ಚಿತ್ರ: ಅಟೋನ್ಮೆಂಟ್ (2007)
ಭಾಷೆ: ಇಂಗ್ಲಿಷ್, ಫ್ರೆಂಚ್
ನಿರ್ದೇಶನ: ಜೋ ರೈಟ್
ಅವಧಿ: 123 ನಿಮಿಷ
ತಾರಾಗಣ: ಕೈರಾ ನೈಟ್ಲಿ, ಜೇಮ್ಸ್ ಮ್ಯಾಕ್ ಅವೇ, ರೊಮಾಲಾ ಗರಾಯಿ, ಜುನೋ ಟೆಂಪಲ್.
‘I am very, very sorry for the terrible distress that I have caused you. I am very, very sorry...’
ಆ ಒಂದು ಕೆಟ್ಟ ಘಟನೆ ನಡೆದು ಹಲವು ವರ್ಷಗಳೇ ಕಳೆದಿವೆ. ಈಗ ಆಕೆ ಕಣ್ಣಲ್ಲಿ ನೀರು ತುಂಬಿಕೊಂಡು 'ಕ್ಷಮಿಸು ಬಿಡು' ಎಂದು ಹತ್ತು ಬಾರಿ ಬಿಕ್ಕಳಿಸುತ್ತಾಳೆ. ಅದು ಆಕೆಯ ಪಾಪ ನಿವೇದನೆಯೇ? ಗೊತ್ತಿಲ್ಲ, ಆದರೆ 'ತಾನು ಮಾಡಿದ ಒಂದು ಸಣ್ಣ ತಪ್ಪಿಗಾಗಿ ಅಮಾಯಕ ವ್ಯಕ್ತಿ ಜೈಲು ಕಂಬಿ ಎಣಿಸುವಂತಾಯಿತು. ಯಾಕೆ ನಾನು ಹೀಗೆ ವರ್ತಿಸಿದೆ?' ಎಂದು ಮಾನಸಿಕ ಕ್ಷೋಭೆಗೊಳಗಾಗಿದ್ದಾಳೆ. ಅಮಾಯಕನ ಮೇಲೆ ಅರೋಪ ಹೊರೆಸಿ ಜೈಲು ಪಾಲು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಆಕೆ ಈಗ ಯುದ್ಧಭೂಮಿಯ ಅಸ್ಪತ್ರೆಯಲ್ಲಿ ದಾದಿ!
ಪ್ರೀತಿ, ಯುದ್ಧ, ತ್ಯಾಗ ಮತ್ತು ಕಣ್ಣೀರು... ಈ ಮೂರನ್ನೂ ಹದವಾಗಿ ಬೆರಸಿ, ಹೀಗೆ ಪ್ರೇಕ್ಷಕನ ಮನಸ್ಸಿನ ಭಾವನೆಗಳ ಕದ ತಟ್ಟುವ ಚಿತ್ರ 'ಅಟೋನ್ಮೆಂಟ್'. ಶೀರ್ಷಿಕೆಯೇ ಸೂಚಿಸುವಂತೆ ಇಲ್ಲಿ ಸಂಧಾನ, ಸಮಾಧಾನ, ಪಶ್ಚಾತ್ತಾಪವಿದೆ. ಯಾಕೆ ಮತ್ತು ಯಾರಿಗೆ? ಎನ್ನುವ ಪ್ರಶ್ನೆ ಮೂಡಿದರೆ ಒಮ್ಮೆ ಈ ಚಿತ್ರ ನೋಡಬೇಕು. ತನ್ನ ತಪ್ಪನ್ನು ತಿಳಿದುಕೊಂಡು ಆಕೆ ಬಿಕ್ಕಳಿಸುತ್ತಿರುವಾಗ ಚಿತ್ರ ವರ್ತಮಾನದಲ್ಲಿ ನಿರೂಪಣೆಯಾಗುತ್ತಿದೆ. ವರ್ತಮಾನದ ಈ ಪಾಪ ನಿವೇದನೆಗೆ ಕಾರಣವೇನು? ಎನ್ನುವ ಪ್ರಶ್ನೆ ಮೂಡುವಷ್ಟರಲ್ಲಿ ಕಥೆ ಮೊದಲಿಗೆ ತಿರುಗುತ್ತದೆ. ಚಿತ್ರ ಮೊದಲಿನ ಹಂತಕ್ಕೆ ಬಂದಾಗ...
ಒಂದು ದೊಡ್ಡ ಬಂಗಳೆ. ನಾಲ್ಕು ಪ್ರಮುಖ ಪಾತ್ರಧಾರಿಗಳು. ಬ್ರಿಯಾನಿ, ಸಿಸಿಲಿಯಾ ಎಂಬಿಬ್ಬರು ಸೋದರಿಯರು. ವಯಸ್ಸಿನಲ್ಲಿ ಚಿಕ್ಕವಳಾದರೂ ಬ್ರಿಯೊನಿ ಮಹಾ ಬುದ್ಧಿವಂತೆ. ಸ್ವಲ್ಪ ಸೃಜನಾತ್ಮಕತೆ ಹೆಚ್ಚೆಂದೇ ಹೇಳಬಹುದು! ಹೀಗಾಗಿ 13 ವರ್ಷಕ್ಕೆ ನಾಟಕ, ಕಥೆ ಬರೆಯುವ ಈ ಹುಡುಗಿ ವಯಸ್ಸಿನ ಸಹಜ ಸಂಚಾರಿ ಅಲೋಚನೆಗಳಿಗೆ ಸಾಣೆ ಹಿಡಿಯುವುದು ಇವಳ ಸೃಜನಶೀಲತೆಗಳಲ್ಲೊಂದು. ಸಿಸಿಲಿಯಾ ವಿವಿಯಲ್ಲಿ ಪದವಿ ಮುಗಿಸಿ ಮನೆಯಲ್ಲಿದ್ದಾಳೆ. ರಾಬೀ ಇವರ ಮನೆಯಲ್ಲಿ ಕೆಲಸ ಮಾಡುವ ಯುವಕ. ತನ್ನ ಅಕ್ಕ ಸಿಸಿಲಿಯಾ ಹಾಗೂ ರಾಬೀ ನಡುವೆ ಎಂಥದೋ ಗುಪ್ತ ಸಮನ್ವಯತೆ ಇದೆ ಎಂದುಕೊಳ್ಳುವ ಬ್ರಿಯಾನಿ ಈ ಇಬ್ಬರ ಮೇಲೆ ಅನುಮಾನದ ದೃಷ್ಟಿ ಬೀರುತ್ತಾಳೆ. ಈ ಕಥೆ ನಡೆಯುವಾಗ ಇವರ ಮನೆಯಲ್ಲಿ ಲೋಲಾ ಎನ್ನುವ ಹತ್ತಿರದ ಸಂಬಂಧಿಕರ ಹುಡುಗಿ ಕೂಡ ಇರುತ್ತಾಳೆ.
ಹೀಗೆ ಸಿಸಿಲಿಯಾ- ರಾಬೀ ಮೇಲಿನ ಬ್ರಿಯೊನಿ ಅನುಮಾನದಲ್ಲಿ ಚಿತ್ರ ನೋಡುವವರು ಪಾಲುದಾರರಾಗುತ್ತಾರೆ. ಇದಕ್ಕೆ ತಕ್ಕಂತೆ ಕೆಲ ಸನ್ನಿವೇಶಗಳಲ್ಲಿ ನಿರ್ದೇಶಕನ ಚಮತ್ಕಾರಗಳು ಇವೆ. ಇಬ್ಬರ ಚಲನವಲನಗಳತ್ತ ನಿಗಾ ಇಡುವ ಬ್ರಿಯಾನಿಗೆ ಒಮೊಮ್ಮೆ ಇಬ್ಬರ ಮಧ್ಯೆ ಏನೂ ನಡೆಯದಿದ್ದರೂ ಏನೋ ಆಗುತ್ತಿದೆ ಎಂದು ಲೆಕ್ಕ ಹಾಕುತ್ತಾಳೆ. ಅದೇನು? ಎಂಬುದು ಆಕೆ ಮತ್ತು ನೋಡುಗನ ಊಹೆಗೆ ಬಿಟ್ಟ ವಿಚಾರ ಎನ್ನುವ ಧಾಟಿಯಲ್ಲಿ ಚಿತ್ರ ಸಾಗುತ್ತದೆ. ಆದರೆ ಆಕೆ ಅಂದುಕೊಂಡಂತೆ ಅಲ್ಲಿ ಏನೂ ನಡೆದಿರಲ್ಲ! ಆದರೂ ಅಕ್ಕನ ಮೇಲಿನ ಅನುಮಾನ ತಂಗಿಗೆ ಕಡಿಮೆಯಾಗದು. ಈ ನಡುವೆಯೇ ಲೋಲಾ ಮೇಲೆ ಅತ್ಯಾಚಾರ. 'ಕತ್ತಲಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದು ಯಾರೆಂದು ತನಗೆ ತಿಳಿಯಲಿಲ್ಲ' ಎನ್ನುತ್ತಾಳೆ ಲೋಲಾ.
ಲೋಲಾಳ ಮುಗ್ಧತೆಯನ್ನೇ (?) ಬಂಡವಾಳ ಮಾಡಿಕೊಳ್ಳುವ ಬ್ರಿಯೊನಿ ಆ ವ್ಯಕ್ತಿ ತನಗೆ ಗೊತ್ತೆಂದು ಅತ್ಯಾಚಾರದ ಅರೋಪವನ್ನು ರಾಬೀ ಮೇಲೆ ಹಾಕುತ್ತಾಳೆ. ಆ ಮೂಲಕ ರಾಬೀ ಮೇಲಿನ ದ್ವೇಷವನ್ನು ಬ್ರಿಯೊನಿ ಹೀಗೆ ತೀರಿಸಿಕೊಳ್ಳುತ್ತಾಳೆ. ಆದರೆ ಮಾಡದ ತಪ್ಪಿಗೆ ರಾಬೀ ಜೈಲು ಸೇರುತ್ತಾನೆ. ಇದೆಲ್ಲ ಒಂದು ದಿನ ಸಂಜೆ ನಡೆಯುವ ಘಟನೆಗಳು. ರಾಬೀ ಜೈಲು ಸೇರಿದ ಮೇಲೆ ಚಿತ್ರ, ನಾನಾ ತಿರುವುಗಳನ್ನು ಪಡೆದು ಎರಡನೇ ವಿಶ್ವಯುದ್ಧದ ನೆಲೆಗೆ ವರ್ಗಾವಣೆಯಾಗುತ್ತದೆ. ಜೈಲು ಶಿಕ್ಷೆ ಅನುಭವಿಸಿದ ರಾಬೀ ಸೈನಿಕನಾಗಿದ್ದಾನೆ. ಚಿಕ್ಕಂದಿನಲ್ಲಿ ತಾನು ಮಾಡಿದ ತಪ್ಪಿಗೆ ಬ್ರಿಯೊನಿ ಅದೇ ಯುದ್ಧ ನೆಲದ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಮಾಡುವ ಮೂಲಕ ತನ್ನ ಪಾಪಕ್ಕೆ ಪಶ್ಚಾತ್ತಾಪ ಪಡುತ್ತಾಳೆ.
ಈ ಹಂತದಲ್ಲಿ ಯುದ್ಧ ನೆಲೆಯಿಂದ ವಾಪಸಾಗುವ ಅಥವಾ ಮತ್ತೆ ಯುದ್ಧ ಭೂಮಿಗೆ ಮರುಳುತ್ತಿರುವ ರಾಬೀ-ಬ್ರಿಯೊನಿ ಪರಸ್ಪರ ಕೂಡುತ್ತಾರೆ. ಅಕ್ಕನ ಮುಂದೆಯೇ 'ಕ್ಷಮಿಸು' ಎಂದು ರಾಬೀ ಬಳಿ ಬಿಕ್ಕಳಿಸುತ್ತಾಳೆ. ಇದಕ್ಕೂ ಮುನ್ನ ಲೋಲಾ ಮೇಲೆ ಅತ್ಯಾಚಾರ ಮಾಡಿದ ನಿಜವಾದ ಅರೋಪಿಯನ್ನೇ ಲೋಲಾ ಸಂಭ್ರಮದಿಂದ ವಿವಾಹ ಮಾಡಿಕೊಂಡು ಬ್ರಿಯೊನಿಯನ್ನು ನೋಡಿಯೂ ನೋಡದಂತೆ ಹೋಗುವಾಗಲಂತೂ ಬ್ರಿಯೊನಿಗೆ ದುಃಖ ಉಕ್ಕಿ ಬರುತ್ತದೆ. 'ಅಯ್ಯೋ ತಾನೆಂಥ ತಪ್ಪುಗೈದೆ?' ಎಂದು ನಿಂತಲ್ಲೆ ಕುಸಿಯುತ್ತಾಳೆ. ಕಥೆಯಲ್ಲಿ ವಿಶೇಷತೆ ಇಲ್ಲದಿದ್ದರೂ ಚಿತ್ರವನ್ನು ನೋಡುವಾಗ ಭಾವನಾತ್ಮಕವಾಗಿ 'ಅಟೋನ್ಮೆಂಟ್' ಹತ್ತಿರವಾಗುವುದು ಇಂಥ ಎಮೋಷನಲ್ ಸನ್ನಿವೇಶಗಳಿಂದಲೇ.
ಆದರೆ ಚಿತ್ರ ತುಂಬಾ ಅದ್ಭುತವಾಗಿದೆ ಅಂತ ಹೇಳಲಾಗದು. ಇಲ್ಲಿ ನಿರ್ದೇಶಕ ವಿವಿಧ ದೃಷ್ಟಿಕೋನಗಳಲ್ಲಿ ಸನ್ನಿವೇಶಗಳನ್ನು ನಿರೂಪಣೆ ಮಾಡುವ ವಿಧಾನ ಹೊಸತೇನೋ ಹೌದು. ಒಮ್ಮೆ ಸಿಸಿಲಿಯಾ ಹಾಗೂ ರಾಬೀ ನೀರಿನ ಟ್ಯಾಂಕ್ ಪಕ್ಕ ನಿಂತಿರುತ್ತಾರೆ. ಆಗ ಸಿಸಿಲಿಯಾ ತನ್ನ ಬಟ್ಟೆಗಳನ್ನು ಕಳಚಿ ನೀರಿಗೆ ಧುಮುಕುತ್ತಾಳೆ. ನಂತರ ನೀರಿನಿಂದ ಎದ್ದಾಗ ರಾಬೀಯತ್ತ ಒಂಥರಾ ನೋಡಿ ಸರಸರನೆ ಹೊರಡುತ್ತಾಳೆ. ಈ ಸನ್ನಿವೇಶವನ್ನು ಕಿಟಕಿಯಿಂದ ನೋಡುವ ಬ್ರಿಯೊನಿ, ಇವರಿಬ್ಬರ ನಡುವೆ ಏನು ನಡೆದಿರಬಹುದು? ಎಂದು ಊಹೆ ಮಾಡಿಕೊಳ್ಳುತ್ತಾಳೆ. ಈಕೆಯ ಅನುಮಾನದಲ್ಲಿ ಪ್ರೇಕ್ಷಕನೂ ಪಾಲುದಾರನಾಗಿ, ಸಿಸಿಲಿಯಾ ರಾಭಿ ಮುಂದೆಯೇ ನಗ್ನವಾಗಿ ನೀರಿಗಿಳಿದ್ದಾಳೆ ಎಂದುಕೊಳ್ಳುತ್ತಾರೆ. ಆದರೆ ಆಕೆ ನಗ್ನವಾಗಿರಲ್ಲ. ಅಲ್ಲಿ ಏನು ನಡೆಯಿತು ಎಂಬುದು ನಂತರ ಗೊತ್ತಾಗುತ್ತದೆ. ಹೀಗೆ ಕೆಲ ದೃಶ್ಯಗಳನ್ನು ಮೊದಲು ನೋಡುಗರ ಊಹೆಗೆ ಬಿಟ್ಟು ನಂತರ ವಾಸ್ತವಕ್ಕೆ ಬರುವಾಗ ಪ್ರೇಕ್ಷಕನಿಗೆ ಅಚ್ಚರಿ. ಆದರೆ ಚಿತ್ರದ ಮೊದಲ ಭಾಗದಲ್ಲಿ ಹೀಗೆ ಹೊಸ ನಿರೂಪಣೆಯೊಂದಿಗೆ ಸಾಗುವ ನಿರ್ದೇಶಕ, ಅರ್ಧ ಮುಗಿದ ಮೇಲೆ ಈ ಹೊಸತನವನ್ನು ಕೈಬಿಡುತ್ತಾನೆ. ಹೀಗಾಗಿ ಸಿನಿಮಾ ಕೊಂಚ ನಿರಾಸೆ ಮೂಡಿಸುತ್ತದೆ. 'ಆಟೋನ್ಮೆಂಟ್' ಹೆಸರಿನ ಕಾದಂಬರಿ ಆಧರಿಸಿ ತಯಾರಾಗಿರುವ ಈ ಚಿತ್ರವಿದು. ಇದರ ನಿರ್ದೇಶಕ ಜೋ ರೈಟ್. ನಾಯಕಿ ಶ್ರೀಮಂತರ ಹುಡುಗಿ. ನಾಯಕ ಆ ಮನೆಯ ಕೆಲಸದಾಳು. ಇಷ್ಟನ್ನು ಹೇಳಿದಾಗ ಸಿನಿಮಾದ ಅಂತರಂಗ ಗೊತ್ತಾಗಬಹುದು. ಅತ್ಯುತ್ತಮ ಪ್ರೇಮಭರಿತ ಚಿತ್ರವಾಗಿ 'ಅಟೋನ್ಮೆಂಟ್' ಗಮನ ಸೆಳೆಯುತ್ತದೆ.
= -ಆರ್. ಕೇಶವಮೂರ್ತಿ
keshavarkm1@gmail.com