ಕನ್ನಡದಲ್ಲಿ ಅನುವಾದ ಸಾಹಿತ್ಯದ ದೊಡ್ಡ ಪರಂಪರೆಯೇ ಇದೆ. ರಾಮಾಯಣ, ಮಹಾಭಾರತಗಳನ್ನು ಸಂಸ್ಕೃತ ಪ್ರಾಕೃತಗಳಿಂದ ನಮ್ಮಲ್ಲಿ ಬಹು ಹಿಂದೆಯೇ ಅನುವಾದಿಸಲಾಗಿದೆ. ಬಳಿಕ ಬಂಗಾಳಿ, ಮರಾಠಿಗಳಿಂದ, ಇಂಗ್ಲಿಷ್ನಿಂದಲೂ ಅನುವಾದಗಳು ಕನ್ನಡಕ್ಕೆ ಬಂದಿವೆ. ಅನುವಾದ ಹೇಗಿರಬೇಕೆಂಬ ಸಂಬಂಧದಲ್ಲಿ ಕಳೆದ ಶತಮಾನದ ಆರಂಭದ ಎರಡು ದಶಕಗಳಲ್ಲಿ ಕನ್ನಡದಲ್ಲಿ ದೊಡ್ಡ ವಾಗ್ವಾದವೇ ನಡೆದುಹೋಗಿದೆ. ಈ ವಾಗ್ವಾದಗಳಿಗೆ ಅಂದಿನ ಸಾಹಿತ್ಯಕ ಪತ್ರಿಕೆಗಳು ವೇದಿಕೆಯನ್ನು ಒದಗಿಸಿದ್ದವು.
ಕನ್ನಡದ ಪ್ರಮುಖ ಸಾಹಿತ್ಯ ಮಾರ್ಗಗಳ ಸಂದರ್ಭದಲ್ಲಿಯೂ ಅನುವಾದಗಳು ಮೂಡಿ ಬಂದವು. ನವೋದಯದ ಸಂದರ್ಭದಲ್ಲಿ ಬಿಎಂಶ್ರೀಯವರ ಇಂಗ್ಲಿಷ್ ಗೀತೆಗಳು ಒಂದು ಕಾವ್ಯ ಮಾರ್ಗಕ್ಕೆ ನಿರ್ದೇಶನ ನೀಡುವ ಮಟ್ಟದಲ್ಲಿತ್ತು. ಅವಳ ತೊಡುಗೆ ಇವಳಿಗಿಟ್ಟು ನೋಡುವ ಹಾಡುವ ಬಯಕೆಯ ಫಲ ಇದು. ಅದೇ ರೀತಿ ನವ್ಯ, ಪ್ರಗತಿಶೀಲರ ಕಾಲದಲ್ಲಿಯೂ ಇಂಥ ಅನುವಾದಗಳು ಫ್ರೆಂಚ್, ರಷ್ಯನ್ ಸಾಹಿತ್ಯದಿಂದ ಬಂದವು. ಬಂಡಾಯ- ದಲಿತ ಸಂದರ್ಭದಲ್ಲಿ ಆಫ್ರಿಕದ, ದಕ್ಷಿಣ ಅಮೆರಿಕದ ಹತ್ತಿಕ್ಕಲ್ಪಟ್ಟ ವರ್ಗದವರ ಕಾವ್ಯಗಳು ಬಂದವು. ಅದೇ ರೀತಿ ಮರಾಠಿಯಿಂದ ಬಂದ ದಲಿತ ಸಾಹಿತ್ಯದ ಅನುವಾದಗಳು ಗಮನಾರ್ಹವಾದವು. ಅವೆಲ್ಲ ಒಂದು ಆ್ಯಂಥಾಲಜಿಯ ರೀತಿಯಲ್ಲಿ ಮಾರ್ಗದರ್ಶಕಗಳಾಗಿ ಬಂದವು.
ಕನ್ನಡದ ಅನುವಾದ ಸಾಹಿತ್ಯದಲ್ಲಿ ಡಿ.ಎನ್. ಶ್ರೀನಾಥ ಅವರ ಹೆಸರು ಬಹು ಹಿಂದಿನಿಂದ ಕೇಳಿಬರುತ್ತಿದೆ. ಯಾವುದೇ ಪತ್ರಿಕೆ ನೋಡಿದರೂ ಅದರಲ್ಲಿ ಅವರ ಅನುವಾದಿತ ಕತೆಗಳು, ಕವನಗಳು ಕಂಡುಬರುತ್ತವೆ. ಅನುವಾದವನ್ನು ಅವರು ಒಂದು ವ್ರತದಂತೆ ನಡೆಸಿಕೊಂಡು ಬಂದಿದ್ದಾರೆ. ಪ್ರಸ್ತುತ ಅವರ 'ಒಂದಿಷ್ಟು ಭಾರತೀಯ ಕವಿತೆಗಳು' ಅನುವಾದಿತ ಸಂಕಲನದಲ್ಲಿ ಇಪ್ಪತ್ತೆರಡು ಭಾಷೆಯ 83 ಕವಿಗಳ 96 ಕವನಗಳಿವೆ. ಇವೆಲ್ಲವನ್ನೂ ಅವರು ಹಿಂದಿಯಿಂದ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಸಂಪಾದಿಸಿದ 'ಸಮಕಾಲೀನ ಭಾರತೀಯ ಸಾಹಿತ್ಯ'ದಿಂದ ಕವಿತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಈ ಅನುವಾದದ ಒಂದು ವಿಶೇಷವೆಂದರೆ ಮೂಲ ಭಾಷೆಯಿಂದ ಹಿಂದಿಗೆ, ಅಲ್ಲಿಂದ ಕನ್ನಡಕ್ಕೆ. ಹಿಂದಿಯೊಂದನ್ನು ಬಿಟ್ಟರೆ ಯಾವುವೂ ಮೂಲದಿಂದ ನೇರವಾಗಿ ಅನುವಾದಿಸಿದ್ದಲ್ಲ. ಕಾವ್ಯವನ್ನು ಅನುವಾದಿಸುವುದು ಅನುವಾದಕನಿಗೆ ಯಾವತ್ತಿಗೂ ಸವಾಲಿನ ಕೆಲಸವೇ. ಅತ್ಯುತ್ತಮ ಕಾವ್ಯ ಅದರೆಲ್ಲ ರಸಭಾವದೊಂದಿಗೆ ಅನುವಾದದಲ್ಲಿ ಮೈತಳೆಯುವುದು ಕಷ್ಟವೇ. ಮೂಲ ಭಾಷೆಯಿಂದ ಹಿಂದಿಗೆ ಬರುವಾಗ ಈ ರಸಭಾವ ಸ್ವಲ್ಪ ಸೋರಿಹೋಗಿರುತ್ತದೆ. ಇನ್ನೊಂದು ಅಂಶವೆಂದರೆ ಇವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಿಕ್ಕಾಗಿ ಬರೆದಿರಬಹುದು. ಜನಪ್ರಿಯ ಪತ್ರಿಕೆಗಳು ಯಾವತ್ತೂ ಕ್ಲಿಷ್ಟವಾದ, ಓದುಗನಿಗೆ ಸವಾಲಾಗಬಲ್ಲ ಸಾಹಿತ್ಯವನ್ನು ಪ್ರಕಟಿಸಲು ಹೋಗುವುದಿಲ್ಲ. ಪತ್ರಿಕೆಯವರ ಬೇಡಿಕೆಯ ಒತ್ತಡದಲ್ಲಿ ಆ ಭಾಷೆಯ ಅತ್ಯುತ್ತಮ ಕವಿತೆಯ ಅನುವಾದ ಇಲ್ಲಿದೆ ಎಂದೂ ಹೇಳುವಹಾಗಿಲ್ಲ.
ಒಂದು ಭಾಷೆಯ ಮೂರ್ನಾಲ್ಕು ಕವಿತೆಗಳನ್ನು ಆಯ್ದುಕೊಂಡಾಗ ಅವು ಪ್ರಾತಿನಿಧಿಕ ಆಗುವ ಯಾವ ಸಾಧ್ಯತೆಯೂ ಇರುವುದಿಲ್ಲ. ಈ ಎಲ್ಲ ಊನಗಳ ನಡುವೆಯೂ ಶ್ರೀನಾಥ ಅವರ ಈ ಸಂಕಲನ ಸಮಕಾಲೀನ ಭಾರತೀಯ ಕಾವ್ಯದ ಬಗ್ಗೆ ಒಂದು ಅರಿವನ್ನು ಓದುಗರಿಗೆ ಒದಗಿಸಬಲ್ಲುದು. ಅವರ ಅನುವಾದದ ಬಗ್ಗೆ ಎರಡು ಮಾತಿಲ್ಲ. ಮೂಲ ಕನ್ನಡದ ಸೃಷ್ಟಿಯೇನೋ ಎನ್ನುವಂತೆ ಅವರು ಅನುವಾದಿಸಿದ್ದಾರೆ.
ಅನುವಾದಗಳು ಬೇರೆಬೇರೆ ಕಾಲದಲ್ಲಿ ಬೇರೆಬೇರೆ ವ್ಯಕ್ತಿಗಳಿಂದ ಸಂಭವಿಸುತ್ತಲೇ ಇರುತ್ತವೆ. ಶ್ರೀನಾಥರ ಈ ಅನುವಾದ ಸಾಹಿತ್ಯವನ್ನು ಅವುಗಳೊಂದಿಗೆ ತೌಲನಿಕವಾಗಿ ನೋಡಬಹುದು. ಅದೇ ರೀತಿ ಕನ್ನಡದ ಕವಿಗಳ ರಚನೆಗಳೊಂದಿಗೆ ಇಲ್ಲಿಯ ಕವಿತೆಗಳನ್ನು ತೂಗಿ ನೋಡಬಹುದು. ಈ ಮೂಲಕ ಕನ್ನಡದ ಮನಸ್ಸು ಹಾಗೂ ಇತರ ಭಾರತೀಯ ಮನಸ್ಸು ವರ್ತಮಾನಕ್ಕೆ ಹೇಗೆ ಸ್ಪಂದಿಸಿವೆ ಎಂಬುದನ್ನು ಅರಿಯಬಹುದು. ಇದಕ್ಕಾಗಿ ನಾವು ಶ್ರೀನಾಥ ಅವರನ್ನು ಅಭಿನಂದಿಸಲೇಬೇಕು.
ಕೃತಿ: ಒಂದಿಷ್ಟು ಭಾರತೀಯ ಕವಿತೆಗಳು
ಪ್ರಕಾರ: ಅನುವಾದ ಕಾವ್ಯ
ಏಕೆ ಓದಬೇಕು?: ಭಾರತೀಯ ಸಾಹಿತ್ಯ ಅರಿಯಲು
ಪ್ರ: ಕಾವ್ಯಕಲಾ ಪ್ರಕಾಶನ, ಬೆಂಗಳೂರು, ಪುಟಗಳು 240, ಬೆಲೆ ರು. 200