ವಿ.ಗ. ನಾಯಕರು ತಮ್ಮ 'ಚಂದ ಚಂದ ಆಡು' ಮಕ್ಕಳಿಗಾಗಿ ಪದಗಳನ್ನು ಬರೆದು ಮಕ್ಕಳಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಮಕ್ಕಳ ಪದಗಳನ್ನು ರಚಿಸಬೇಕೆಂದರೆ ಕವಿ ಮಕ್ಕಳಲ್ಲಿ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಕವಿ ತನ್ನ ಬಾಲ್ಯವನ್ನು ಮರು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ತಾನೇ ಮಗುವಾಗಬೇಕಾಗುತ್ತದೆ. 'ಇಲ್ಲಿರುವುದು ಮಕ್ಕಳ ಪದ್ಯಗಳಲ್ಲ, ಮಕ್ಕಳಿಗಾಗಿ ಪದಗಳು. ಪದ-ಪದ್ಯವೂ ಆಗಬಹುದು, ಆಗದೆಯೂ ಇರಬಹುದು.' ಈ ಪುಟ್ಟ ಕೃತಿಯಲ್ಲಿ ಪದ ಪದ್ಯಗಳಾದ ಹಲವು ರಚನೆಗಳಿವೆ. 'ನಮ್ಮಪ್ಪ ಅಮ್ಮನ ಸಂಗಡ/ ನಾನೂ ಪೇಟೆಗೆ ಹೋಗ್ತೀನಿ/ ಚಂದ ಚಂದ ಪುಸ್ತಕ ಹುಡುಕಿ/ ಎರಡೂ ಕೈಯಲಿ ತರ್ತೀನಿ/' ಪುಸ್ತಕ ಪ್ರೀತಿಯನ್ನು ಬೆಳೆಸುವ ಪದ ಇದು. ಹಾಗೆಯೇ, 'ಅನ್ನ ಕೊಟ್ಟು ನಮ್ಮನ್ನೆಲ್ಲಾ/ ಬೆಳೆಸೋವಂಥ ರೈತ/ ದೇವರು ಅಂದರೆ ಬೇರೆ ಯಾರು/ ಅವನೇ ಅಲ್ಲವೆ ತಾತ?/' ಪದ ಮಾಧುರ್ಯದಿಂದ ಆಪ್ತವಾಗುತ್ತದೆ. ಆಡು ಎನ್ನುವುದು ಮುದ್ದಿನ ಪ್ರಾಣಿಯೂ ಆಗಬಹುದು, ಆಡುವ ಕ್ರಿಯೆಯೂ ಆಗಬಹುದು. ಶ್ಲೇಷೆಯಿಂದಾಗಿ ಅದು ಸುಂದರ ಎನ್ನಿಸಿದೆ. ನಾಯಕರು ಮಕ್ಕಳಿಗಾಗಿ ಇನ್ನಷ್ಟು ಬರೆಯಲಿ.
ಕೃತಿ: ಚಂದ ಚಂದ ಆಡು,
ಪ್ರಕಾರ: ಮಕ್ಕಳ ಪದ,
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು,
ಪುಟಗಳು 40, ಬೆಲೆ ರು. 40
- ಡಾ. ವಾಸುದೇವ ಶೆಟ್ಟಿ