ವಯೋವೃದ್ಧ ಉತ್ಸಾಹಿ ಯುವಕ ವಿದ್ಯಾಧರ ಗುರೂಜಿ ಯಾದಗಿರಿ ತಾಲೂಕು ಗುರುಮಠಕಲ್ನ ಬಡ ಮಡಿವಾಳ ವರ್ಗದಲ್ಲಿ ಜನಿಸಿದರು. ಬಾಲ್ಯದ ಹೆಸರು ಭಿಕ್ಷಪ್ಪಿ. ಮಾತೃ ಭಾಷೆ ತೆಲುಗು. ಪರಿಸರ ಭಾಷೆ ಕನ್ನಡ. ಓದಿದ್ದು ಉರ್ದು ಮಾಧ್ಯಮ. ಆ ಕಾಲದಲ್ಲಿ ಹೈದರಾಬಾದ್ ನಿಜಾಮರ ಆಡಳಿತ ಭಾಷೆ ಉರ್ದುವಾಗಿದ್ದು ಕೆಲವು ವಿದ್ಯಾವಂತ ಕನ್ನಡಿಗರು ಆ ಭಾಷೆಯಲ್ಲೇ ಸಂಭಾಷಿಸುತ್ತಿದ್ದರು. (ಇದನ್ನು ನಾನೇ ಪ್ರತ್ಯಕ್ಷ ಕಂಡಿದ್ದೇನೆ). ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಭಾರತಾದ್ಯಂತ ವ್ಯಾಪಿಸಿದ್ದ ಸ್ವಾಭಿಮಾನದ ಉತ್ಸಾಹದ ಸ್ವಾತಂತ್ರ್ಯ ಕೂಗಿಗೆ ಅವರು ಮನಸೋತರು. 1942ರ ಸುಮಾರಿನಲ್ಲಿ 'ಮಾಡು, ಇಲ್ಲವೇ ಮಡಿ', 'ವಂದೇ ಮಾತರಂ', 'ಬೋಲೋ ಭಾರತ್ ಮಾತಾ ಕೀ ಜೈ' ಎಂಬ ಘೋಷಣೆ ನಿಜಾಮರ ರಾಜ್ಯವೂ ಸೇರಿದಂತೆ ಭಾರತಾದ್ಯಂತ ಮೊಳಗುತ್ತಿತ್ತು. 1937ರಲ್ಲಿ ಅವರು ಸುಭಾಷ್ಚಂದ್ರ ಬೋಸರನ್ನು ಬೋಗಿಯಲ್ಲಿ ಕಂಡು ಪುಳಕಿತರಾದರು.
1945ರಲ್ಲಿ ಕಲ್ಬುರ್ಗಿಯಲ್ಲಿ ನಡೆದ 'ಆರ್ಯ ಸಮಾಜ' ಸಮಾವೇಶ ಹಿಂದೂಗಳ ಒಗ್ಗಟ್ಟಿನ ಅವಶ್ಯಕತೆಯನ್ನು ಎತ್ತಿ ಹಿಡಿಯಿತು. ಸಮಾವೇಶವು ಮತಾಂತರಗೊಂಡ ಅನೇಕ ಕ್ರಿಶ್ಚಿಯನ್ನರು, ಮುಸ್ಲಿಮರು 'ಶುದ್ಧಿ' ಮೂಲಕ ಹಿಂದೂ ಧರ್ಮಕ್ಕೆ ವಾಪಸಾಗಲು ಕಾರಣವಾಯಿತು. ಆ ಕಾಲಕ್ಕೆ ನಿಜಾಮರ ರಾಜ್ಯದಲ್ಲಿ ಇತ್ತೇಹಾರ್- ಉಲ್- ಮುಸಲ್ಮಾನ್ ಸಂಘಟನೆಯ ರಜಾಕಾರರು ಸಾವಿರಾರು ಹಿಂದೂಗಳನ್ನು ಬಹಿರಂಗವಾಗಿ ಕೊಂದರು. 1947ರ ಆಗಸ್ಟ್ 15 ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರೂ ನಿಜಾಮರು ತನ್ನ ರಾಜ್ಯವು ಭಾರತದ ಭಾಗವಾಗಿರದೆ ಸ್ವತಂತ್ರ ರಾಷ್ಟ್ರವಾಗಿರಬೇಕೆಂದು ಘೋಷಿಸಿದ ಕಾಲದಲ್ಲಂತೂ ರಜಾಕಾರರ ಹಾವಳಿ ಮಿತಿ ಮೀರಿತು. ಇದಕ್ಕೆ ಒಂದು ಸ್ಪಷ್ಟ ಉದಾಹರಣೆ: ಬೀದರ್ ಜಿಲ್ಲೆಯ ಗೋರ್ಟಾ ಗ್ರಾಮಕ್ಕೆ 1948, ಮೇ 10ರಂದು ವಕೀಲರ ನಿಯೋಗ ಭೇಟಿ ಕೊಟ್ಟು ನೀಡಿದ ವರದಿ (440 ಮನೆ, 2500 ಜನ ವಾಸವಾಗಿದ್ದ ಗ್ರಾಮದಲ್ಲಿ ಮೂವರು ಮದುಕಿಯರನ್ನು ಬಿಟ್ಟರೆ ಯಾರೂ ಇರಲಿಲ್ಲ. ಎಲ್ಲಿ ನೋಡಿದರೂ ಜನರ ದನಕರುಗಳ ದುರ್ವಾಸನೆಯ ಹೆಣಗಳು, ಅಲ್ಲಲ್ಲಿ ಅಸ್ಥಿಪಂಜರಗಳು; ಕೆಲವು ದಲಿತರ ಮುಸ್ಲಿಮರ ಮನೆ ಬಿಟ್ಟರೆ ಎಲ್ಲವೂ ಭಸ್ಮ. ಅಲ್ಲಿದ್ದ ಒಂದು ಮನೆಯಲ್ಲಿ ಇನ್ನೂರು ಜನರನ್ನು ಕೂಡಿಹಾಕಿ ರಜಾಕಾರರು ಮನೆಗೆ ಬೆಂಕಿಹಾಕಿ ಸುಟ್ಟಿದ್ದರು. ಕೊಲೆಯಾದವರಲ್ಲಿ ಬಹುತೇಕರು ಲಿಂಗಾಯತರು. (ಈ ಖಚಿತ ಮಾಹಿತಿ ನಾನು ಸೇರಿಸಿದ್ದು). ವಲ್ಲಭಭಾಯ್ ಪಟೇಲರು ಭಾರತದ ಸೇನೆ ಕಳುಹಿಸಿ ಹೈದರಾಬಾದನ್ನು ವಶಪಡಿಸಿಕೊಂಡರು.
ಹಿಂದೂಗಳ ಕೊಲೆಯಂಥ ಘಟನೆಗಳನ್ನು ನಿಜಾಮರ ರಾಜ್ಯದಲ್ಲಿದ್ದ ವಿದ್ಯಾಧರ ಗುರೂಜಿ ಕಣ್ಣಾರೆ ಕಂಡವರು. ಅವರು ಅನಾಥ ಹಿಂದೂಗಳ ಪರವಾಗಿ ನಿಂತಿದ್ದನ್ನು ಕಂಡ ನಿಜಾಮ ಸರ್ಕಾರ ಅವರನ್ನು ಬಂಧಿಸಲು ಮುಂದಾದಾಗ, ಅವರು ಯಾದಗಿರಿ ಬಿಟ್ಟು ಕೆಲಕಾಲ ಬೆಟ್ಟ ಕಾಡುಗಳಲ್ಲಿ ಮರೆಯಾಗಿದ್ದು ಮುಂದೆ ಸೊಲ್ಲಾಪುರಕ್ಕೆ ಹೋಗಿ ಅಲ್ಲಿ 'ನಿರ್ವಾಸಿತ ಸೇವಾ ಸಮಿತಿ' ಸ್ಥಾಪಿಸಿ ಹಲವು ಅನಾಥರಿಗೆ ಆಶ್ರಯ ನೀಡಿದರು. ಆಗ ಜಯದೇವ ತಾಯಿ ಲಿಗಾಡೆಯವರ ಸಹಕಾರ ಪಡೆದುಕೊಂಡರು. ಹೈದರಾಬಾದ್ ಸ್ವತಂತ್ರ ಭಾರತದಲ್ಲಿ ವಿಲೀನಗೊಂಡಾಗ ಅವರು ಯಾದಗಿರಿಗೆ ಹಿಂದಿರುಗಿ ಬರುತ್ತಿದ್ದಂತೆ ಅಲ್ಲಿನ ಜನ ಅವರನ್ನು ಭವ್ಯವಾಗಿ ಸ್ವಾಗತಿಸಿದರು. ಅವರು ತಮ್ಮ ಹುಟ್ಟೂರು ಗುರುಮಠಕಲ್ನಲ್ಲಿ ಬಟ್ಟೆ ನೇಯುವ ಕೆಲಸ ಮಾಡಿ, ಖಾದಿ ಬಟ್ಟೆಯ ಪ್ರಚಾರ ಮಾಡಿದರು. ಸ್ವಾತಂತ್ರ್ಯಪೂರ್ವದಲ್ಲಿ ಖಾದಿ ಬಟ್ಟೆ ಧಾರಣೆ ಗ್ರಾಮೋದ್ಯೋಗದ, ಸ್ವಾವಲಂಬನೆಯ, ಸ್ವಾತಂತ್ರ್ಯದ ಸಂಕೇತವಾಗಿತ್ತು.
ವಿದ್ಯಾಧರ ಗುರೂಜಿಯವರಿಗೆ ಸ್ವಲ್ಪವೂ ಜಾತಿ ಭೇದ ಇರಲಿಲ್ಲ. ಅವರು ಅಸ್ಪೃಶ್ಯತೆ, ದೇವದಾಸಿ ಪದ್ಧತಿ ವಿರುದ್ಧ ಅಪಾರ ಕೆಲಸ ಮಾಡಿದರು. ಬ್ರಾಹ್ಮಣ, ಲಿಂಗಾಯತ, ದಲಿತ ವರ್ಗಗಳ ವಧೂವರರಿಗೆ ತಾವೇ ವ್ಯವಸ್ಥೆ ಮಾಡಿ ಮದುವೆ ಮಾಡಿಸಿದರು. ಅವರ ಪತ್ನಿ ಸವಿತಾ ಹುಟ್ಟಿನಿಂದ ದಲಿತ ವರ್ಗದವರು. ಅವರು ಮಗಳನ್ನು ಲಿಂಗಾಯತ ವರನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಅವರು ಬ್ರಾಹ್ಮಣರ ಜೊತೆ, ದಲಿತರ ಜೊತೆ ವಿವಾಹ ಸಂಬಂಧ ಮಾಡಿದ್ದಾರೆ. ಮುಸಲ್ಮಾನ್ ಹುಡುಗನಿಗೆ ಹಿಂದೂ ಹುಡುಗಿ ಜೊತೆ ಮದುವೆ ಮಾಡಿಸಿದ್ದಾರೆ. ಅವರು ಜಾತಿ ಭೇದ ನಿವಾರಣೆ ಬಗ್ಗೆ ಬರೀ ಬಾಯಿ ಮಾತನಾಡಿಲ್ಲ; ಅವರಂತೆ ಅಂತರಜಾತೀಯ ವಿವಾಹಗಳನ್ನು ತಮ್ಮ ಕುಟುಂಬದಲ್ಲೇ ಮಾಡಿಸಿರುವುದು ಅತ್ಯಂತ ವಿರಳ ಮತ್ತು ರೋಚಕ ವಿಷಯ. ಅವರು ಸ್ಥಾಪಿಸಿರುವ 'ಗಾಂಧಿ ಜನರಲ್ ಹಾಸ್ಟೆಲ್'ನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳೂ ಇದ್ದಾರೆ. ಹಿಂದುಳಿದ ವರ್ಗದ ಹಲವರಿಗೆ ವಾಸಕ್ಕೆ ಮನೆಗಳನ್ನು ಕಟ್ಟಿಸಿಕೊಟ್ಟ ಮಹನೀಯರು ಅವರು. ಆ ಪ್ರದೇಶದಲ್ಲಿ ಹಿಂದೆ ಪ್ರಚಲಿತವಿದ್ದ 'ಜೀತ ಪದ್ಧತಿ' ವಿರುದ್ಧ ಕೂಡ ಹೋರಾಡಿದ್ದಾರೆ.
ಅವರು ಹಲವು ರಾಷ್ಟ್ರ, ರಾಜ್ಯಮಟ್ಟದ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಮುಖ್ಯಮಂತ್ರಿ (ದಿ.) ರಾಮಕೃಷ್ಣ ಹೆಗ್ಗಡೆ ಉಪಸ್ಥಿತಿಯಲ್ಲಿ 11.11.89ರಲ್ಲಿ ಕಲ್ಬುರ್ಗಿಯಲ್ಲಿ ನಡೆದ ದಕ್ಷಿಣ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಹಿಂದಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ರಾಷ್ಟ್ರಭಾಷೆ ಹಿಂದಿಯ ಪ್ರಚಾರ ಮಾಡಿದರು. ಅವರ ಮನೆಮಾತು ತೆಲುಗಾದರೂ ರಾಜ್ಯ ಭಾಷೆ ಕನ್ನಡದ ಮೇಲೆ ಅಷ್ಟೇ ಅಭಿಮಾನ. ಭಾಷಾಂಧತೆ ಎಂಬುದು ಅವರ ಗುಣದಲ್ಲೇ ಇಲ್ಲ. ಬಸವ ಕಲ್ಯಾಣದಲ್ಲಿ ನಡೆದ ಭಾರತ ಶರಣ ಸಮ್ಮೇಳನದಲ್ಲಿ ಅವರಿಗೆ 'ಜಾತಿ ಭಗ್ನ ವೀರ' ಎಂಬ ಪ್ರಶಸ್ತಿ ನೀಡಲಾಗಿದೆ. ಮಡಿವಾಳ ಸಮಾಜವು ಅವರಿಗೆ 'ಮಾಚಿ ಮಡಿವಾಳ ರತ್ನ ಪ್ರಶಸ್ತಿ' ನೀಡಿದೆ. 2007ರಲ್ಲಿ ಬೆಂಗಳೂರಿನ ಬಸವ ಸಮಿತಿಯು ದಲಿತರ ಬಡವರ ಅಭಿವೃದ್ಧಿಗೆ, ಅಂತರಜಾತೀಯ ವಿವಾಹಗಳನ್ನು ಮಾಡಿಸಿದ್ದಕ್ಕೆ ಅಭಿನಂದನಾ ಪತ್ರ ಸಲ್ಲಿಸಿದೆ. ವಿಶೇಷವಾಗಿ ಬಡವರಿಗೆ ಸಹಾಯ ಮಾಡಿದ್ದಕ್ಕೆ ಅವರಿಗೆ 'ದೇವರಾಜ ಅರಸು ಪ್ರಶಸ್ತಿ'ಯ ರೂಪವಾಗಿ ಒಂದು ಲಕ್ಷ ರುಪಾಯಿ ನೀಡಲಾಗಿದೆ. ಗೋವಾವನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ನಡೆಸಿದ ಹೋರಾಟದ ಬಗ್ಗೆಯೂ ಗೌರವಗಳು ಸಂದಿವೆ. 1986ರಲ್ಲಿ ಅವರು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡರು. ಅವರು ಸ್ಥಾಪಿಸಿರುವ 'ಲೋಕ ಸಾಹಿತ್ಯ ಮಂಟಪ'ದಲ್ಲಿ ಹಲವು ಸಾಹಿತಿಗಳು, ಇತಿಹಾಸಕಾರರು, ಪ್ರಾಜ್ಞರು, ಉಪನ್ಯಾಸಗಳನ್ನು ನೀಡಿದ್ದಾರೆ. ಯಾದಗಿರಿ ಪ್ರದೇಶದ ಸಾಹಿತ್ಯ ವಾತಾವರಣವನ್ನು ಬೆಳೆಸಲು ಯತ್ನಿಸಿದ್ದಾರೆ.
ವಿದ್ಯಾಧರ ಗುರೂಜಿ ಪುಸ್ತಕ ಪ್ರೇಮಿ. ಜ್ಞಾನೋಪಾಸಕ. ದೀನ ದಲಿತರ ಬಂಧು. ನಿಸ್ವಾರ್ಥ ಸ್ವಾತಂತ್ರ್ಯ ಹೋರಾಟಗಾರ. ಕಷ್ಟ ಸಾಗರದಲ್ಲಿ ಅರಳಿದ ಕಮಲ. ಬಡ ಹುಡುಗರ ಅರುಣೋದಯ. ಅಪ್ಪಟ ಗಾಂಧಿವಾದಿ. ಇಂಥ ಬಹುಮುಖ ವ್ಯಕ್ತಿತ್ವದ ಒಬ್ಬ ಅಪೂರ್ವ ವ್ಯಕ್ತಿ ನಮ್ಮ ಜೊತೆ ಇದ್ದಾರೆ, ಇರುತ್ತಾರೆ ಎಂಬುದು ಹೆಮ್ಮೆಯ ಸಂಗತಿ. 'ಭಿಕ್ಷಪ್ಪ' ಅಕ್ಷರಶಃ 'ವಿದ್ಯಾಧರ ಗುರೂಜಿ'ಯಾಗಿ ವಿಕಸನಗೊಂಡಿರುವುದೂ ಅಷ್ಟೇ ಗಮನಾರ್ಹ.
- ಡಾ. ಎಂ. ಚಿದಾನಂದಮೂರ್ತಿ