ಸಾಪ್ತಾಹಿಕಪ್ರಭ

ಡೈರಿಯೊಳಗಿನ ಹಸಿಗುಟ್ಟು

ಸದ್ಯದ ಮಟ್ಟಿಗೆ ಕವಿತೆಗಳನ್ನು ಗ್ರಹಿಸುವ ಶಕ್ತಿ ಹಾಗು ಸಮಾಧಾನ ದಕ್ಕಿರುವುದು ಇಬ್ಬರಿಗೇ. ಅಭಿಮಾನಿಗೆ ಮತ್ತು ಕವಿಯ ಹೆಂಡತಿಗೆ. ಅಭಿಮಾನಿಗೆ ಕವಿತೆ ಪ್ರೀತಿಯ ಓದು. ಕವಿಯ ಹೆಂಡತಿಗದು ಅನಿವಾರ್ಯತೆಯ ಓದು. ತನಗೂ ಹೇಳಿರದ ಹಳೆಯ ಪ್ರೇಮಪ್ರಕರಣಗಳನ್ನು ಕವಿತೆ ಹೇಳುತ್ತಿದೆಯೆಂದರೆ ಆಕೆ ಅದಕ್ಕೆ ಓದುಗಳಾಗಲೇಬೇಕು. ಕವನಗಳಲ್ಲಿ ಅಂಥ ಅಪಾಯಗಳನ್ನು ಕಾಣುವ, ಹುಡುಕುವ ಶಕ್ತಿ ಕವಿಗಳ ಪತ್ನಿಯರಿಗೆ ಪ್ರಕೃತಿದತ್ತ. ಅಂಥ ಶಕ್ತಿವಂತರ ಸಾಲಿನಲ್ಲಿ ತುಂಟಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಪತ್ನಿ ಗಿರಿಜಾ ಅವರನ್ನು ಸೇರಿಸಿಕೊಳ್ಳಬಹುದು! ತುಂಬಾ ಸಂಯಮಶೀಲರು. ಪತಿ ಬರೆದ ಹೊಸ ಕವನಗಳಲ್ಲಿ ಹಳೇ ಪ್ರೇಮದ ನೆರಳು ಕಂಡರೂ ಆ ದಿನದ ಅಡುಗೆಯಲ್ಲಿ ಹೆಚ್ಚು ಉಪ್ಪು ಬೆರೆಸುವುದಿಲ್ಲ. ಕವನಸಂಕಲನದ ಬಿಡುಗಡೆಯಾದ ದಿನ ಮನೆಯಲ್ಲೇನು ಗಲಾಟೆ ಎಬ್ಬಿಸುವುದಿಲ್ಲ.
ಹಾಗೆ ಸಿಟ್ಟುಮಾಡಿಕೊಂಡರೂ ಪ್ರಯೋಜನವಿಲ್ಲ ಎಂದು ಗಿರಿಜಾ ಅವರಿಗೆ ಗೊತ್ತಾಗಿದ್ದು ಮದುವೆಯ ಹೊಸತರಲ್ಲಿ. ಮದುವೆಯಾಗುವುದು ಎಲ್ಲರಿಗೂ ಖುಷಿ. ಅದರಲ್ಲೂ ಬಿಆರ್‌ಎಲ್‌ರಂಥ ರಸಿಕಋಷಿಗೆ ಬಾಗಿದ ಆಕಾಶದಲ್ಲಿ ಬೀಳದ ನಕ್ಷತ್ರಗಳ ಮೈಮುಟ್ಟಿ ವರ್ಣಿಸಿದ ಹಾಗೆ. ಆ ಹೊಸಬಾಳಿನ ಖುಷಿಯಲ್ಲಿ ಅವರು ಹಳೆಯ ಸಾಕ್ಷ್ಯಗಳನ್ನು ನಾಶಪಡಿಸುವುದನ್ನೇ ಮರೆತುಬಿಟ್ಟರು. ಸಪ್ತಪದಿ ತುಳಿದು ಇನ್ನೂ ಹದಿನೈದು ದಿನ ಆಗಿರಲಿಲ್ಲ. ಗಿರಿಜಾ ಅವರು ಏನೋ ತಡಕಾಡುತ್ತಿದ್ದಾಗ ಅಲ್ಲಿ ಗಂಡನ ಡೈರಿ ಸಿಕ್ಕಿತು. ತೆರೆದರು. ಅದರೊಳಗೆ ಪತಿರಾಯರ ರಹಸ್ಯ ಹಸಿಗುಟ್ಟುಗಳಿದ್ದವು. ಮಾಜಿ ಸಂಗಾತಿ ಶಕುವಿನ ಕುರಿತ ಮೋಹಕ ವರ್ಣನೆಗಳನ್ನು ಮೌನವಾಗಿಯೇ ಓದಲು ಅವರ ಬಾಯಿ ತಡವರಿಸಿತು. ಇನ್ನೂ ಮೂರ್ನಾಲ್ಕು ಸಂಗಾತಿಗಳ ಸ್ನೇಹ ಸಲ್ಲಾಪಗಳನ್ನು ಅದರಲ್ಲಿ ಸಂದರ್ಭ ಸಹಿತ ವಿವರಿಸಿದ್ದರು ಬಿಆರ್‌ಎಲ್! ಬಾಯಿಗೆ ಬೆರಳಿಟ್ಟು ಕಚ್ಚಲು ನಾನೇ ಕಲಿಸಿದೆ ಎಂದುಕೊಂಡಿದ್ದ ಗಿರಿಜಾ ಅವರು ಆ ಕ್ಷಣ ಕೋಪಿಸಿಕೊಂಡರಂತೆ. ಕೂಡಲೇ ಅವರ ಭುಜ ಸವರಿದ ಬಿಆರ್‌ಎಲ್ ಆ ಕ್ಷಣ ಮಾಡಿದ ಸಮಾಧಾನವೇ ಒಂದು ಪರಿಪೂರ್ಣ ಪ್ರಣಯ ಕವಿತೆ...

'ಬಹುಶಃ ನೀನಂದುಕೊಂಡಿದ್ದೀ, ಹೃದಯದಲ್ಲಿ ಒಬ್ಬರಿಗೇ ಜಾಗ ಅಂತ. ಆದರೆ, ನನ್ನ ಹೃದಯ ತುಂಬಾ ವಿಶಾಲ ಕಣೆ. ಹಾಗೆಲ್ಲ ಬರ್ತಾ ಇರ್ತಾರೆ, ಹೋಗ್ತಾ ಇರ್ತಾರೆ. ಹೋದವರ ಬಗ್ಗೆ ನಿನಗೆ ಚಿಂತೆ ಬೇಡ. ಈ ಹೃದಯದ ಸಿಂಹಾಸನಕ್ಕೆ ನೀನೇ ರಾಣಿ. ಮಿಕ್ಕವರು ನಿನಗೆ ಸಖಿಯರ ರೀತಿ ಬಂದುಹೋಗಬಹುದು. ಪರಿಚಾರಿಕೆಯರ ಥರ'.

ಅನೇಕ ಪಾಶ್ಚಾತ್ಯ ಲೇಖಕರಿಗಿದ್ದಂತೆ ಬಿಆರ್‌ಎಲ್‌ಗೆ ಪ್ರೇಮಿಸುವುದೂ ಚಟ. ಆದರೆ ಇವರದು ಶುದ್ಧ ಭಾವನಾತ್ಮಕ ಪ್ರೇಮ. ಕಾಲೇಜಿನ ಸಮಯದಲ್ಲಿ ಗಾಂಧಿನಗರದ ಶೇಷಾದ್ರಿ ರಸ್ತೆಯ ಹಾಸ್ಟೆಲ್ ಕಾಂಪೌಂಡಿನಲ್ಲಿ ಟಿ.ಎನ್. ಸೀತಾರಾಮ್ ಜತೆ ಕೂತು, ಎದುರಿಗೆ ಹಾದುಹೋಗುವ ಮಹಾರಾಣಿ ಕಾಲೇಜಿನ ಹುಡುಗಿಯರ ಬಗ್ಗೆ ಅವರು ಮನದೊಳಗೆ ಕಟ್ಟಿದ ಕವಿತೆಗಳೇ ಸಾಕಷ್ಟಿವೆ.

ಬಿಆರ್‌ಎಲ್  ಒಂದರ್ಥದಲ್ಲಿ ಅಮೆರಿಕದ ಕಾದಂಬರಿಕಾರ ಉಡ್‌ಹೌಸ್ ಸೃಷ್ಟಿಸಿದ 'ಪಿಸ್ಮಿತ್‌' (ಕಿಡಟ್ಝಝಿ) ಎಂಬ ಪಾತ್ರದ ರೀತಿ. ಉಲ್ಲಂಘನೆ ಇವರಿಗೆ ಮತ್ತೊಂದು ಚಟ. ಪಿಸ್ಮಿತ್ ಒಂದೆಡೆ ತನ್ನ ಅಪ್ಪನ ಬಗ್ಗೆ ಹೇಳಿಕೊಳ್ಳುತ್ತಾನೆ, 'ಅವನು ಭಯಂಕರ ಗಡಿಬಿಡಿಯ ಮನುಷ್ಯ. ಅರ್ಧವಾಕ್ಯಕ್ಕೆ ಬಂದು ಮನಸ್ಸು ಬದಲಿಸಿ, ಬೇರೆ ದಿಕ್ಕನ್ನು ಹಿಡಿದು ವಾಕ್ಯ ಪೂರ್ಣಗೊಳಿಸುತ್ತಾನೆ. ನನಗೆ ಅವನ ದೃಷ್ಟಿಯಂತೆ ಆಕಾರ ಕೊಡಲು ಯತ್ನಿಸುತ್ತಾನೆ. ಕೈಯಲ್ಲಿ ಚೆಂಡು ಹಿಡಿದ ಹಾಗೆ ನನ್ನನ್ನು ಹಿಡಿದು ಯಾವ ಕಡೆ ಎಸೆಯುವುದೆಂದು ಯೋಚಿಸುತ್ತಾನೆ. ಆದರೆ, ನಾನು ಅವನ ಕೈಗೆ ಸಿಗುವುದಿಲ್ಲ. ಅವನು ನನಗೆ 'ಸ್ಮಿತ್‌' ಎಂದು ಹೆಸರಿಟ್ಟ. ನನಗೆ ಅವನಿಟ್ಟ ಹೆಸರಿನಲ್ಲಿ ಖುಷಿಯಿಲ್ಲ. ಅದಕ್ಕೆ ನನ್ನನ್ನು ಪಿಸ್ಮಿತ್ ('ಕಿ' ಸೈಲೆಂಟ್) ಎಂದು ಕರೆದುಕೊಳ್ಳುತ್ತೇನೆ'. ಆದರೆ, ಇಲ್ಲಿವರೇನು 'ಪಿಲಕ್ಷ್ಮಣರಾವ್‌' ಆಗಲಿಲ್ಲ! ಆದರೆ, ಪಿಸ್ಮಿತ್ ರೀತಿ ಅಪ್ಪನಿಗೇ ಧಿಕ್ಕಾರ ಕೂಗಿದವರು ಬಿಆರ್‌ಎಲ್. ಬ್ರಾಹ್ಮಣರೇನೋ ಹೌದು. ಪಿಯುಸಿಯಲ್ಲಿ ಉಪನಯನವೂ ಆಯಿತು. ಪದವಿಯಲ್ಲಿದ್ದಾಗ ಜನಿವಾರ ಎಂಬ ಆಚರಣೆ ಬಹುಶಃ ದೇಹ- ಮನಸ್ಸಿಗೆ ಭಾರವಾಗಿರಬೇಕು, ಕಳಚಿಟ್ಟರು!

ಹೈಸ್ಕೂಲಿನಲ್ಲಿದ್ದಾಗ ಕಾಮದಹನಕ್ಕೆ ಮರ ತರಲೆಂದು ಬಿಆರ್‌ಎಲ್ ಗೆಳೆಯರೊಟ್ಟಿಗೆ ಚಿಂತಾಮಣಿ ಆಚೆಯ ಸ್ಮಶಾನದ ಬಳಿ ಹೋದರಂತೆ. ಮನೆಗೆ ಬರುವುದು ತಡವಾಯಿತು. ಅಪ್ಪ ಕೇಳಿದರು, 'ಎಲ್ಲಿಗೆ ಹೋಗಿದ್ದೆ?'. ಇವರು ಸತ್ಯ ಹೇಳಿದರು. ಅಪ್ಪ ಮನೆಯೊಳಗೆ ಸೇರಿಸಿಕೊಳ್ಳದೆ 'ಹೋಗಾಚೆ' ಎಂದರಂತೆ. ಬಿಆರ್‌ಎಲ್ ಸೀದಾ ಪಾರ್ಕಿಗೆ ಬಂದು ಅಲ್ಲೇ ಮಲಗಿದರಂತೆ. ಮತ್ತೆ ಸಂಬಂಧಿಕರೊಬ್ಬರು ಸಮಾಧಾನಿಸಿ, ಅಪ್ಪನಿಗೂ ತಿಳಿ ಹೇಳಿ ಮನೆಗೆ ಸೇರಿಸಿದರಂತೆ. ಮರುದಿನ ಬಿಆರ್‌ಎಲ್ ರಾತ್ರಿಯಿಡೀ ವಿಚಿತ್ರವಾಗಿ ಕೂಗುವುದು, ಹಾಸಿಗೆ ಬಿಟ್ಟು ಓಡಿಹೋಗುವುದು ಮಾಡಿದರು. ಸ್ಮಶಾನದ ಬಳಿ ಹೋಗಿಯೇ ಹೀಗಾಗಿದೆ ಎಂದುಕೊಂಡ ಅಪ್ಪ, ಸಂಪ್ರದಾಯ ತಜ್ಞರನ್ನು ಕರೆಯಿಸಿ, ಕುಂಕುಮ ಲೇಪಿಸಿ, ಏನೇನೋ ಪೂಜೆ ಮಾಡಿಸಿದರು. ಮಗನ ತೀವ್ರ ಪ್ರತಿರೋಧದ ನಡುವೆಯೂ ಪೂಜಾ ಪರಿಹಾರ ನಡೆಯಿತು. ಆಮೇಲೆ ಬಿಆರ್‌ಎಲ್ ಸರಿಯಾದರಂತೆ! ಆದರೆ, ಅದೊಂದು ಮಾನಸಿಕ ಅವಘಡವಷ್ಟೇ.

ಈ ದುಷ್ಯಂತನಿಗೆ 22ನೇ ವಯಸ್ಸಿನಲ್ಲಿ ಪ್ರೇಮಿಸಲು ಸಿಕ್ಕಿದ್ದು 'ಶಕುಂತಲಾ' ಎಂಬ ಅಪ್ಸರೆ. ಆದರೆ, ಅದಕ್ಕೂ ಅಪ್ಪ ಅಡ್ಡಿಯಾದರು. ಅವರು ಶಾಸ್ತ್ರಿ, ನಾವು ಬಡಗನಾಡು ಅಂತ ಹೇಳಿ ಮಗನ ಪ್ರೇಮಕ್ಕೆ ಬರೆ ಎಳೆದರು. ಅದೇ ಸಿಟ್ಟಿಗೆ ಅಪ್ಪ ತೋರಿಸಿದ ಹುಡುಗಿಯರನ್ನೆಲ್ಲ ನಿರಾಕರಿಸಿ, ಸೇಡನ್ನೂ ತೀರಿಸಿಕೊಂಡರು ಬಿಆರ್‌ಎಲ್. ಕವಿ ಎನ್ನೆಸ್ಸೆಲ್‌ರ ಬ್ರೋಕರಿಕೆಯಲ್ಲಿ ಗಿರಿಜಾರನ್ನು ಕೈಹಿಡಿದರಂತೆ. ಇವರ 'ಗೋಪಿ ಮತ್ತು ಗಾಂಡಲೀನ' ಕೂಡ ಉಲ್ಲಂಘನೆಗೆ ಉದಾಹರಣೆಯೇ.

ಈ ಜಾಲಿಬಾರಿನ ಕವಿ, ಗುಂಡಿನ ಅಭ್ಯಾಸವನ್ನೂ ಬಲ್ಲರು. ಲಂಕೇಶ್, ವೈಎನ್ಕೆ ಇಬ್ಬರೂ ಸೇರಿ ಬಿಆರ್‌ಎಲ್‌ಗೆ ಬಿಯರ್ ಬಾಟಲಿ ಕೈಗಿಟ್ಟು ಅಕ್ಷರಾಭ್ಯಾಸ ಮಾಡಿಸಿದರು! ಕಿಂಗ್ ಬ್ರ್ಯಾಂಡಿನ ನಾಲ್ಕು ಸಿಗರೇಟು ಅವರ ತುಟಿಗಳಿಗೆ ಈಗಲೂ ಪ್ರಿಯ. ಧೂಮಪಾನಕ್ಕೆ ಸಮರ್ಥನೆಯಾಗಿ ಬಿಆರ್‌ಎಲ್ ಒಂದು ಕವನ ಬರೆದಿದ್ದಾರೆ. 'ಬಿಡಲಾರೆ ನಾ ಸಿಗರೇಟು'. ವಿಚಿತ್ರವೆಂದರೆ, ಅದಕ್ಕೆ ರಾಗ ಸಂಯೋಜಿಸಿದ ಸಿ. ಅಶ್ವತ್ಥ್ ಮತ್ತು ಹಾಡಿದ ಮೈಸೂರು ಅನಂತಸ್ವಾಮಿ ಅಪ್ಪಟ ಧೂಮದಾಸರು!

-ಕೀರ್ತಿ
kolgarkeerthi@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!