ಕೆಲವು ಚಿತ್ರಗಳೇ ಹಾಗೆ, ಎವರ್ಗ್ರೀನ್. ಹಾಗೆ ಜಗತ್ತಿನ ಬಹುತೇಕ ಸಿನಿಮಾಸಕ್ತರ ಮೆಚ್ಚುಗೆ ಗಳಿಸಿ, ಅವರ ನೆನಪಿನ ಕಪಾಟಿನಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡಿರುವ ಚಿತ್ರ 'ಸಿಟಿಜನ್ ಕೇನ್'. ಪ್ರಪಂಚದ ಅತ್ಯುತ್ತಮ ಹತ್ತು ಚಿತ್ರಗಳನ್ನು ಪಟ್ಟಿ ಮಾಡಿದರೆ ಆ ಹತ್ತರಲ್ಲಿ 'ಸಿಟಿಜನ್ ಕೇನ್' ಕೂಡ ಒಂದಾಗಿರುತ್ತದೆ. ಸಿನಿಮಾ ಶಿಬಿರಗಳಲ್ಲಿ, ಫಿಲ್ಮ್ ಸೊಸೈಟಿಗಳಲ್ಲಿ ಈಗಲೂ ಮಹತ್ತರ ಪಠ್ಯವಾಗಿರುವ 'ಸಿಟಿಜನ್ ಕೇನ್', ಕಪ್ಪು ಬಿಳುಪಿನ ಚಿತ್ರ. ಎಲ್ಲರಿಗೂ ಗೊತ್ತಿರುವಂತೆ ಇದು ಅಮೆರಿಕದ ವೃತ್ತಪತ್ರಿಕೆಗಳ ಒಡೆಯ ರ್ಯಾಂಡಲ್ಫ್ ಹರ್ಸ್ಟ್ನೇ ಈ ಚಿತ್ರಕ್ಕೆ ಸ್ಫೂರ್ತಿ ಮತ್ತು ಪ್ರೇರಣೆ. ಈತ ತನ್ನ ಒಡೆತನದ ಪತ್ರಿಕೆಗಳ ಗಾಳಿಮಾತು, ಗುಮಾನಿ, ಕಟ್ಟುಕತೆಗಳನ್ನೇ ನಿಜ ಎಂದು ನಂಬಿ ಹೊರಜಗತ್ತಿನ ವಾಸ್ತವ ಮರೆತವನು. ಆದರೆ ಭ್ರಮೆಯಿಂದ ಹೊರಬಂದು ನಿಜ ಸಂಗತಿಗಳನ್ನು ನೋಡಿ ಹರ್ಸ್ಟ್ ದಂಗಾಗುತ್ತಾನೆ. 'ತಾನು ನಂಬಿದ್ದೇ ಬೇರೆ, ವಾಸ್ತವನೇ ಬೇರೆ' ಎಂದು ತಿಳಿಯುವಷ್ಟರಲ್ಲಿ ದುರಂತದ ಮುಕ್ಕಾಲು ಹಾದಿಯನ್ನು ಆಗಲೇ ಕ್ರಮಿಸಿರುತ್ತಾನೆ. ಇದು ನೈಜ ಬದುಕಿನ ಪುಟ. ಇದನ್ನು ನಿರ್ದೇಶಕ ಆರ್ಸನ್ ವೆಲ್ಸ್ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಕೇನ್ ಪಾತ್ರದಲ್ಲಿ ಹರ್ಸ್ಟ್ನ ಬದುಕು ಆವರಿಸಿಕೊಂಡಿದೆ.
ಇಲ್ಲಿ ಆರ್ಸನ್ ವೆಲ್ಸ್, ನಿರ್ದೇಶನದ ಜೊತೆಗೆ ತಾನೇ ಕೇನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. 72 ವರ್ಷಗಳ ಹಿಂದೆ ವೆಲ್ಸ್ ಈ ಚಿತ್ರ ನಿರ್ದೇಶಿಸಿ, ಅಭಿನಯಿಸುವಾಗ ಆತನಿಗೆ ಕೇವಲ 25 ವರ್ಷ. ಹರ್ಸ್ಟ್ನ ಒಡೆತನದ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಆತನ ಆತ್ಮವಂಚನೆಯ ಬದುಕನ್ನು ಹತ್ತಿರದಿಂದ ನೋಡಿದ ಲೇಖಕ ಮಂಕೀವಿಜ್ ವೆಲ್ಸ್ಗೆ ಚಿತ್ರಕಥೆ ಒದಗಿಸಿಕೊಟ್ಟಿದ್ದಾನೆ. ಚಿನ್ನದ ಗಣಿ ಮಾಲಿಕನ ಮಗನಿಗೆ ಅಪಾರ ಹಣ ಸಿಕ್ಕಿದೆ. ರಾತ್ರೋರಾತ್ರಿ ಶ್ರೀಮಂತಿಕೆಯ ಪಡಸಾಲೆಯಲ್ಲಿ ಮಿಂಚುವ ಈತ, ಪತ್ರಿಕಾರಂಗಕ್ಕೆ ಕಾಲಿಡುತ್ತಾನೆ. ವೃತ್ತಪತ್ರಿಕೆಗಳ ಸಮೂಹಕ್ಕೆ ಒಡೆಯನಾಗುತ್ತಾನೆ. ಪ್ರಸಾರವನ್ನು 26 ಸಾವಿರದಿಂದ 5 ಲಕ್ಷಕ್ಕೆ ಮುಟ್ಟಿಸುತ್ತಾನೆ. ವರ್ಚಸ್ಸು, ಪ್ರಭಾವ, ಅಧಿಕಾರ, ಶ್ರೀಮಂತಿಕೆಗಳು ಈತನ ಮುಂದೆ ಕಾಲು ಮುರಿದುಕೊಂಡು ಶರಣಾಗುತ್ತವೆ. ಅದೇ ಸಂದರ್ಭ ಅಹಂಕಾರ, ವ್ಯಕ್ತಿ ಪ್ರತಿಷ್ಠೆ ತಲೆಗೇರುತ್ತದೆ. 'ಇಡೀ ಜಗತ್ತನ್ನೇ ಬದಲಾಯಿಸಬಲ್ಲೆ. ಜನರ ಅಭಿಪ್ರಾಯಗಳನ್ನು ನನ್ನ ಮೂಗಿನ ನೇರಕ್ಕೆ ತಿರುಗಿಸಬಲ್ಲೆ' ಎಂದುಕೊಳ್ಳುವ ಕೇನ್, ಭ್ರಮಾಪೀಡಿತನಾಗಿ ಚುನಾವಣೆಗೆ ನಿಲ್ಲುತ್ತಾನೆ. 'ಕೇನ್ ಫಾರ್ ಗೌರ್ನರ್' ಎನ್ನುವ ಪೋಸ್ಟರ್ಗಳು ರಾರಾಜಿಸುತ್ತವೆ. ಯಾವ ಮಟ್ಟಕ್ಕೆ ಭ್ರಮೆಯಲ್ಲಿ ಮುಳಗಿದ್ದನೆಂದರೆ, ಫಲಿತಾಂಶ ಪ್ರಕಟವಾಗುವ ಮುನ್ನವೇ ಪತ್ರಿಕೆಯಲ್ಲಿ 'ಕೇನ್ ದಿಗ್ವಿಜಯ' ಹಾಗೂ 'ಚುನಾವಣೆಯಲ್ಲಿ ಮೋಸ' ಎನ್ನುವ ಎರಡು ತಲೆಬರಹಗಳನ್ನು ಸಿದ್ಧಪಡಿಸಿರುತ್ತಾನೆ. ಗೆದ್ದರೆ ಮೊದಲ ಹೆಡ್ಡಿಂಗು, ಸೋತರೆ ಎರಡನೇ ಹೆಡ್ಡಿಂಗು!
ಈ ನಡುವೆ ಬೇರೆ ಪತ್ರಿಕೆಯಲ್ಲಿ ಕೇನ್ ಪ್ರೇಮ ಪ್ರಕರಣ ಸುದ್ದಿಯಾಗುತ್ತದೆ. ಇದು ಹಗರಣವಾಗಿ ಕೇನ್ ಚುನಾವಣೆಯಲ್ಲಿ ಸೋಲುತ್ತಾನೆ. ನಿರೀಕ್ಷೆಯಂತೆ 'ಚುನಾವಣೆಯಲ್ಲಿ ಮೋಸ' ಎಂಬ ತಲೆಬರಹ ಪ್ರಕಟಗೊಳ್ಳುತ್ತದೆ. ಇಲ್ಲಿ ಗಾಯಕಿಯಾಗಿ ಕೇನ್ ಜೀವನದಲ್ಲಿ ಕಾಣಿಸಿಕೊಳ್ಳುವ ಸುಸಾನ್ ಅಲೆಗ್ಸಾಂಡರ್, ಹರ್ಸ್ಟ್ನ ನಿಜ ಜೀವನದಲ್ಲಿ ಬರುವ ನಟಿ ಮರಿಯಾ ಡೇವಿಸ್. ಈಕೆಯನ್ನು ಹರ್ಸ್ಟ್ ಪ್ರೀತಿಸುತ್ತಾನೆ. ಆಕೆಯೂ ತನ್ನನ್ನು ಪ್ರೀತಿಸುತ್ತಿದ್ದಾಳೆಂದು ಭ್ರಮಿಸಿ, ಆಕೆಗಾಗಿ ಸಿನಿಮಾ ನಿರ್ಮಿಸುತ್ತಾನೆ, ಚಿತ್ರಮಂದಿರ ಕಟ್ಟಿಸುತ್ತಾನೆ. ಪತ್ರಿಕೆಯಲ್ಲಿ ಮರಿಯಾಳ ನಟನೆಯನ್ನು ಅತಿಯಾಗಿ ಹೊಗಳಿ ಬರೆಯುತ್ತಾನೆ, ಬರೆಸುತ್ತಾನೆ. ಆದರೆ ಬೇರೆ ಪತ್ರಿಕೆಗಳಲ್ಲಿ ಇವಳ ನಟನೆ ಬಗ್ಗೆ ಕಟುವಿಮರ್ಶೆಗಳು ಬರುತ್ತವೆ. ಹೊಗಳಿಕೆ- ತೆಗಳಿಕೆ ನಡುವೆ ಯಾವುದು ಸತ್ಯ? ಯಾವುದು ಸುಳ್ಳೆಂದು ತಿಳಿಯದೆ ದಿಗಿಲುಗೊಂಡು ಕುಡಿತಕ್ಕೆ ದಾಸಳಾಗಿ ಕಾಯಿಲೆ ಬಿದ್ದು ಹಾಸಿಗೆ ಹಿಡಿಯುವವರೆಗೂ ಹರ್ಸ್ಟ್ ಮರಿಯಾಳನ್ನು ವೈಭವೀಕರಿಸುತ್ತಾನೆ. ಈ ನೈಜ ಪಾತ್ರಧಾರಿ ಚಿತ್ರದಲ್ಲಿ ಗಾಯಕಿ. ಹರ್ಸ್ಟ್ ಮಾಡಿದ ಕೆಲಸವನ್ನೇ ಇಲ್ಲಿ ಕೇನ್ ಮಾಡುತ್ತಾನೆ. ಒಂದು ರೀತಿಯಲ್ಲಿ ಕೇನ್ ಅಮೆರಿಕನ್ನರ ಭ್ರಮಾಸ್ಥಿತಿಯನ್ನು ಪ್ರತಿನಿಧಿಸುತ್ತಾನೆ. ಆ ಮೂಲಕ ಸತ್ಯ ನೋಡಲಾಗದವನ ಕಾಯಿಲೆ, ವಿನಯ ಇಲ್ಲದನ ದುರಂತ, ಆತ್ಮಜ್ಞಾನವಿಲ್ಲದವನ ತಾತ್ಸಾರದ ಜೊತೆಗೆ ಪತ್ರಿಕಾರಂಗದ ಅರ್ಥಪೂರ್ಣ ವ್ಯಾಖ್ಯಾನವೂ ಇಲ್ಲಿದೆ.
ಇಡೀ ಚಿತ್ರವನ್ನು ಆರ್ಸನ್ ವೆಲ್ಸ್ ಮೇಲೆತ್ತುತ್ತಾನೆ. 'ಗಾಡ್ಫಾದರ್' ಚಿತ್ರದಲ್ಲಿ ಮರ್ಲನ್ ಬ್ರಾಂಡೋ, ತನ್ನ ಬಾಯಿಗೆ ವಸ್ತುವೊಂದನ್ನು ತುರುಕಿಕೊಂಡು ನಟಿಸಿ ನೋಡುಗನನ್ನು ಪ್ರಭಾವಿಸುವಂತೆ ಇಲ್ಲೂ ವೆಲ್ಸ್ನೇ ಪ್ರಧಾನ ಜೀವ. ಕ್ಲೋಸ್ ಮತ್ತು ಮಿಡ್ ಶಾಟ್ಗಳನ್ನೇ ಹೆಚ್ಚಾಗಿ ಬಳಸಿ ಪೂರ್ಣ ಚಿತ್ರವನ್ನು ಕಟ್ಟಿಕೊಡುವ ವೆಲ್ಸ್ನ ಈ ಚಿತ್ರ ತೀರಾ ಗಂಭೀರ ಎನ್ನಿಸಿಕೊಳ್ಳುವಾಗಲೇ ಹಾಸ್ಯವೂ ಇದೆ. ಕೇನ್ ಸಾಯುವಾಗ ರೋಸ್ ಬಡ್ ಎನ್ನುತ್ತಾನೆ. 'ರೋಸ್ ಬಡ್' ಅಂದರೆ ಏನು? ಎನ್ನುವ ಪ್ರಶ್ನೆಯೊಂದಿಗೆ ಪತ್ರಕರ್ತ ಕೇನ್ನ ಆತ್ಮೀಯ ವಲಯವನ್ನು ಸಂದರ್ಶಿಸುತ್ತ ಹೋಗುವ ಮೂಲಕ ಕಥೆ ತೆರೆದುಕೊಳ್ಳುತ್ತದೆ. ತಾನು ಬಲ್ಲ ಸತ್ಯ, ಹೊರಗಿನ ಸತ್ಯ ಇವರೆಡರ ನಡುವೆ ವ್ಯತ್ಯಾಸ ತಿಳಿಯದೆ, ಹಣ- ಅಧಿಕಾರ- ಪ್ರಭಾವ ಹುಟ್ಟಿಸುವ ಅಹಂಕಾರದಿಂದ ಒಬ್ಬ ವ್ಯಕ್ತಿ ಹೇಗೆ ಸತ್ಯಕ್ಕೆ ಬಲಿಯಾಗುತ್ತಾನೆ ಎನ್ನುವುದರ ಒಟ್ಟು ಚಿತ್ರಣ 'ಸಿಟಿಜನ್ ಕೇನ್'. ವಿಷಾದ ಅಂಶಕ್ಕೆ ಬಂದರೆ ವಿಕ್ಟೋರಿಯಾ ಡೀಸಿಕಾನ 'ಬೈಸಿಕಲ್ ಥೀವ್ಸ್' ಹಾಗೂ 'ಸಿಟಿಜನ್ ಕೇನ್' ಚಿತ್ರಗಳ ನಡುವೆ ಅಂಥ ವ್ಯತ್ಯಾಸ ಕಾಣದು. ತಾಂತ್ರಿಕ ಅರಿವಿಗೆ ಹಿಚ್ಕಾಕ್ನ 'ಸೈಕೋ', ಸಿನಿಮಾ ವ್ಯಾಕರಣ ಮತ್ತು ಕಲೆಗೆ 'ಬೈಸಿಕಲ್ ಥೀವ್ಸ್' ಮತ್ತು 'ಸಿಟಿಜನ್ ಕೇನ್' ಚಿತ್ರಗಳನ್ನು ನೋಡಬೇಕೆಂಬ ಸಲಹೆ ಹಲವರದ್ದು.
- ಆರ್. ಕೇಶವಮೂರ್ತಿ
keshavarkm1@gmail.com