ಸಾಪ್ತಾಹಿಕಪ್ರಭ

ಚಂದವಳ್ಳಿಯ ತೋಟ

ಒಂದು ಸುಂದರ ಹಳ್ಳಿ. ಪರಸ್ಪರ ನಂಬಿಕೆಯ ಮೇಲೆ ಬದುಕು ಕಟ್ಟಿಕೊಂಡ, ಅಪ್ಪಟ ಮನುಷ್ಯ ಜಾತಿಯನ್ನೇ ಒಳಗೊಂಡ ಮುಗ್ಧ ಊರು.

ಒಂದು ಸುಂದರ ಹಳ್ಳಿ. ಪರಸ್ಪರ ನಂಬಿಕೆಯ ಮೇಲೆ ಬದುಕು ಕಟ್ಟಿಕೊಂಡ, ಅಪ್ಪಟ ಮನುಷ್ಯ ಜಾತಿಯನ್ನೇ ಒಳಗೊಂಡ ಮುಗ್ಧ ಊರು. ಮೋಸ ಮಾಡುವುದು ಗೊತ್ತಿಲ್ಲ. ಹೇಳಿದ ಮಾತಿಗೆ ತಪ್ಪಿ ನಡೆಯಲು ಒಲ್ಲದವರು. ತನಗಿಂತ ತನ್ನ ಸುತ್ತಲಿನವರ ಕ್ಷೇಮವೇ ತನ್ನ ಕ್ಷೇಮ ಎಂದುಕೊಳ್ಳುವ ಕೂಲಿಕಾರರು, ಶ್ರಮಜೀವಿಗಳು. ನೆಲವನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಇಂಥ ಹಳ್ಳಿ ಕ್ರಮೇಣ ಶಿಥಿಲಗೊಳ್ಳತೊಡಗುತ್ತದೆ. ಕುಟುಂಬದಿಂದ ಆರಂಭಗೊಂಡು ಇಡೀ ಊರಿಗೂರೇ ಬದುಕಿನ ಮೌಲ್ಯಗಳನ್ನು ಕಳೆದುಕೊಂಡು, ತಾವೇ ನಂಬಿದ ನೆಲದ ಸಂಸ್ಕೃತಿ, ಜೀವನವನ್ನು ಗಾಳಿಗೆ ತೂರುತ್ತಾರೆ. ನಾನು, ನನ್ನದು, ನನ್ನ ಪಾಲು, ಆಸ್ತಿ ಎನ್ನುವ ಮನುಷ್ಯನ ಮತ್ತೊಂದು ಮುಖ ಅನಾವರಣಗೊಂಡು ಅಪ್ಪಟ ಹಳ್ಳಿಯ ಸೊಗಡನ್ನು ಹಾಳುಮಾಡುತ್ತದೆ. ದುರಂತಕ್ಕೆ ತಲೆ ಕೊಟ್ಟು, ಅಧುನಿಕತೆಯ ಶಕ್ತಿಗಳಿಗೆ ಬಲಿಯಾಗುವ ಆ ಹಳ್ಳಿಯೇ 'ಚಂದವಳ್ಳಿ'. ಈ ಊರಿಗೆ 'ತೋಟ' ಸೇರಿಕೊಂಡರೆ ನಮ್ಮ ನೆಚ್ಚಿನ 'ಚಂದವಳ್ಳಿಯ ತೋಟ' ಚಿತ್ರ ನೆನಪಾಗುತ್ತದೆ.
ಶಿವನಂಜು, ನರಹರಪ್ಪ, ಕರಿಯಪ್ಪ, ಹನುಮ, ರಾಮ, ಪುಟ್ಟತಾಯಿ, ಪಾರ್ವತಕ್ಕ, ಸುಬ್ಬಾಭಟ್ಟ, ಜಲಜಾಕ್ಷಿ, ಲಕ್ಷ್ಮಿ ಪಾತ್ರಗಳ ರೂಪಗಳಿಗೆ ಮಾತ್ರವಲ್ಲ, ಆ ಹೆಸರುಗಳಿಗೂ ನಗರದ ಗಾಳಿ ಸೋಕಿಲ್ಲ. ಪ್ರತಿ ಪಾತ್ರದ ಹೆಸರು, ಅವರ ಮೂಲಕ ಹೇಳ ಹೊರಡುವ ಕಥೆ ನಮ್ಮ ಹಳ್ಳಿಗಳ ಚಿತ್ರಣ ನೆನಪಿಸದಿದ್ದರೆ ಕೇಳಿ. ಅಷ್ಟರಮಟ್ಟಿಗೆ ಚಂದವಳ್ಳಿಯ ತೋಟ ನಮ್ಮ ನೆಲದ ಕಥೆ.
ತರಾಸು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿರುವ, ಅವರದ್ದೇ ಕಾದಂಬರಿ ಆಧರಿಸಿದ ಈ ಚಿತ್ರ ಕಾಲದ ಗಡಿಯನ್ನು ದಾಟಿ ಇಂದಿಗೂ ಪ್ರೇಕ್ಷಕರನ್ನು ಹಿಡಿದಿಡುವ ಅಪರೂಪದ ಕಲಾಕೃತಿ. ಗ್ರಾಮೀಣರ ಬದುಕಿನ ರೀತಿ- ನೀತಿಗಳು, ಅವರ ಆದರ್ಶಮಯ ಸಾಂಸ್ಕೃತಿಕ ಬದುಕನ್ನು ಹೇಳುತ್ತಲೇ, ಅಂಥ ಆದರ್ಶ ಬದುಕಿನ ಜನರನ್ನು ಕಾಡುವ ಅಧುನಿಕತೆಯ ನೆರಳನ್ನು ತೆರೆದಿಡುತ್ತದೆ. ಚಿತ್ರದ ಟೈಟಲ್ ಕಾರ್ಡ್ ಜೊತೆಗೆಯೇ ಬರುವ 'ಒಂದು ಕುಟುಂಬದ ಕಥೆಯಲ್ಲ, ಒಂದೂರಿನ ಕಥೆಯಲ್ಲ, ಭಾರತಾಂಬೆಯ ವ್ಯಥೆ' ಎನ್ನುವ ಹಾಡಿನ ಸಾಲೇ ಇಡೀ ಚಿತ್ರದ ಸಾರವನ್ನು ಹೇಳುತ್ತದೆ. 'ಸೋದರರ ರೋಷ, ಹೆಣ್ಣಿನ ದ್ವೇಷ ಆಗಿತು ದೇಶಕ್ಕೆ ಯಮ ಪಾಶ' ಎನ್ನುವ ಸಾಲುಗಳು ಚಿತ್ರದ ಅಂತರಂಗ ತೆರೆದಿಡುತ್ತದೆ. ಕಥೆ ಮತ್ತು ಅಲ್ಲಿನ ಪಾತ್ರಧಾರಿಗಳು ಪ್ರೇಕ್ಷಕನಿಗೆ ದುರಂತ ಕುಟುಂಬದ ಚಿತ್ರಣ ನೀಡಿದಂತೆ ಕಂಡರೂ ಇದರಲ್ಲಿ ಮತ್ತೊಂದು ಮುಖವೂ ಇದೆ. ಗ್ರಾಮಗಳು, ಅಲ್ಲಿನ ಕೌಟುಂಬಿಕ ವ್ಯವಸ್ಥೆಯ ಮೌಲ್ಯಗಳು ಅಧುನಿಕತೆಯ ದಾಳಿಗೆ ಸಿಲುಕಿ ಶಿಥಿಲಗೊಳ್ಳುತ್ತಿರುವ ಹಾಗೂ ಹೊರಗಿನ ಶಕ್ತಿಗಳನ್ನು ಸ್ವಾರ್ಥಕ್ಕೆ ಈ ಚಿತ್ರ ದೃಶ್ಯ ಸಾಕ್ಷಿಯಾಗುತ್ತದೆ. ಒಂದೂರು, ಆ ಊರಿನ ಗೌಡನ ಕುಟುಂಬ, ಆ ಕುಟುಂಬವನ್ನು ಗೌರವಿಸುವ ಹಳ್ಳಿ ಜನ, ಊರಿನ ಕ್ಷೇಮವೇ ತನ್ನ ಜೀವನ ಎಂದುಕೊಂಡಿರುವ ಊರಿನ ಗೌಡ, ಹಿರಿಯನ ಕನಸಿನಂತೆ ಮೂಡುವ ಚಂದವಳ್ಳಿಯ ತೋಟ, ಸುಬ್ಬಾಭಟ್ಟರ ಆಗಮನ, ಕರಿಯಪ್ಪ ಎನ್ನುವ ಅಲೆಮಾರಿ ಬೇಜವಾಬ್ದಾರಿ ಮನುಷ್ಯ, ಒಳ್ಳೆಯದನ್ನು ಬಯಸುವ ಕುಟುಂಬದ ವಿರುದ್ಧ ಹಗೆ ಸಾಧಿಸುವ ಭಟ್ಟ, ಕರಿಯಪ್ಪ, ಗೌಡನ ಎರಡನೇ ಮಗನ ತಪ್ಪು ಹೆಜ್ಜೆಗಳು, ಹಿರಿಯ ಮಗನ ಜವಾಬ್ದಾರಿಯುತ ಬದುಕು, ಕುಟುಂಬದಲ್ಲಿ ಕಾಣಿಸಿಕೊಳ್ಳುವ ಬಿರುಕು, ನೆಮ್ಮದಿಯ ಸೂರನ್ನು ದೂರ ಮಾಡಿಕೊಳ್ಳುವ ಮುಗ್ಧ ಹಳ್ಳಿ, ಕಾನೂನು, ಪತ್ರ ವ್ಯವಹಾರ, ಅಸ್ತಿಪಾಲು, ಬೇರೆ ಬೇರೆ ಸಂಸಾರ ಎನ್ನುವ ಯೋಚನೆಗಳ ಹಾಗೂ ಅಲ್ಲಿಂದ ಹುಟ್ಟಿಕೊಂಡ ಮನುಷ್ಯನ ಸ್ವಾರ್ಥ... ಹೀಗೆ ಒಂದೊಂದಾಗಿ ತೆರೆದಿಡುತ್ತ ಸಾಗುವ 'ಚಂದವಳ್ಳಿಯ ತೋಟ', ಪ್ರೇಕ್ಷಕನಿಗೆ ಬೋಧನೆ ಮಾಡುವ ಪಾಠಶಾಲೆಯಂತೆ ಕಂಡರೂ ಆ ಪಾಠ ಶಾಲೆಯ ಸಂಕೇತದಂತಿರುವ ಶಿವನಂಜುವಿನ ಕುಟುಂಬ ಮತ್ತು ಚಂದವಳ್ಳಿಯ ದುರಂತವನ್ನು ಮಾತ್ರ ಕಟ್ಟಿಕೊಡಲ್ಲ.
ಒಬ್ಬ ನಿರೂಪಕನ ಮಾತಿನ ಮೂಲಕ ಫ್ಲ್ಯಾಷ್‌ಬ್ಯಾಕ್‌ನತ್ತ ತಿರುಗುವ ಈ ಚಿತ್ರದಲ್ಲಿ ಶಿವನಂಜೇಗೌಡ ಹಾಗೂ ಪುಟ್ಟತಾಯಿ ದಂಪತಿ, ಇವರ ಮಕ್ಕಳು ರಾಮ, ಹನುಮ, ಇವರ ಪತ್ನಿಯರು ಚೆನ್ನಿ, ಲಕ್ಷ್ಮಿ, ನರಹರಪ್ಪ ಮತ್ತು ಪಾರ್ವತಕ್ಕ ದಂಪತಿ, ಸುಬ್ಬಾಭಟ್ಟ- ಜಲಜಾಕ್ಷಿ ಕುಟುಂಬ, ಕರಿಯಪ್ಪ ಇವಿಷ್ಟೇ ಪಾತ್ರಗಳ ಮೂಲಕ ನಿರ್ದೇಶಕರು, ತರಾಸು ಅವರ ಕಥೆಗೆ ದೃಶ್ಯ ರೂಪ ನೀಡಿದ್ದಾರೆ. ಟಿ.ವಿ. ಸಿಂಗ್ ಠಾಕೂರ್, ಪ್ರಯೋಗಶೀಲ ನಿರ್ದೇಶಕ ಎನಿಸಿಕೊಂಡವರು. ಡಾ. ರಾಜ್‌ಕುಮಾರ್‌ರೊಂದಿಗೆ ಒಂಬತ್ತು ಚಿತ್ರಗಳನ್ನು ನಿರ್ದೇಶಿಸಿದ್ದ ಹೆಗ್ಗಳಿಕೆ ಇವರದ್ದು. ಸ್ವಾತಂತ್ರ್ಯ ಪೂರ್ವದ ಗ್ರಾಮೀಣರ ಬದುಕು ಮತ್ತು ಸ್ವಾತಂತ್ರ್ಯ ನಂತರದ ಹಳ್ಳಿಗಳ ಸ್ಥಿತಿ ಈ ಎರಡೂ ಮುಖಗಳನ್ನು ಎದುರುಬದುರಾಗಿ ನಿಲ್ಲಿಸುವ ಈ ಚಿತ್ರ, ದುರಂತಕ್ಕೆ ಕಾರಣವಾಗುವ ಮನುಷ್ಯನ ಸ್ವಾರ್ಥ ಮತ್ತು ಕುಠಿಲತೆಯೊಂದಿಗೆ ಮನುಷ್ಯನನ್ನು ಅಂಥ ಸ್ಥಿತಿಗೆ ಕೊಂಡೊಯ್ದ ಆಧುನಿಕ ಜಗತ್ತಿನ ಶಕ್ತಿಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ. ಕಾಲದ ಎಲ್ಲೆಯನ್ನು ಮೀರಿ ಹೊಸ ಹೊಸ ಆಯಾಮಗಳನ್ನು ಅನಾವರಣಗೊಳಿಸುತ್ತ, ಹೊಸ ಅರ್ಥ ವ್ಯಾಪ್ತಿಯನ್ನು ಕಟ್ಟಿಕೊಡುತ್ತದೆ. ಸದಭಿರುಚಿ ಹಾಗೂ ಉತ್ತಮ ಪ್ರೇಕ್ಷಕ ವರ್ಗವನ್ನು ಕಟ್ಟಿದ ಅಂಥ ಚಿತ್ರಗಳು ಈಗೆಲ್ಲಿ? ಎಂದು ಪ್ರಶ್ನಿಸಿಕೊಳ್ಳುವ ಪ್ರತಿಯೊಬ್ಬನ ಮುಂದೆ ಆ ದಿನಗಳ ಸಿನಿಮಾ ಪರಂಪರೆ ಪ್ರತ್ಯಕ್ಷವಾಗುತ್ತದೆ. ಆ ಪರಂಪರೆಯಲ್ಲಿ 'ಚಂದವಳ್ಳಿಯ ತೋಟ'ದಂಥ ಅತ್ಯುತ್ತಮ ಸಿನಿಮಾ ನೆನಪಾಗದಿರಲು ಸಾಧ್ಯವಿಲ್ಲ.

ಚಂದವಳ್ಳಿಯ ತೋಟ
ಚಿತ್ರ: ಚಂದವಳ್ಳಿಯ ತೋಟ (1964)
ಭಾಷೆ: ಕನ್ನಡ
ನಿರ್ದೇಶನ: ಟಿ.ವಿ. ಸಿಂಗ್ ಠಾಕೂರ್
ಅವಧಿ: 145 ನಿಮಿಷ
ತಾರಾಗಣ: ಡಾ. ರಾಜ್‌ಕುಮಾರ್, ಉದಯ್ ಕುಮಾರ್, ಬಾಲಕೃಷ್ಣ, ಅಶ್ವತ್ಥ್ ನಾರಾಯಣ, ಜಯಂತಿ.


- ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಅಲ್-ಫಲಾಹ್ ವಿಶ್ವವಿದ್ಯಾಲಯದ ಕಚೇರಿ-25 ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ..!

ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ: 31ಕ್ಕೇರಿದ ಸಾವಿನ ಸಂಖ್ಯೆ, ನಿರ್ಲಕ್ಷ್ಯವೇ ಕಾರಣ ಎಂದ ತಜ್ಞರು

ಸೌದಿ ಅರೇಬಿಯಾ ಬಸ್ ದುರಂತ ಪ್ರಕರಣ: 45 ಮಂದಿ ಪೈಕಿ ಓರ್ವ ಕನ್ನಡಿಗನೂ ಬಲಿ, ಜೀವನಾಧಾರ ಕಳೆದುಕೊಂಡ ಹುಬ್ಬಳ್ಳಿ ಕುಟುಂಬ..!

ಉತ್ತಮ ಜನಪ್ರತಿನಿಧಿಗಳನ್ನು ತಯಾರು ಮಾಡಲು ಒಂದು ವರ್ಷದ ಕೋರ್ಸ್ ಆರಂಭಿಸಲು ಚಿಂತನೆ : ಸಭಾಧ್ಯಕ್ಷ ಯು.ಟಿ. ಖಾದರ್

ದೆಹಲಿ ಸ್ಫೋಟದ ಅಪರಾಧಿಗಳು ಎಲ್ಲೇ ಅಡಗಿದ್ದರೂ ಹಿಡಿದು ಅವರಿಗೆ ಕಠಿಣ ಶಿಕ್ಷೆ ಕೊಡಿಸುತ್ತೇವೆ: ಅಮಿತ್ ಶಾ

SCROLL FOR NEXT