ಕನಸು ಕಾಣದ ಮನುಜರಿಲ್ಲ. ನಿಜ ಜೀವನದಲ್ಲಿ ಸಿಗದಿದ್ದನ್ನು ಭ್ರಮೆಯಲ್ಲಿ ಕಂಡು ಮತ್ತದೇ ಗುಂಗು ಹೆಚ್ಚಾದಲ್ಲಿ ಕನವರಿಸಿಕೊಂಡು, ಕನಸು-ನನಸೋ, ನನಸು-ಕನಸೋ ಎಂಬ ಹೊಯ್ದಾಟದಲ್ಲಿ ಜೀವಿಸುವ ಮನುಜ ಸಹಜ ಗುಣವನ್ನು ಮೂಲ ಕಥಾವಸ್ತುವನ್ನಾಗಿ ಇಟ್ಟುಕೊಂಡು 'ಸ್ನೇಹರಂಗ' ಬೆಂಗಳೂರು ತಂಡ ರಾಮಚಂದ್ರದೇವ ಅವರ 'ಕುದುರೆ ಬಂತು ಕುದುರೆ' ನಾಟಕವನ್ನು ವೇದಿಕೆಗಿಳಿಸಿತ್ತು. ಟಿ.ಎನ್. ನರಸಿಂಹನ್ ಅವರ ರಂಗರೂಪದಲ್ಲಿ ಮತ್ತು ಎನ್. ಮಂಗಳಾ ಅವರ ನಿರ್ದೇಶನದಲ್ಲಿ ರಂಗಶಂಕರದಲ್ಲಿ ಈ ನಾಟಕದ ಪ್ರದರ್ಶನವಾಯಿತು.
ಕುದುರೆ ಭ್ರಮೆಯ ಪ್ರತೀಕವಾಗಿ ವಿವಿಧ ಸ್ತರಗಳ, ವಿವಿಧ ಪಾತ್ರಗಳಲ್ಲಿ ಹಾದು ಹೋಗುತ್ತಾ ಖುರಪುಟಗಳನ್ನು ಪುಟವಿಟ್ಟಂತೆ ಮನದಾಳದಲ್ಲಿ ಛಾಪಿಸಿ ಅವರವರ ಭ್ರಮೆಗಳ ಗರಿಷ್ಠತೆಯನ್ನು ನೋಡುಗರಿಗೆ ಮುಟ್ಟಿಸುವಲ್ಲಿ ಸಫಲವಾಗಿದೆ.
ಸಣ್ಣ ಹೋಟೆಲ್ನ ದೃಶ್ಯದಿಂದ ನಾಟಕ ಆರಂಭ. ಎಲ್ಲಾ ಪಾತ್ರಗಳು ನೋವುಗಳನ್ನು ಮತ್ತು ನಲಿವುಗಳ ಭ್ರಮೆಯನ್ನು ಬಿಚ್ಚಿಡುತ್ತಾ ಸಾಗುತ್ತವೆ. ಮಧ್ಯೆ ಮಧ್ಯೆ ಸಿನಿಮಾ ಶೂಟಿಂಗ್ನ ದೃಶ್ಯಾವಳಿಗಳು ಭ್ರಮೆಯನ್ನು ವಿಜೃಂಭಿಸುತ್ತದೆ. ಪ್ರಾರಂಭದಲ್ಲಿ ಎಲ್ಲಾ ಸಾಮಾನ್ಯ ನಾಟಕದಂತೆ ಆರಂಭವಾಗಿ, ಪಾತ್ರಗಳು ಸೇರ್ಪಡೆಯಾದಂತೆ ಕಥೆಯ ಆಳ, ವಿಸ್ತಾರಕ್ಕೂ ಹರಡಿ ವಾಸ್ತವತೆಯನ್ನು ತೆರೆದಿಡುತ್ತದೆ.
ಪ್ರಮುಖವಾಗಿ ನೋಡುಗರನ್ನು ಆಕರ್ಷಿಸುವ ಪಾತ್ರದಲ್ಲಿ ಪೋಸ್ಟ್ಮ್ಯಾನ್ (ಮುಕುಂದಗೌಡ) ತನ್ನಲ್ಲಿರುವ ಕಲಾವಿದನನ್ನು ಬಡಿದೆಬ್ಬಿಸಿ ಅಭಿವ್ಯಕ್ತಿಯನ್ನು ಸಮಯೋಜಿತವಾಗಿ ಪ್ರದರ್ಶಿಸಿದ್ದಾರೆ. ನಟನೆಗೆ ಬೇಕಾದ ಸಮಯಪ್ರಜ್ಞೆ ಈತನ ನಡೆಯಿಂದ ತಿಳಿಯುತ್ತದೆ. ಮತ್ತೊಂದು ಪಾತ್ರವಾದ ನಟ (ಟಿ. ರಘು) ತನ್ನ ಆಂಗಿಕ ನಟನೆಯ ಜೊತೆಗೆ ಧ್ವನಿಯನ್ನು ಜೋಡಿಸಿಕೊಟ್ಟಿದ್ದಾರೆ. ತಾಯಿ (ಸವಿತಾಭಟ್), ಮೇಷ್ಟ್ರು (ರುಕ್ಮಯ್ಯ ದೇವಾಡಿಗ), ಹಾಲಿನವ (ರಮೇಶಚಂದ್ರ), ಕ್ಲರ್ಕ್ (ಅನಂತ), ಹೂ ಮಾರುವವಳು (ನಿರ್ಮಲಾ ಸಾಯಿಕುಮಾರ್) ವ್ಯಕ್ತಿಗಳಾಗಿ ಬಂಗಾರಪ್ಪ ಖುದಾನ್ಪುರ ಮತ್ತು ಮಂಜುನಾಥ್ ಎಲ್ಲರ ನಟನೆಯೂ ಸೊಗಸು. ಹುಡುಗನಾಗಿ ಕು. ಪ್ರಾರ್ಥನಾ ಭಟ್ ಸೂಕ್ಷ್ಮತೆ ಅರಿತು ನುರಿತವರಂತೆ ನಟಿಸಿದ್ದಾಳೆ.
ಎಲ್ಲಾ ಪಾತ್ರಗಳು ಅವರವರದೇ ಆಯಕಟ್ಟಿನಲ್ಲಿ ವಿಹರಿಸಿ ಮತ್ತೆ ವಾಸ್ತವಕ್ಕೆ ಬಿದ್ದು ಒದ್ದಾಡುವ ದೃಶ್ಯಗಳು ನೋಡುಗನನ್ನೂ ವೇದಿಕೆಗೇರಿಸಿಬಿಡುತ್ತವೆ. ರಂಗಸಜ್ಜಿಕೆ ಕಥೆಗೆ ಪೂರಕವಾಗಿದ್ದು ರಂಗದ ಮಧ್ಯ ಭಾಗದಲ್ಲಿನ ಆಸನವನ್ನು ಸ್ಥಳಾಂತರಿಸಬಹುದೇನೋ? ರೇಡಿಯೋವನ್ನು ಒಂದು ಪಾತ್ರವಾಗಿಸಿದ್ದು ವಿಶೇಷ.
ಮನಸ್ಸನ್ನು ತಿಳಿಯುವ ದೃಶ್ಯದಲ್ಲಿ ಕ್ಲರ್ಕ್ನ ಹಪಹಪಿತನ ಬೆಳಕಿನ ಚಕಮಕಿಯಾಗುತ್ತದೆಯೇ ಹೊರತು ದೃಶ್ಯಕ್ಕೆ ಪೂರಕವಾಗಿಲ್ಲ. ಪೋಸ್ಟ್ಮ್ಯಾನ್ ಒಬ್ಬನದೇ ಆಗಿದ್ದಿದ್ದರೆ ದೃಶ್ಯಕ್ಕೆ ಹೆಚ್ಚು ಒತ್ತು ಸಿಗುತ್ತಿತ್ತು.
ಜಗಳದ ದೃಶ್ಯಗಳು, ಚೌಕಾಭಾರದ ಆಟದ ದೃಶ್ಯ ಕೋಲು ಕುದುರೆ, ಕೋಲಾಟ ದೃಶ್ಯ, ನಾಟಕಕ್ಕೆ ಮೆರುಗು ತಂದಿದೆ. ಪೋಸ್ಟ್ಮ್ಯಾನ್ಗೇ ಹೋಟೆಲ್ ಒಡತಿಯು ಪತ್ರ ಕೊಡುವ ದೃಶ್ಯ ಒಂದು ಹಸಿಯಾದ ಹಾಸ್ಯ. ಗಜಾನನ ನಾಯ್ಕ ಅವರ ಸಂಗೀತ ನಿರ್ದೇಶನ. ಪ್ರಸಾಧನ ಕೆ. ರಾಮಕೃಷ್ಣ. ಬೆಳಕು, ವಿನ್ಯಾಸ ಸಿ. ಶಿವಾನಂದ... ಇವರೆಲ್ಲ ಶ್ರಮ ಸಾರ್ಥಕ.
- ಸಂಕೇತ್ ಗುರುದತ್ತ