ನೋಡಲು ಚಂದ ಇಲ್ಲವಾದರೂ
ಬಣ್ಣವು ಕಪ್ಪು ಆಗಿದ್ದರೂ,
ನೋಟವು ಓರೆ ಆಗಿದ್ದರೂ
ಸ್ವರವು ತೀರಾ ಒರಟಾದರೂ
ಕಾಗೆಗಳು ಬಡಪಾಯಿಗಳು: ಅಮ್ಮ ಹೇಳಿದ
ಮಾತುಗಳನ್ನು ಇಂದಿಗೂ ನೆನೆಯುತ್ತೇನೆ ನಾನು
ಆದರೂ ಇಂದೊಂದು ಕಾಗೆಗೆ ಕಲ್ಲೆಸೆದೆ-
ನೆಂಬುದರ ಪಾಪವನ್ನು ಹೊರುತ್ತಿರುವೆನು ನಾನು
'ಮಂಡಿಯವರೆಗಿನ ಪಂಚೆಯನ್ನುಟ್ಟು,
ಕೋಲನ್ನೂರುತ್ತ ನಡೆದ ಆ ಅಜ್ಜ
ಮುಂದಿನ ಸಾಲಿನ ಹಲ್ಲುಗಳೆರಡಿಲ್ಲವಾದರೂ
ಮುಗುಳುನಗೆಯ ಚೆಲುವಿರುವ ಅಜ್ಜ
ಸ್ವಾತಂತ್ರ್ಯ ಎಂಬ ಪವಿತ್ರ ಮಂತ್ರವನ್ನು ನಮ್ಮ
ನಾಲಿಗೆಯಲ್ಲಿ ಬರೆದು ಅದನ್ನು ಹೇಳಿಸಿದನು
ನಮ್ಮಿಂದ ದಟ್ಟಡಿಯನ್ನು ಇಡಿಸಿದನು,
ನಮಗೋಸುಗ ಪ್ರಾರ್ಥಿಸಿದನು,
ನಮಗೋಸುಗ ಗುಂಡಿಗೆ ಬಲಿಯಾದನು!
ನಾವು ಮರೆಯಬಾರದೆಂದಿಗೂ...!'
ಅಪ್ಪ ಹೇಳಿದ ಆ ಕಥೆ ಪೂರಾ
ಎಂದೂ ನೆನೆಯುತ್ತೇನೆ ನಾನು
ಆದರೂ ಗಾಂಧೀ ಪ್ರತಿಮೆಗೆ ಕಲ್ಲೆಸೆದೆ-
ನೆಂಬುದರ ಪಾಪವನ್ನು ಹೊರುತ್ತಿದ್ದೇನೆ ನಾನು
ನಗರದ ಕೂಡುಮಾರ್ಗದ ನಾಲ್ಕಾಳು ಎತ್ತರದ
ಕಲ್ಲುಕಟ್ಟೆಯೊಂದರ ಮೇಲೆ
ಕಳೆದ ಜಯಂತಿಯಂದು ಯಾರೋ ಹಾಕಿದ
ಉದ್ದದ ಹೂಹಾರದ ದಾರದ ಸಹಿತ
ತುಸು ಬಾಗಿಯೂ ಮುಂದಕ್ಕೆ ವಾಲಿಯೂ
ನಿಂತಿರುವ ಗಾಂಧೀಜಿಯ ಶಿರಸ್ಸಿನಲ್ಲಿ
ಕಾಗೆ ಕುಳಿತಿದೆ- ಹೇಲು ಹರಿದಿದೆ!
ಕೂಡುಮಾರ್ಗದಲ್ಲಿ ನಿಂತಿದ್ದೇನೆ ನಾನು
ಯೋಚಿಸಲೇನಿದೆ ಇನ್ನು!
ಈ ಕೈಯಿಂದ ಆ ಕಾಗೆಯ ಕಡೆಗೆ ಒಂದು ಕಲ್ಲೆಸೆದೆ
ಕಾಗೆ ಕಿರಿಚುತ್ತ ಹಾರಿಹೋಯ್ತು.
ಹೇಲು ಹರಿಯುವ ಗಾಂಧಿಯ ಶಿರಸ್ಸಿಗೆ
ಕಲ್ಲೆರಗುತ್ತದೆ. ಅದನು ಕಂಡು ಕೆಳಗೆ ನಿಂತು
ಕೈಕೈ ಹಿಸುಕಿದೆ ನಾನು!
ಅಗಲೂ ಅದೋ ಗಾಂಧಿಯ ಮೊಗದಲಿ ನಗು
ಅದರಾಚೆ ಕಾಗೆ ಕುಳಿತಿಹುದು!
ಆದರೂ ಇಂದೊಂದು ಕಾಗೆಗೆ ಕಲ್ಲೆಸೆದ
ಪಾಪವನು ಒಪ್ಪಿಕೊಳ್ಳುವೆ ನಾನು
ಆದರೂ ಗಾಂಧೀಜಿಯ ಪ್ರತಿಮೆಗೆ ಕಲ್ಲೆಸೆದ
ಪಾಪವನು ಹೊರುತ್ತಿರುವೆ ನಾನು!
- ಕೆ.ಕೆ.ನಾಯರ್
ಮೂಲ: ಓಎನ್‌ವಿ ಕುರುಪ್ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಕವಿ)