ಡಿಸೆಂಬರ್ 6 ಹತ್ತಿರ ಬರುತ್ತಿದ್ದಂತೆ ಭಾರತೀಯರಿಗೆ ವಿಲಕ್ಷಣ ನೆನಪುಗಳು ಮರುಕಳಿಸುತ್ತವೆ. ರಾಮಜನ್ಮಭೂಮಿ ವಿವಾದ, ಬಾಬರಿ ಮಸೀದಿ ಧ್ವಂಸ ನೆನಪಾಗುತ್ತದೆ. ಕೋಟ್ಯಂತರ ಭಾರತೀಯರಿಗೆ ಪೂಜನೀಯನಾದ ಶ್ರೀರಾಮನ ಕುರಿತ ಚರ್ಚೆಗಳು ಏಳುತ್ತವೆ. ಆದರೆ ನಮ್ಮೆಲ್ಲರ ಶ್ರದ್ಧಾಸ್ಥಾನ ಯಾವುದಾಗಿರಬೇಕು ಅನ್ನುವ ಪ್ರಶ್ನೆಯನ್ನೇ ಎತ್ತಿಕೊಂಡು, ಸೃಜನಶೀಲ ಮಾದರಿಯಲ್ಲಿ ಅದನ್ನು ಉತ್ತರಿಸಿದ್ದಾರೆ ಕತೆಗಾರ ಕೆ.ಸತ್ಯನಾರಾಯಣ.
ಒಬ್ಬರಲ್ಲ ಇಬ್ಬರು ಅನ್ನುವಂತೆ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ನನ್ನ ಇಬ್ಬರು ಸಹೋದ್ಯೋಗಿಗಳಿಗೆ ಅಯೋಧ್ಯೆಗೆ ಹತ್ತಿರವಿರುವ ಪೈಜಾಬಾದ್‌ಗೆ ವರ್ಗವಾಯಿತು. ಇಬ್ಬರು ಕೂಡ ಹಿಂದೀಯರು. ನನ್ನ ಬರವಣಿಗೆಯ ಆಸಕ್ತಿ ಬಗ್ಗೆ ಚೂರುಪಾರು ತಿಳಿದಿದ್ದವರು. ಪದೇ ಪದೆ ಅಯೋಧ್ಯೆಗೆ ಬರುವಂತೆ ಒತ್ತಾಯಿಸಿದರು. ಕತೆ, ಕಾದಂಬರಿ, ಮಹಾಕಾವ್ಯಕ್ಕೆ ಕೂಡ ಸ್ಫೂರ್ತಿ ಸಿಗಬಹುದು ಎಂದೆಲ್ಲ ಪುಸಲಾಯಿಸಿದರು. ನಾನೇ ಇನ್ನೂ ಹೋಗಿಲ್ಲ.
ಹೋಗಿಲ್ಲ ಅನ್ನುವುದು ನಿಜವೋ? ಹೋಗುವುದಿಲ್ಲ ಅನ್ನುವುದು ನಿಜವೋ? ಹೋಗಿಲ್ಲ ಅನ್ನುವುದು ಇಲ್ಲಿಯ ತನಕದ ನಿಜ. ಹೋಗುವುದಿಲ್ಲ ಅನ್ನುವುದು ನಾಳಿನ ನಿಜವೂ ಹೌದು. ನೀವೇ ಯೋಚಿಸಿ, ಈಗ ಅಯೋಧ್ಯೆಯಲ್ಲಿ ಏನಿರಬಹುದು? ಒಬ್ಬ ಶ್ರೀರಾಮಚಂದ್ರನನ್ನು ಅಥವಾ ಅವನ ಮೂರ್ತಿಯನ್ನು ಕಾಯಲು ನೂರಾರು ಪೊಲೀಸರು, ಸೈನಿಕರು. ಈ ರಾಮಚಂದ್ರನ ಪುಟ್ಟ ಮೂರ್ತಿಯನ್ನು ಕೂಡ ಇನ್ನೂ ವಿಶೇಷವಾದ ಭದ್ರತೆಯಲ್ಲಿಟ್ಟು ದಿನವೂ ಆರತಿ ನಡೆಯುತ್ತದೆ. ಅದನ್ನು ನೋಡಲು ವಿಶೇಷ ಪರವಾನಗಿ ಪಡೆಯಬೇಕು. ಅಷ್ಟೆಲ್ಲ ಕಷ್ಟಪಟ್ಟರೂ ಅಲ್ಲೇನು ಭಜನೆಯೇ, ಸಂಗೀತವೇ, ಹರಿಕತೆಯೇ, ಪಾನಕ ಕೋಸಂಬರಿಯೇ, ಏನೂ ಇಲ್ಲ. ಬಹುಶಃ ನಾನೇ ತೆಗೆದುಕೊಂಡು ಹೋಗಬೇಕಾದ ಬಿಸಿಲೇರಿ ಬಾಟಲಿನ ನೀರನ್ನು ಕುಡಿಯಬೇಕು, ಅಷ್ಟೇ. ಅದೂ ಭದ್ರತಾ ಸೇವೆಯವರು ಒಳಗೆ ತೆಗೆದುಕೊಂಡು ಹೋಗಲು ಬಿಟ್ಟರೆ. ಈ ಎಲ್ಲ ಕಷ್ಟಗಳಿಂದಾಗಿ ನಾನು ಅಯೋಧ್ಯೆಗೆ ಹೋಗುತ್ತಿಲ್ಲವೇ. ಹೋಗುವುದಿಲ್ಲವೇ. ಇರಬಹುದು. ಆದರೆ ಅಯೋಧ್ಯೆಯ ರಾಮಚಂದ್ರನನ್ನು ಮೀರಿಸಿದ ಶ್ರೀರಾಮಚಂದ್ರನನ್ನು ನಾನು ನನ್ನ ಬಾಲ್ಯದಲ್ಲಿ, ಸಣ್ಣಪುಟ್ಟ ಪಟ್ಟಣಗಳ ರಾಮಮಂದಿರಗಳಲ್ಲಿ ಕಾಣುತ್ತಲೇ ಬಂದಿದ್ದೇನೆ. ನನ್ನ ಮನಸ್ಸು ಅದಕ್ಕೆ ಒಗ್ಗಿ ಹೋಗಿದೆ. ಹಾಗಾಗಿ ನಾನು ಅಯೋಧ್ಯೆಗೆ ಹೋಗುವುದಿಲ್ಲ.
ಬಾಲ್ಯದಲ್ಲಿ ನಮಗೆ ಮಹಾಭಾರತ ಇಷ್ಟವಾದ ಹತ್ತಿರವಾದ ಸಾಹಿತ್ಯ ಮತ್ತು ಬದುಕಿನ ಕೃತಿಯಾದರೂ ಪೂಜೆ-ಪುರಸ್ಕಾರ, ಪಾನಕ-ಪರಿವಾರದ ಗೌರವ ಮಾತ್ರ ದೊರಕುತ್ತಿದ್ದುದು ಶ್ರೀರಾಮಚಂದ್ರನಿಗೆ. ಬೇಸಿಗೆ ಏರುವ ದಿನಗಳಲ್ಲಿ ಬರುವ ರಾಮನವಮಿ ನಮ್ಮನ್ನೆಲ್ಲ ತಂಪಾಗಿಸುತ್ತಿದ್ದದ್ದು, ಪಾನಕ ಕೋಸಂಬರಿಗಳ ಮೂಲಕ. ನಂತರ ರಾಮದೇವರ ಗುಡಿಯಲ್ಲಿ ಸಂಜೆ ಹೊತ್ತು ಶ್ರೀರಾಮ ಪಟ್ಟಾಭಿಷೇಕದ ಹರಿಕಥೆ. ರಾಮನವಮಿ ನಡೆಯುವ ಸುತ್ತಮುತ್ತಲ ದಿನಗಳಲ್ಲಿ ಸದಾ ಜನಪ್ರಿಯನಾದ ಕೃಷ್ಣ ಹಿಂಬದಿಗೆ. ಬಾಲ್ಯವೆಲ್ಲ ಹಳ್ಳಿ ಮತ್ತು ಸಣ್ಣಪಟ್ಟಣಗಳಲ್ಲೇ ಕಳೆದ ನನಗೆ ರಾಮೋತ್ಸವದ ಸಂದರ್ಭದಲ್ಲಿ ನಗರಗಳಲ್ಲಿ ನಡೆಯುವ ಸಂಗೀತ ಸಮಾರಾಧನೆಯ ಪರಿಚಯವೇ ಇರಲಿಲ್ಲ. ನಮ್ಮೂರಾದ ಮಂಡ್ಯದಲ್ಲಿ ಎರಡು ರಾಮಮಂದಿರಗಳಿದ್ದವು. ಒಂದು ದೊಡ್ಡ ರಾಮಮಂದಿರ ಅಥವಾ ಪೇಟೆ ಬೀದಿಯ ರಾಮಮಂದಿರ. ಎರಡನೆಯದು ಚಿಕ್ಕ ರಾಮಮಂದಿರ ಅಥವಾ ಆನೆಕೆರೆ ಬೀದಿಯ ರಾಮಮಂದಿರ. ಅವೇನು ಮಡಿಹುಡಿ ತುಂಬಿದ, ಪೂಜೆ ಪುರಸ್ಕಾರದ ಸವಲತ್ತು ಪಡೆದ ದೇವಾಲಯಗಳಾಗಿರಲಿಲ್ಲ. ನಿಜ, ಅಲ್ಲಿ ರಾಮದೇವರ ದೊಡ್ಡ ಫೋಟೋ ಇತ್ತು. ಭಜನೆ ಮೇಳ ನಡೆಯುತ್ತಿತ್ತು; ಹರಿಕತೆ ಕೂಡ. ಆದರೆ ಅದಕ್ಕಿಂತ ಮುಖ್ಯವಾಗಿ ರಾಮಮಂದಿರಗಳು ಜನರ ನಿತ್ಯಜೀವನಕ್ಕೆ ಸಂಬಂಧಪಟ್ಟ ಮದುವೆ ಮುಂಜಿ ಮುಂತಾದ ಸಮಾರಂಭ, ಸಮಾರಾಧನೆಗಳಿಗೆ ಬಾಡಿಗೆಗೆ ಸಿಗುತ್ತಿತ್ತು.
ತೀರಾ ಅನುಕೂಲವಿಲ್ಲದವರು, ಕೆಳಮಧ್ಯಮ ವರ್ಗದವರು ಚಿಕ್ಕ ರಾಮಮಂದಿರದಲ್ಲಿ ಸಭೆ-ಸಮಾರಂಭಗಳನ್ನು ಮಾಡಿಕೊಂಡರೆ, ಅನುಕೂಲಸ್ಥರು ದೊಡ್ಡ ರಾಮಮಂದಿರದಲ್ಲಿ ಸೇರೋರು. ಯಾರಾದರೂ ಸಮಾರಂಭಕ್ಕೆ ಕೂಗಲು ಬಂದರೆ ಅವರನ್ನು ಹಂಗಿಸುವ ದೃಷ್ಟಿಯಿಂದ ನಾವು, ಯಾವ ರಾಮಮಂದಿರದಲ್ಲಿ ನಿಮ್ಮ ಮನೆಯ ಸಮಾರಂಭ, ಚಿಕ್ಕದರಲ್ಲೋ ದೊಡ್ಡದರಲ್ಲೋ ಎಂದು ಕೇಳುತ್ತಿದ್ದೆವು. ನನಗಂತೂ ಚಿಕ್ಕ ರಾಮಮಂದಿರವೇ ಆತ್ಮೀಯವಾಗಿತ್ತು. ಸಭೆ ಸಮಾರಂಭಗಳೇ ಅಲ್ಲದೇ, ಸಣ್ಣಪುಟ್ಟ ಕಾಡು-ಹರಟೆಗೂ ಅಲ್ಲಿ ಸೇರಬಹುದಿತ್ತು. ರಾಮಸಂಕೀರ್ತನ ಅಥವಾ ಹರಿಕತೆಯೇ ಅಲ್ಲದೇ ರಾಮಮಂದಿರದಲ್ಲಿದ್ದ ಸಣ್ಣ ಹಾರ್ಮೋನಿಯಂ ನೆರವು ಪಡೆದು ರಂಗಗೀತೆ, ಜನಪದ ಗೀತೆ, ಚಿತ್ರಗೀತೆಗಳ ಕಾರ್ಯಕ್ರಮವೂ ಆಗುತ್ತಿತ್ತು. ಹೀಗೆಂದಾಗ ರಾಮಚಂದ್ರನ ಬಗ್ಗೆ ನಮಗೆಲ್ಲ ಭಯಭಕ್ತಿ ಇರಲಿಲ್ಲವೆಂದಲ್ಲ. ನಮ್ಮ ತಾಯಿಯ ತಾಯಿ ಪ್ರತಿ ಶನಿವಾರವೂ ಮಿಂದು ಒದ್ದೆ ಕೂದಲಿನಲ್ಲೇ ಕುಳಿತು ರಾಮನಿಗೆ ಸಂಬಂಧಪಟ್ಟ ಕತೆಗಳು, ಹಸೆಮಣೆಯ ಹಾಡನ್ನೆಲ್ಲ ಹೇಳುತ್ತಾ ಪ್ರತಿ ಶನಿವಾರವೂ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡೋರು. ಅವರು ಜೀವನದಲ್ಲಿ ಬಹುವಾಗಿ ನೊಂದಿದ್ದರಿಂದ ಅವರ ಪ್ರಾರ್ಥನೆ ಪೂಜೆಯೆಲ್ಲ ಬಹು ಆರ್ದ್ರವಾಗಿ ಇರುತ್ತಿತ್ತು. ಕತೆ ಹಾಡುಗಳ ಸಂದರ್ಭದಲ್ಲಿ ಅವರು ಮೈ ಮರೆತು ದುಃಖಿತರಾಗಿ ಅಳುತ್ತಿದ್ದರು. ಅವರ ಬಗ್ಗೆ ನಮಗೆ ತುಂಬಾ ಪ್ರೀತಿ-ಗೌರವ ಇದ್ದುದರಿಂದ ಅವರು ಪೂಜಿಸುವ ದೇವರ ಬಗ್ಗೆಯು ಭಯ-ಭಕ್ತಿ ಮೂಡೋದು. ಅವರ ಜೊತೆ ಸಂಜೆಹೊತ್ತು ರಾಮಮಂದಿರಕ್ಕೆ ಹೋಗುವುದೆಂದರೆ, ಯಾವುದೋ ಪುಣ್ಯದ ಕೆಲಸ ಮಾಡಿದ ಭಾವನೆ. ಪೂಜೆಯ ನಂತರ ಅವರು ನಮಗೆಲ್ಲ ಹಂಚುತ್ತಿದ್ದ ಬಿಸಿಬಿಸಿ ಗುಲ್ಲಪಾವಟೆಯ ಆಕರ್ಷಣೆಯೂ ನಮ್ಮ ರಾಮಚಂದ್ರನ ಪ್ರೀತಿಯಲ್ಲಿ ಸೇರಿಕೊಂಡಿತ್ತು. ರಾಮಚಂದ್ರನ ಪೂಜೆ ಮಾಡದೆ ಹೋದರೆ ಜೀವನದಲ್ಲಿ ಏನೇನು ಕಷ್ಟಗಳನ್ನು ಅನುಭವಿಸಬೇಕಾಗಿ ಬರಬಹುದು ಎನ್ನುವುದನ್ನೂ ವಿವರಿಸುತ್ತಾ ಕತೆ ಹೇಳುವ ನೀತಿಕತೆಗಳ ಒಂದು ಪುಸ್ತಕವೂ ಇತ್ತು. ನಾನಾ ರೀತಿಯ ಕಷ್ಟ-ಕಾರ್ಪಣ್ಯಗಳಲ್ಲಿ ಬದುಕುತ್ತಿದ್ದ ನಾವು ಭಯ-ಭಕ್ತಿಯಿಂದ ಆ ಕತೆ ಓದುತ್ತಿದ್ದೆವು, ಇಲ್ಲ ಕೇಳಿಸಿಕೊಳ್ಳುತ್ತಿದ್ದೆವು. ಮಂದವಾದ, ಮಸುಕು ಮಸುಕಾದ ಲಾಟೀನು ಬೆಳಕಿನಲ್ಲಿ ಮಾಸಲು ಬಣ್ಣಕ್ಕೆ ತಿರುಗಿದ್ದ ಅಸ್ತವ್ಯಸ್ತ ಅಕ್ಷರಗಳಿಂದ ತುಂಬಿದ್ದ ಪುಟಗಳಿಂದ ನಾನು ಪ್ರತಿ ಶನಿವಾರವೂ ಕತೆ ಓದುತ್ತಿದ್ದೆ. ಬರುತ್ತಾ ಬರುತ್ತಾ ಕತೆ ಯಾಂತ್ರಿಕವಾಗಿ ಕಂಡು ಕತೆ ಓದಲು ಕೊಸರಾಡಿದರೆ ನಮ್ಮ ತಾಯಿ ಗದರಿಸುವರು.
ಕತೆ ಓದುವಾಗಲೋ, ಪೂಜೆ ಮಾಡುವಾಗಲೋ ಹರಿಕತೆ ಕೇಳುವಾಗಲೋ ಮಾತ್ರವೇ ರಾಮಚಂದ್ರನನ್ನು ಕುರಿತು ಬಹುವಚನ. ಉಳಿದಂತೆ ಆತನ ಪ್ರಸ್ತಾಪ ಬಂದಾಗಲೆಲ್ಲ ಏಕವಚನವೇ ಖಚಿತ. ಸೀತೆಯ ಬಗ್ಗೆ ರಾಮ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಚರ್ಚೆ ಮುಗಿಯುತ್ತಲೇ ಇರಲಿಲ್ಲ. ಇದೆಲ್ಲ ರಾಮನ ತಪ್ಪುಗಳೋ ಅಥವಾ ರಾಮಾಯಣ ಬರೆದ ವಾಲ್ಮೀಕಿಯ ತಪ್ಪುಗಳೋ ಕೂಡ ಎಂದೆಲ್ಲ ಚರ್ಚೆ. ಇಂತಹ ಚರ್ಚೆಯಲ್ಲೆಲ್ಲ ರಾಮಚಂದ್ರ ಜೀವಂತ ವ್ಯಕ್ತಿ ಮಾತ್ರವಲ್ಲ. ನಮ್ಮ ದೊಡ್ಡಪ್ಪನ ಮಗನೋ ಅಥವಾ ಸೋದರಮಾವನೋ ಅನ್ನುವ ವರಸೆಯಲ್ಲೇ ಚರ್ಚೆ. ಈ ವರಸೆಗನುಗುಣವಾಗಿ ರಾಮಚಂದ್ರನಿಗೆ ಬೈಗುಳ; ಹಿಡಿಶಾಪ.
ಹೀಗೆಲ್ಲಾ ಚಿರಪರಿಚಿತವಾಗಿದ್ದ ರಾಮ, ಮರ್ಯಾದಾ ಪುರುಷೋತ್ತಮ, ರಘುಕುಲತಿಲಕ, ಸಾಂಸ್ಕೃತಿಕ ಸಂಪನ್ನ. ಎಲ್ಲ ಕಾಲದ ಆದರ್ಶ ಎಂದೆಲ್ಲ ತಿಳಿಯಲು ಪ್ರಾರಂಭಿಸಿದ್ದು- ಡಿವಿಜಿ, ಕುವೆಂಪು, ಮಾಸ್ತಿ, ಶ್ರೀನಿವಾಸಶಾಸ್ತ್ರಿ ಇಂಥವರ ಬರಹಗಳನ್ನು, ಅಡಿಗರ ರಾಮನವಮಿಯ ದಿವಸ ಪದ್ಯವನ್ನು, ಲೋಹಿಯಾರ ರಾಮ ಕೃಷ್ಣ ಶಿವದಂತಹ ಲೇಖನವನ್ನು ಓದಿದ ಮೇಲೆಯೇ. ಬೆಂಗಳೂರಿನಲ್ಲಿದ್ದ ದಿನಗಳಲ್ಲಿ ರಾಮ ಇನ್ನೊಂದು ವರಸೆಯಲ್ಲಿ ಪರಿಚಿತನಾದ, ಸಂಗೀತದ ಮೂಲಕ. ಚಾಮರಾಜಪೇಟೆಯಲ್ಲಿದ್ದಾಗ ರಾಮನವಮಿಯ ಸಂದರ್ಭದಲ್ಲಿ ಶ್ರೀರಾಮ ಸೇವಾ ಮಂಡಳಿಯಿಂದ ನಿತ್ಯವೂ ಸಂಗೀತದ ಮೂಲಕ ರಾಮಚಂದ್ರನ ಸೇವೆ. ದುಡ್ಡು ಕೊಟ್ಟು ಟಿಕೆಟ್ ಕೊಂಡು ಸಭೆಯಲ್ಲಿ ಕೇಳುವ ಬದಲು ಹೈಸ್ಕೂಲ್ ಪಕ್ಕದಲ್ಲಿರುವ ಮಕ್ಕಳ ಕೂಟದ ಆವರಣದ ದೊಡ್ಡ ದೊಡ್ಡ ಮರಗಳ ಕೆಳಗೆ ಕುಳಿತು ನಿಶ್ಯಬ್ಧ ವಾತಾವರಣದಲ್ಲಿ ಸಂಗೀತವನ್ನು ಆಲಿಸುತ್ತಿದ್ದೆ. ಮಸಲಾ, ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಬಿಟ್ಟರೂ ಬೆಂಗಳೂರಿನಲ್ಲಿ ನಡೆಯುವಂತಹ ಸಂಗೀತದ ಸೇವೆ ಅಯೋಧ್ಯೆಯ ರಾಮನಿಗೆ ಸಿಗಲಾರದು.
ನನ್ನಂಥವನಿಗೆ ಮಾತ್ರವಲ್ಲ ಸ್ವತಃ ತ್ಯಾಗರಾಜರಿಗೂ ಕೂಡ ಅಯೋಧ್ಯೆಯ ರಾಮಚಂದ್ರನಿಗಿಂತ ತಮ್ಮ ಮನೆಯ ಪುಟ್ಟ ರಾಮಚಂದ್ರನ ಮೂರ್ತಿಯೇ ಬಲುಪ್ರಿಯವಾದುದಾಗಿತ್ತು. ತ್ಯಾಗರಾಜರ ಸೋದರರು ದಿನವೂ ತ್ಯಾಗರಾಜರಿಂದ ಪೂಜಿಸಲ್ಪಡುತ್ತಿದ್ದ ರಾಮಚಂದ್ರನ ಮೂರ್ತಿಯನ್ನು ಎಸೆದುಬಿಟ್ಟರು. ಇದರಿಂದ ದುಃಖಿತರಾದ ತ್ಯಾಗರಾಜರು ಪ್ರಲಾಪಿಸಿದಾಗ ದುಃಖ ಅನಗತ್ಯವೆಂದು, ಅಷ್ಟೊಂದು ಬೇಕಿದ್ದರೆ ಇನ್ನೊಂದು ರಾಮಚಂದ್ರನ ಮೂರ್ತಿಯನ್ನು ಮಾಡಿಸಿಕೊಡುತ್ತೇವೆಂದು ಹೇಳಿದಾಗ, ಇಲ್ಲ ನನಗೆ ನಾನು ಪೂಜಿಸುತ್ತಿದ್ದ ರಾಮಚಂದ್ರನ ಮೂರ್ತಿಯೇ ಬೇಕೆಂದು ಅಳುತ್ತಾ ನೀ ದಯ ರಾದಾ ಎಂದು ಹಾಡುತ್ತಾ ಕಾವೇರಿ ನದಿಯ ದಡಕ್ಕೆ ಹೋಗಿದ್ದುಂಟು. ಅಯೋಧ್ಯೆಯಲ್ಲಿ ಇರಬಹುದಾದ ರಾಮಚಂದ್ರನ ಮೂರ್ತಿಯನ್ನು ಕುರಿತು ಈ ರೀತಿ ಆರ್ತನಾಗಿ ಯಾರಾದರೂ ಹಾಡಿದ್ದಾರೆ ಎಂದು ನಾನು ಕೇಳಿಲ್ಲ. ಮೂರ್ತಿ ಪೂಜೆಯ ವಿರೋಧಿಯಾಗಿದ್ದ ಗಾಂಧಿ ಕೂಡ ಇಷ್ಟಪಟ್ಟದ್ದು ನಮ್ಮ ಮಂಡ್ಯದ ಆನೇಕೆರೆ ಬೀದಿಯ, ಮೈಸೂರಿನ ಕುಕ್ಕರಹಳ್ಳಿ ಬಡಾವಣೆಯ ಸಣ್ಣಪುಟ್ಟ ರಾಮಮಂದಿರಗಳನ್ನೇ. ಅವರಿಗೆ ಬಹುಪ್ರಿಯವಾಗಿದ್ದು ರಘುಪತಿ-ರಾಘವ-ರಾಜಾರಾಂ ಭಜನೆಗೆ ಸಣ್ಣಪುಟ್ಟ ರಾಮಮಂದಿರಗಳ ಹಾರ್ಮೊನಿಯಂ ಹಿಮ್ಮೇಳವೇ ಸಾಕಾಗಿತ್ತು. ನನಗೆ ತಿಳಿದ ಮಟ್ಟಿಗೆ ಈವತ್ತಿನ ಅಯೋಧ್ಯೆಯಲ್ಲಿ ತೀರಾ ಆಧುನಿಕವಾದ ಶಸ್ತ್ರಾಸ್ತ್ರವು ಇವೆಯೇ ಹೊರತು ಸಣ್ಣ ಹಾರ್ಮೋನಿಯಂ ಇಲ್ಲ.
ಹೀಗಾಗಿ ರಾಮಮಂದಿರ ನಿರ್ಮಾಣ ಚಳುವಳಿ ಪ್ರಾರಂಭವಾದಾಗ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದರೂ ನಮ್ಮೂರಿನ ರಾಮಮಂದಿರಗಳ ರೀತಿ ಅವು ಆತ್ಮೀಯವಾಗಬಲ್ಲದೆ, ಮನೆವಾರ್ತೆಯ ಸಂಗತಿಯಾಗಬಲ್ಲದೆ ಎಂಬ ಅನುಮಾನ ನನಗೆ ಇದ್ದೇ ಇತ್ತು. ನನ್ನ ಅನುಮಾನ ನಿಜವೆನ್ನುವಂತೆ ಚಳುವಳಿ ಬಂತು, ಹೋಯಿತು. ನಮ್ಮೂರಿನ ರಾಮಮಂದಿರಗಳ, ಬೆಂಗಳೂರಿನಂತಹ ಶ್ರೀರಾಮಸೇವಾ ಮಂಡಳಿಗಳ ಕಾರ್ಯಕ್ರಮ, ರೀತಿ-ರಿವಾಜುಗಳು ಮುಂದುವರಿಯುತ್ತಲೇ ಇವೆ. ಅಯೋಧ್ಯೆಯ ರಾಮನಿಗೆ ಮಾತ್ರ ಇನ್ನೂ ಭದ್ರತಾ ಸೇವೆಯಿಂದ ಮಾತ್ರವೇ ಸೇವೆ.
ರಾಮ-ರಾಮಮಂದಿರ ಮಾತ್ರವಲ್ಲ. ಈಶ್ವರನ ದೇವಸ್ಥಾನ, ಕಾಳಮ್ಮನ ಗುಡಿ, ಪಟ್ಟಲದಮ್ಮನ ಮಂದಿರ, ಚಾಮುಂಡಮ್ಮನ ಗುಡಿ, ಅರ್ಕೇಶ್ವರನ ಗುಡಿ-ಇವೆಲ್ಲವೂ ನಮಗೆ ಊರೊಟ್ಟಿಗೆ ಸಮಾಚಾರಗಳೇ. ನಮ್ಮ ನಮ್ಮ ಮನೆಯ ಮುಂದುವರಿದ ಭಾಗಗಳೇ. ಮನೆಯಲ್ಲಿ ಹಿರಿಯರ ಜೊತೆ ಜಗಳ ಕಾದಾಗ, ದಾಯಾದಿ ಜಗಳವಾದಾಗ ನಾವೆಲ್ಲ ಸಿಟ್ಟಿನಿಂದ ಸೆಡವಿನಿಂದ ಹೋಗಿ ಕೂರುತ್ತಿದ್ದುದು ಇಂತಹ ದೇವಸ್ಥಾನಗಳಲ್ಲೇ. ಎಷ್ಟೇ ಪವಿತ್ರವಾದರೂ ಸರಿ ನಾವು ಅಯೋಧ್ಯೆಯ ತನಕ ಹೋಗಲು ಸಾಧ್ಯವೇನು? ಇನ್ನು ಈ ದೇವಸ್ಥಾನಗಳ ಪುರೋಹಿತರೋ, ಪೂಜಾರಿಗಳೋ-ನಮ್ಮ ನಿಮ್ಮ ಹಾಗೆ ಬೀಡಿ ಸಿಗರೇಟು ಸೇದುವವರು, ತಂಬಾಕು ಹಾಕುವವರು, ಮಾಡಿದ ಸಾಲ ತೀರಿಸದೆ ಹೋದವರು, ಪರಸ್ತ್ರೀ ವ್ಯಸನ ಹೊಂದಿದವರು. ಇಂತಹ ಪೂಜಾರಿಗಳಿಂದ ಅಯೋಧ್ಯೆಯ ರಾಮಸೇವೆ-ಪೂಜೆ ಪಡೆಯುತ್ತಾನೆಯೇ? ನನಗೇನೋ ಅನುಮಾನ.
ನಮ್ಮೂರ ರಾಮಮಂದಿರ, ದೇವಸ್ಥಾನ ಗುಡಿ ಗೋಪುರಗಳಲ್ಲು ವಿವಾದ-ಜಗಳಗಳು ಇದ್ದೇ ಇರುತ್ತಿದ್ದವು. ದೇವರ ಸೇವೆ ಮಾಡಲು, ದೇವರಿಂದ ಪ್ರಸಾದ ಪಡೆಯಲು ಯಾರ ಸ್ಥಾನ ಮೊದಲನೆಯದಾಗಬೇಕು ಅನ್ನುವ ವಿವಾದವಂತೂ ನಿತ್ಯನೂತನ. ಯಾರೋ ಒಬ್ಬ ಪುಣ್ಯತ್ಮ ಕಳಸವನ್ನೋ ಘಂಟೆಯನ್ನೋ ಮಾಡಿಸಿಕೊಟ್ಟರೆ ಹೊಟ್ಟೆಕಿಚ್ಚಿನಿಂದ ಇನ್ನೊಬ್ಬ ಅದಕ್ಕಿಂತ ಭರ್ಜರಿಯಾದದನ್ನು ಮಾಡಿಸಿಕೊಡುತ್ತಿದ್ದ. ಬ್ರಾಹ್ಮಣರ ಈಶ್ವರ ಗುಡಿಯದೇನು ಮಹಾಪೊಗರು ಅನ್ನುವಂತೆ ಲಿಂಗಾಯತರು ತಮ್ಮ ಅರ್ಕೇಶ್ವರ ಗುಡಿ ಕಾಶಿ ವಿಶ್ವನಾಥನ ದೇವಸ್ಥಾನಕ್ಕಿಂತಲೂ ಪುರಾತನವಾದದ್ದು ಎಂದು ಎಂದೂ ಮುಗಿಯದ ವಿವಾದವನ್ನು ಹುಟ್ಟುಹಾಕಿದ್ದರು. ಯಾವ ದೇವರ ಮೆರವಣಿಗೆಗೆ ಎಷ್ಟು ಜನ ಸೇರಬೇಕು, ಸೇರಿದ್ದಾರೆ ಅನ್ನುವುದರಲ್ಲಲ್ಲ ಪೈಪೋಟಿ. ದೇವಸ್ಥಾನದ ಆಡಳಿತ ಮಂಡಳಿಗಳ ಸದಸ್ಯರಾಗಲೂ ದೇವಸ್ಥಾನದ ಆಸ್ತಿ ಭೂಮಿಯನ್ನು ತಮ್ಮದು ಮಾಡಿಕೊಳ್ಳಲು ನಾನಾ ರೀತಿಯ ರಾಜಕಾರಣ. ಅಂದರೆ ನಮ್ಮೆಲ್ಲ ತಂಟೆ-ತೆವಲುಗಳು, ಕ್ಯಾತೆ ಬುದ್ಧಿ ಎಲ್ಲವೂ ನಮ್ಮೂರಿನ ದೇವಸ್ಥಾನ ರಾಮಮಂದಿರಗಳಿಗೂ ವಿಸ್ತರಿಸುತ್ತಿತ್ತು. ಮೊನ್ನೆ ಮಂಡ್ಯಕ್ಕೆ ಹೋಗಿದ್ದಾಗ ರಾಮಮಂದಿರಕ್ಕೆಂದು ಕೊಂಡಿದ್ದ ಟ್ಯೂಬ್ ಲೈಟುಗಳ ಪೈಕಿ ಕೆಲವನ್ನು ಮ್ಯಾನೇಜರ್ ಮನೆಗೆ ತೆಗೆದುಕೊಂಡು ಹೋದನೆಂದು ದೂರಿತ್ತು. ನಮ್ಮೂರಿನ ರಾಮಮಂದಿರಕ್ಕೇ ಸಂಬಂಧಪಟ್ಟ ಒಂದು ಗುಟ್ಟನ್ನು ಹೇಳುವುದಾದರೆ; ಪುರಾಣದ, ವಾಲ್ಮೀಕಿಯ ರಾಮಚಂದ್ರ ಸೀತೆಯನ್ನು ಸರಿಯಾಗಿ ಬಾಳಿಸದೆ ಹೋದರೂ, ರಾಮಮಂದಿರಗಳಲ್ಲಿ ಮದುವೆ ನಡೆದಾಗ- ಅಲ್ಲಿಯೇ ಪ್ರಸ್ತವೂ ಕೂಡ ನಡೆಯುತ್ತದೆ. ಶ್ರೀರಾಮಚಂದ್ರನ ಫೋಟೋಗೆ ವಂದಿಸಿಯೇ ನವದಂಪತಿಗಳು ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸುತ್ತಾರೆ. ಅಯೋಧ್ಯೆಯಲ್ಲಿ ಮುಂದೊಂದು ದಿನ ರಾಮಮಂದಿರ ನಿರ್ಮಾಣವಾದರೆ ಅಲ್ಲಿ ಕೂಡ ಪ್ರಸ್ತ, ಶೋಭನಕ್ಕೆ ಅನುಕೂಲ-ಪರವಾನಗಿ ದೊರಕುವುದೇ ಎಂದು ನನಗೆ ಕೇಳಬೇಕೆನಿಸುತ್ತದೆ.
ಇದೆಲ್ಲವೂ ಬರಹಗಾರನ ಲಹರಿ ಮಾತ್ರವೆಂದು ತಿಳಿಯಬೇಡಿ. ನಾನು ಚಾಮರಾಜಪೇಟೆಯಲ್ಲಿ ವಾಸವಾಗಿದ್ದ ನಮ್ಮ ಮನೆಯ ಪಕ್ಕದ ಗಲ್ಲಿಯಲ್ಲಿ ಒಂದು ಪುಟ್ಟದೇವಸ್ಥಾನ-ರಾಘವೇಂದ್ರ ಸ್ವಾಮಿಯದು ನಿರ್ಮಾಣವಾಯಿತು. ನಮ್ಮ ಮನೆಯ ಸುತ್ತವೇ ನೂರೆಂಟು ದೇವಸ್ಥಾನಗಳು, ಮಾಧ್ವರ ಸಂಘವೂ ಇದ್ದುದರಿಂದ ಹೊಸ ದೇವಸ್ಥಾನವೊಂದರ ಅಗತ್ಯವಾದರೂ ಏನಿತ್ತು ಎಂದು ನನಗೆ ತಿಳಿಯಲೇ ಇಲ್ಲ. ಕ್ರಮೇಣ ಗೊತ್ತಾಯಿತು. ಇದು ದೇವಸ್ಥಾನ ಮಾತ್ರವಲ್ಲ. ನೆರೆಹೊರೆಯವರೆಲ್ಲರ ಸಮುದಾಯದ ಕೇಂದ್ರವೆಂದು. ದೇವಸ್ಥಾನ ಕಟ್ಟಲು ಯಾವ ಬಿರ್ಲಾ, ಬಜಾಜ್‌ಗಳು ಹಣ ಕೊಟ್ಟಿರಲಿಲ್ಲ. ಹಣವನ್ನು ಬಡಾವಣೆಯವರೇ ಸಂಗ್ರಹಿಸಿದ್ದರು. ಮರಮುಟ್ಟು, ಕಬ್ಬಿಣ, ಸಿಮೆಂಟ್, ಬಣ್ಣ ಸುಣ್ಣ ಎಲ್ಲವನ್ನು ಬೇರೆ ಬೇರೆಯವರು ವಹಿಸಿಕೊಂಡಿದ್ದರು. ದಿನವೂ ಸಂಜೆ ಮಹಾಮಂಗಳಾರತಿ ಮಾಡುವ ಮುನ್ನ ಬೀದಿಯ-ಗಲ್ಲಿಯ ಪ್ರಜಾಬಾಂಧವರೆಲ್ಲ ಬಂದಿದ್ದರೋ ಇಲ್ಲವೋ ಎಂದು ತಿಳಿದೇ ನಂತರ ಮಂಗಳಾರತಿ ಮುಂದುವರೆಯುತ್ತಿತ್ತು. ಮನೆಯಲ್ಲಿ ಬೇಸರವಾದಾಗ, ಬಿಸಿಲಿಗೆ ಧಗೆ ತಡೆಯಲು ಸಾಧ್ಯವಾಗದಾಗ ಜನ ದೇವಸ್ಥಾನದ ಜಗುಲಿಯ ಮೇಲೆ ಹರಟೆ ಹೊಡೆಯುತ್ತಾ ಕೂರೋರು. ತಾಯಂದಿರು ಕೈಗೂಸುಗಳಿಗೆ ತುತ್ತು ತಿನ್ನಿಸಲು ದೇವಸ್ಥಾನದ ಜಗುಲಿಯ ಮೇಲೆ ಕುಳಿತು ಆಕಾಶದಲ್ಲಿನ ಚಂದ್ರನನ್ನು ತೋರಿಸುತ್ತಾ ಪುಸಲಾಯಿಸುತ್ತಿದ್ದರು. ಶ್ರೀರಾಮ ಕೂಡ ಆಕಾಶದಲ್ಲಿನ ಚಂದಮಾಮ ತನಗೆ ಬೇಕೆಂದು ರಘುಕುಲತಿಲಕನಾಗುವ ಮುಂಚೆ ಅತ್ತಿದ್ದನಂತೆ. ಇರಲಿ, ನಮ್ಮ ಗಲ್ಲಿಯ ದೇವಸ್ಥಾನದ ಜಗುಲಿಯ ಮೇಲೆ ಕೌಸಲ್ಯೆ ತುತ್ತು ತಿನ್ನಿಸುತ್ತಿದ್ದರೆ ರಾಮಣ್ಣ ಹಾಗೆಲ್ಲ ಅಳುತ್ತಿದ್ದನೇನು. ನಮ್ಮ ಗಲ್ಲಿಯಲ್ಲೇ ದೇವಸ್ಥಾನವಾದ ಮೇಲೆ ಯಾವ ಯಾವ ಹೊತ್ತಿಗೆ ಯಾವ ಸೇವೆ ನಡೆಯುತ್ತದೆ ಎಂದು ತಿಳಿದ ನಾವು ಗಡಿಯಾರದ ಗೊಡವೆಗೇ ಹೋಗದೆ ನಮ್ಮ ನಮ್ಮ ದಿನಚರಿಯನ್ನು ಸುಸೂತ್ರವಾಗಿ ನಡೆಸುತ್ತಿದ್ದೆವು.
ಗೆಳೆಯರ ಪ್ರೀತಿ, ಬಲವಂತದಿಂದ ತಪ್ಪಿಸಿಕೊಳ್ಳಲಾಗದೆ ನಾನು ಅಯೋಧ್ಯೆಗೆ ಹೋಗಲೇಬೇಕಾಗಿ ಬಂದರೂ ನನಗೆ ಇನ್ನೊಂದು ಭಯವೂ ಇದೆ. ಅಯೋಧ್ಯೆಯಲ್ಲೂ ಕೂಡ ನಾನು ನಮ್ಮೂರ ಗುಡಿ-ಗುಡಾರವನ್ನೇ ಕಂಡು ಬಿಟ್ಟರೆ ಎಂಬ ಭಯ ಅದು. ಏಕೆಂದರೆತಿರುಪತಿಗೆ ನಾನು ಹೋದಾಗ ಇಂತಹ ಅನುಭವವಾಗಿದೆ. ತಿರುಪತಿ ನನಗೆ ನಮ್ಮೂರ ರಾಮಮಂದಿರ, ಪಟ್ಟಲದಮ್ಮನ ಗುಡಿ, ಆ ಗುಡಿ-ಮಂದಿರಗಳಿರುವ ಬೀದಿಗಳಂತೆಯೇ ಕಂಡಿದೆ. ತಿರುಪತಿಯಲ್ಲಿ ನನಗೆ ಇಷ್ಟವಾದ್ದು ಗುಡಿಯ ಮುಂದಿರುವ ಹಳೆಕಾಲದ ಅಂಗಡಿ ಬೀದಿ, ಹಣ್ಣು, ಕಾಯಿ, ಕರ್ಪೂರ, ವಿಳ್ಳೇದೆಲೆ, ಅರಿಶಿನ, ಕುಂಕುಮ, ದೇವರ ಫೋಟೋ, ಕಾಶಿದಾರ, ಕನ್ನಡಿ, ಕಳಶ, ಬಾಚಣಿಗೆ, ಇವೆಲ್ಲ ತುಂಬಿಕೊಂಡಿರುವ ಅಂಗಡಿಗಳು ನಮ್ಮೂರ ಬೀದಿಗಳಂತೇ ಕಾಣುತ್ತದೆ. ಅದನ್ನೇ ನೋಡುತ್ತಾ ನಿಂತು ಬಿಡುತ್ತೇನೆ. ನೀವು ಬಂದಿರುವುದು ದೇವರನ್ನು ನೋಡುವುದಕ್ಕೋ, ಇಲ್ಲ ಈ ಕೆಲಸಕ್ಕೆ ಬಾರದ ಅಂಗಡಿ ನೋಡುವುದಕ್ಕೋ ಎಂದು ಕರೆದುಕೊಂಡು ಹೋದ ಬಂಧು ಭಗಿನಿಯರು ಬೈಯುತ್ತಲೇ ಇರುತ್ತಾರೆ.
ಬಿಡಿ, ನಾನು ಸಾಧಾರಣ ಮನುಷ್ಯ. ಸಣ್ಣಪುಟ್ಟ ಊರುಗಳ, ಸಣ್ಣಪುಟ್ಟ ದೇವಸ್ಥಾನಗಳಲ್ಲೇ ತೃಪ್ತಿ ಪಡುವವನು. ಅಯೋಧ್ಯೆಯಲ್ಲಾಗಲೀ, ಕಾಶಿ, ಮಥುರಾ, ಅವಂತಿಗಳಲ್ಲಾಗಲೀ ಏನೇನಾಗಿದೆ, ಏನೇನಾಗಬೇಕು ಎಂಬುದರ ಗೊಡವೆಗೇ ಹೋಗದವನು. ಆದರೆ ಅಲ್ಲೆಲ್ಲ ಏನೇನಾಗಬೇಕು. ಯಾರ ಪೂಜೆ ನಡೆಯಬೇಕು, ಯಾರು ಪೂಜೆ ಮಾಡಬೇಕು, ಮಾಡಬಾರದು ಎಂದೆಲ್ಲ ಹಗಲು ರಾತ್ರಿ ತಲೆ ಕೆಡಿಸಿಕೊಳ್ಳುವವರಲ್ಲಿ ನನ್ನದು ಒಂದೇ ವಿನಂತಿ, ಒಂದು ಸಲ, ಒಂದೇ ಒಂದು ಸಲ, ನಿಮ್ಮೂರಿನ, ನಿಮ್ಮ ಬಡಾವಣೆಯ ಗುಡಿ-ಗುಡಾರಗಳನ್ನು ನೋಡಿ, ಅಲ್ಲಿಗೆ ಹೋಗಿ.
ಅಯೋಧ್ಯೆಗೆ ಮಾತ್ರವಲ್ಲ, ಬಾಬಾ ಬುಡನ್‌ಗಿರಿಗೂ ಕೂಡ ನನಗೆ ಹೋಗಬೇಕೆನಿಸುವುದಿಲ್ಲ. ನಾನು ವಾಸವಾಗಿದ್ದ ಕೊಲ್ಲಾಪುರದ ನಮ್ಮ ಮನೆಯ ಹತ್ತಿರವೇ ಒಂದು ಪುಟ್ಟದಾದ ದತ್ತಮಂದಿರವಿದೆ. ಥೇಟ್ ನಮ್ಮ ಮಂಡ್ಯದ ಆನೇಕೆರೆ ಬೀದಿಯ ರಾಮಮಂದಿರದಂತೆ, ಅಥವಾ ಅದಕ್ಕೂ ಚಿಕ್ಕದಿರಬೇಕು. ಚಾಮರಾಜಪೇಟೆಯ ಗಲ್ಲಿಯ ರಾಘವೇಂದ್ರನ ಗುಡಿಯಂತೆ, ಯಾರು ಬರಬೇಕು, ಯಾವಾಗ ಬರಬೇಕು, ಯಾರ ಪೂಜೆ, ಯಾರಿಂದ, ಯಾವಾಗ, ಯಾವುದಕ್ಕೂ ವಿವಾದವಿಲ್ಲ. ಬ್ರಹ್ಮ-ವಿಷ್ಣು-ಮಹೇಶ್ವರರು ಕೂಡ ತಮ್ಮ ತಮ್ಮ ಅಸ್ತಿತ್ವ, ಕೆಲಸ ಕಾರ್ಯ ಎಲ್ಲವನ್ನೂ ಮರೆತು, ಯಾರ, ಯಾವ ಗದ್ದಲ ತಂಟೆ-ತಕರಾರೂ ಇಲ್ಲದೆ ಇಲ್ಲೇ ಹಾಯಾಗಿರುವಂತಿದೆ. ಒಮ್ಮೊಮ್ಮೆ ಅವರು ಕೂಡ ಭಕ್ತರ ಭಜನೆಗಳಲ್ಲಿ ಸೇರಿಕೊಳ್ಳುತ್ತಾರೆ. ಏಕೆಂದರೆ ಅವರಿಗೆ ಪೊಲೀಸರ, ಧಾರ್ಮಿಕವಾದಿಗಳ, ವೈಚಾರಿಕರ ಭಯ, ಅಭಿಪ್ರಾಯಗಳ ಹಂಗಿಲ್ಲ. ಹೀಗೆಲ್ಲಾ ಇರುವಾಗ ಬಾಬಾ ಬುಡನ್‌ಗಿರಿಗೆ ಹೋಗಿ ನಾನು ಮಾಡುವುದಾದರೂ ಏನು? ಪತ್ರಿಕೆಗಳಲ್ಲಿ ಫೋಟೋ ಬರಲೆಂದು ಮಾಲೆ ಧರಿಸಿಕೊಳ್ಳಬೇಕು ಅಷ್ಟೇ. ಇಲ್ಲಾದರೆ ನನ್ನ ಕೆಲಸ ಕಾರ್ಯ ತರಲೆ ತಾಪತ್ರಯಗಳ ಬದುಕಿನ ನಡುವೆಯೇ ದತ್ತಾತ್ರೇಯ, ಅನಸೂಯ, ಬ್ರಹ್ಮ, ವಿಷ್ಣು, ಮಹೇಶ್ವರರನ್ನು ನನ್ನ ಮಟ್ಟದಲ್ಲೇ ಭೇಟಿ ಮಾಡಬಹುದು, ಕಷ್ಟ ಸುಖ ಹಂಚಿಕೊಳ್ಳಬಹುದು.
ನಾನೇಕೆ ಅಯೋಧ್ಯೆಗೆ ಹೋಗುವುದಿಲ್ಲವೆಂದು ವಿವರಿಸಲು ಪ್ರಾರಂಭಿಸಿದ ನನಗೆ ಈಗ ಖಚಿತವಾಗಿ ಅನಿಸುತ್ತದೆ, ನಾನು ಅಯೋಧ್ಯೆಗೆ ಹೋಗುವುದೇ ಇಲ್ಲ. ಅಷ್ಟೊಂದು ದೂರ ಅಂತಲ್ಲ. ಹತ್ತಿರದ ಬಾಬಾಬುಡನ್‌ಗಿರಿಗೂ ಕೂಡಾ. ನಾಳೆಯಿಂದಲೇ ಸಣ್ಣದಾಗಿ ಒಂದು ಚಳುವಳಿ ಪ್ರಾರಂಭಿಸಬೇಕೆಂಬ ಆಸೆ. 'ನೈಬರ್‌ಹುಡ್ ಸ್ಕೂಲ್'ನಂತೆ, 'ನೈಬರ್‌ಹುಡ್ ಟೆಂಪಲ್' ಎಂದು ನಿಗದಿ ಮಾಡಿ, ಒಂದು ಊರು, ಒಂದು ಬಡಾವಣೆಯಲ್ಲಿರುವವರೆಲ್ಲ ಅಲ್ಲಲ್ಲೇ ಇರುವ ಗುಡಿ ಗುಡಾರ, ರಾಮಮಂದಿರಗಳಿಗೆ ಮಾತ್ರವೇ ಹೋಗಲು ಅರ್ಹರು ಎಂಬ ಕಾನೂನಿಗೆ ಒತ್ತಾಯಿಸುವ ಆಸೆ.
ಹಾಗಾದಾಗ ಅಯೋಧ್ಯೆಗೂ ಈಗ ಸುತ್ತಿಕೊಂಡಿರುವ ಭದ್ರತಾ ಪಡೆಗಳ ಕಪಿಮುಷ್ಟಿ ಮುಗಿದು, ರಾಮಚಂದ್ರನಿಗೆ ಬಿಡುಗಡೆಯಾಗಬಹುದು. ಫೈಜಾಬಾದ್, ಅಯೋಧ್ಯೆಗಳಲ್ಲಿ ಹಣ್ಣು, ಕಾಯಿ, ಪೂಜೆ ಸಾಮಾನುಗಳನ್ನು ತಲೆತಲಾಂತರದಿಂದ ಮಾರಿಕೊಂಡು ಬಂದು ಅಹನ್ಯಹನಿ ಜೀವನ ನಡೆಸುತ್ತಿರುವ ನೂರಾರು ಮುಸ್ಲಿಂ ಕುಟುಂಬಗಳು ಹೊಸದಾಗಿ ಕುದುರಿದ ವ್ಯಾಪಾರದಿಂದ ಸಂತಸಗೊಂಡು ತಮ್ಮ ಪ್ರೀತಿಯ ರಾಮಲಲ್ಲಾನನ್ನು ಹಿಂದಿನಂತೆ ಎಂದಿನಂತೆ ಮಾತಾಡಿಸಬಹುದು. ಪೂಜೆ-ಪುನಸ್ಕಾರ ಕೂಡಾ ಮಾಡಬಹುದು.
- ಕೆ. ಸತ್ಯನಾರಾಯಣ