ಸಾಪ್ತಾಹಿಕಪ್ರಭ

ಇಲ್ಲಿ ಬೇರು ಅಲ್ಲಿ ಸೂರು

ಅಮೆರಿಕದಲ್ಲಿ ಓದುವುದು, ಅಲ್ಲಿ ಒಂದು ಉದ್ಯೋಗವನ್ನು ಸಂಪಾದಿಸುವುದು ಇಂದಿಗೂ ಭಾರತೀಯರಿಗೆ ಹೆಮ್ಮೆಯ ವಿಷಯವೇ. ತಮ್ಮ ಮಗನೋ ಮಗಳೋ ಸಂಬಂಧಿಗಳೋ ಅಮೆರಿಕದಲ್ಲಿ ಇದ್ದಾರೆ, ಅಮೆರಿಕಕ್ಕೆ ಹೋಗಿ ಬಂದಿದ್ದಾರೆ ಎಂದರೆ ಅದೊಂದು ದೊಡ್ಡ ಗೌರವ ಎಂದೇ ಭಾವಿಸುವವರು ಸಾಕಷ್ಟು ಜನ ಇದ್ದಾರೆ. ಹಿಂದೆಲ್ಲ ವಿದೇಶಕ್ಕೆ ಹೋಗುತ್ತಾರೆ ಎಂದರೆ ಪತ್ರಿಕೆಗಳಲ್ಲಿ ಶುಭ ಕೋರುವ ಜಾಹೀರಾತುಗಳು ಬರುತ್ತಿದ್ದವು. ಇದೊಂದು ರೀತಿಯಲ್ಲಿ ಪ್ರತಿಭಾ ಪಲಾಯನ. ಇದು ದೇಶಕ್ಕೆ ಆಗುವ ಪ್ರತಿಭಾ ನಷ್ಟ.
ಈ ಮನೋಭಾವ ಇವತ್ತಿಗೂ ಬಹಳಷ್ಟು ಬದಲಾಗಿಲ್ಲ. ಹಾಗೆ ನೋಡಿದರೆ ಮಿಸ್ಸಿಸ್ಸಿಪಿಯಲ್ಲಿ ಮತ್ತು ಗಂಗೆಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅಮೆರಿಕದ ಅಧ್ಯಕ್ಷರೆ ಬೆಂಗಳೂರಿನ ವರ್ಕ್‌ಫೋರ್ಸ್ ಹೊಗಳಿದ್ದಾರೆ. ಐಟಿಬಿಟಿ ಔಟ್‌ಸೋರ್ಸ್ ಬೆಂಗಳೂರನ್ನು ಹುಡುಕಿಕೊಂಡು ಬರುತ್ತಿದೆ. ಬೆಂಗಳೂರಿನಲ್ಲಿ ಪಡೆಯುವ ಸಂಬಳ ಬಹಳ ಕಡಿಮೆಯೇನಲ್ಲ. ಹೀಗಿದ್ದೂ ಅಮೆರಿಕ ಏಕೆ ನಮ್ಮವರಿಗೆ ಪ್ರಿಯವಾಗುತ್ತಿದೆ?
ಅಮೆರಿಕದ ಶ್ರೀಮಂತಿಕೆ, ಅಲ್ಲಿಯ ಜೀವನ ಶೈಲಿ, ಪ್ರತಿಭಾವಂತರಿಗೆ ಅಲ್ಲಿರುವ ಮನ್ನಣೆ ಇದಕ್ಕೆ ಕಾರಣ ಇರಬಹುದು. ಅಮೆರಿಕದ ವೈದ್ಯರಲ್ಲಿ ಶೇ.10ರಷ್ಟು ಭಾರತೀಯರು. ಅದರಲ್ಲಿ ಕನ್ನಡಿಗರ ಪಾಲು ತುಂಬ ದೊಡ್ಡದೇ ಇದೆ. ಅಮೆರಿಕ ವೈದ್ಯಕೀಯ, ಕಾನೂನು ಮೊದಲಾದ ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದಾರೆ.
ಹೀಗೆ ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ ಎನ್ನುವಂತೆ ಅಮೆರಿಕಕ್ಕೆ ಹಾರಿದ ಕನ್ನಡಿಗರು ಅಲ್ಲಿ ಏನು ಮಾಡುತ್ತಿದ್ದಾರೆ? ಅವನ ಮಾನಸಿಕ ಸ್ಥಿತಿ ಏನು? ತಮ್ಮ ಗಳಿಕೆಯ ನಂತರ ಅವರು ಇನ್ನೇನಕ್ಕೆ ಹಂಬಲಿಸುತ್ತಿದ್ದಾರೆ? ಇವೆಲ್ಲ ತುಂಬ ಕುತೂಹಲಕಾರಿಯಾದ ಸಂಗತಿಗಳು. ಅಮೆರಿಕದಲ್ಲಿ ಕನ್ನಡಿಗರು ತಮ್ಮದೇ ಸಂಘವನ್ನು ಕಟ್ಟಿಕೊಂಡಿದ್ದಾರೆ. ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರ ಆಳದಲ್ಲೆಲ್ಲೋ ವಲಸೆ ಪ್ರಜ್ಞೆ ಅವರನ್ನು ಕಾಡುತ್ತಿದೆ. ತಾವು ತಮ್ಮ ನೆಲವನ್ನು ಬಿಟ್ಟುಬಂದೆವಲ್ಲ, ತಮ್ಮ ಸಂತತಿಗೆ ತಮ್ಮ ತಾಯ್ನೆಲ ಇನ್ನು ಸಂಪೂರ್ಣ ಅಪರಿಚಿತವಾಗಿಬಿಡುತ್ತದೆಯಲ್ಲ, ಸಾಂಸ್ಕೃತಿಕವಾಗಿ ಅವರು ಬೇರುಕಿತ್ತ ಗಿಡವಾಗಿಬಿಡುತ್ತಾರಲ್ಲ ಎಂಬ ಹಳಹಳಿಕೆ ಎಲ್ಲೋ ಇರುತ್ತದೆ. ತಾವು ಬಿಟ್ಟು ಬಂದ ನೆಲ ಮತ್ತು ಜನದ ಬಗ್ಗೆ ಇವರು ಆಲೋಚಿಸುತ್ತಿರುತ್ತಾರೆ. ತಮ್ಮ ಮುಂದಿನ ಪೀಳಿಗೆಯ ಕತೆ ಏನು? ಅವರು ಕನ್ನಡವನ್ನು ಮಾತನಾಡುತ್ತಾರೆಯೇ? ಅಮೆರಿಕದಲ್ಲಿದ್ದು ಕನ್ನಡವನ್ನು ಕಲಿಯುವುದು ಹೇಗೆ? ಇಂಥ ಪ್ರಶ್ನೆಗಳು ಈ ತಲೆಮಾರಿನವರನ್ನು ಕಾಡಿದಂತೆ ಮುಂದಿನವರನ್ನು ಕಾಡುತ್ತದೆ ಎಂದು ಹೇಳುವಂತಿಲ್ಲ. ಸಾಂಸ್ಕೃತಿಕವಾಗಿ ತೀರ ಬೇರೆಯಾದ ಜನಾಂಗದ ನಡುವೆ ಬಾಳುವುದು ಒಂದು ಸವಾಲೇ ಸೈ. ಸ್ಥಳೀಯರ ಅಸೂಯೆ, ಅವರೊಂದಿಗೆ ಪೈಪೋಟಿ, ತಮ್ಮ ಅವಕಾಶವನ್ನು ಕಿತ್ತುಕೊಂಡರಲ್ಲ ಎಂಬ ದ್ವೇಷ ಇವನ್ನೆಲ್ಲ ಎದುರಿಸುವಾಗ ತಮ್ಮವರ ಒಂದು ಗಟ್ಟಿ ಸಂಘಟನೆಯ ಮಹತ್ವ ಅವರಿಗೆ ಮನವರಿಕೆಯಾಗಿದೆ. ಇದೊಂದು ರೀತಿಯಲ್ಲಿ ಯಹೂದಿಗಳ 'ಡಯಸ್ಪೊರ'ದಂತೆ. ಛಿದ್ರಗಳು ಹೆಚ್ಚಾದಂತೆ ಒಂದುಗೂಡುವ ಸೆಳೆತ ಅಧಿಕವಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಮೆರಿಕನ್ನಡಿಗರ ಮನಸ್ಸನ್ನು ಅರಿಯಲು ಸಹಾಯಕ ಆಗುವ ಕೃತಿ 'ಬೇರು ಸೂರು: ಅಮೆರಿಕದಲ್ಲಿ ನಮ್ಮ ಬದುಕು'. ಇಲ್ಲಿಯ ಲೇಖಕರಲ್ಲಿ ಪಕ್ಕಾ ಸಾಹಿತಿಗಳೂ ಇದ್ದಾರೆ, ಹವ್ಯಾಸಿ ಬರೆಹಗಾರರೂ ಇದ್ದಾರೆ, ಕೆಲವರು ಇದೇ ಮೊದಲ ಬಾರಿಗೆ ಬರೆದವರೂ ಇದ್ದಾರೆ. ಇದರಲ್ಲೆಲ್ಲ ತಾವು ಹೇಗೆ ಅಮೆರಿಕದವರಾದದ್ದು, ಹಾಗೆ ಆಗುವ ಪ್ರಕ್ರಿಯೆಲ್ಲಿ ಆದ ಅನುಭವವೇನು, ನೆರವಾದವರು ಯಾರು, ಕೈಕೊಟ್ಟವರು ಯಾರು, ಪೇಚಿನ ಪ್ರಸಂಗಗಳೇನು, ಅಮೆರಿಕದ ಜನರು ತಮ್ಮನ್ನು ಹೇಗೆ ಪರಿಭಾವಿಸುತ್ತಾರೆ ಎಂಬುದನ್ನೆಲ್ಲ ವಿವರಿಸಿದ್ದಾರೆ. ಹಲವು ಸುದೀರ್ಘವಾದ ಆತ್ಮಕಥಾನಕದ ರೀತಿಯ ಬರೆಹಗಳು, ಇನ್ನು ಕೆಲವು ಕತೆಯ ರೂಪದ ನಿರೂಪಣೆಗಳೂ ಇವೆ.
ಈ ಕೃತಿಯ ಸಂಪಾದಕರಲ್ಲಿ ಒಬ್ಬರಾದ ಗುರುಪ್ರಸಾದ ಕಾಗಿನೆಲೆಯವರು 'ನಾನು, ನಾವು' ಲೇಖನದಲ್ಲಿ ಬರೆದ ಈ ಸಾಲುಗಳನ್ನು ನೋಡಬೇಕು: "ಒಂದು ಸತ್ಯವೆಂದರೆ, ಕನ್ನಡದ ವಿಮರ್ಶಕರಿಂದ ಹೊರನಾಡ ಗುಂಪಿನ ಬರವಣಿಗೆಗೆ ನಿಜವಾಗಿಯೂ ಸಿಕ್ಕಿರುವುದು ಒಂದಿಷ್ಟು ಕರುಣೆ, ಪ್ರೀತಿ, ಅಯ್ಯೋ ಪಾಪ ಮತ್ತು ರಿಯಾಯಿತಿ. 'ಅಕ್ಕ' ಸಮ್ಮೇಳನಕ್ಕೆ ಬಂದ ನಿಸಾರರು 'ನಿಮ್ಮೊಳಗಿದ್ದೂ ನಿಮ್ಮಂತಾಗದೇ' ಪದ್ಯ ಓದಿದಾಗ ಅನೇಕ ಅಮೆರಿಕನ್ನಡಿಗರು ಅದು ತಮ್ಮ ಸಂದರ್ಭಕ್ಕೆ ಬಹಳ ಪ್ರಸ್ತುತವೆಂದು ತಲೆದೂಗಿದರು... ಬರಗೂರರು 'ಕರ್ನಾಟಕ ನಿಮ್ಮ ಚರಿತ್ರೆ, ಅಮೆರಿಕ ನಿಮ್ಮ ಭೂಗೋಳ' ಎಂದಾಗ ಚಪ್ಪಾಳೆ ಹೊಡೆದರು..... ನ್ಯೂಯಾರ್ಕಿನಲ್ಲಿ ಆಗುತ್ತಿರುವ ಡೇ ಟ್ರೇಡಿಂಗ್ ಕಥೆಯನ್ನು ಸಿದ್ಧಾಪುರದ ಸಂತೆಯಲ್ಲಿ ಆಗುತ್ತಿರುವ ದನದ ವ್ಯಾಪಾರದ ವಿವರದಂತೆ ಹೇಳಬೇಕಾದಾಗ, ಬರಹಗಾರ ಎದುರಿಸುವ ಸವಾಲು ಕೇವಲ ಇಂಗ್ಲಿಷಿನಲ್ಲಿ ಯೋಚಿಸಿ ಕನ್ನಡದಲ್ಲಿ ಬರೆಯುವುದಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಮತ್ತು ಕೇವಲ ದೇಶಭಾಷೆಗಳಿಗಿರುವ ಸವಾಲು. ಅದನ್ನು ಸಾಧಿಸುವಲ್ಲಿ 'ಅನಿವಾಸಿ' ಬರವಣಿಗೆಯ ಯಶಸ್ಸಿದೆ' ಎನ್ನುವ ಮಾತುಗಳ ಹಿನ್ನೆಲೆಯಲ್ಲಿ ಅಲ್ಲಿನವರ ಸಾಹಿತ್ಯ ಕೃತಿಗಳನ್ನು  ನಾವು ಗ್ರಹಿಸಬೇಕು.
ಕಾಗಿನೆಲೆಯವರ ಕಳಕಳಿ ಇರುವುದು ಅಪ್ಪಟ ಸಾಹಿತ್ಯಿಕ ಕೃತಿಯನ್ನು ವಿಮರ್ಶಕರು ಅನುಸಂಧಾನ ಮಾಡುವ ಬಗ್ಗೆ. ಈ ಕೃತಿಯಲ್ಲಿ ವಿಭಿನ್ನ ಲೇಖಕರ ವಿಭಿನ್ನ ಅನುಭವಗಳ ದಾಖಲೆ ಇದೆ. ಅಮೆರಿಕದ ಬಗ್ಗೆ ಕುತೂಹಲ ಉಳ್ಳವರಿಗೆ ಅದನ್ನು ತಣಿಸಬಲ್ಲ ಅಪಾರವಾದ ಮಾಹಿತಿ ಈ ಕೃತಿಯಲ್ಲಿದೆ. ಅಮೆರಿಕದ ಬದುಕು ಸಾಕೆನಿಸಿ ಮರಳಿ ಭಾರತಕ್ಕೆ ಬಂದು ನೆಲಸುವ ಕನಸಿನವರೂ ಇಲ್ಲಿದ್ದಾರೆ. ಈ ಅನುಭವ ಪಾಠ ಅತ್ಯಂತ ಬೆಲೆಯುಳ್ಳದ್ದು.
ಇಲ್ಲಿನ ಲೇಖನಗಳಿಗೆ ಸಮಕಾಲೀನ ಕನ್ನಡದ ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರಜ್ಞೆಯ ಹೊರೆ ಅಥವಾ ಹಂಗಿಲ್ಲ. ಇದ್ದರೂ ಅಂತರ್ಜಾಲದ ಜಾಲತಾಣಗಳು, ಪತ್ರಿಕೆಗಳ ಲೇಖನಗಳು ಪೂರೈಸುವ ಮೇಲ್ಪದರದ ಅರಿವು ಮಾತ್ರ ಇರಬಹುದು. ಕರ್ನಾಟಕದಲ್ಲಿರುವ ಕನ್ನಡಿಗರ ಸ್ಥಿತಿಯೂ ಇದಕ್ಕಿಂತ ಬಹಳ ಹೊರತಾಗಿಲ್ಲ ಎಂಬ ಮಾತುಗಳನ್ನು ಕೇಳಿದಾಗ ಅಥವಾ ಹಾಗೆಂದು ಓದಿದಾಗ ಇದು ಕನ್ನಡದ್ದೇ ಸಾಂಸ್ಕೃತಿಕ ಪ್ರಜ್ಞೆಯ ಆದ್ಯತೆಯ ವಿಸ್ತರಣೆಯಾ ಎಂದು ಕೂಡ ನಾವು ಒಮ್ಮೆ ಕೇಳಿಕೊಳ್ಳಬೇಕಾಗಿದೆ ಎಂಬ ಮಾತನ್ನು ಇದರ ಸಂಪಾದಕರು ಹೇಳಿದ್ದಾರೆ.
 ಅಮೆರಿಕದ 'ಕನ್ನಡ ಸಾಹಿತ್ಯ ರಂಗ'ವು 2003ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಅದರ ಜೊತೆಗೆ ಒಂದು ಕೃತಿಯನ್ನು ಪ್ರಕಟಿಸುತ್ತ ಬಂದಿದೆ. ಆ ಮಾಲಿಕೆಯಲ್ಲಿ ಇದು 2013ನೆ ವರ್ಷದ ಕೃತಿ. ಅಮೇರಿಕದಲ್ಲಿ ಕನ್ನಡದ ಓದನ್ನು ಮತ್ತು ಬರೆಹವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕೃತಿಯನ್ನು ಹೊರತರಲಾಗಿದೆ. ಆ ಉದ್ದೇಶವನ್ನು ಈಡೇರಿಸುವಲ್ಲಿ ಈ ಕೃತಿ ಯಶಸ್ವಿಯಾಗಿದೆ.
ಕೃತಿ: ಬೇರು ಸೂರು
ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಅಮೆರಿಕವನ್ನು ಅರಿಯಲು
ಪ್ರ:ವಸಂತ ಪ್ರಕಾಶನ, ಬೆಂಗಳೂರು, ಪುಟಗಳು 514 ಬೆಲೆ ರು. 380


ಕಾಲದ ಇತಿಹಾಸ
ವಿಶ್ವ ಅಮೂರ್ತ, ದೇವರು ಅಮೂರ್ತ. ಆದರೆ ಕಾಲವು ಮೂರ್ತ. ಅದಕ್ಕಾಗಿಯೇ ಮುಹೂರ್ತಗಳಿರುವುದು. ಇಂಥ ಕಾಲದ ಕುಲ ನಾಮ ತಿಳಿಯುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆದಿದೆ. 'ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್‌' ಎಂಬುದು ಸ್ಟೀಫನ್ ಹಾಕಿಂಗ್ ಅವರ ಪ್ರಖ್ಯಾತವಾದ ಕೃತಿ. ಹತ್ತು ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ ಎಂದರೆ ಕಾಲದ ಕತೆ ಕೇಳುವುದಕ್ಕೆ ಜನ ಎಷ್ಟೊಂದು ಉತ್ಸುಕರಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿಶ್ವವು ಹೇಗೆ ಹುಟ್ಟಿತು, ವಿಶ್ವವು ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬಂತು, ವಿಶ್ವವು ಕೊನೆಯಾಗುವುದೆ, ಆಗುವುದಾದರೆ ಹೇಗೆ ಈ ಇತ್ಯಾದಿ ಪ್ರಶ್ನೆಗಳು ನಿಮಗೂ ಬಂದಿರಬಹುದು. ನಿಮ್ಮದೇ ರೀತಿಯಲ್ಲಿ ನೀವು ಅದಕ್ಕೆ ಉತ್ತರ ಕಂಡುಕೊಂಡಿರಬಹುದು. ಈ ಕೃತಿಯಲ್ಲಿ ಇವುಗಳಿಗೆ ಹೆಚ್ಚು ನಿಖರ ಎನ್ನುವಂಥ ಉತ್ತರಗಳಿವೆ. ಈ ವೈಜ್ಞಾನಿಕ ತತ್ವಶಾಸ್ತ್ರದ ಈ ಕೃತಿಯನ್ನು ಡಾ.ಮಾಧವ ಪೆರಾಜೆಯವರು ಕ್ಲಿಷ್ಟತೆಯಿಲ್ಲದೆ ತುಂಬ ಸರಳವಾಗಿ ಕನ್ನಡಕ್ಕೆ ತಂದಿದ್ದಾರೆ. ವಿಜ್ಞಾನವಾದರೂ ಸಾಹಿತ್ಯದಂತೆ ಮನ ಸೆಳೆಯುತ್ತದೆ.
ಕೃತಿ: ಎ ಬ್ರೀಫ್ ಹಿಸ್ಟರಿ ಆಫ್ ಟೈಮ್
ಪ್ರಕಾರ: ಅನುವಾದ
ಏಕೆ ಓದಬೇಕು?: ಕಾಲವನ್ನು ಅರಿಯಲು
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಪುಟಗಳು 230 ಬೆಲೆ ರು. 200

ಲಂಕೇಶರ ಮರೆಯುವ ಮುನ್ನ
ಕನ್ನಡ ಭಾಷೆಯನ್ನು ಸೊಗಸಾಗಿ ದುಡಿಸಿಕೊಂಡವರು ಪಿ.ಲಂಕೇಶರು. ತಮ್ಮ ಸಾಹಿತ್ಯದಲ್ಲಿ ಹಾಗೂ ಪತ್ರಿಕೆಯ ಬರೆಹಗಳಲ್ಲಿ ಅವರು ಬಳಸಿದ ಲಲಿತ ಕನ್ನಡ ಉಳಿದವರಿಗೆ ಕಷ್ಟಸಾಧ್ಯ. 'ಕವಿತೆಯ ದೀಪ್ತಗುಣ, ಕತೆಯ ಅಂತರ್‌ದೃಷ್ಟಿಯಿಂದ ಕೂಡಿದ ಇಲ್ಲಿನ ಟಿಪ್ಪಣಿಗಳು ಲಂಕೇಶರ ಪ್ರತಿಭಾ ವ್ಯಕ್ತಿತ್ವದ ಬಹುಮುಖಗಳನ್ನು ಪ್ರತಿನಿಧಿಸುತ್ತಿವೆ' ಎಂದು ಕಿ.ರಂ.ನಾಗರಾಜ್ ಅವರು ಹೇಳಿದ್ದರು. ಲಂಕೇಶ್ ಪತ್ರಿಕೆಯ 'ಮರೆಯುವ ಮುನ್ನ' ಅಂಕಣದಲ್ಲಿ ಪ್ರಕಟವಾದ ಬರೆಹಗಳ ಸಂಕಲನದ 5ನೆ ಸಂಪುಟ ಇದು. ಒಂದು ಸಂದರ್ಭದಲ್ಲಿ ಅವರು ಸಾಹಿತ್ಯ ವಿಮರ್ಶೆ ಹೇಗಿರಬೇಕು ಎಂಬುದನ್ನು ಹೇಳಿದ್ದಾರೆ. "ಸಾಹಿತ್ಯ ವಿಮರ್ಶೆಯಲ್ಲಿ ಒಂದು ಪುಸ್ತಕಕ್ಕೆ, ಒಬ್ಬ ಸಾಹಿತಿಗೆ, ಸಾಹಿತ್ಯದ ಸಂದರ್ಭಕ್ಕೆ ನಮ್ಮ ಸ್ಪಂದನ ಕೊಡುವುದು ನಮ್ಮ ಉದ್ದೇಶ. ಕೆಲವು ಸಲ ಅವಸರವಾಗಿ ಪುಸ್ತಕಗಳನ್ನು ನೋಡಿದರೂ ನಮ್ಮ ಉದ್ದೇಶಕ್ಕೆ ಚ್ಯುತಿ ಬರಬಾರದು. ನಾವು ಬರೆದದ್ದು ಎಷ್ಟು ಸೂಕ್ಷ್ಮವೂ ಖಚಿತವೂ ಆಗಿರಬೇಕೆಂದರೆ ಅದಕ್ಕೆ ವಸ್ತುನಿಷ್ಠೆ ತಾನೇತಾನಾಗಿ ಕೂಡಿಬರಬೇಕು. ಯಾವ ಮುಖವನ್ನೂ ನೋಡಿ ಮಣೆಹಾಕದ ಉತ್ತಮ ಸಾಹಿತ್ಯ ಸಮಾಜಕ್ಕೆ ಮುಖ್ಯ. ಅದು ಜನರ ಅಭಿರುಚಿಯನ್ನು ತಿದ್ದುವ ಮೂಲಕ ಅವರ ವರ್ತನೆಯನ್ನು, ಜೀವನ ಕ್ರಮವನ್ನು ತಿದ್ದುತ್ತದೆ ಎಂಬ ವಿಶ್ವಾಸದಿಂದ ನಾವು ಬರೆಯುತ್ತೇವೆ. ಇದು ನೈತಿಕ ಸುಧಾರಣೆಯಲ್ಲ; ಅನುಭವದ ಮೂಲಕ ವ್ಯಕ್ತಿತ್ವವನ್ನು ಪಕ್ವಗೊಳಿಸುವ ಪ್ರಕ್ರಿಯೆ. ಆದ್ದರಿಂದಲೇ ನಾವು ಧೈರ್ಯವಾಗಿ, ಸ್ಪಷ್ಟವಾಗಿ, ಸೂಕ್ಷ್ಮವಾಗಿ ಬರೆಯಬೇಕು; ಹುಂಬತನದಿಂದ ಬರೆಯಕೂಡದು. ಓದುಗರನ್ನು ಗೊಂದಲಗೊಳಿಸುವುದಕ್ಕಾಗಿ ಅಥವಾ ಮೋಸಗೊಳಿಸುವುದಕ್ಕಾಗಿ ಬರೆಯಕೂಡದು."- ತಮ್ಮ ಪತ್ರಿಕೆಯ ಪುಸ್ತಕಾವಲೋಕನದಲ್ಲಿ ವಿಮರ್ಶಕರೊಬ್ಬರು ಕೃತಿಯೊಂದನ್ನು ತಪ್ಪಾಗಿ ವಿಮರ್ಶಿಸಿದಾಗ ಲಂಕೇಶರು ಇದನ್ನು ಬರೆದಿದ್ದರು. 'ವಿಮರ್ಶಕನಿಗೆ ಬೇಕಾದ ಧೈರ್ಯ ಹೆಚ್ಚಾಗಿ ವಿನಯ ಕಡಿಮೆಯಾದರೆ, ಆತುರ ಹೆಚ್ಚಾಗಿ ಹೃದಯವಂತಿಕೆ ಕಡಿಮೆಯಾದರೆ' ಇಂಥ ತಪ್ಪು ಸಂಭವಿಸುತ್ತದೆ ಎಂದು ಹೇಳುವಾಗ ವಿಮರ್ಶೆ ಹೇಗಿರಬೇಕು ಎಂಬ ಪಾಠವನ್ನೂ ಲಂಕೇಶರು ಇಲ್ಲಿ ಮಾಡಿದ್ದಾರೆ. 'ಮರೆಯುವ ಮುನ್ನ' ಕನ್ನಡ ಸಾಹಿತ್ಯದ ಅತ್ಯುತ್ತಮ ಗದ್ಯ ಬರೆಹಗಳನ್ನು ಒಳಗೊಂಡಿದೆ.
ಕೃತಿ: ಮರೆಯುವ ಮುನ್ನ, ಪ್ರಕಾರ: ಅಂಕಣ, ಏಕೆ ಓದಬೇಕು?: ಕನ್ನಡದ ಸೊಗಸು ಅರಿಯಲು
ಪ್ರ: ಲಂಕೇಶ್ ಪ್ರಕಾಶನ, ಬೆಂಗಳೂರು, ಪುಟಗಳು 256 ಬೆಲೆ ರು. 150


ವೈಜ್ಞಾನಿಕ ದೃಷ್ಟಿ
ಮಾವಿನ ಮರದಿಂದ ಹಣ್ಣು ಕೆಳೆಗೆ ಬೀಳುವುದನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಹಣ್ಣು ಏಕೆ ಕೆಳಕ್ಕೇ ಬೀಳುತ್ತದೆ ಎಂದು ಆಲೋಚಿಸುವುದು, ಅದರ ಕಾರಣವನ್ನು ಕಂಡುಕೊಳ್ಳಲು ಯತ್ನಿಸುವುದು ವೈಜ್ಞಾನಿಕ ಮನೋಭಾವ. ಆಧುನಿಕ ಕಾಲದಲ್ಲಿಯೂ ನಾವು ಅನೇಕ ಅತಾರ್ಕಿಕ ಸಂಗತಿಗಳನ್ನು ನಂಬುತ್ತೇವೆ. ಕಾರ್ಯಕಾರಣ ಸಂಬಂಧವಿಲ್ಲದ ಘಟನೆಗಳಿಗೆ ವಿಶೇಷ ಅರ್ಥಗಳನ್ನು ಕಲ್ಪಿಸುತ್ತೇವೆ. ಪವಾಡಗಳನ್ನು ನಂಬುತ್ತೇವೆ. ಇದು ಸರಿಯಲ್ಲ. ನಮಗೆ ವೈಜ್ಞಾನಿಕ ದೃಷ್ಟಿ ಇರಬೇಕು ಎಂದು ಜೆ.ಆರ್.ಲಕ್ಷ್ಮಣರಾವ್ ಅವರು 'ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳುವುದು ಹೇಗೆ?' ಎಂಬ ಪುಟ್ಟ ಕೃತಿಯನ್ನು ರಚಿಸಿದ್ದಾರೆ. ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ?, ಫಲ ಜ್ಯೋತಿಷ ಒಂದು ವಿಜ್ಞಾನವೇ?, ಹೋಮಿಯೋಪತಿ ವೈಜ್ಞಾನಿಕವೇ?, ವೈಜ್ಞಾನಿಕ ನೆಲೆಗಳ ಮೇಲೆ ಮೌಢ್ಯದ ದಾಳಿ, ಪೂರ್ವಗ್ರಹದ ಪಿಡುಗು ಮೊದಲಾದ ಲೇಖನಗಳಿವೆ. ವೈಜ್ಞಾನಿಕ ಮನೋವೃತ್ತಿ ಸ್ವಭಾವಸಿದ್ಧವಾಗಿ, ಅಭ್ಯಾಸಬಲದಿಂದ ಬರುವಂಥದ್ದು. ಬದುಕಿನಲ್ಲಿ ಪ್ರತಿಯೊಂದನ್ನೂ ಪ್ರಶ್ನಿಸಿ ಒಪ್ಪಿಕೊಳ್ಳಬೇಕೆಂದು ಲಕ್ಷ್ಮಣರಾವ್ ಹೇಳುತ್ತಾರೆ.  
ಕೃತಿ: ವೈಜ್ಞಾನಿಕ ದೃಷ್ಟಿಯನ್ನು ಬೆಲೆಸಿಕೊಳ್ಳುವುದು ಹೇಗೆ?
ಪ್ರಕಾರ: ವೈಚಾರಿಕ
ಏಕೆ ಓದಬೇಕು?: ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿಕೊಳ್ಳಲು
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು 96 ಬೆಲೆ ರು. 50

ಶಾಂತಿನಾಥರ ಸ್ತ್ರೀಶಕ್ತಿ
ಕನ್ನಡ ನವ್ಯಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದ ಡಾ.ಶಾಂತಿನಾಥ ದೇಸಾಯಿಯವರು ನಗರ ಪ್ರಜ್ಞೆಯ ಮತ್ತು ಸ್ವತಂತ್ರ ಮನೋಭಾವದ ಸ್ತ್ರೀ ಪಾತ್ರಗಳನ್ನು ಸೃಷ್ಟಿಸಿದವರು. ಪುರುಷನ ಮುಂದೆ ಆತನಿಗೆ ಸರಿಸಮನಾಗಿ ತನ್ನ ಅಸ್ತಿತ್ವವನ್ನು ಪ್ರಸ್ತುತಪಡಿಸುವ ಸ್ತ್ರೀಪಾತ್ರಗಳಿಗೆ ನವ್ಯ ಸಾಹಿತ್ಯದಲ್ಲಿ ವಿಶೇಷ ಸ್ಥಾನವಿದೆ. ಡಾ.ರೇಖಾ ಈ.ಜಿ. ಅವರು ತಮ್ಮ ಪಿಎಚ್.ಡಿ. ಅಧ್ಯಯನಕ್ಕೆ 'ಶಾಂತಿನಾಥ ದೇಸಾಯಿ ಅವರ ಸಾಹಿತ್ಯದಲ್ಲಿ ಆಧುನಿಕ ಮಹಿಳಾ ಪ್ರಜ್ಞೆ' ಎಂಬ ವಿಷಯವನ್ನು ಆಯ್ದುಕೊಂಡು ದೇಸಾಯಿಯವರು ತಮ್ಮ ಕತೆಗಳು ಮತ್ತು ಕಾದಂಬರಿಗಳಲ್ಲಿ ವ್ಯಕ್ತಪಡಿಸಿದ ಮಹಿಳಾ ಪ್ರಜ್ಞೆಯನ್ನು ಒರೆಗೆ ಹಚ್ಚಿದ್ದಾರೆ. ಶಾಂತಿನಾಥ ದೇಸಾಯಿಯವರ ಸಾಹಿತ್ಯದ ಬಗ್ಗೆ ಈ ರೀತಿಯ ಅಧ್ಯಯನ ನಡೆದಿರಲಿಲ್ಲ. ಆ ಕೊರತೆಯನ್ನು ರೇಖಾ ತುಂಬಿಕೊಟ್ಟಿದ್ದಾರೆ. ಮಹಿಳಾ ಪ್ರಜ್ಞೆಯ ಜೊತೆಯಲ್ಲಿಯೇ ದೇಸಾಯಿಯವರ ಸಾಹಿತ್ಯದ ವಿಶೇಷ ಲಕ್ಷಣಗಳನ್ನೂ ಇಲ್ಲಿ ಹೇಳಲಾಗಿದೆ. ಮಾರ್ಗದರ್ಶಕರು ಡಾ.ಅಮರೇಶ ನುಗಡೋಣಿ.
ಕೃತಿ: ಶಾಂತಿನಾಥ ದೇಸಾಯಿ ಅವರ ಸಾಹಿತ್ಯದಲ್ಲಿ ಆಧುನಿಕ ಮಹಿಳಾಪ್ರಜ್ಞೆ
ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ದೇಸಾಯಿಯವರನ್ನು ಅರಿಯಲು
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ, ಪುಟಗಳು 172 ಬೆಲೆ ರು. 120


ಕಣ್ಣಿಗೆ ಕಾಣದ್ದು
ಜಗತ್ತು ಸನ್ಮಾರ್ಗದಲ್ಲಿ ನಡೆಯಬೇಕೆಂದರೆ ನೈತಿಕ ಪ್ರಜ್ಞೆ ಜನರಲ್ಲಿ ಜಾಗೃತವಾಗಿರಬೇಕು. ಆಧುನಿಕ ಸೌಕರ್ಯಗಳು ನಮ್ಮನ್ನು ವಿನೀತರನ್ನಾಗಿ ಮಾಡುವ ಬದಲು ದುರಹಂಕಾರಿಗಳನ್ನಾಗಿ ಮಾಡುತ್ತಿದೆ. ಅನಗತ್ಯವಾಗಿ ಮಾನಸಿಕ ಕ್ಲೇಶಕ್ಕೆ ಗುರಿಯಾಗುತ್ತೇವೆ. ಇದರಿಂದ ಮುಕ್ತಿಹೊಂದುವುದು ಹೇಗೆ ಎಂಬುದನ್ನು ಎನ್.ಆರ್.ಕೆ. ರಾವ್ ಅವರು ತಮ್ಮ 'ಅಗೋಚರ ಜ್ಞಾನಶಕ್ತಿ' ಎಂಬ ಕೃತಿಯಲ್ಲಿ ವಿವರಿಸಿದ್ದಾರೆ. ಭಾರತೀಯ ಪ್ರಾಚೀನ ಜ್ಞಾನದಲ್ಲಿಯ ಶಕ್ತಿಯ ನಿರೂಪಣೆ, ನಂಬಿಕೆ ಹಾಗೂ ವಿಜ್ಞಾನ ಹೇಳುವ ಅಗೋಚರ ಶಕ್ತಿ ಇವುಗಳನ್ನು ಸಮೀಕರಿಸುವ ಪ್ರಯತ್ನವನ್ನು ರಾವ್ ಮಾಡಿದ್ದಾರೆ. ವ್ಯಕ್ತಿಯ ಸಂತೋಷದ ಮೂಲ ಹಣವಲ್ಲ. ಅದರಾಚೆಗೆ ಅನ್ಯರಿಗೆ ಅರ್ಥವಾಗದ ಇನ್ನೇನೋ ಇದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎಂಬುದನ್ನು ಅವರು ಇಲ್ಲಿಯ 38 ಪುಟ್ಟಪುಟ್ಟ ಲೇಖನಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಹಲವು ಮಹಾತ್ಮರ ಉಕ್ತಿಗಳನ್ನು ಸಮರ್ಥನೆಗೆ ಇಲ್ಲಿ ಅವರು ನೀಡಿದ್ದಾರೆ.
ಕೃತಿ: ಅಗೋಚರ ಜ್ಞಾನಶಕ್ತಿ
ಪ್ರಕಾರ: ಅಧ್ಯಾತ್ಮ
ಏಕೆ ಓದಬೇಕು?: ಸಂತೋಷವಾಗಿರಲು
ಪ್ರ: ಸಪ್ನ ಬುಕ್‌ಹೌಸ್, ಬೆಂಗಳೂರು, ಪುಟಗಳು 119 ಬೆಲೆ ರು. 50


ಗೋಕಾಕ ಸ್ಮರಣೆ
ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಮಹತ್ವದ ಲೇಖಕರು. ಕನ್ನಡಕ್ಕೆ ಜ್ಞಾನಪೀಠದ ಗೌರವವನ್ನು ತಂದುಕೊಟ್ಟವರಲ್ಲಿ ಇವರೂ ಒಬ್ಬರು. ಕನ್ನಡದ ಹಿರಿಯ ಲೇಖಕರು ಬರೆದ ಲೇಖನಗಳಿರುವ 'ವಿನಾಯಕ: ಒಂದು ಅಧ್ಯಯನ' ಕೃತಿಯನ್ನು ಸಂಪಾದಿಸಿದವರು ಶಿವರಾಮು ಕಾಡನಕುಪ್ಪೆ.  ಈ ವರ್ಷ ಗೋಕಾಕರ ಜನ್ಮಶತಮಾನೋತ್ಸವ ನಡೆಯುತ್ತಿದೆ. ಕಾರಣ 25 ವರ್ಷಗಳ ಹಿಂದೆ ಪ್ರಕಟವಾಗಿರುವ ಈ ಕೃತಿಯನ್ನು ಈಗ ಮರು ಮುದ್ರಿಸಲಾಗಿದೆ. ವಿನಾಯಕರ ಕಾವ್ಯಮಾರ್ಗ ಮತ್ತು ಸಮುದ್ರ ಗೀತೆಗಳು ಕುರಿತು ಡಾ.ಜಿ.ಎಸ್.ಶಿವರುದ್ರಪ್ಪನವರು ಎರಡು ಲೇಖನ ಬರೆದಿರುವರು. ಸಮುದ್ರದಾಚೆಯಿಂದ ಕೃತಿ ಕುರಿತು ಸಿಪಿಕೆ ಬರೆದಿದ್ದಾರೆ. ಇವರಲ್ಲದೆ, ಕಿಕ್ಕೇರಿ ನಾರಾಯಣ, ಕ್ಯಾತನಹಳ್ಳಿ ರಾಮಣ್ಣ, ಬೋರೇಗೌಡ ಚಿಕ್ಕಮರಳಿ, ಎಚ್.ಆರ್.ಅಮರನಾಥ, ರಾಗೌ, ಶಿವರಾಮು ಕಾಡನಕುಪ್ಪೆ ಬರೆದ ಲೇಖನಗಳು ಇಲ್ಲಿವೆ. ವಿನಾಯಕರ ಅಧ್ಯಯನಕ್ಕೆ ಈ ಕೃತಿ ಉಪಯುಕ್ತ. ಮುದ್ರಣದೋಷಗಳು ಸಾಕಷ್ಟಿವೆ.
ಕೃತಿ: ವಿನಾಯಕ: ಒಂದು ಅಧ್ಯಯನ, ಪ್ರಕಾರ: ಸಂಪಾದನೆ, ಏಕೆ ಓದಬೇಕು?: ಗೋಕಾಕರನ್ನು ಅರಿಯಲು, ಪ್ರ: ಸಂವಹನ, ಮೈಸೂರು, ಪುಟಗಳು 116 ಬೆಲೆ ರು. 75


-ಡಾ. ವಾಸುದೇವ ಶೆಟ್ಟಿ



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!