'ನನ್ನ ಅಜ್ಜಿಯ ಜಗತ್ತು' ಕೃತಿಯ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಜಾಗ ಸೃಷ್ಟಿಸಿಕೊಂಡಿರುವ ರಜನಿ ನರಹಳ್ಳಿ ಅವರು ಇದೀಗ 'ಆತ್ಮವೃತ್ತಾಂತ'ದ ಮೂಲಕ ಆ ಜಾಗವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.
'ಆತ್ಮವೃತ್ತಾಂತ' ಎಂದಾಕ್ಷಣ ಅದು ರಜನಿಯವರ ಆತ್ಮಕಥೆ ಎಂದರೆ ಅದು ಅರ್ಧ ಸತ್ಯ. ಇಲ್ಲಿ ಲೇಖಕಿ ತಾವೇನು ಹೇಳಬೇಕಿತ್ತೋ ಅದನ್ನು ಮುದ್ದಿನ ನಾಯಿ 'ಲಿಯೋ' ಮೂಲಕ ಹೇಳಿಸಿದ್ದಾರೆ. ಲಿಯೋ ಆತ್ಮವೃತ್ತಾಂತ ಶುರುವಾಗಿ ಮುಗಿಯುವುದರೊಳಗೆ ಅದು ಲೇಖಕಿಯ ಆತ್ಮವೃತ್ತಾಂತವೂ ಆಗಿ ಬದಲಾಗುತ್ತದೆ!
ಈ ಕೃತಿ ಹೇಗಿದೆ ಎಂದರೆ, ಒಂದೇ ಆ್ಯಂಗಲ್‌ನಲ್ಲಿ ಕ್ಯಾಮೆರಾ ಇಟ್ಟು, ಅದರ ಮುಂದೆ ಪಾತ್ರಧಾರಿಗಳು ಅಭಿನಯಿಸಿದರೆ ಹೇಗೆ ಸಿನಿಮಾ ರೂಪುಗೊಳ್ಳತ್ತದೆಯೋ ಹಾಗಿದೆ. ಇಲ್ಲಿ ನಾಯಿ ಲಿಯೋ ಕಣ್ಣುಗಳೇ ಕ್ಯಾಮೆರಾ. ಲಿಯೋನ ಅಮ್ಮ ಅಂದರೆ ಲೇಖಕಿ, ಅವರ ಗಂಡ ಅಂದರೆ ಅಪ್ಪ, ಅವರ ಮಕ್ಕಳೇ ಅಕ್ಕಂದಿರು, ಪಕ್ಕದ ಮನೆ ಅತಿ ಮಡಿ ಆಚರಿಸುವ ಕುಟುಂಬ, ಪಶು ವೈದ್ಯರು, ಹುಟ್ಟುಹಬ್ಬ ಆಚರಣೆ, ಲೇಖಕಿಯ ಅತ್ತೆ ಅಂದರೆ ಅಜ್ಜಿ, ಓಣಿಯ ಮಕ್ಕಳು, ಬೆಕ್ಕು 'ಪಿಂಕಿ'... ಇವೆಲ್ಲ ಲಿಯೋನ ನಿತ್ಯ ಜೀವನದ ಜೀವಕೊಂಡಿಗಳು.
ಲೇಖಕಿ ತಮಗನಿಸಿದ, ತಾವು ಪೋಷಿಸಬಹುದಾದ ವಾದ, ಸಂಗತಿಗಳನ್ನು ಮತ್ತು ನಾಯಿಯೊಂದು ಹೀಗೂ ಯೋಚಿಸಬಹುದು ಎಂಬ ಪರಿಕಲ್ಪನಾತ್ಮಕ ವಿವೇಚನೆಗಳನ್ನು ಲಿಯೋ ಮೂಲಕ ಓದುಗರಿಗೆ ದಾಟಿಸುತ್ತಾರೆ. ಹಾಗಾಗಿ, ಕೃತಿಯನ್ನು ಓದುತ್ತಾ ಹೋದಂತೆ ನಿಮಗೊಂದು ಹೊಸ ಅನುಭವ ದಕ್ಕುತ್ತಾ ಹೋಗುತ್ತದೆ. ಅದು ಈ ಕೃತಿಯ ಶಕ್ತಿ. ಕಥೆಯೊಳಗೆ ಕಥೆ ಹೇಳುವುದು ತಂತ್ರ. ವೃತ್ತಾಂತದೊಳಗೂ ವೃತ್ತಾಂತ ಹೇಳುವುದನ್ನು ಇಲ್ಲಿ ಲಿಯೋ ಮಾಡುತ್ತದೆ. ತನ್ನ ಅಮ್ಮ ಗ್ರೇಸಿ, ಅಜ್ಜಿ ಜೂಲಿ, ರೂಬಿಗಳೆಂಬ ನಾಯಿಗಳ ಕಥೆಯೂ ಬಿಚ್ಚಿಕೊಳ್ಳುತ್ತದೆ. ಈ ನಾಯಿಗಳ ಮಾಲೀಕರ ವರ್ತನೆಗಳನ್ನು ಬಿಡಿಸಿಡುತ್ತದೆ.
ಮತ್ತೊಂದು ಪ್ರಮುಖ ಸಂಗತಿ ಎಂದರೆ, ನಾಯಿಯ ವೃತ್ತಾಂತದ ಮೂಲಕ ಲೇಖಕಿ ರಜನಿ ಸ್ತ್ರೀ ಸಂವೇದನೆಯನ್ನು ಅಲ್ಲಲ್ಲಿ ಸೂಚ್ಯವಾಗಿ ಹೇಳುತ್ತಾ ಹೋಗುತ್ತಾರೆ. ವಿಶೇಷವಾಗಿ ತಮ್ಮ ಅತ್ತೆಯ ಜೊತೆಗಿನ ವಾದದಲ್ಲಿ ಅದು ಪ್ರತಿಫಲನಗೊಳ್ಳುತ್ತದೆ. ಅದೂ ಲಿಯೋ ಮೂಲಕವೇ. ಇದಕ್ಕೆ ನಿದರ್ಶನವಾಗಿ ಉದಾಹರಿಸುವುದೆಂದರೆ, 'ಮಾಂಗಲ್ಯ-ಕೊರಳಪಟ್ಟಿ' ಅಧ್ಯಾಯದಲ್ಲಿ ಲೇಖಕಿ ಹಾಗೂ ಅವರ ಅತ್ತೆಯ ಮಧ್ಯ ನಾಯಿಯ ಸ್ವೀಕಾರ ಮತ್ತು ತಿರಸ್ಕಾರದ ಬಗ್ಗೆ ವಾದ-ವಿವಾದ ನಡೆಯುತ್ತದೆ. ಈ ಸಂದರ್ಭದಲ್ಲಿ ಲೇಖಕಿ ಹೇಳುವ ಮಾತನ್ನು ನಾಯಿ ಹೀಗೆ ದಾಖಲಿಸುತ್ತದೆ, 'ಎಂಥ ಶಾಸ್ತ್ರವೋ ಏನೋ! ಎಲ್ಲಾ ಶಾಸ್ತ್ರಗಳು ಗಂಡಸರ ಪರವಾಗಿಯೇ ಇವೆ ಅನಿಸುತ್ತದೆ. ಈ ಜಗತ್ತಿನಲ್ಲಿ ನಾವು ಗಂಡಸರು ಹೇಳಿದ ಹಾಗೆ ಕೇಳಿಕೊಂಡು ಇರುವ 'ಅನುನಾಯಿ'ಗಳು. ನಾಯಿ ಹೇಗೆ ಯಜಮಾನನಿಗೆ ತನ್ನನ್ನು ಒಪ್ಪಿಸಿಕೊಂಡಿರುತ್ತೋ ನಾವು ಹಾಗೇ ಗಂಡಸರಿಗೆ ಒಪ್ಪಿಸಿಕೊಂಡು ಬಿಟ್ಟಿದ್ದೀವಿ. ನಾವು ನಾಯಿ ಹಾಗೆ ನಿಯತ್ತಿನ ಪ್ರಾಣಿಗಳು 'ಪತಿಯೇ ಪರದೈವ'. ಅವನು ಎಂಥವನೇ ಆದರೂ ಅವನನ್ನು ಅನುಸರಿಸಿ ನಡೀಬೇಕು ನಾಯಿ ಹಾಗೆ..."
ನಾಯಿಗೆ ಕನ್ನಡ ಸಾಹಿತ್ಯದಲ್ಲೊಂದು ಜನಪ್ರಿಯ ಸ್ಥಾನ, ಘನತೆಯನ್ನು ಕುವೆಂಪು ಅವರು ತಮ್ಮ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ 'ಗುತ್ತಿಯ ನಾಯಿ'ಯ ಪಾತ್ರದಲ್ಲಿ ತಂದುಕೊಟ್ಟರು. ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ 'ಕರ್ವಾಲೋ'ದಲ್ಲಿನ 'ಕಿವಿ' ಮೂಲಕ ಆ ಸ್ಥಾನವನ್ನು ಹೆಚ್ಚಿಸಿದರು. ನಂತರ ಅಂಥ ಪ್ರಯತ್ನಗಳಾಗಿವೆ. ಆದರೆ, ನಾಯಿಯನ್ನೇ ಕೇಂದ್ರವಾಗಿಟ್ಟುಕೊಂಡು, ಅದರ ಮೂಲಕ ಇಡೀ ವರ್ತಮಾನವನ್ನು ನೋಡುವ ಪ್ರಯತ್ನ ಮಾತ್ರ ಹೊಸದು. ಆ ಕೆಲಸವನ್ನು ರಜನಿ ನರಹಳ್ಳಿ ಮಾಡಿದ್ದಾರೆ ಎಂದು ರಹಮತ್ ತರೀಕೆರೆ ಮುನ್ನುಡಿಯಲ್ಲಿ ಹೇಳುತ್ತಾರೆ. ಇದು ಅಕ್ಷರಶಃ ಸತ್ಯ. ಕೃತಿ ಓದಿದಂತೆ ಇದು ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ.
'ಆತ್ಮವೃತ್ತಾಂತ' ಐದು ಭಾಗಗಳಲ್ಲಿ ಒಟ್ಟು 23 ಅಧ್ಯಾಯಗಳ ಮೂಲಕ ಅನಾವರಣಗೊಳ್ಳುತ್ತದೆ. 2 ತಿಂಗಳ ಕುನ್ನಿಯಿಂದ ಹೆಚ್ಚು ಕಡಿಮೆ 15 ವರ್ಷದವರೆಗಿನ ಬದುಕಿನವರೆಗೂ ಇಲ್ಲಿವ ವೃತ್ತಾಂತ ಬಿಚ್ಚಿಕೊಳ್ಳುತ್ತದೆ. ನಡು ನಡುವೆ ವೃತ್ತಾಂತ ಹಿಂದಕ್ಕೆ ಹೋಗಿ ಮತ್ತೆ ವರ್ತಮಾನಕ್ಕೆ ತೆರೆದುಕೊಳ್ಳುತ್ತದೆ. ಸ್ವಲ್ಪ ಸಂಪ್ರದಾಯಸ್ಥ ಕುಟುಂಬವಾಗಿರುವುದರಿಂದ ನಾಯಿಗೆ ಅಷ್ಟು ಸರಳವಾಗಿ ಮನೆಗೆ ಪ್ರವೇಶ ಲಭಿಸುವುದಿಲ್ಲ. ಆದರೆ, ಮಕ್ಕಳ ಹಟ ಹಾಗೂ ಒತ್ತಾಸೆಯಿಂದಾಗಿ ನಾಯಿ ಪ್ರವೇಶ ಪಡೆಯುತ್ತದೆ. ಯಜಮಾನ ಮೊದ ಮೊದಲು ನಾಯಿಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದಿದ್ದರೂ ಕೊನೆಗೆ ನಾಯಿಯನ್ನು ಬದುಕಿಸಿಕೊಳ್ಳುವುದಕ್ಕಾಗಿ ನೀರಿನಂತೆ ಹಣ ಖರ್ಚು ಮಾಡುತ್ತಾನೆ. ಅಷ್ಟರಲ್ಲಾಗಲೇ ಒಂದು ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ಇಲ್ಲಿ ಲಿಯೋ ಪಾತ್ರಧಾರಿ ನಾಯಿ ತನ್ನ ಒಡತಿಗೆ ಜಗತ್ತಿನ ಅತ್ಯಂತ ಶ್ರೇಷ್ಠ ಅಮ್ಮನ ಸ್ಥಾನವನ್ನು ಕಲ್ಪಿಸಿಕೊಡುತ್ತದೆ. ಆಕೆ ತನ್ನಿಬ್ಬರು ಮಕ್ಕಳೆಡೆ ಯಾವ ಬಂಧವನ್ನು ಹೊಂದಿದ್ದಾಳೋ ಅದಕ್ಕಿಂತ ಹೆಚ್ಚಿನ ಬಂಧ, ವಾತ್ಸಲ್ಯ, ಕಕ್ಕುಲಾತಿಯನ್ನು ತನ್ನಡೆಗೆ ಹೊಂದಿದ್ದಳು ಮತ್ತು ಆಕೆಯದ್ದು ನಿರ್ವ್ಯಾಜ ಪ್ರೀತಿ ಎಂಬುದನ್ನು ಲಿಯೋ ಹೇಳುತ್ತದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಲಿಯೋಗೆ 'ದಯಾಮರಣ' ಕಲ್ಪಿಸಬೇಕೆಂದು ವೈದ್ಯರು ಹೇಳಿದಾಗ, ನಾಯಿಯಲ್ಲಾಗುವ ತಲ್ಲಣಗಳು ಮತ್ತು ತಾಯಿ ಹೃದಯ ಒಡತಿ ಅನುಭವಿಸುವ ತಾಕಲಾಟ, ಆಕೆಯ ಹೃದಯದ ವೇದನೆಯನ್ನು ನಾಯಿ ಕಂಡುಕೊಳ್ಳತ್ತದೆ. ಅಂಥ ಸಂದರ್ಭದಲ್ಲಿ ಲಿಯೋ ಹೀಗೆ ಯೋಚಿಸುತ್ತದೆ- 'ಹದಿನಾಲ್ಕು ವರ್ಷ ಆರು ತಿಂಗಳು ಏಳು ದಿವಸ ಎರಡು ಗಂಟೆ ಇಪ್ಪತ್ತೆರಡು ಸೆಕೆಂಡಿನಷ್ಟು ದೀರ್ಘ ಕಾಲ ನನ್ನ ಸಾಕಿ ಸಲುಹಿದ ನನ್ನಮ್ಮ ಈಗ ತನ್ನ ಒಂದು ಶಬ್ಧದಿಂದ ನನ್ನ ಭವಿಷ್ಯ ನಿರ್ಧರಿಸಲಿದ್ದಾಳೆ'. ಈ ಸಾಲುಗಳನ್ನು ಓದುವಾಗ ನಿಮ್ಮ ಕಣ್ಣಂಚಿನಲ್ಲಿ ನೀರು ಜಿನುಗುವ ಮಟ್ಟಿಗೆ ಲಿಯೋ ಓದುಗರನ್ನೂ ತನ್ನ ಭಾವನಾತ್ಮಕ ತೆಕ್ಕೆಯೊಳಗೆ ಎಳೆದುಕೊಳ್ಳುತ್ತದೆ.
ಗಂಭೀರ ಸಾಹಿತ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮದೇ ಸರಳ ಭಾಷೆಯಲ್ಲಿ ಭಾವ ಮತ್ತು ಭಾವುಕತೆಯನ್ನು ವ್ಯಕ್ತಗೊಳಿಸಿರುವುದರಿಂದ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲವೊಂದು ಕಡೆ ಬೋರ್ ಅನಿಸಿದರೂ ಅದನ್ನು ಋಣಾತ್ಮಕ ಅಂಶ ಎಂದು ಪರಿಗಣಿಸಬೇಕಿಲ್ಲ. ಅಂತಿಮವಾಗಿ ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದನ್ನು ಆತ್ಮವೃತ್ತಾಂತವಿಷದಪಡಿಸುತ್ತದೆ.
ಕೃತಿ: ಆತ್ಮವೃತ್ತಾಂತ
ಲೇಖಕಿ: ರಜನಿ ನರಹಳ್ಳಿ
ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ
ಬೆಲೆ: ರು. 300
- ಮಲ್ಲಿಕಾರ್ಜುನ ತಿಪ್ಪಾರ
mallikarjun@kannadaprabha.com