ಒಂದರ್ಥದಲ್ಲಿ ಅಮೀರ್ ಖುಸ್ರೋ ಚಾಣಾಕ್ಷನೇ. ಏಕೆಂದರೆ ರಾಜಕೀಯವಾಗಿ ಅತ್ಯಂತ ಹೊಲಸಾಗಿದ್ದ ಆ ಪರಿಸ್ಥಿತಿಯಲ್ಲಿ ಸಂಗೀತದಲ್ಲಿ ಸದಾ ನವೀನತೆಯನ್ನು ಕಾಯ್ದುಕೊಂಡು ಅದರ ಘನತೆಯನ್ನು ಉಳಿಸಿಕೊಂಡು ಬರುವುದು ಅಂಥ ಸುಲಭದ ಕೆಲಸವಾಗಿರಲಿಲ್ಲ.
ಗೋಪಾಲ ನಾಯಕನ ಸಮೇತ ಖುಸ್ರೋ ದೆಹಲಿಗೆ ಮರಳಿದ. ಅಲ್ಲಿ ಗೋಪಾಲ ನಾಯಕನಿಗೂ ರಾಜಗಾಯಕನ ಮರ್ಯಾದೆ ದೊರೆಯಿತು. ಎಲ್ಲ ನಿಜ. ಆದರೆ ರಾಜಕೀಯ ಒಳ ಜಗಳ, ಕೊಲೆ, ಪಿತೂರಿಗಳು ತಾರಕಕ್ಕೇರಿದ್ದವು. ಕೇವಲ ಖುಸ್ರೋ ಒಬ್ಬನ ಜೀವಿತಾವಧಿಯಲ್ಲಿ ಒಬ್ಬಿಬ್ಬರಲ್ಲ ಹೆಚ್ಚೂ ಕಡಿಮೆ ಐದರಿಂದ ಆರು ಜನ ರಾಜರು ದೆಹಲಿಯ ಸಿಂಹಾಸನಕ್ಕೆ ಬಂದು ಹೋದರು. ಒಬ್ಬ ರಾಜನಾಗುತ್ತಲೇ ಅವನನ್ನು ಪಿತೂರಿಯಿಂದ ಕೊಲ್ಲುವುದು, ಇನ್ನೊಬ್ಬ ಸಿಂಹಾಸನ ಏರುವುದು - ಇಂಥ ಹೀನಾಯ ಹಿಂಸೆ ರಾಜಕೀಯ ಪರಿಸ್ಥಿತಿಯಲ್ಲಿ ತಾಂಡವವಾಡುತ್ತಿತ್ತು. ಹೀಗಿದ್ದಾಗಲೂ ಖುಸ್ರೋ, ಯಾವ ರಾಜನೇ ಬರಲಿ, ಅವನಿಗೆ ಸಂಗೀತ ತಿಳಿಯಲಿ ಬಿಡಲಿ , ಸಂಗೀತಕ್ಕೆ - ತನಗೆ ರಾಜ ದರ್ಬಾರದಲ್ಲಿ ತಕ್ಕ ಮನ್ನಣೆಯನ್ನು ಹಾಗೆಯೇ ಉಳಿಸಿಕೊಂಡು ಬಂದನೆಂಬುದರಲ್ಲಿ ಸಂಶಯವಿಲ್ಲ. ಆ ಚಿಂತನೆ, ಚಾಣಾಕ್ಷತೆ ಅವನಲ್ಲಿತ್ತು. ಹೀಗಾಗಿ ಅವನು ಸಂಗೀತವನ್ನು ಬಹಳ ವಿಧದಲ್ಲಿ ಬಳಸಿದ - ರಾಜನನ್ನು ಹೊಗಳಲೂ ಬಳಸಿದ, ಜನಸಾಮಾನ್ಯರಿಗೆ ತಿಳಿಯುವಂತೆಯೂ ಹಾಡಿದ, ಭಕ್ತಿಯನ್ನು ಹೆಚ್ಚಿಸಲೂ ಹಾಡಿದ, ಮನೋರಂಜನೆಗೂ ಹಾಡಿದ - ಒಟ್ಟಿನಲ್ಲಿ ಅದನ್ನು ಬೆಳೆಸಿದ. ಹೀಗೆ ಸಂಗೀತದ ಪ್ರಚಾರವೂ ಆಯಿತು. ಜೊತೆಗೆ ಸಂಗೀತದ ವಿಭಿನ್ನ ಪ್ರಕಾರಗಳೂ ಹುಟ್ಟಿದವು. ಜೊತೆಗೆ 'ಶಾಸ್ತ್ರೀಯತೆ' ಎಂಬುದಕ್ಕೆ ಹೊಸ ಆಯಾಮವೊಂದು ದೊರಕಿತು. ಬಹಳಷ್ಟು ನವೀನ ಪ್ರಯೋಗಗಳು ಖುಸ್ರೋ ಕಾಲದಲ್ಲಿ ನಡೆದವು.
ಅಮೀರ ಖುಸ್ರೋ ಗೋಪಾಲ ನಾಯಕನ ಸಂಗೀತದ ಶಾಸ್ತ್ರೀಯ ಅಂಶಗಳನ್ನು ಬಳಸಿಕೊಂಡು, ಅದರಲ್ಲೇ ಕಲಾಕಾರರು ತಮ್ಮತಮ್ಮ ವಿಚಾರ ಲಹರಿಗೆ ಅನುಗುಣವಾಗಿ ಸಂಗೀತವನ್ನು ಬೆಳೆಸುವಂತೆ ನವೀಕರಿಸಿ, ಜನಸಾಮಾನ್ಯರ ಕಿವಿಗೆ ಇಂಪಾಗುವಂತಹ ಸೂಫಿ ಸಂಗೀತದ ಭಾವಪೂರ್ಣ ಅಂಶಗಳನ್ನು ಸೇರಿಸಿ, ಅದಕ್ಕೆ ತಕ್ಕಂತೆ ಉರ್ದು, ವ್ರಜ್, ಹಿಂದೀ ಭಾಷೆಗಳಲ್ಲಿ ಚಿಕ್ಕಚಿಕ್ಕ ಕವಿತೆಗಳನ್ನು (ಈಗಿನ ಚೀಜ್) ರಚಿಸಿ -ಈ ಪದ್ಧತಿಯನ್ನು ಜನಪ್ರಿಯಗೊಳಿಸಿದನು. ಇದೇ ಈಗಿನ 'ಖಯಾಲ್' ಆಗಿ ಬೆಳೆದು ಭಾರತೀಯ ಸಂಗೀತದ ಮೂಲ ಬೇರಿನಿಂದ ಹುಟ್ಟಿ ಉತ್ತರಾದಿ ಹಾಗೂ ದಕ್ಷಿಣಾದಿ ಎಂಬ ಎರಡು ಮಹಾ ಪ್ರಕಾರಗಳಾಗಿ ಪರಿವರ್ತನೆಗೊಳ್ಳಲು ಕಾರಣವಾಯಿತು.
ಇಷ್ಟೇ ಅಲ್ಲ, ಈಗಲೂ ಪ್ರಚಲಿತದಲ್ಲಿರುವ 'ಕವ್ವಾಲಿ' ಎಂಬ ಗಾಯನ ಶೈಲಿಯನ್ನು ಹುಟ್ಟುಹಾಕಿದವನೂ ಅಮೀರ್ ಖುಸ್ರೋ. ಜೊತೆಗೆ 'ತಬಲ್' ಎಂದರೆ ಡ್ರಮ್ಸ್ ಎಂಬ ಅರ್ಥಬರುವ ಅರಬ್ ಮೂಲದ ವಾದ್ಯವನ್ನು ನವೀಕರಿಸಿ 'ತಬಲಾ'ವನ್ನೂ, 'ಛತಾರ್' ಎಂದರೆ ಆರು ತಂತಿಯ ವಾದ್ಯ ಎಂದು ಹೆಸರಿರುವ ಪರ್ಷಿಯಾದ ವಾದ್ಯವನ್ನು ನವೀಕರಿಸಿ 'ಸಿತಾರ್' ಅನ್ನು ಕಂಡು ಹಿಡಿದವನೂ ಅಮೀರ್ ಖುಸ್ರೋ ಎನ್ನಲಾಗುತ್ತದೆ.
ಹೀಗೆ ನವೀನತೆಯನ್ನು ಹುಟ್ಟುಹಾಕುತ್ತ, ವೈವಿಧ್ಯತೆಯನ್ನು ಬೆಳೆಸುತ್ತ ಅಂತೂ ಅಮೀರ್ ಖುಸ್ರೋ ತನ್ನ ಜೀವಿತಾವಧಿಯವರೆಗೂ ಸಂಗೀತಕ್ಕೆ ರಾಜದರ್ಬಾರದಲ್ಲಿ ರಾಜ ಮನ್ನಣೆ ಸಿಗುವಂತೆ ಕಾಯ್ದುಕೊಂಡ. ಆದರೆ 1325ನೇ ಇಸ್ವಿಯಲ್ಲಿ ಖುಸ್ರೋವಿನ ಆಧ್ಯಾತ್ಮಿಕ ಗುರುಗಳಾದ, ಚಿಸ್ತಿ ಪಂಥದ ಸೂಫಿಸಂತರಾದ ಹಜರತ್ ನಿಜಾಮುದ್ದೀನ್ ಔಲಿಯಾ (ದೆಹಲಿಯ ರೈಲ್ವೆ ನಿಲ್ದಾಣದ ಹೆಸರನ್ನು ಇವರ ನೆನಪಲ್ಲಿ ಇರಿಸಲಾಗಿದೆ) ಭಗವಂತನಲ್ಲಿ ಲೀನವಾದಾಗ, ಅವರ ಪರಮ ಶಿಷ್ಯನಾಗಿದ್ದ ಖುಸ್ರೋ ಅತೀವ ಘಾಸಿಗೊಳಗಾದ- ಎಷ್ಟೆಂದರೆ ಮುಂದೆ ಕೇವಲ ಆರೇ ತಿಂಗಳುಗಳೊಳಗಾಗಿ ಅಮೀರ್ ಖುಸ್ರೋ ಕೂಡ ಇಹಲೋಕ ತ್ಯಜಿಸಿದ.
ಅವನಿಚ್ಛೆಯಂತೆ ದೆಹಲಿಯಲ್ಲಿ ಔಲಿಯಾ ಅವರ ಸಮಾಧಿಯ ಕೆಳಗೇ ಅವರ ಕಾಲಿನ ಬಳಿಯಲ್ಲಿ ಅಮೀರ ಖುಸ್ರೋವಿನ ಸಮಾಧಿ ಮಾಡಲಾಗಿದೆ.
- ಶ್ರುತಿ ಭಟ್
shrutikbhat@gmail.com