ಸಾಪ್ತಾಹಿಕಪ್ರಭ

ಗೋಡೆ ಕಿಂಡಿ

ಸರಿಯಾಗಿ ನೆನಪಿದೆ. 1981ನೇ ಇಸವಿ ಜೂನ್ ಇಪ್ಪತ್ತೇಳು. ನಾನು ಚಿತ್ರದುರ್ಗದಲ್ಲಿ ಬ್ಯಾಂಕ್ ಕೆಲಸಕ್ಕೆ ಸೇರಿ ಏಳೆಂಟು ತಿಂಗಳಾಗಿತ್ತಷ್ಟೆ. ಇದ್ದಕ್ಕಿದ್ದಂತೆ ಕೋಮು ಗಲಭೆ ಎದ್ದಿದ್ದು ನನಗೆ ಸಂತೋಷ ತಂತು. ಹೇಗೆ ಶುರುವಾಯಿತೋ ಏಕೆ ಶುರುವಾಯಿತೋ- ನೆನಪಿಲ್ಲದ್ದಲ್ಲ, ಅವತ್ತೂ ಗೊತ್ತಿರಲಿಲ್ಲ, ಇವತ್ತೂ ತಿಳಿದಿಲ್ಲ. ಬ್ಯಾಂಕಿಗೆ ಹೋಗಬೇಕಾಗಿಲ್ಲವೆಂದು ಸಂತೋಷವಾಗಿತ್ತು. ಜೊತೆಗೆ ಬೇಸರವೂ. ಹೊರಗೆಲ್ಲು ಹೋಗುವಂತಿರಲಿಲ್ಲ, ಫುಲ್ ಕರ್ಫ್ಯೂ. ಜೊತೆಗಿದ್ದ ಎರಡು ಸಹಜೀವಿಗಳು ಊರಿಗೆ ಹಾರಿದ್ದರು. ಮತ್ತೊಂದೆಂದರೆ ಪ್ರತೀ ವಾರವು ಬರುತ್ತಿದ್ದ ಮೆಹರುನ್ನೀಸಾಳ ಮುದ್ದುಮುಖ ದರ್ಶನವಿಲ್ಲ. ತನ್ನ ತಾಯಿಯ ಪೆನ್ಷನ್ನಿನ ದುಡ್ಡು ತೆಗೆದುಕೊಳ್ಳಲು ಫಾರ್ಮ್ ತೆಗೆದುಕೊಂಡು ಹೋಗಿ, ತಾಯಿಯ ಸಹಿ ಹಾಕಿಸಿ ಬಂದು ದುಡ್ಡು ತಗೊಂಡು ಹೋಗೋಳು. ಆ ಮುದ್ದು ಮುಖದ ಹುಡುಗಿ ಬೇರೆ ಯಾರ ಬಳಿಯೂ ಹೋಗುತ್ತಿರಲಿಲ್ಲ. ಅವಳಿಗೆ ನಾನೇ ಬೇಕು. ನನಗೂ ವಾರದಲ್ಲಿ ಒಮ್ಮೆಯೂ ಅವಳ ಮುಖ ನೋಡಲಿಲ್ಲ ಅಂತಾದರೆ... 

ನಮ್ಮ ಮನೆಗೆ ಹೊಂದಿಕೊಂಡೇ ಇದ್ದ ಮನೆಯಲ್ಲಿ ಒಂದು ಚಮ್ಮಾರನ ಸಂಸಾರವಿತ್ತು. ಪ್ರಸನ್ನ ಟಾಕೀಸ್ ಬಳಿ ಮುನಿಸಿಪಾಲಿಟಿಯ ಶೆಡ್ ಒಂದರಲ್ಲಿ ಚಪ್ಪಲಿ ರಿಪೇರಿ ನಡೆಸುತ್ತಿದ್ದಾತನ ಮನೆ. ಬಂದ ಕೂಡಲೆ ಮನೆ ಸಿಗಲಿಲ್ಲವಾಗಿ, ನಮ್ಮ ಸೀನಿಯರ್ ಕ್ಯಾಶಿಯರೊಬ್ಬ, ಸದ್ಯ ಈ ಮನೆಯಲ್ಲಿರಿ, ಆಮೇಲೆ ಬೇರೆ ಮನೆ ಹುಡುಕುವ ಎಂದು ನಮ್ಮ ಮೂವರನ್ನ ಇಲ್ಲಿ ಪ್ರತಿಷ್ಠಾಪಿಸಿದ್ದ. ಆಗ ಬರುವ ಆರು ನೂರು ರೂಪಾಯಿ ಸಂಬಳಕ್ಕೆ ಉಳಿಸಿ ಉದ್ಧಾರ ಮಾಡುವ ಆದರ್ಶ ಹೊತ್ತುಕೊಂಡಿದ್ದ ನಮಗೆ ಸಾಕೆನ್ನಿಸಿ ಇದ್ದಾಗಿತ್ತು.
ಎರಡು ದಿನವಾದರು ಗಲಭೆ ತಣ್ಣಗಾಗಿರಲಿಲ್ಲ. ಊರಿನಿಂದ ತಂದ ಅಕ್ಕಿ ಸಾಕಷ್ಟಿತ್ತು. ಸಹಜೀವಿಗಳೂ ಊರಲ್ಲಿರಲಿಲ್ಲವಾಗಿ ಉಳಿದ ಎಲ್ಲ ಸಾಮಾನುಗಳು ನನಗೆ ಸಾಕಾಗುವಂತಿತ್ತು. ಕಾಫಿ ಟೀ ಕುಡಿಯುವ ಅಭ್ಯಾಸ ನನಗಿರಲಿಲ್ಲವಾಗಿ ಹಾಲಿನ ಯೋಚನೆಯಿರಲಿಲ್ಲ. ಆದರೆ ಹೊತ್ತು ಹೋಗಬೇಕಲ್ಲ?
ನಮ್ಮ ಹಾಲಿಗೆ ಹೊಂದಿಕೊಂಡಂತಿದ್ದ ಚಮ್ಮಾರನ ಮನೆ ಮಧ್ಯದ ಗೋಡೆಯಲ್ಲಿ ಬ್ಯಾಂಕಿನ ಕೌಂಟರಿನಲ್ಲಿ ಚೆಕ್ಕು ಹಾಕಲು ಮಾಡಿರುವಂತಹ ಆಯತಾಕಾರದ ಕಿಂಡಿಯಿತ್ತು. ಅದರ ಮೂಲಕ ಪಕ್ಕದ ಮನೆಯ ಆಗುಹೋಗುಗಳನ್ನ ನೋಡುತ್ತಿರುವಾಗ ಅಲ್ಲಿದ್ದ ಐದು ವರ್ಷದ ಒಂದು ಮಗು, ಅದರ ತಾಯಿಯ ಸಂಭಾಷಣೆ ನಡೆದಿತ್ತು.

'ಅಮ್ಮ, ಹಸಿವಾಗುತ್ತೆ, ಹಾಲು ಇಲ್ಲ, ಬ್ರೆಡ್ಡು ಬಿಸ್ಕತ್ತೂ ಇಲ್ಲ. ಬರೀ ಗಂಜಿ ಉಣ್ಣು ಅಂತೀಯಾ. ಯಾಕಮ್ಮ?'
'ಹೊರಗಡೆ ಹೊಡೆದಾಟ ನಡೀತಾ ಇದೆಯಪ್ಪ. ಅಂಗಡಿ ಬಾಗಿಲೆಲ್ಲ ಹಾಕಿಬಿಟ್ಟಿದ್ದಾರೆ. ಏನೂ ಸಿಗೋಲ್ಲ, ನಾಳೆ ಅಂಗಡಿ ಬಾಗಿಲು ತೆರೆದ ಮೇಲೆ ನಿನಗೆ ದೊಡ್ಡ ಕ್ರೀಂ ಬಿಸ್ಕತ್ತಿನ ಪೊಟ್ಟಣಾನೇ ಕೊಡ್ತೇನೆ ಆಯಿತಾ?'
'ಏನಮ್ಮ ಹೊಡೆದಾಟ ಅಂದರೆ? ಅವತ್ತು ಅಪ್ಪ, ಚಿಕ್ಕಪ್ಪ ಪೆಟ್ಟು ಕೊಟ್ಕೊಂಡಿದ್ರಲ್ಲಾ ಹಾಗೇನಾ?'
'ಅಲ್ಲಪ್ಪ, ಹೌದಪ್ಪ, ಎಲ್ಲಾ ಅಣ್ಣ ತಮ್ಮಂದ್ರ ಹಾಗೇ ಇದ್ದೋರು. ಅದೇನೊ ಜಾತಿ, ಧರ್ಮ ಅಂತೆ. ಮುಸ್ಲಿಮರು ಹಿಂದುಗಳು ಅಂತ ಎರಡು ಧರ್ಮದವರು ಹೊಡೆದಾಡ್ತಿದಾರೆ, ನಿನಗಿದೆಲ್ಲ ಈಗ ತಿಳಿಯೊಲ್ಲ ಬಿಡು'
'ಅಪ್ಪಾ ಯಾಕಮ್ಮ ನಿನ್ನೇನು ಬಂದಿಲ್ಲ, ಇವತ್ತೂ ಬಂದಿಲ್ಲ?'
'ಅವರು ಹಂಗೇನೇ. ಗಲಾಟೇಲಿ ಸಿಕ್ಹಾಕ್ಕೊಂಡು ಪೋಲೀಸ್ನೋರು ಹಿಡ್ಕೊಂಡು ಹೋದ್ರೇನೊ?'
'ನಿನ್ನೆ ಯುದ್ಧ ಮಾಡೋ ಪೋಲೀಸ್ನೋರು ಹೋದ್ರಲ್ಲ, ಅವರಾ? ಪೋಲೀಸ್ನೋರು ಕೆಟ್ಟೋರಾ ಅಮ್ಮಾ?'
'ಮನುಷ್ಯರೆಲ್ಲಾರು ಒಳ್ಳೇರೆ ಕಂದಾ. ಕೆಟ್ಟವರಿಗೆ ರಾಕ್ಷಸರು ಅಂತಾರೆ'
'ಮತ್ತೆ ಕಥೇ ಹೇಳ್ತಿದ್ದೆ- ಪ್ರಹ್ಲಾದ ರಾಕ್ಷಸಾದ್ರು ಒಳ್ಳೇವ್ನು ಅಂತಾ?'
'ಮನುಷ್ಯರು ಕೆಟ್ಟೋರಾದ್ರೆ ರಾಕ್ಷಸರಾಗ್ತಾರೆ, ರಾಕ್ಷಸರು ಒಳ್ಳೇರಾದ್ರೆ ಮನುಷ್ಯರಾಗ್ತಾರೆ. ಹೋಗ್ಲಿ ಈಗ ಗಂಜಿ ಉಣ್ಣಪ್ಪ'
'ಅಪ್ಪ ಬಂದ್ಮೇಲೆ ಉಣ್ತೇನೆ'
'..............'
'ಅಪ್ಪ ಬರೋಲ್ವ ಅಮ್ಮ. ಅಜ್ಜನ ಹಾಗೇ ಅವರೂ ದೇವರ ಹತ್ರ ಹೋದ್ರಾ, ಮತ್ತೆ ಬರೋಲ್ವ?'
ಕಣ್ಣೀರಿಗೆ ಸೆರಗು ಒತ್ತಿತ್ತು. ಕಿಂಡಿಯಿಂದ ಕಣ್ಣು ಕಿತ್ತು ಕಿವಿ ಮಾತ್ರ ಕೊಟ್ಟೆ.
'ಅವತ್ತು ಸಿನಿಮಾ ನೋಡ್ಬೇಕಾದ್ರೆ ಹೇಳ್ದೆ- ಕೆಟ್ಟವರು ಕಡೇಲಿ ಸಾಯ್ತಾರೆ, ಒಳ್ಳೇವ್ರು ಸಾಯೋಲ್ಲ ಅಂತ. ಅಪ್ಪ, ಒಳ್ಳೇರು...'
'ಅಪ್ಪ ನಾಳೆ ಬರ್ತಾರೆ, ನೀನು ಉಣ್ಣು ಮಗಾ. ಕಡೆಗೆ ಗಾಂಧಿತಾತನ ಕತೆ ಹೇಳ್ಬೇಕೊ ಬೇಡವೋ?'
'ಗಾಂಧಿತಾತ ಯಾವ ಜಾತಿ ಅಮ್ಮಾ?'
'ಮಹಾತ್ಮರಿಗೆ ಜಾತಿ ಇರೋಲ್ಲ ಮಗು. ದೇವರ ಹಾಗೆ'
'ಹಂಗಾದ್ರೆ ಎಲ್ಲರೂ ಹಂಗೇ ಇದ್ರೆ ಹೊಡೆದಾಟವೇ ಇರಲ್ಲ, ನಂಗೆ ಹಾಲು, ಬ್ರೆಡ್ಡು ಬಿಸ್ಕತ್ತು ಬೇಕಾದ ಹಂಗೆ ಸಿಗ್ತಿತ್ತು ಅಲ್ಲೇನಮ್ಮ?'
'ನೀನೀಗ ಉಣ್ಣುತ್ತೀಯೋ ಇಲ್ಲವೋ?'
'ಹೋಗಮ್ಮ, ಬರೀ ಗಂಜಿ ಉಂಡು ಉಂಡು ಬೇಜಾರು ಬಂದ್ಬಿಟ್ಟಿದೆ. ನಂಗೆ ಬೇಡ'
'ನಾಳೆ ಇದೂ ಇರಲಿಕ್ಕಿಲ್ಲ ಕಂದಾ' ಈಗ ಬಿಕ್ಕಳಿಕೆಯು ಕೇಳಿತು.

ಆ ಮರುದಿನ ಶಾಂತ ವಾತಾವರಣ. ಕರ್ಫ್ಯೂ ತೆಗೆಯಲ್ಪಟ್ಟಿತು. ಸಹೋದ್ಯೋಗಿ ಚಂದ್ರ ದೌಡಾಯಿಸಿ ಬಂದ. 'ಗೊತ್ತೇನೊ ನಿನಗೆ, ನಮ್ಮ ಕುಡುಕ ಮ್ಯಾನೇಜರ್ ಇದ್ನಲ್ಲ, ದಿನಕ್ಕೊಂದು ಬೀರು ಬಾಟ್ಲು- ಅವನಿಗೆ ಮೊನ್ನೆ ಬೀರು ಸಿಗದೆ ಸಂದಿ ಪಂದಿ ಹುಡಿಕ್ಕೊಂಡು ಹೊಂಟಿದ್ನಂತೆ. ಹಿಡಿದ್ರಂತೆ. ಅಲ್ಲಿದ್ದ ಎಸ್ಪಿ, ಒಂದಿನಾ ಸ್ಟೇಷನ್ನಲಿ ಇಟ್ಟಿದ್ರಂತೆ' ಎಂದ. 'ಎಲ್ಲೋ, ಇಷ್ಟು ಬೇಗ ವಿಷಯ ಕಲೆಕ್ಟ್ ಮಾಡಿದೆ' ಎಂದೆ. 'ನಾನು ಕುದಿಯೋ ರಕ್ತದ ಯುವಕ ಕಣೋ, ನಿನ್ಹಾಗೆ ಮನೇಲಿ ಮುದುಡಿ ಕುಳಿತುಕೊಳ್ಲಿಲ್ಲ. ಕರ್ಫ್ಯೂ ಸಡಿಲಿಸ್ತಿದ್ದ ಹಂಗೆ ಒಂದ್ರೌಂಡ್ ಹಾಕಿ ಬಂದೆ' ಎಂದ.

ಕಿಂಡಿಯಲ್ಲಿ ನೋಡಿದೆ. ಯಾರೂ ಇರಲಿಲ್ಲ. ಆಕೆ ಗಂಡನನ್ನ ಹುಡುಕಿಕೊಂಡು ಪೋಲೀಸ್ ಸ್ಟೇಷನ್ನಿಗೆ ಹೋಗಿರಬಹುದು. ಪ್ರಸನ್ನ ಟಾಕೀಸ್ ಹತ್ರ ಕುರಿಚರ್ಮ ಕಿತ್ತ ಹಾಗೆ ರಾಣಾ ರಕ್ತವಂತೆ ರಸ್ತೇ ತುಂಬ... ಬದುಕಿದ್ದಾನೋ, ಇಲ್ಲವೋ...

'ನಾಳೆ ಬ್ಯಾಂಕು ಶುರುವಾಗುತ್ತೆ. ನಿನ್ನ ದೋಸ್ತರಿಗು ತಾರು ಕೊಟ್ಟು ಕರೆಸಿಬಿಡು. ನೆನಪಿರ್ಲಿ, ನಾಳೆ ಒಂದನೇ ತಾರೀಕು- ಪೆನ್ಶನ್ ಪೇಮೆಂಟ್. ಬ್ಯಾಂಕು ರಶ್ಶಿರುತ್ತೆ' ಚಂದ್ರ ಹೇಳಿದ.
ಓಹ್, ನಾಳೆ  ಪೆನ್ಶನ್ ಪೇಮೆಂಟ್. ಅಂದರೆ ಮೆಹ್ರುನ್ನೀಸಾ ಬರುತ್ತಾಳೆ ನನ್ನ ಮನಸ್ಸು ಪಕ್ಕದ ಮನೆಯಾಕೆಯಿಂದ ಮೆಹರುನ್ನೀಸಾಳ ಕಡೆ ಹೊರಳಿ ಮುದಗೊಂಡಿತು. <

-ಟಿ.ಎಂ.ರಮೇಶ
tmrjasmine@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!