ಕುಂಝುಂ ಪಾಸ್ನ ರುದ್ರರಮಣೀಯ ಚೆಲುವು ನಮ್ಮನ್ನು ಇರು ಇರು ಎನ್ನುತ್ತಿತ್ತು; ಕ್ಷಣಕ್ಕೊಮ್ಮೆ ವಿಚಿತ್ರ ತಿರುವು ಪಡೆದು ಮೊರೆವ ಅಲ್ಲಿನ ವಾತಾವರಣ ನಮ್ಮನ್ನು ಹೊರಡಿಸಿತು. ಹದಿನೈದು ಸಾವಿರ ಅಡಿಗಳ ಎತ್ತರ, ಯಾರನ್ನೂ ಹೆಚ್ಚು ಕಾಲ ಅಲ್ಲಿರಲು ಬಿಡುವುದಿಲ್ಲ. 'ವರ್ಷಗಳ ಕಾಲ ಸಾಧನೆ ಮಾಡುತ್ತೇವೆ, ತಿಂಗಳ ಕಾಲ ಸಜ್ಜಾಗುತ್ತೇವೆ, ದಿನಗಟ್ಟಲೆ ನಡೆಯುತ್ತೇವೆ, ಶಿಖರ ತಲುಪಿದ ಬಳಿಕ ಅಲ್ಲಿರುವುದು ಕೆಲ ಕ್ಷಣಗಳಷ್ಟೇ' ಎಂಬ ಖ್ಯಾತ ಪರ್ವತಾರೋಹಿಯೊಬ್ಬನ ಮಾತು ನೆನಪಾಯಿತು. ಇದು ಎಲ್ಲ ಬಗೆಯ ಯಶಸ್ಸುಗಳ ಚರಮವಾಕ್ಯವೂ ಇರಬಹುದು. ಗಾಡಿ ಹತ್ತಿದೆವು, ಬೆಟ್ಟ ಇಳಿದೆವು.
ಅತ್ತ ಮನಾಲಿ, ಇತ್ತ ಕಾಝಾ... ನಡುವೆ ಇನ್ನೂರು ಕಿಲೋಮೀಟರ್ನಲ್ಲೆಲ್ಲೂ ವಸತಿಯಾಗಲಿ, ಪೆಟ್ರೋಲ್ ಬಂಕಾಗಲಿ ಇಲ್ಲ. ಎರಡೂ ಕಡೆಯಿಂದ ಹೊರಟ ವಾಹನಗಳು, ಸರಕಾರಿ ಬಸ್ಸುಗಳು ನಡುಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ಬತಾಲ್ನಲ್ಲಿ ನಿಲ್ಲುತ್ತವೆ. ಬತಾಲ್, ಚಂದ್ರಾ ನದಿಯ ತಪ್ಪಲಿನಲ್ಲಿರುವ ಪ್ರದೇಶ. ಚಂದ್ರಾ ನದಿ ಹುಟ್ಟುವುದು ಚಂದ್ರತಾಲ್ ಸರೋವರದಲ್ಲಿ. ಮುಂದೆ ಈ ನದಿ ಭಾಗಾ ನದಿಯನ್ನು ಸೇರಿ, ಚಂದ್ರಭಾಗಾ ಆಗುತ್ತದೆ. ಮನಾಲಿ- ಕಾಝಾ ದಾರಿಯಿಂದ ಚಂದ್ರತಾಲ್ಗೆ ಹೋಗುವ ದಾರಿ ಇಲ್ಲಿ ಕವಲೊಡೆಯುತ್ತದೆ. ಒಂದೆರಡು ಧಾಬಾ ಬಿಟ್ಟರೆ ಇಲ್ಲಿ ಇನ್ನೇನಿಲ್ಲ. ಧಾಬಾ ಎಂದರೆ ಬೇರೇನಲ್ಲ, ಕಾಡು ಕಲ್ಲುಗಳ ಗುಪ್ಪೆ, ಮೇಲೊಂದು ಪ್ಲಾಸ್ಟಿಕ್ ಸೂರು. ಅದು ಹಾರಿಹೋಗದಂತೆ ಇನ್ನಷ್ಟು ಕಲ್ಲ ಹೊರೆ. ಅದರ ಮಡಿಲಲ್ಲಿ ಗುಸ್ಸೆನ್ನುತ್ತ ಉರಿಯುತ್ತಿರುವ ಸ್ಟವ್ವುಗಳು, ಅವುಗಳ ಮೇಲೆ ಟೀ, ರೋಟಿ, ಸಬ್ಜಿ, ಚಾವಲ್. ಬನ್ನು, ಬಿಸ್ಕತ್, ಚಾಕಲೇಟ್ ಪ್ಯಾಕ್ಗಳು.
ಬತಾಲ್ನಲ್ಲಿರುವ ಚಂದ್ರಾ ಧಾಬಾದ ಮಾಲೀಕರು ಚಂದ್ರಾ ದೋಲ್ಮಾ ಮತ್ತು ಬೋದ್ ದೋರ್ಜೆ. ನಾಲ್ಕು ತಿಂಗಳಷ್ಟೆ ತೆರೆದಿರುವ ಈ ಮಾರ್ಗದಲ್ಲಿ ಇವರ ವಾಸ. ಬಳಲಿದ ಪ್ರಯಾಣಿಕರನ್ನು ಕರೆದು ಅಕ್ಕರೆಯಿಂದ ಉಪಚರಿಸುವುದು ಅವರ ಕಾಯಕ. ಅದನ್ನು ವ್ಯವಹಾರವಾಗಿಯಷ್ಟೇ ನೋಡದವರು ಅವರು. ಅವರ ಮಾತುಗಳಲ್ಲಿ ಪ್ರಯಾಣದ ಆಯಾಸವನ್ನು ನಿವಾರಿಸುವ ಅಕ್ಕರೆ ಸೂಸುತ್ತದೆ. ಕಳೆದ ಮೂವತ್ತಾರು ವರ್ಷಗಳಿಂದ ಅವರು ಇಲ್ಲಿದ್ದಾರೆ. ಬೆಟ್ಟದ ಮಡಿಲಲ್ಲಿ ಪುಟ್ಟ ಧಾಬಾ, ಅಲ್ಲಿ ಮುಗ್ಧ ನಗೆಯ, ಸಣ್ಣ ಕಣ್ಣಿನ, ಪ್ರಾಮಾಣಿಕ ವ್ಯವಹಾರದ ಈ ದಂಪತಿ. ದೋರ್ಜಿಯಂತೂ ರಸಿಕ, ಮಾತುಮಾತಿಗೆ ಜೋಕ್ ಸಿಡಿಸುತ್ತಾರೆ.
ದೋರ್ಜಿಯ ಊರು ಮನಾಲಿ ಸಮೀಪದ ಹಳ್ಳಿ. ಕೃಷಿಯಿಂದ ಹೊಟ್ಟೆ ಹೊರೆಯುತ್ತಿದ್ದರು. ಮದುವೆಯಾಯ್ತು. ಕೃಷಿಯಿಂದ ಏಳಿಗೆಯಾಗುವ ಲಕ್ಷಣ ಕಾಣಿಸಲಿಲ್ಲ. ಧಾಬಾ ತೆರೆಯುವ ಯೋಚನೆ ಬಂತು. ಊರಲ್ಲಿ ಧಾಬಾ ಸಾಕಷ್ಟಿದ್ದವು, ನಷ್ಟದಲ್ಲಿದ್ದವು. ಪತ್ನಿಯ ಜತೆಗೆ ಹೊರಟು, ಬತಾಲ್ನಲ್ಲಿ ಪತ್ನಿಯ ಹೆಸರಲ್ಲೇ ಧಾಬಾ ತೆರೆದರು. ಆಗ ಹಿಮದಿಂದ ರಕ್ಷಣೆ ಪಡೆಯುವುದೇ ದೊಡ್ಡ ಸವಾಲಾಗಿತ್ತು. ಈಗ ಪರಿಸರಕ್ಕೆ ಜೀವನ ಒಗ್ಗಿದೆ.
ಇಲ್ಲಿಗೆ ಸರಕು ಸಾಗಣೆಯೇ ಕಷ್ಟದ್ದು. ಮನಾಲಿ- ಕಾಝಾ ರಸ್ತೆ ಸಂಚಾರಕ್ಕೆ ತೆರೆದುಕೊಳ್ಳುವ ಮುನ್ನವೇ ಇವರು ಧಾಬಾದಲ್ಲಿ ಅಕ್ಕಿ ಬೇಳೆ ಸಂಗ್ರಹಿಸಿರುತ್ತಾರೆ. ಹಿಮದಿಂದ ರಸ್ತೆ ತೆರವು ಮಾಡಲು ಬರುವ ಕೆಲಸಗಾರರಿಗೆ ನೆರವಾಗುತ್ತಾರೆ. ಜೂನ್ನಿಂದ ಅಕ್ಟೋಬರ್ವರೆಗೆ ಧಾಬಾ ತೆರೆದಿರುತ್ತದೆ. ಪ್ರತಿದಿನ ನೂರರಷ್ಟು ಮಂದಿ ಇಲ್ಲಿ ಉಣ್ಣುತ್ತಾರೆ. ರಾತ್ರಿ ಉಳಿದುಕೊಳ್ಳುವವರೂ ಇರುತ್ತಾರೆ. ಅವರಿಗೆ ಆಹಾರ, ಬಿಸಿನೀರು ಒದಗಿಸುತ್ತಾರೆ. ಅವರಿಗೆಲ್ಲ ಇವರು ಪ್ರೀತಿಯ ಚಾಚಾ- ಚಾಚಿ. ಐದು ತಿಂಗಳು ಬತಾಲ್ನಲ್ಲಿ ದುಡಿದು, ದಟ್ಟ ಹಿಮ ಬೀಳುವ ಹೊತ್ತಿಗೆ ಸರಿಯಾಗಿ ಊರಿಗೆ ಹಿಂದಿರುಗುತ್ತಾರೆ ದೋರ್ಜಿ ದಂಪತಿ. ಆಗ ಹಾರ, ಸ್ವೆಟರ್, ಶಾಲು ತಯಾರಿಸಿ ಮಾರುತ್ತಾರೆ.
ಇಲ್ಲಿನ ಬದುಕು ಹೊರಗಿನಿಂದ ನೋಡಿದಷ್ಟು ಸುಲಭವಲ್ಲ. ಹಗಲಿಡೀ ವ್ಯಾಪಾರವಾದರೆ, ರಾತ್ರಿ ಹಿಮಬೆಟ್ಟಗಳ ನಡುವೆ ರುದ್ರಮೌನ, ಕಟ್ಟೇಕಾಂತ ತಾಂಡವವಾಡುತ್ತದೆ. ಕ್ಷಣಕ್ಷಣಕ್ಕೂ ಹಿಮಾಲಯ ಬಣ್ಣ ಬದಲಿಸುತ್ತದೆ. ಸಿಕ್ಕಾಪಟ್ಟೆ ಹಿಮಸುರಿದ ದಿನಗಳಲ್ಲಿ, ದಿಕ್ಕು ತೋಚದೆ ಇಲ್ಲಿ ಬಾಕಿಯಾಗುವ ಪ್ರಯಾಣಿಕರಿದ್ದಾರೆ. ಕೆಲವೊಮ್ಮೆ ಟ್ರೆಕ್ಕಿಂಗ್ ಮಾಡುತ್ತಾ ಬರುವ ತಂಡಗಳು ಇಲ್ಲಿಯೇ ಬಾಕಿಯಾಗುವುದೂ ಇದೆ. ಆಗ ದಿನಗಟ್ಟಲೆ, ಇಲ್ಲಿದ್ದ ದಿನಸಿ ಪದಾರ್ಥಗಳಲ್ಲಿಯೇ ಹೇಗೋ ನಿಭಾಯಿಸಿ ಅವರನ್ನು ದಡ ಹತ್ತಿಸಿದ ಘಟನೆಗಳುಂಟು.
ಚಂದ್ರಾ ಧಾಬಾದಲ್ಲಿ ನಮಗೆ ಬಿಸಿಬಿಸಿ ರೋಟಿ, ಚಾವಲ್, ಸಬ್ಜಿ ಕಾದಿತ್ತು. ಅದಾದ ನಂತರ ಟೀ. 'ಬೇಟೀ' ಅಂತ ಮಾತನಾಡಿಸುವ ಅವರಿಬ್ಬರೂ ಪ್ರಿಯಾಳ ಮನಸ್ಸನ್ನು ಕದ್ದೇಬಿಟ್ಟರು.
ಅಲ್ಲಿಂದ 'ಚಲೋ ಚಂದ್ರತಾಲ್'!
(ಮುಂದಿನ ವಾರ: ನೆಲದ ಮೇಲೆ ನೀಲಿ ತುಣುಕು)
-ಹರೀಶ್ ಕೇರ
harishkhera@gmail.com