬದಲಾವಣೆಗಳು ಉಂಟಾಗುತ್ತವೆಯೋ. `ಮಾಡುವ ಕೆಲಸದ ಮೂಲಕ, ಸಹಾಯದ ಮೂಲಕ, ಪ್ರಶಂಸೆಯ ಮೂಲಕ ಇತರರಿಗೆ ನಾವು ಏನು ಕೊಡಬಲ್ಲೆವು' ಎನ್ನುವ ಕೋನದಿಂದಲೇ ಆಲೋಚಿಸಿದರೆ ಸಾಧ್ಯವಾದಷ್ಟೂ ಜನರಿಗೆ ಆನಂದ ತರುವವರಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬಲ್ಲೆವು.
ಕೊಡುವವರ ಲಿಸ್ಟ್ನಲ್ಲಿ ನಾವಿದ್ದರೆ, ನಮ್ಮನ್ನು ಇಷ್ಟ ಪಡುವವರ ಲಿಸ್ಟ್ ಬೆಳೆಯುತ್ತಲೇ ಹೋಗುತ್ತದೆ.
(ಮುಂದುವರಿಯುವುದು)
-ಯಂಡಮೂರಿ ವಿರೇಂದ್ರನಾಥ್
ಕನ್ನಡಕ್ಕೆ:-
ಯತಿರಾಜ್ ವೀರಾಂಬುಧಿ